ರಸ್ತೆಗಿಳಿದು ಸ್ವಚ್ಛತೆಯಲ್ಲಿ ತೊಡಗಿ: ಸೋಮಣ್ಣ

Team Udayavani, Sep 9, 2019, 3:00 AM IST

ಮೈಸೂರು: ನಗರ ಪಾಲಿಕೆಯ 9 ವಲಯದ ವಲಯಾಧಿಕಾರಿಗಳು ಹಾಗೂ ಪರಿಸರ ನಿರ್ವಹಣೆ ಅಧಿಕಾರಿಗಳು ಒಂದು ಗುರಿ ಇಟ್ಟುಕೊಂಡು ಕೆಲಸಮಾಡುವ ಜೊತೆಗೆ, ಎಲ್ಲಾ ವಾರ್ಡ್‌ಗಳ ರಸ್ತೆಗಿಳಿದು ಅಲ್ಲಿನ ಸ್ವಚ್ಛತೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಭಾನುವಾರ ಮೈಸೂರು ಮನೆ ಮನೆ ದಸರಾ ಕಾರ್ಯಕ್ರಮ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪಾಲಿಕೆಯ 9 ವಲಯದ ಅಧಿಕಾರಿಗಳು ತಮ್ಮ ವಲಯ ಮಟ್ಟದ ಸಭೆ ನಡೆಸಿ ಸ್ವಚ್ಛತೆ ಹಾಗೂ ಅಲ್ಲಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯ, ಅಲ್ಲಿನ ಉದ್ಯಾನವನಗಳ ಸcಚ್ಛತೆ ಕಾಪಾಡಿಕೊಳ್ಳಬೇಕು. ನಗರ ಸುಂದರವಾಗಿದ್ದರೆ ದಸರಾ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ವೀಕ್ಷಣೆ: ಮೈಸೂರು ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲೂ ಉತ್ತಮ ಗುಣಮಟ್ಟದ ಬೀದಿ ದೀಪ ಅಳವಡಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮೈಸೂರು ನಗರ ವ್ಯಾಪ್ತಿಯ ರಸ್ತೆ ಬದಿಯ ಬೀದಿ ದೀಪಗಳ ವೀಕ್ಷಣೆಯನ್ನು ಇದೇ ಸೆ.11 ರಂದು ಸಂಜೆ 6.30 ರಿಂದ 8.30 ರವರಗೆ ಶಾಸಕರು ಮತ್ತು ಸಂಸದರ 4 ತಂಡಗಳಿಂದ ವೀಕ್ಷಣೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಸ್ಯೆ ಆಗದಂತೆ ನೋಡಿಕೊಳ್ಳಿ: ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಶಾಪಿಂಗ್‌ ಕಾಂಪ್ಲೆಕ್ಸ್‌ನ ಅಂಗಡಿ ಮಳಿಗೆಗಳಿಗೆ ರಸ್ತೆ ಬದಿಯಲ್ಲಿರುವ ಅಧಿಕೃತ 118 ಅಂಗಡಿಯವರನ್ನು ಶಿಫ್ಟ್ ಮಾಡಿಸಬೇಕು. ಅನಧಿಕೃತವಾಗಿರುವ ಅಂಗಡಿಗಳ ವ್ಯಾಪಾರಸ್ಥರ ಅಂಡಿಗಳನ್ನು ತೆರವುಗೊಳಿಸುವ ಸಂಬಂಧ, ಅವರ ಮನವೊಲಿಸಿ ಪರಿಹಾರ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಮೈಸೂರು ತಹಶೀಲ್ದಾರ್‌ ಮತ್ತು ಮೈಸೂರು ತಾಪಂ ಇಒಗಳಿಗೆ ಸೂಚನೆ ನೀಡಿದರು. ಅಲ್ಲದೇ, ಮುಖ್ಯಮಂತ್ರಿಗಳು ಬೆಟ್ಟಕ್ಕೆ ಆಗಮಿಸುವಾಗ ಯಾವುದೇ ರೀತಿಯ ಸಮಸ್ಯೆ ಬಾರದಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಸಹಕರಿಸಿ: ಶಾಸಕರಾದ ಎಸ್‌.ಎ.ರಾಮದಾಸ್‌ ಮಾತನಾಡಿ, ನಗರದಲ್ಲಿರುವ ಎಲ್ಲಾ ಪ್ರಮುಖ ಪಾರ್ಕ್‌ಗಳನ್ನು ಸ್ವಚ್ಛಗೊಳಿಸಬೇಕು. ಮನೆ-ಮನೆ ದಸರಾ ಜೊತೆಗೆ ಯೋಗ ದಸರಾ, ಮಕ್ಕಳ ದಸರಾ ಹಾಗೂ ಮಹಿಳಾ ದಸರಾ ಸಂಯೋಜನೆಯಾಗಬೇಕು ಇದಕ್ಕೆ ಎಲ್ಲಾ ವಾರ್ಡ್‌ಗಳ ಅಧಿಕಾರಿಗಳು ಸಹಕರಿಸಬೇಕು ಎಂದರು.

ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮೇಯರ್‌ ಪುಷ್ಪಲತಾ, ಉಪಮಹಪೌರರಾದ ಸಫೀ ಅಹಮದ್‌, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಪಂ ಸಿಇಒ ಕೆ.ಜ್ಯೋತಿ, ನಗರಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್‌.ಕಾಂತರಾಜು, ಇನ್ನಿತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ