ಪತ್ರಿಕೆಗಳಿಗೆ ಸವಾಲು-ಸಿದ್ಧಾಂತ ಮುಖ್ಯ

ದೊಡ್ಡ ಪತ್ರಿಕೆಗಳ ಪೈಪೋಟಿಯಲ್ಲಿ ಸಣ್ಣ ಪತ್ರಿಕೆಗಳಿಗೆ ಕುತ್ತು: ಶಿಮುಶ

Team Udayavani, Jul 8, 2019, 12:17 PM IST

ಚಿತ್ರದುರ್ಗ: ಡಾ| ಶಿವಮೂರ್ತಿ ಮುರುಘಾ ಶರಣರು ರಾಜ್ಯ ಮಟ್ಟದ ಬಿ. ರಾಚಯ್ಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರಿಗೆ ಪ್ರದಾನ ಮಾಡಿದರು.

ಚಿತ್ರದುರ್ಗ: ಜಿಲ್ಲಾ ಮಟ್ಟದ ಸಣ್ಣಪತ್ರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿವೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ದಿನಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ, ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

ಪತ್ರಿಕೆ ನಡೆಸುವುದು ತುಂಬಾ ಕಷ್ಟದ ಕೆಲಸ. ಇದರಲ್ಲಿ ಅನೇಕ ಸವಾಲುಗಳಿವೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪತ್ರಿಕೆಗಳನ್ನು ನಡೆಸಬೇಕೆಂದರೆ ಪ್ರಯಾಸ ಪಡಬೇಕು. ದೊಡ್ಡ ಪತ್ರಿಕೆಗಳು ಸ್ಪರ್ಧೆ ಒಡ್ಡುತ್ತಿರುವುದರಿಂದ ಸಣ್ಣಪತ್ರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸವಾಲು, ಸಿದ್ಧಾಂತಗಳ ಮೇಲೆ ಪತ್ರಿಕೆಗಳು ಓದುಗರನ್ನು ಮುಟ್ಟುವ ಪ್ರಯತ್ನ ಮಾಡಬೇಕು. ಸೈದ್ಧಾಂತಿಕ ನಿಲುವಿನ ಮೇಲೆ ಪತ್ರಿಕೆ ನಡೆಸುವುದು ಇನ್ನೂ ಕಠಿಣ. ಪತ್ರಕರ್ತ ಮತ್ತು ಪತ್ರಿಕೆಗಳಲ್ಲಿ ರಾಜಿ ಮಾಡಿಕೊಳ್ಳುವವರು ಸುಲಭವಾಗಿ ಪತ್ರಿಕೆಗಳನ್ನು ನಡೆಸುತ್ತಾ ಆರಾಮವಾಗಿರಬಹುದು. ಆದರೆ ಸೈದ್ಧಾಂತಿಕ ನಿಲುವಿರುವ ಪತ್ರಕರ್ತರು ಎಂತಹ ಸನ್ನಿವೇಶ ಎದುರಾದರೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಬುದ್ಧ, ಬಸವ, ಅಂಬೇಡ್ಕರ್‌ರವರು ಸಮಾಜ ಸುಧಾರಣೆಗಾಗಿ ಬದುಕನ್ನು ಮುಡುಪಾಗಿಟ್ಟವರು. ಈ ಮೂವರ ವಿಚಾರಗಳನ್ನು ಯಾರು ಓದುತ್ತಾರೋ ಅವರು ಬದ್ಧತೆಗೆ ಒಳಗಾಗುತ್ತಾರೆ. ಬದ್ಧತೆ, ಪ್ರಬುದ್ಧತೆ ಜೊತೆ ಸಾಗುವುದು ಸವಾಲು. ಆದರ್ಶ, ವಿಚಾರ, ಮೌಲ್ಯಗಳನ್ನಿಟ್ಟುಕೊಂಡು ಪತ್ರಿಕೆಗಳನ್ನು ನಡೆಸಬೇಕು. ಸಂಪಾದಕರು, ಪತ್ರಕರ್ತರು ರಾಜಿ ಮಾಡಿಕೊಂಡರೆ ಪತ್ರಿಕಾ ರಂಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್‌ ವಿಚಾರಗಳನ್ನಿಟ್ಟುಕೊಂಡು ಜು. 13 ರಂದು ಬೆಂಗಳೂರಿನಲ್ಲಿ ‘ಮಹಾ ಬೆರಗು’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಜೊತೆಗೆ ನಾಟಕ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಹಿರಿಯ ಪತ್ರಕರ್ತ, ವೈಚಾರಿಕ ಚಿಂತಕ ಡಿ. ಉಮಾಪತಿ ರಾಜ್ಯ ಮಟ್ಟದ ಬಿ. ರಾಚಯ್ಯ ಪ್ರಶಸ್ತಿ ಸ್ಪೀಕರಿಸಿ ಮಾತನಾಡಿ, ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ನನ್ನನ್ನು ಕರೆಸಿ ಸರಳ, ಸಜ್ಜನ, ಶುದ್ಧಹಸ್ತ ರಾಚಯ್ಯನರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಸನ್ಮಾನ ಮಾಡಿದ್ದಾರೆ. ಅತ್ಯಂತ ಖುಷಿಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಇದುವರೆಗೆ ಆಡಳಿತ ಮಾಡಿದ ಎಲ್ಲ ಸರ್ಕಾರಗಳು ಆಷಾಡಭೂತಿತನವನ್ನು ಪ್ರದರ್ಶಿಸಿವೆ. ಅಂಬೇಡ್ಕರ್‌ ಆಶಯವಾಗಿದ್ದ ಅಸ್ಪ್ರಶ್ಯತೆ-ಅಸಮಾನತೆಯನ್ನು ಹೋಗಲಾಡಿಸಲು ಯಾವುದೇ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ರೈತರನ್ನು ಮಾಧ್ಯಮಗಳು ನಿರ್ಲಕ್ಷಿಸುತ್ತಿವೆ. ಧ್ವನಿ ಗಾರುಡಿಗ ರಾಜಕಾರಣ ನಡೆಯುತ್ತಿದೆ. ಎಸ್ಸಿ-ಎಸ್ಟಿಗಳ ಪತ್ರಿಕೆಗಳು ಗುಣಮಟ್ಟದಿಂದ ಹೊರಬರಬೇಕಾದರೆ ಕಸುಬುದಾರಿಕೆ, ಪ್ರಾಮಾಣಿಕತೆ, ವೃತ್ತಿ ನಿಷ್ಠೆ ಇರಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್‌ ಕೆರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್ಸಿ-ಎಸ್ಟಿ ಪತ್ರಿಕೆಗಳಿಗೆ ನೀಡುವ ಒಂದು ಪುಟದ ಜಾಹೀರಾತನ್ನು ಎರಡು ಪುಟಗಳಿಗೆ ಹೆಚ್ಚಿಸಬೇಕು. ಹತ್ತು ವರ್ಷ ಪೂರೈಸಿರುವ ಪತ್ರಿಕೆಗಳಿಗೆ ನೀಡುತ್ತಿರುವ ಅರ್ಧ ಪುಟ ಜಾಹಿರಾತನ್ನು ಪೂರ್ಣಪುಟಕ್ಕೆ ಏರಿಸಿ ಶೇ. 25 ರಷ್ಟು ಹೆಚ್ಚುವರಿ ಬಿಲ್ ಪಾವತಿಸಬೇಕು. ವಾರ್ತಾ ಇಲಾಖೆಯವರ ಕಿರುಕುಳ ತಪ್ಪಿಸಿ ಮೂರು ತಿಂಗಳಿಗೊಮ್ಮೆ ವಾರ್ತಾ ಇಲಾಖೆಯಿಂದ ಪತ್ರಿಕೆ ಜಾಹೀರಾತು ಬಿಲ್ ಕೊಡಿಸಬೇಕು. ಜಾಹೀರಾತು ಏಜೆನ್ಸಿಯವರು ವರ್ಷವಾದರೂ ಬಿಲ್ ಕೊಡಲ್ಲ. ಅಂತಹ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ವಾರ್ತಾ ಇಲಾಖೆ ನಿರ್ದೇಶಕರಲ್ಲಿ ಮನವಿ ಮಾಡಿದರು.

ಸಂಘದ ವತಿಯಿಂದ ನೀಡುವ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ಹಿರಿಯ ಸಂಪಾದಕ ಶಂಕರಪ್ಪ ಹುಸನಪ್ಪ ಛಲವಾದಿ ಅವರಿಗೆ ಪ್ರದಾನ ಮಾಡಲಾಯಿತು. ಎಸ್ಸಿ-ಎಸ್ಟಿ ಪತ್ರಿಕೆಗಳ ಸಂಪಾದಕರ ಸಂಘದ

ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ. ಮಂಜುನಾಥ್‌, ವಾರ್ತಾ ಇಲಾಖೆ ನಿರ್ದೇಶಕ ಭೃಂಗೇಶ್‌, ವಾರ್ತಾಧಿಕಾರಿ ಬಿ. ಧನಂಜಯಪ್ಪ, ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಉಪಾಧ್ಯಕ್ಷರಾದ ಅನೂಪ್‌ಕುಮಾರ್‌, ಸುರೇಶ್‌ ಸಿಂಧೆ, ಸಹ ಕಾರ್ಯದರ್ಶಿ ಮೈಲಾರಪ್ಪ, ಕಾರ್ಯಕ್ರಮ ಸಂಚಾಲಕರಾದ ಡಿ.ಎನ್‌. ಮೈಲಾರಪ್ಪ, ಜಿ.ಒ.ಎನ್‌. ಮೂರ್ತಿ, ಎಂ.ಕೆ.ಪ್ರಕಾಶ್‌, ಗೊಂಡಬಾಳ್‌ ಬಸವರಾಜ್‌, ಗಣೇಶ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ "ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು'...

  • ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಿಸಲು ಇಶಾ ಫೌಂಡೇಷನ್‌ "ಕಾವೇರಿ ಕೂಗು' ಯೋಜನೆಯನ್ನು ಹಮ್ಮಿಕೊಂಡಿದೆ...

  • ಬೆಂಗಳೂರು: "ಸುಧೀರ್‌ ಅವರ ಕನಸಿನ ಕಲಾ ಸಂಘವನ್ನು ಉಳಿಸಿಕೊಳ್ಳಲು ಸಲುವಾಗಿಯೇ ನಾನು ನನ್ನ ಮನೆ, ಸೈಟು ಹಾಗೂ ಕೈಯಲ್ಲಿದ್ದ ಒಂದಿಷ್ಟು ಹಣ ಕಳೆದುಕೊಂಡೆ. ಆದರೂ...

  • ಬೆಂಗಳೂರು: ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ, ಜನಪ್ರಿಯರೆಲ್ಲಾ ಶ್ರೇಷ್ಠರಾಗಿರುವುದಿಲ್ಲ. ಜನಪ್ರಿಯತೆ ಅಗ್ಗದ ಪ್ರಚಾರದಿಂದಲೂ ಬರಬಹುದು. ಆದರೆ, ಶ್ರೇಷ್ಠತೆ ಬರುವುದಿಲ್ಲ...

  • ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ...

ಹೊಸ ಸೇರ್ಪಡೆ