ಕೆ.ಆರ್‌.ಪೇಟೆ: 2.08 ಲಕ್ಷ ಮತದಾರರು

Team Udayavani, Nov 12, 2019, 4:43 PM IST

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಗೆ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ  ಯಲ್ಲಿ ಮಾತನಾಡಿ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,06,088 ಪುರುಷರು ಹಾಗೂ 1,02,844 ಮಹಿಳೆಯರು ಹಾಗೂ 5 ಮಂದಿ ಇತರೆ ಮತದಾರರು ಸೇರಿ 2,08,937 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದರು. ಚುನಾವಣೆಗಾಗಿ ಕೆ.ಆರ್‌.ಪೇಟೆ ಪಟ್ಟಣದಲ್ಲಿ 21 ಹಾಗೂ ಗ್ರಾಮಾಂತರದಲ್ಲಿ 237 ಸೇರಿ 258 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ಚುನಾವಣೆಗೆ ನಾಮಪತ್ರವನ್ನು ನ.11ರಿಂದ ನ.18ರವರೆಗೆ ಕಚೇರಿ ಕಾರ್ಯನಿರ್ವಹಿಸುವ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣಾಧಿಕಾರಿ ಕಚೇರಿ (ತಹಶೀಲ್ದಾರ್‌ ಕಾರ್ಯಾಲಯ,ಕೆ.ಆರ್‌.ಪೇಟೆ) ಯಲ್ಲಿ ಸ್ವೀಕರಿಸಲಾಗುವುದು ಎಂದು ಹೇಳಿದರು.

ನ.18 ಕೊನೆ ದಿನ: ನಾಮಪತ್ರ ಸಲ್ಲಿಸುವುದಕ್ಕೆ ನ.18 ಕೊನೆಯ ದಿನವಾಗಿದ್ದು, ನ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.21ರಂದು ನಾಮಪತ್ರ ಹಿಂಪಡೆಯುವುದಕ್ಕೆ ಅಂತಿಮ ದಿನವಾಗಿದ್ದು, ಡಿ.5ರಂದು ಚುನಾವಣೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚುನಾವಣೆ ನಡೆದು ಡಿ.9ರಂದು ಫ‌ಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

5 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ: ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಯನ್ನು ಒಳಗೊಂಡಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಚುನಾವಣಾಧಿಕಾರಿ ಕಾರ್ಯಾಲಯದ ಆವರಣದ 100 ಮೀ. ವ್ಯಾಪ್ತಿಯಲ್ಲಿ ಕೇವಲ 3 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಅಲ್ಲದೆ,  ವ್ಯಾಪ್ತಿಯ ಸುತ್ತ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ವಿವರಿಸಿದರು. ಕೆ.ಆರ್‌.ಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸೆ.24ರಂದು ಪಕ್ಷೇತರ ಅಭ್ಯರ್ಥಿಯಾಗಿ ದೇವರಾಜು ನಾಮಪತ್ರ ಸಲ್ಲಿಸಿದ್ದಾರೆ ಎಂದು ನುಡಿದರು.

ಚುನಾವಣಾ ನೀತಿ ಸಂಹಿತೆ ಜಾರಿ: ಚುನಾವಣಾ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಲ್ಲಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಜಿಲ್ಲಾಡಳಿತ ಈಗಾಗಲೇ ಈ ಕೆಳಕಂಡಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರವಾಸಿಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಮಂದಿರಗಳನ್ನು ರಾಜಕೀಯ ಪ್ರೇರಿತ ವ್ಯಕ್ತಿಗಳಿಗೆ ಹಾಗೂ ಮುಖಂಡರಿಗೆ ನೀಡದಂತೆ, ಅವುಗಳನ್ನು ವಶಕ್ಕೆ ಪಡೆದುಕೊಳ್ಳಲು ಜಿಲ್ಲೆಯ ಎಲ್ಲಾ ತಹಸೀಲ್ದಾರ್‌, ಎಇಇ, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಳಿಗೆ ಸೂಚಿಸಿ ಕ್ರಮ ವಹಿಸಲಾಗಿದೆ.

ಎಲ್ಲಾ ವರ್ಗಾವಣೆಗಳು ನಿಷೇಧ: ಎಲ್ಲಾ ಚುನಾಯಿತರಾದ ಹಾಗೂ ನಾಮ ನಿರ್ದೇಶನಗೊಂಡ ರಾಜಕೀಯ ಮುಖಂಡರಿಗೆ ನೀಡಲಾಗಿರುವ ಸರ್ಕಾರಿ ವಾಹನ ಸೌಲಭ್ಯವನ್ನು ಮರಳಿ ಪಡೆದು ಜಿಲ್ಲಾ ಡಳಿತದ ಅಧೀನದಲ್ಲಿ ಇಟ್ಟುಕೊಳ್ಳಲು ಕ್ರಮ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಎಲ್ಲಾ ವರ್ಗಾವಣೆಗಳನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಅಂತಹ ವರ್ಗಾವಣೆಗಳು ಚುನಾವಣಾ ಅಧಿಸೂಚನೆಗಿಂತಲೂ ಪೂರ್ವದಲ್ಲಿ ಆಗಿದ್ದಲ್ಲಿ ಅವುಗಳನ್ನು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ತಡೆಹಿಡಿಯಲು ಹಾಗೂ ಇಂತಹ ವರ್ಗಾವಣೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲು ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ರಜೆ ಇಲ್ಲ: ಜಿಲ್ಲೆಯ, ತಾಲೂಕಿನ, ಎಲ್ಲಾ ಇಲಾಖೆ ಹಾಗೂ ಕಚೇರಿ ಮುಖ್ಯಸ್ಥರಿಗೆ ರಜೆ ನೀಡುವುದನ್ನು ನಿರ್ಬಂಧಿಸಲಾಗಿದೆ. ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗದವರು ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ರಜೆ ಪಡೆಯುವುದಾಗಲಿ ಅಥವಾ ಕೇಂದ್ರ ಸ್ಥಾನ ಬಿಡದಂತೆ ಸೂಚನೆ ನೀಡಿದೆ ಎಂದು ಹೇಳಿದರು.

ಅಧಿಕಾರಿಗಳಿಗೆ ನಿರ್ದೇಶನ: ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಸರ್ಕಾರದ ಎಲ್ಲ ರೀತಿಯ ಯೋಜನೆಗಳನ್ನು ಹೊಸದಾಗಿ ಅನುಷ್ಠಾನಗೊಳಿಸುವುದನ್ನು ನಿರ್ಬಂಧಿಸ ಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿಪತ್ರ, ಕಟೌಟ್ಸ್‌, ಬ್ಯಾನರ್‌, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಈಗಾ ಗಲೇ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನುಡಿದರು. ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್‌, ವಾರ್ತಾಧಿಕಾರಿ ಹರೀಶ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ