ಸರಕಾರಿ ಆಸ್ಪತ್ರೆಗಳು ಜನಸ್ನೇಹಿಯಾಗಿಸಲು ಕ್ರಮ

Team Udayavani, Nov 7, 2019, 3:00 AM IST

ಅರಸೀಕೆರೆ: ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ಮನಸ್ಥಿತಿಯನ್ನು ಬದಲಿಸಿ ಜನಸ್ನೇಹಿ ಆಸ್ಪತ್ರೆಗಳನ್ನಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ತಾಲೂಕಿನ ಗಂಡಸಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಆಸ್ಪತ್ರೆಯ ವೈದ್ಯರು ಮತ್ತು ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.

2.60 ಕೋಟಿ ರೂ. ಬಿಡುಗಡೆ: ತಾಲೂಕಿನ ಗಂಡಸಿ ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಗಿಗಳಿಗೆ ಅನುಕೂಲವಾಗುವ ರೀತಿ ಹೆಚ್ಚುವರಿ ವಾರ್ಡ್‌ಗಳ ನಿರ್ಮಾಣ, ವೈದ್ಯರ ವಸತಿ ಗೃಹ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ನಬಾರ್ಡ್‌ ಯೋಜನೆಗಳ ಮೂಲಕ ಸರಕಾರ 2.60 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ ಹಾಗೂ ಆಸ್ಪತ್ರೆ ವೈದ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೂಡಿ ಚರ್ಚಿಸಿದರು.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ರಮ: ಇಂದಿನ ಆಧುನಿಕ ತಾಂತ್ರಿಕಯುಗದಲ್ಲಿ ಮನುಷ್ಯ ಅನೇಕ ಒತ್ತಡಗಳಿಗೆ ಸಿಲುಕಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗದೇ ವಿವಿಧ ರೋಗ ರುಜಿನಗಳಿಗೆ ತುತ್ತಾಗುತ್ತಿರುವ ಕಾರಣ ಆತ ವೈಯುಕ್ತಿಕವಾಗಿ ನೋವು ಅನುಭವಿಸುವ ಜೊತೆಗೆ ಕುಟುಂಬದ ಸದಸ್ಯರು ತೀವ್ರ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ದೇಶದ ಪ್ರಗತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒತ್ತು ನೀಡಿತ್ತಿದೆ ಎಂದರು.

ಸರಕಾರಗಳ ಆಶಯದಂತೆ ಜನಸಾಮಾನ್ಯರ ಅವಶ್ಯಕತೆಗೆ ಅನುಗುಣವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾಮಾಣಿಕವಾಗಿ ಕಲ್ಪಿಸುವ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಿದರು. ನಬಾರ್ಡ್‌ ಮೂಲಕ ಗಂಡಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದೊರೆತಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಸರಕಾರಿ ಜೆ.ಸಿ.ಆಸ್ಪತ್ರೆಯ ಮಾದರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ವಯಕ್ತಿಕ ಭಿನ್ನಾಭಿಪ್ರಾಯವನ್ನ ಬಿಟ್ಟು ಎಲ್ಲರೂ ಒಂದಾಗಿ ಶ್ರಮಿಸಿದರೆ ಗಂಡಸಿ ಸೇರಿದಂತೆ ಈ ಭಾಗದ ಹತ್ತಾರು ಗ್ರಾಮಗಳ ಜೊತೆಗೆ ಸಮುದಾಯ ಆರೋಗ್ಯ ಕೇಂದ್ರ ಸಂಜೀವಿನಿ ಆರೋಗ್ಯ ಕೇಂದ್ರವಾಗಿ ಬದಲಾಗವುದರಲ್ಲಿ ಸಂದೇಹವಿಲ್ಲ ಎಂದರು.

ಹೊಸ ಕಟ್ಟಡಗಳ ನಿರ್ಮಾಣ: ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ಮಾತನಾಡಿ, ಗಂಡಸಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆಸ್ಪತ್ರೆ ಕಟ್ಟಡದ ಕೆಲವು ಭಾಗ ಶಿಥಿಲಾವಸ್ಥೆಯಲ್ಲಿದೆ. ಅಲ್ಲದೇ ವೈದ್ಯರು ಮತ್ತು ದಾದಿಯರು ತಂಗಲು ವಸತಿ ಗೃಹಗಳ ಕೊರತೆ ಇದ್ದು, ಈ ಯೋಜನೆ ಬಳಸಿಕೊಂಡು ವೈದ್ಯರು ಮತ್ತು ದಾದಿಯರ ವಸತಿ ಗೃಹ ನಿರ್ಮಾಣ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಮಗಾರಿಗಳು ಹಾಗೂ ಕಟ್ಟಡದ ನವೀಕರಣ ಮಾಡಿಕೊಂಡು ಸಾರ್ವಜನಿಕರಿಗೆ ಮತ್ತಷ್ಟು ವೈದ್ಯಕೀಯ ಸೇವೆಯನ್ನು ನೀಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಡಾ ಸೋಮಶೇಖರ್‌, ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಯರಾಮ್‌, ಜೆಡಿಎಸ್‌ ಮುಖಂಡರಾದ ಕೇಶವ್‌, ದುಮ್ಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್‌, ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಮಗಾರಿಗಳ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರೀಶ್‌, ಗಂಡಸಿ ಗ್ರಾ ಪಂ ಅಧ್ಯಕ್ಷ ಮಂಜುನಾಥ್‌ ಮತ್ತಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ