ಬಾಲಕಿ ಸಾವಿಗೆ ನ್ಯಾಯ ದೊರಕಿಸಿ

Team Udayavani, Dec 29, 2017, 10:31 AM IST

ಕಲಬುರಗಿ: ವಿಜಯಪುರ ದಲಿತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಕರೆ ನೀಡಲಾಗಿದ್ದ ಕಲಬುರಗಿ ಬಂದ್‌ ಸಂಪೂರ್ಣ ಮತ್ತು ಶಾಂತಿಯುತವಾಗಿ ಯಶಸ್ವಿಯಾಗಿದೆ. ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ವಿವಿಧ ಪ್ರಗತಿಪರ ಹಾಗೂ ಎಡ ಪಕ್ಷಗಳು ಭಾಗವಹಿಸಿದ್ದವು. ಇಡೀ ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿತ್ತು. ಬಟ್ಟೆ, ಕಿರಾಣಿ, ಕಾಯಿಪಲ್ಲೆ, ಎಪಿಎಂಸಿ, ಬೇಳೆಕಾಳು, ಬಂಗಾರ ಬೆಳ್ಳಿ, ಕಬ್ಬಿಣ, ಸಿಮೆಂಟು ಸೇರಿದಂತೆ ಎಲ್ಲಾ ವಹಿವಾಟು ಸಂಪೂರ್ಣ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಅಂದಾಜು 150 ಕೋಟಿ ರೂ. ನಷ್ಟ ಎದುರಾಗಿದೆ ಎಂದು ಎಚ್‌ಕೆಸಿಸಿಐ ಅಂದಾಜಿಸಿದೆ. ಇದು ಅಂದಾಜು ಲೆಕ್ಕಾಚಾರವಾಗಿದ್ದು ನಿಖರವಾಗಿ ನಾಳೆ ತಿಳಿಯಲಿದೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಬಂದ್‌ ಪರಿಣಾಮ ಎಷ್ಟು ಗಂಭೀರವಾಗಿತ್ತೆಂದರೆ ಮೃತದೇಹವನ್ನು ಮಸಣ ಸೇರಿಸಲು ಕುಟುಂಬವೊಂದು ಪರದಾಡಿದ ಪ್ರಸಂಗವೂ ನಡೆಯಿತು. ಇನ್ನೊಂದೆಡೆ ಸದಾ ಗಿಜಗುಡುವ ಆರ್‌ಟಿಒ, ಸೂಪರ್‌ ಮಾರುಕಟ್ಟೆ, ಮಾಲ್‌ಗ‌ಳು ಸಂಪೂರ್ಣ ಸ್ತಬ್ದವಾಗಿದ್ದವು. ಸಿಟಿ ಬಸ್ಸು, ಆಟೋ, ಟಂಟಂ, ಟಾಂಗಾ, ರಿಕ್ಷಾ ಯಾವ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಗೂಡಂಗಡಿಗಳಿಂದ ಹಿಡಿದು ಮಾಲ್‌ಗ‌ಳವರೆಗೆ ಎಲ್ಲಾ ಅಂಗಡಿಗಳು ಬಂದ್‌ ಆಗಿದ್ದವು. ಬಸ್ಸುಗಳು, ಆಟೋಗಳು, ಟಾಂಗಾ ಹಾಗೂ ಸೈಕಲ್‌ ರಿಕ್ಷಾ ಎಲ್ಲೂ ಕಾಣಲೇ ಇಲ್ಲ. ಇದರಿಂದ ಪ್ರಯಾಣಿಕರು ಭಾರಿ ಪ್ರಮಾಣದಲ್ಲಿ ತಾಪತ್ರಯ ಪಟ್ಟರು. ಬಸ್‌ ನಿಲ್ದಾಣಗಳಲ್ಲಿ, ನಗರದ ಪ್ರಮುಖ ವೃತ್ತಗಳಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರ ಮತ್ತು ಮಕ್ಕಳ ಗೋಳು ಹೇಳತೀರದಾಗಿತ್ತು.

50 ಕಡೆ ಟೈರ್‌ಗೆ ಬೆಂಕಿ
ನಗರದಲ್ಲಿರುವ ಎಲ್ಲ ಗಲ್ಲಿ ಗಲ್ಲಿಗಳಲ್ಲಿ, ಸಣ್ಣ-ದೊಡ್ಡ ವೃತ್ತಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಸಂಘಟಕರು ಟೈರ್‌ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಅವಳ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು. ಜಗತ್‌, ರಾಮಮಂದಿರ ಜೇವರ್ಗಿ ವೃತ್ತ, ಬಸ್ಸು ನಿಲ್ದಾಣ, ಹೈಕೋರ್ಟ್‌, ಖರ್ಗೆ ವೃತ್ತ, ಆರ್‌ಟಿಒ ಕ್ರಾಸ್‌, ರಾಜಾಪುರ ಕ್ರಾಸ್‌, ಹೀರಾಪುರ ಕ್ರಾಸ್‌, ಆಳಂದ ನಾಕಾ, ದರ್ಗಾ ರಸ್ತೆ, ಖಾಜಾ ಕಾಲೋನಿ, ಡಬರಾಬಾದ, ಶಹಾಬಾದ ರಿಂಗ್‌ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ
ಆಕ್ರೋಶ ವ್ಯಕ್ತಪಡಿಸಲಾಯಿತು.

 ಬಸ್‌, ಆಟೋ ಸಂಚಾರ ಸ್ತಬ
ಕಲಬುರಗಿ ಬಂದ್‌ ಹಿನ್ನೆಲೆಯಲ್ಲಿ ನಗರದ ಬಸ್‌ ಸಂಚಾರ ಮತ್ತು ಆಟೋ ಓಡಾಟ ಸಂಪೂರ್ಣ ಸ್ತಬ್ದಗೊಂಡಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನಾಕಾರರು, ಬಸ್‌ ನಿಲ್ದಾಣದ ಕಡೆಗೆ ಜಮಾಯಿಸಿ, ಯಾವುದೇ ಬಸ್‌ಗಳ ಓಡಾಟಕ್ಕೆ ಅವಕಾಶ ಕೊಡಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ನಗರಾದ್ಯಂತ ಪ್ರತಿಭಟನೆ ಜೋರಾಗಿತ್ತು. ಒಳ ರಸ್ತೆಗಳನ್ನು ಬಂದ್‌ ಮಾಡಿದ್ದರಿಂದ ಜನರು ಪರದಾಡಿದರು. ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಿದ್ದರೂ ಹೊಸ ಮತ್ತು ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಓವರ್‌ ಮತ್ತು ಅಂಡರ್‌ ಬ್ರಿಡ್ಜ್ ಸಂಚಾರವನ್ನು ಪ್ರತಿಭಟನಾಕಾರರು ತಡೆದಿದ್ದರು. ಇದರಿಂದಾಗಿ ವಾಹನ ಸವಾರರು ರೈಲ್ವೆ ಹಳಿ ಮೇಲಿಂದ ದಾಟುವ ದುಸ್ಸಾಹಸ ಮಾಡಿದರು

ಪರೀಕ್ಷೆಗೂ ಬಂದ್‌ ಬಿಸಿ 
ಬಂದ್‌ ಪ್ರಯುಕ್ತ ಕಾನೂನು ಪದವಿ ಮತ್ತು ಇಂಜಿನಿಯರಿಂಗ್‌ ಪದವಿ ಪರೀಕ್ಷೆಗಳು ರದ್ದಾದವು. ವಿಟಿಯುನಲ್ಲಿ ನಡೆಯಬೇಕಿದ್ದ ಇಂಜಿನಿಯರಿಂಗ್‌ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ, ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಗಳನ್ನು ಪ್ರತಿಭಟನಾಕಾರರು ಒತ್ತಾಯ ಪೂರ್ವಕವಾಗಿ ನಿಲ್ಲಿಸುವಂತೆ ಆಗ್ರಹಿಸಿದರು. ಆಡಳಿತ ಮಂಡಳಿ ಕೂಡಲೇ ಪರೀಕ್ಷೆ ನಿಲ್ಲಿಸಿತು. ಇದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡರಾದರೂ ಪ್ರಯೋಜನವಾಗಲಿಲ

ಪೊಲೀಸ್‌ ಬಂದೋಬಸ್ತ್ 
ಬಂದ್‌ ಹಿನ್ನೆಲೆಯಲ್ಲಿ ನಗರದ ಎಲ್ಲ ಕಡೆಗಳಲ್ಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೂರು ಕೆಎಸ್‌ಆರ್‌ಪಿ ತುಕಡಿ, 12 ಡಿಆರ್‌ ತುಕಡಿ, ಆರು ಡಿಎಸ್‌ಪಿ, 13 ಸಿಪಿಐ ಮತ್ತು 25 ಪಿಎಸ್‌ಐ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗ‌ಳನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಸೇರಿದಂತೆ ಎಸ್ಪಿ ಶಶಿಕುಮಾರ ಬಂದೋಬಸ್ತ್ನ ನಿಗಾ ವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಬಣಗುಟ್ಟಿದ ಬಸ್‌ ನಿಲ್ದಾಣ
ನಿತ್ಯ ಲಕ್ಷಾಂತರ ಜನರಿಗೆ ಪ್ರಯಾಣಕ್ಕೆ ಆಸರೆಯಾಗುತ್ತಿದ್ದ ಕೇಂದ್ರ ಬಸ್‌ ನಿಲ್ದಾಣ ಸಂಪೂರ್ಣ ಸ್ತಬ್ದವಾಗಿತ್ತು. ಅಲ್ಲಲ್ಲಿ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯ್ದು ಕುಳಿತಿದ್ದರು. ಆದರೆ, ಬಸ್ಸುಗಳು ಹೊರಡಲೇ ಇಲ್ಲ. ಡಿಪೋಗಳಿಂದ ನಿಲ್ದಾಣಕ್ಕೆ ಬರಲೇ ಇಲ್ಲ. ಇನ್ನೊಂದೆಡೆ ನಗರ ಸಂಚಾರಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಇಡೀ ಬಸ್ಸು ನಿಲ್ದಾಣ ಬಣಗುಡುತ್ತಿತ್ತು.

ಲಾಠಿ ಹಿಡಿದು ಓಡಾಡಿದ ಮಕ್ಕಳು
ಕಲಬುರಗಿಯ ರಾಮಮಂದಿರ, ಹೀರಾಪುರ, ರಾಜಾಪುರ, ಬಿದ್ದಾಪುರ ಕಾಲೋನಿ ವೃತ್ತ, ಜೇವರ್ಗಿ ಕಾಲೋನಿಯ ಕೆಳ ಸೇತುವೆ ಸೇರಿದಂತೆ ಹಲವು ಕಡೆಗಳಲ್ಲಿ ಮಕ್ಕಳು ಕೈಯಲ್ಲಿ ಲಾಠಿಗಳನ್ನು ಹಿಡಿದು ಓಡಾಡಿ ಬಾಲಕಿಗಾದ ಅನ್ಯಾಯಕ್ಕೆ ನ್ಯಾಯ ಕೇಳಿದರು. ಅಕ್ಕನಿಗಾಗಿ ತಮ್ಮಂದಿರು.. ಮಗಳಿಗಾಗಿ ತಾಯಂದಿರು ರಸ್ತೆ ತಡೆ ಮಾಡಿ ಅತ್ಯಾಚಾರಿಗಳನ್ನು ಬಂಧಿಸಿ ಇಲ್ಲದಿದ್ದರೆ ನಾವು ಸುಮ್ಮನಿರೋಲ್ಲ.. ಹಲವು ಭಾಗ್ಯ ನೀಡಿ ಭದ್ರತೆ ಭಾಗ್ಯ ನೀಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇನ್ನೊಂದೆಡೆ ಎಲ್ಲಾ ದಲಿತ, ಎಡರಂಗ ಮತ್ತು ಪ್ರಗತಿಪರರು ಬಂದ್‌ನಲ್ಲಿ ಪಾಲ್ಗೊಂಡಿದ್ದು ಪ್ರಮುಖವಾಗಿತ್ತು. ಪ್ರತಿ ಬಂದ್‌ ಮತ್ತು ಹೋರಾಟದ ವೇಳೆಯಲ್ಲಿ ಸ್ವತಂತ್ರವಾಗಿ ರಸ್ತೆಗಳಿದು ಘೋಷಣೆ ಹಾಕುತ್ತಿದ್ದ ಬಹುತೇಕ ನಾಯಕರು ದಲಿತ ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ ನೇತೃತ್ವದಲ್ಲಿ ಒಂದಾಗಿ ಧ್ವನಿ ಎತ್ತಿದರು.

ಐತಿಹಾಸಿಕ ಬಂದ್‌
ಗುರುವಾರ ನಡೆದ ಬಂದ್‌ ಐತಿಹಾಸಿಕ. ಇಂತಹ ಹೋರಾಟಗಳು ನಡೆದದ್ದು ವಿರಳ. ಮಕ್ಕಳು ರಸ್ತೆಗಿಳಿದಿದ್ದು ಕೊಂಚ ಚಿಂತೆಗೀಡು ಮಾಡಿದೆ. ಆದರೆ, ಅವರಲ್ಲೂ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಿದ್ದು ಒಳ್ಳೆಯದೇನೋ.. ಮಹಿಳೆಯರು ನ್ಯಾಯ ಕೇಳಿದ್ದಾರೆ. ಎಲ್ಲಾ ಕಲಬುರಗಿ ಸಾರ್ವಜನಿಕರು, ವ್ಯಾಪಾರಸ್ಥರು, ಎಲ್ಲಾ ವರ್ಗದ ಜನರು ಬೆಂಬಲ ನೀಡಿರುವುದು ಹೋರಾಟಗಾರರಲ್ಲಿ ಚೈತನ್ಯ ಮೂಡಿಸಿದೆ. ಸರಿಯಾದ ಕಾರಣಗಳಿಗೆ ಜನರು ಬೆನ್ನಿಗೆ ನಿಲ್ಲುತ್ತಾರೆ ಎನ್ನುವು ಸಂದೇಶ ಹೊರ ಬಿದ್ದಿದೆ.
 ಲಕ್ಷ್ಮಣ ದಸ್ತಿ, ಹಿರಿಯ ಹೋರಾಟಗಾರರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆಳಂದ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಡೋಳಾ ಗ್ರಾಪಂ ಕಚೇರಿ ಎದುರು ಪ್ರಗತಿಪರರು ಹಾಗೂ ಆಯ್ದ ಸದಸ್ಯರು ಸೇರಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ...

  • ಚಿಂಚೋಳಿ: ತಾಲೂಕಿನ ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರು ನೋಂದಣಿ ಮತ್ತು ಜಮೀನು ಪಹಣಿಗಳ ತಿದ್ದುಪಡಿ ಮಾಡಿಕೊಳ್ಳಲು ಸರ್ವರ್‌ ಸಮಸ್ಯೆ ಹೆಚ್ಚಾಗಿದೆ....

  • ಚಿಂಚೋಳಿ: 71ನೇ ಗಣರಾಜ್ಯೋತ್ಸವ ದಿನಾಚರಣೆ ದಿವಸ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ತಾಲೂಕಾಡಳಿತ, ಪುರಸಭೆ ಮಾಲಾರ್ಪಣೆ ಮಾಡದೇ...

  • ಕಲಬುರಗಿ: ಜಿಲ್ಲೆಯಲ್ಲಿ 32 ವರ್ಷಗಳ ನಂತರ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಭಾಗ್ಯ ದೊರೆತಿರುವುದರಿಂದ ಸಮ್ಮೇಳನ ಯಶಸ್ವಿಗೆ ನೆರವು, ಸರ್ವರ ಭಾಗಿದಾರಿಕೆ,...

  • ಕಲಬುರಗಿ: ಕಳೆದ ವರ್ಷ ಬರಗಾಲದಿಂದ ಕೈ ಸುಟ್ಟುಕೊಂಡ ತೊಗರಿ ಬೆಳೆಗಾರರಿಗೆ ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದಿದ್ದರೂ ಅದನ್ನು ಬೆಂಬಲ ಬೆಲೆಯಲ್ಲಿ ಮಾರಬೇಕೆಂದರೆ...

ಹೊಸ ಸೇರ್ಪಡೆ