ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ ಪೂರ್

Team Udayavani, May 21, 2019, 4:55 PM IST

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮತ ಎಣಿಕೆ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಮತ ಎಣಿಕೆ ವಿವರವನ್ನು ತ್ವರಿತವಾಗಿ ಭಿತ್ತರಿಸಲು ಸುತ್ತುವಾರು ವಿವರನ್ನು ಸುವಿಧಾ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಅಂದಾಜು ಮಧ್ಯಾಹ್ನ 2 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದರು.

ಮತ ಎಣಿಕೆಗಾಗಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 10 ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಹಾವೇರಿ ಜಿಲ್ಲೆಯ ಐದು ಹಾಗೂ ಗದಗನ ಮೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಎಂಟು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದೊಂದು ಕೊಠಡಿ ಹಾಗೂ ಇವಿಎಂ ಮತ ಎಣಿಕೆಗೆ ಹಾಗೂ ಅಂಚೆ ಮತಪತ್ರ ಎಣಿಕೆ ತಲಾ ಒಂದು ಕೊಠಡಿ ನಿಗದಿಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 14 ಟೇಬಲ್ಗಳಂತೆ ಒಟ್ಟಾರೆ 126 ಟೇಬಲ್ಗಳನ್ನು ಅಳವಡಿಸಲಾಗಿದೆ. ಶಿರಹಟ್ಟಿ, ಗದಗ, ರೋಣ, ಹಾನಗಲ್ಲ, ಹಾವೇರಿ, ಬ್ಯಾಡಗಿ, ಹಿರೇಕೆರೂರು ಹಾಗೂ ರಾಣಿಬೆನ್ನೂರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಮತ ಎಣಿಕೆ ನಡೆಸಲಾಗುವುದು ಎಂದು ತಿಳಿಸಿದರು.

ಸಿಬ್ಬಂದಿಗೆ ತರಬೇತಿ: ಪಾರದರ್ಶಕ ಹಾಗೂ ವ್ಯವಸ್ಥಿತ ಮತ ಎಣಿಕೆಗೆ ಈಗಾಗಲೇ ಸಿಬ್ಬಂದಿಗಳಿಗೆ ತರಬೇತಿಗಳನ್ನು ನೀಡಲಾಗಿದೆ. ಎಣಿಕೆ ಕಾರ್ಯಕ್ಕಾಗಿ 134 ಮತ ಎಣಿಕೆ ಮೇಲ್ವಿಚಾರಕರನ್ನು, 143 ಎಣಿಕೆ ಸಹಾಯಕರನ್ನು ಹಾಗೂ 175 ಸೂಕ್ಷ ್ಮ ವೀಕ್ಷಕರನ್ನು ನೇಮಿಸಲಾಗಿದೆ. ಸಿಬ್ಬಂದಿಗಳನ್ನು ರ್‍ಯಾಂಡಮೇಜೇಷನ್‌ ಪ್ರಕ್ರಿಯೆ ಮೂಲಕ ಆಯ್ದಕೊಳ್ಳಲಾಗಿದೆ. ಎಣಿಕೆ ಸಿಬ್ಬಂದಿಗಳ 3ನೇ ಹಂತದ ರ್‍ಯಾಂಡಮೇಜೇಷನ್‌ನ್ನು ಮತ ಎಣಿಕೆ ದಿನದಂದು ಬೆಳಗ್ಗೆ 5:30ಕ್ಕೆ ಚುನಾವಣಾ ವೀಕ್ಷಕರ ಸಮ್ಮುಖದ ಟೇಬಲ್ಗಳನ್ನು ನಿಗದಿಪಡಿಸಲಾಗುತ್ತದೆ. ಟ್ಯಾಬುಲೇಷನ್‌, ಸ್ಟ್ರಾಂಗ್‌ ರೂಂ ಸಿಬ್ಬಂದಿ ಒಳಗೊಂಡಂತೆ ಮತ ಎಣಿಕೆ ಕಾರ್ಯಕ್ಕೆ ಒಟ್ಟಾರೆಯಾಗಿ 703 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಸಿಬ್ಬಂದಿಗೆ, ಭದ್ರತಾ ಹಾಗೂ ಪೊಲೀಸ್‌ ಸಿಬ್ಬಂದಿಗಳಿಗೆ ಹಾಗೂ ಮತ ಎಣಿಕೆ ಏಜೆಂಟರಿಗೆ ಪ್ರತ್ಯೇಕ ಕೌಂಟರ್‌ಗಳಲ್ಲಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಪ್ರಕ್ರಿಯೆ: ಮೇ 23ರಂದು ಬೆಳಗ್ಗೆ 7:30ಕ್ಕೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಣಿಕೆ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು. ಮತ ಯಂತ್ರಗಳನ್ನು ಎಣಿಕೆ ಕೊಠಡಿಗೆ ಸಾಗಿಸಲಾಗುವುದು. ಬೆಳಗ್ಗೆ 8ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ, 8:30ಕ್ಕೆ ಇವಿಎಂಗಳ ಎಣಿಕೆ ಪ್ರಾರಂಭಿಸಲಾಗುತ್ತದೆ. ನಂತರ ಪ್ರತಿ ವಿಧಾನಸಭೆ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್ಸ್ಲಿಪ್‌ಗ್ಳನ್ನು ಎಣಿಕೆ ಮಾಡಲು ಪ್ರಾರಂಭಿಸಲಾಗುತ್ತದೆ. ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಪ್ರದರ್ಶಕದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.

ಬಿಗಿ ಭದ್ರತೆ: ಭದ್ರತೆ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಎಣಿಕೆ ಸಿಬ್ಬಂದಿ, ಅಧಿಕಾರಿ, ಪೊಲೀಸ್‌, ರಾಜಕೀಯ ಪಕ್ಷಗಳ ಏಜೆಂಟರಿಗೆ ಪ್ರತ್ಯೇಕ ಬಣ್ಣದ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಪಾಸ್‌ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶವಿದೆ. ವಾಹನ ನಿಲುಗಡೆ ಹಾಗೂ ಪಾಸ್‌ ಹೊಂದಿದವರಿಗೆ ಪ್ರತ್ಯೇಕ ಪ್ರವೇಶ ಮಾರ್ಗವನ್ನು ಗುರುತಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಟ್ಯಾಬ್‌, ಲ್ಯಾಪ್‌ಟಾಪ್‌ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳು, ಬೆಂಕಿಪಟ್ಟಣ, ಬಿಡಿ, ಸಿಗರೇಟ್, ನೀರಿನ ಬಾಟಲ್, ಸೋಟ್ಕಗಳು, ತಂಬಾಕು ಉತ್ಪನ್ನಗಳನ್ನು, ಬ್ಲೇಡ್‌, ಆಯುಧ, ಎಲೆ ಅಡಿಕೆ, ಗುಟಕಾ ಅಗ್ನಿಜನ್ಯವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರದ ಬಂದೋಬಸ್ತ್ಗಾಗಿ ನಾಲ್ಕು ಜನ ಡಿವೈಎಸ್‌ಪಿ, 11 ಇನ್ಸಪೆಕ್ಟರ್‌, 21 ಸಬ್‌ ಇನ್ಸಪೆಕ್ಟರ್‌, ನಾಲ್ಕು ಕೆಎಸ್‌ಆರ್‌ಪಿ ತುಕಡಿ, 11 ಡಿಎಆರ್‌ ತುಕಡಿ ಹಾಗೂ 200 ಜನ ಹೋಮ್‌ಗಾರ್ಡ್‌ ಹಾಗೂ ಸಾಕಷ್ಟು ಪೊಲೀಸ್‌ ಪೇದೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಮೇ 23 ರಂದು 144 ಕಲಂ ಜಾರಿಗೊಳಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆ ವರೆಗೆ ಮದ್ಯಪಾನ ಹಾಗೂ ಮದ್ಯಮಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವಿಜಯೋತ್ಸವ ಆಚರಣೆ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು, ನ್ಪೋಟಕ ವಸ್ತುಗಳು, ದಾಹಕ ವಸ್ತುಗಳು ಜೊತೆಗಿಟ್ಟುಕೊಂಡು ಓಡಾಡುವುದು, ಬೈಕ್‌ ರ್ಯಾಲಿ, ಸಭೆ-ಸಮಾರಂಭ ಅಥವಾ ಮೆರವಣಿಗೆ ನಡೆಸುವಂತಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್‌ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸೂಕ್ಷ ್ಮ ಪ್ರದೇಶಗಳಲ್ಲಿ ನಿಯೋಜಿಸಿ ಯಾವುದೇ ಅಹಿತಕರ ಘಟನೆ ಅವಕಾಶವಿಲ್ಲದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ಮತ ಎಣಿಕೆ ಮೇಲ್ವಿಚಾರಣೆಗೆ ಕೇಂದ್ರ ವೀಕ್ಷಕರ ನೇಮಕ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮೇಲ್ವಿಚಾರಣೆಗೆ ಭಾರತ ಚುನಾವಣಾ ಆಯೋಗದ ಕೇಂದ್ರ ವೀಕ್ಷಕರಾಗಿ ಶಾರಿಫ್‌ಕುಮಾರ ಹಾಗೂ ಮಹಾದೇವಿ ಖೊಡೆಛಾವಾರೆ ಅವರನ್ನು ನೇಮಕ ಮಾಡಲಾಗಿದೆ. ಹಾನಗಲ್ಲ ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರ ವೀಕ್ಷಕರಾಗಿ ಶಾರಿಫ್‌ಕುಮಾರ ಹಾಗೂ ಬ್ಯಾಡಗಿ, ಹಿರೇಕೆರೂರು ಹಾಗೂ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಕೇಂದ್ರ ವೀಕ್ಷಕರಾಗಿ ಮಹಾದೇವಿ ಖೊಡೆಛಾವಾರೆ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮತ ಎಣಿ ಸುತ್ತುಗಳ ವಿವರ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ದಿನವಾದ ಮೇ 23 ರಂದು ನಡೆಯುವ ಎಂಟು ವಿಧಾನಸಭೆ ಕ್ಷೇತ್ರಗಳ ಮತ ಚಲಾವಣೆ ಹಾಗೂ ಮತ ಎಣಿ ಸುತ್ತುಗಳ ವಿವರ ಇಂತಿದೆ: ಎಣಿಕೆ ಸುತ್ತು: ಶಿರಹಟ್ಟಿ ವಿಧಾನಸಭಾ ಕ್ಷೇತ್ರ: 250 ಮತಗಟ್ಟೆಗಳಲ್ಲಿ 1,51,250 ಮತ ಚಲಾವಣೆಗೊಂಡಿದ್ದು, 18 ಸುತ್ತು ಮತ ಎಣಿಕೆ ನಡೆಯಲಿದೆ. ಗದಗ ವಿಧಾನಸಭಾ ಕ್ಷೇತ್ರ: 223 ಮತಗಟ್ಟೆಗಳಲ್ಲಿ 1,59,783 ಮತ ಚಲಾವಣೆಗೊಂಡಿದ್ದು, 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ರೋಣ ವಿಧಾನಸಭೆ ಕ್ಷೇತ್ರ: 267 ಮತಗಟ್ಟೆಗಳಲ್ಲಿ 1,58,573 ಮತ ಚಲಾವಣೆಗೊಂಡಿದ್ದು, 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಹಾನಗಲ್ಲ ವಿಧಾನಸಭಾ ಕ್ಷೇತ್ರ: 239 ಮತಗಟ್ಟೆಗಳಲ್ಲಿ 1,59,811 ಮತ ಚಲಾವಣೆ ಗೊಂಡಿದ್ದು, 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಹಾವೇರಿ ವಿಧಾನಸಭಾ ಕ್ಷೇತ್ರ: 257 ಮತಗಟ್ಟೆಗಳಲ್ಲಿ 1,65,741 ಮತ ಚಲಾವಣೆಗೊಂಡಿದ್ದು, 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರ: 241 ಮತಗಟ್ಟೆಗಳಲ್ಲಿ 1,58,422 ಮತ ಚಲಾವಣೆಗೊಂಡಿದ್ದು, 17 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರ: 229 ಮತಗಟ್ಟೆಗಳಲ್ಲಿ 1,42,708 ಮತ ಚಲಾವಣೆ ಗೊಂಡಿದ್ದು, 16 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರ: 266 ಮತಗಟ್ಟೆಗಳಲ್ಲಿ 1,66,921 ಮತ ಚಲಾವಣೆಗೊಂಡಿದ್ದು, 19 ಸುತ್ತಗಳಲ್ಲಿ ಎಣಿಕೆ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ