ಆರು ತಿಂಗಳ ಒಳಗೆ ರಸ್ತೆ ಅಭಿವೃದ್ಧಿ

ವಿವಿಧ ರಸ್ತೆ ಅಭಿವೃದ್ಧಿ ಯೋಜನೆಯಡಿ 220 ಕೋಟಿ ರೂ. ಬಿಡುಗಡೆ: ಶಾಸಕ ನಂಜೇಗೌಡ

Team Udayavani, Aug 13, 2019, 4:27 PM IST

ಮಾಸ್ತಿ ಹೋಬಳಿಯ ಹಸಾಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಕುಪ್ಪೂರು ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ನೂತನ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೂಮಿ ಪೂಜೆ ನೆರವೇರಿಸಿದರು.

ಮಾಸ್ತಿ: ತಾಲೂಕಿನ ಬಹುತೇಕ ಎಲ್ಲಾ ರಸ್ತೆಗಳನ್ನು ಮುಂದಿನ 6 ತಿಂಗಳ ಒಳಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಕ್ಷೇತ್ರವನ್ನು ಮಾದರಿ ಮಾಡಲಾಗುವುದು ಎಂದು ಶಾಸಕ ನಂಜೇಗೌಡ ಹೇಳಿದರು.

ಮಾಸ್ತಿ ಹೋಬಳಿಯ ಹಸಾಂಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕುಪ್ಪೂರು ಗ್ರಾಮದಲ್ಲಿ ಶ್ರೀಧರ್ಮರಾಯಸ್ವಾಮಿ ನೂತನ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಅವರು, ಎಸ್‌ಎಸ್‌ಡಿಪಿ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ, ನಬಾರ್ಡ್‌ ಯೋಜನೆ, ಗ್ರಾಮ ಸಡಕ್‌ ಯೋಜನೆಯಡಿ 220 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿರುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಎಲ್ಲಾ ಕೆರೆಗೂ ನೀರು: ಕೆ.ಸಿ. ವ್ಯಾಲಿ ಯೋಜನೆಯ 100 ಎಂಎಲ್ಡಿ ನೀರಿನಲ್ಲಿ ಮಾಲೂರಿಗೆ 40 ಎಂಎಲ್ಡಿ ನೀರು ಹರಿಸಲಾಗುತ್ತಿದೆ. ಈಗಾಗಲೇ ಶಿವಾರಪಟ್ಟಣ ಕೆರೆಗೆ ನೀರು ಹರಿದು ಬಂದಿದ್ದು, 20 ದಿನಗಳಲ್ಲಿ ಕೆರೆ ತುಂಬಲಿದೆ. ಮುಂದಿನ 2 ತಿಂಗಳ ಒಳಗೆ ಮಾಲೂರು ಪಟ್ಟಣದ ದೊಡ್ಡಕೆರೆಗೆ ನೀರು ಹರಿದು ಬರಲಿದೆ. ತಾಲೂಕಿನ 27 ದೊಡ್ಡ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರು ಹರಿದು ಬರಲಿದ್ದು, ಉಳಿದ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಚರ್ಚೆ ಮಾಡಲಾಗುವು ದು ಭರವಸೆ ನೀಡಿದರು.

ಹೋಬಳಿಯ ಕುಪ್ಪೂರು, ರಾಯಸಂದ್ರ ಹಾಗೂ ರಾಜೇನಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀಧರ್ಮ ರಾಯ ಸ್ವಾಮಿ ದೇಗುಲಗಳಿಗೆ ತಲಾ 5 ಲಕ್ಷ ರೂ. ನಂತೆ ಶಾಸಕರ ಅನುದಾನದಲ್ಲಿ 15 ಲಕ್ಷ ರೂ. ನೀಡಲಾಗುವುದು ಎಂದರು.

ದೇಗುಲ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ವೃದ್ಧಿಸಲಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಧರ್ಮರಾಯಸ್ವಾಮಿ, ದ್ರೌಪತಾಂಭ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಭಾಗದ ಕೆಲವು ಗ್ರಾಮಗಳಲ್ಲಿ ಧರ್ಮರಾಯ ಸ್ವಾಮಿ ದೇವಾಲಯಗಳು ಇಲ್ಲದ ಕಾರಣ ಮುಖಂಡರು ಹಾಗೂ ಗ್ರಾಮಸ್ಥರ ಮನವಿ ಮೆರಗೆ ಮಾಸ್ತಿ ಹೋಬಳಿಯ ಕುಪ್ಪೂರು, ರಾಯಸಂದ್ರ ಹಾಗೂ ರಾಜೇನಹಳ್ಳಿ ಗ್ರಾಮಗಳಲ್ಲಿ ಧರ್ಮರಾಯ ಸ್ವಾಮಿ ದೇಗುಲ ನಿರ್ಮಿಸಲು ತಲಾ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.

ಕರಗ ಮಹೋತ್ಸವ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಪ್ಪೂರು ಕೆ.ಎಚ್.ಚನ್ನರಾಯಪ್ಪ ಮಾತನಾಡಿ, ಶ್ರೀಧರ್ಮರಾಯ ಸ್ವಾಮಿ ದೇವಾಲಯವಿಲ್ಲದಿದ್ದರೂ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಎಲ್ಲಾ ಧರ್ಮದವರ ಜೊತೆಗೂಡಿ 55 ವರ್ಷಗಳಿಂದ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ವಿಜೃಂಭಣೆಯಿಂದ ಕರಗ ಆಚರಣೆ: ಪ್ರಸ್ತುತ ಗ್ರಾಮಸ್ಥರು, ತಿಗಳರ ಸಮುದಾಯ ಹಾಗೂ ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು, ವರ್ಷದೊಳಗೆ ದೇವಾಲಯ ನಿರ್ಮಾಣ ಪೂರ್ಣಗೊಂಡರೆ ಮುಂದಿನ ವರ್ಷ ನೂತನ ದೇವಾಲಯದಲ್ಲೇ ಕರಗ ಮಹೋತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ವಿವಿ ಪ್ರಾಧ್ಯಾಪಕ ಹಾಗೂ ಸಾಹಿತಿ ಕುಪ್ಪೂರು ಕೆ.ವೈ.ನಾರಾಯಣಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಸ್ತಿ ಜಿ.ಪಂ. ಕ್ಷೇತ್ರದ ಸದಸ್ಯ ಎಚ್.ವಿ.ಶ್ರೀನಿವಾಸ್‌, ತಾಪಂ ಸದಸ್ಯ ಆರ್‌.ಎ.ಅಬ್ಬಯ್ಯ, ಮಾಜಿ ಅಧ್ಯಕ್ಷರಾದ ಚಂದ್ರಪ್ಪ, ಕನಕಮ್ಮ ಗೋಪಾಲಪ್ಪ, ರಾಜ್ಯ ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಎ.ರಾಮಕೃಷ್ಣಪ್ಪ, ಬಿಬಿಎಂಪಿ ಮಾಜಿ ಉಪಮೇಯರ್‌ ಕೆ.ವಾಸುದೇವ್‌ಮೂರ್ತಿ, ಹಸಾಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಮಮತಾ ರಾಜಣ್ಣ, ಉಪಾಧ್ಯಕ್ಷೆ ರತ್ನಮ್ಮ ಲವಲಪ್ಪ, ಬನಹಳ್ಳಿ ಗ್ರಾ.ಪಂ. ಅಧ್ಯಕ್ಷ ರಾಮಮೂರ್ತಿ, ಮಾಸ್ತಿ ಗ್ರಾ.ಪಂ. ಸದಸ್ಯರಾದ ವೆಂಕಟರಾಮ್‌, ಜೆಸಿಬಿ ನಾಗರಾಜ್‌, ಲೆಕ್ಕ ಪರಿಶೋಧಕ ಎಂ.ಆಂಜಿನಪ್ಪ, ಜಯರಾಜ್‌, ಹಾರೋಮಾಕನಹಳ್ಳಿ ಗೋಪಾಲಪ್ಪ, ಟೇಕಲ್ ಯಲ್ಲಪ್ಪ, ಕೆಂಭೋಡಿ ನಾರಾಯಣಪ್ಪ, ತೊಳಕನಹಳ್ಳಿ ರಾಮಸ್ವಾಮಿ, ಕೆ.ವೆಂಕಟಸ್ವಾಮಿ, ವಕೀಲ ಈಶ್ವರ್‌, ಕೆ.ಎನ್‌.ಮುನಿಯಪ್ಪ, ಶಿವಾರೆಡ್ಡಿ, ಬಿ.ವಿ.ನಾರಾಯಣಪ್ಪ, ಪಿಡಿಒ ಶಿವಲಿಂಗಯ್ಯ, ಗ್ರಾಪಂ ಸದಸ್ಯರು, ದ್ರೌಪತಾಂಭ ಧರ್ಮರಾಯ ಸ್ವಾಮಿ ವಹ್ನಿಕುಲ ಕ್ಷತ್ರಿಯ ಸಂಘದ ಪದಾಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ