ಕೊಳೆ ಪರಿಹಾರಕ್ಕೆ ಒತ್ತಾಯ

ಅಡಕೆ ಕಳ್ಳ ಸಾಗಾಟ ತಡೆಗೆ ಕ್ರಮ: ಸುಬ್ರಹ್ಮಣ್ಯ ಭರವಸೆ

Team Udayavani, Sep 22, 2019, 6:36 PM IST

ಶಿವಮೊಗ್ಗ: ನೆರೆಯಿಂದಾಗಿ ಹಲವೆಡೆ ಅಡಕೆ ಹಾಳಾಗಿದೆ. ಹೀಗಾಗಿ, ಬಡ್ಡಿ ರಹಿತ ಸಾಲ ನೀಡಬೇಕು. ಐದು ಜನರ ಸಮಿತಿ ರಚಿಸಬೇಕು. ಆ ಸಮಿತಿಯು ಅಡಕೆ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲಿ. ಜತೆಗೆ, ಕೊಳೆ ರೋಗಕ್ಕೆ ಉಚಿತವಾಗಿ ಔಷಧ ನೀಡಬೇಕೆಂದು ಸದಸ್ಯರೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಮಾಮ್‌ಕೋಸ್‌ ಉಪಾಧ್ಯಕ್ಷ ವೈ.ಎಸ್‌. ಸುಬ್ರಹ್ಮಣ್ಯ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ನಡೆದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಅಡಕೆ ಬೆಳೆಗಾರರ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯಾಯಿತು. ಜತೆಗೆ, ಸಂಘ ಮತ್ತು ಸರಕಾರದಿಂದಾಗಬೇಕಾದ ಕೆಲಸಗಳ ಕುರಿತು ಸದಸ್ಯರು ತಿಳಿಸಿದರು. ಸಣ್ಣ ಪ್ರಮಾಣದ ಅಡಕೆ ಬೆಳೆಗಾರರು ತಾವು ಬೆಳೆದ ಅಡಕೆಯನ್ನು ದೂರದ ಸ್ಥಳಗಳಿಂದ ತಂದು ಮಾಮ್‌ಕೋಸ್‌ಗೆ ನೀಡಲು ಸಾಗಣೆ ವೆಚ್ಚ ಸೇರಿ ದುಬಾರಿಯಾಗುತ್ತಿದೆ. ಹೀಗಾಗಿ, ಸಾಗಣೆಗೆ ಮಾಮ್‌ ಕೋಸ್‌ನಿಂದ ವಾಹನ ವ್ಯವಸ್ಥೆ ಮಾಡಬೇಕೆಂದು ಎಚ್‌. ಆರ್‌. ಬಸವರಾಜಪ್ಪ ಸೇರಿದಂತೆ ಸಂಘದ ಇನ್ನಿತರ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ (ಮಾಮ್‌ಕೋಸ್‌)ದ ಉಪಾಧ್ಯಕ್ಷ ವೈ.ಎಸ್‌. ಸುಬ್ರಹ್ಮಣ್ಯ ಅವರು, ಸಂಘಕ್ಕೆ ಇದರಿಂದ ನಷ್ಟವಾಗುವ ಸಾಧ್ಯತೆ ಇದೆ ಎಂದರು.

ಒಂದು ವೇಳೆ, ಮಾಮ್‌ಕೋಸ್‌ನಿಂದಲೇ ಲಾರಿ ವ್ಯವಸ್ಥೆ ಮಾಡಿದ್ದಲ್ಲಿ ಮಧ್ಯವರ್ತಿಗಳು ಹಾಗೂ ಕಳ್ಳ ವ್ಯಾಪಾರಕ್ಕೆ ತಡೆ ಹಾಕಬಹುದು. ಜತೆಗೆ, ಸಂಘಕ್ಕೆ ಹೆಚ್ಚಿನ ಪ್ರಮಾಣದ ಅಡಕೆ ಬರುವ ಸಾಧ್ಯತೆ ಇದೆ. ಬರುವ ದಿನಗಳಲ್ಲಿ ಒಂದು ಲಾರಿ ವ್ಯವಸ್ಥೆ ಮಾಡಿ, ನಿರ್ದಿಷ್ಟ ದಿನಾಂಕದಂದು ಮಾರ್ಗ ನಿರ್ಧರಿಸಿ, ಅಡಕೆ ಬೆಳೆಗಾರರಿಗೆ ಪ್ರಕಟಣೆಗಳ ಮೂಲಕ ತಿಳಿಸಿದಲ್ಲಿ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದಕ್ಕೆ ಸ್ಪಂದಿಸಿದ ಉಪಾಧ್ಯಕ್ಷರು, ಮಾಮ್‌ಕೋಸ್‌ನಲ್ಲಿ ಲಾರಿ ಸೌಲಭ್ಯವಿದೆ. ಸಲಹೆಯೂ ಉತ್ತಮವಾಗಿದೆ. ಬರುವ ದಿನಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ತೀವ್ರ ಚರ್ಚೆಗೆ ಗ್ರಾಸವಾದ ಮತದ ಹಕ್ಕು: ಮೂರು ಸಾಮಾನ್ಯ ಸಭೆಗಳಿಗೆ ಗೈರಾದರೆ ಅಂತಹ ಸದಸ್ಯರು ಮತ ನೀಡುವ ಹಕ್ಕನ್ನು ಮೂರು ವರ್ಷದವರೆಗೆ ಕಳೆದುಕೊಳ್ಳುತ್ತಾರೆಂಬ ವಿಷಯಕ್ಕೆ ಸದಸ್ಯರು ವಿರೋಧಿಸಿದರು. ಕಾರಣಾಂತರಗಳಿಂದ ಸಭೆಗೆ ಹಾಜರು ಆಗದಿದ್ದರೆ ಅವರ ಹಕ್ಕನ್ನೇ ಕಸಿದುಕೊಳ್ಳುವುದೆಷ್ಟು ನ್ಯಾಯ ಎಂದು ಸರ್ವ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ತಾಳ್ಮೆಯಿಂದ ಉತ್ತರಿಸಿದ ಉಪಾಧ್ಯಕ್ಷರು, ಸಂವಿಧಾನದಡಿ 97ನೇ ತಿದ್ದುಪಡಿ ಅನ್ವಯ ಸರಕಾರವು ಕರ್ನಾಟಕ ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಿದ ಮೇರೆಗೆ ಕಳೆದ 5 ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಮೂರು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದರೆ ಅಂತಹ ಸದಸ್ಯರು ತಮ್ಮ ಮತ ನೀಡುವ ಹಕ್ಕನ್ನು ಮೂರು ವರ್ಷಗಳವರೆಗೆ ಕಳೆದುಕೊಳ್ಳುತ್ತಾರೆ. ಕಾಯಿದೆಯ ಕಲಂ 17 (2-ಎ) ಅನ್ವಯ ಸದಸ್ಯನು ಅಧಿನಿಯಮ,
ನಿಯಮಗಳ ಮತ್ತು ಉಪವಿ ಗಳ ಮೇರೆಗೆ ಸದಸ್ಯನಾಗಿ ಕರ್ತವ್ಯ ನೆರವೇರಿಸುವಲ್ಲಿ ಸತತ ಮೂರು ವರ್ಷ ವಿಫಲನಾದರೆ, ಅವನು ಅಂತಹ ಅವಧಿ ಮುಗಿದಾಗ ಸದಸ್ಯನಾಗಿರುವುದು ನಿಂತು ಹೋಗುತ್ತದೆಂದು ಮಾಹಿತಿ ನೀಡಿದರು.

ಸರಕಾರದ ಮೇಲೆ ಒತ್ತಡ ತಂದು ಈ ನಿಯಮ ಬದಲಿಸಬೇಕೆಂದು ಆಗ್ರಹಿಸಲಾಯಿತು. ಜಿಲ್ಲೆಯಲ್ಲಿ ವಿಮೆ ಕಚೇರಿ ಆರಂಭಿಸಿ: ಹವಾಮಾನ ಆಧಾರಿತ ಬೆಳೆ ವಿಮೆ ಪ್ರಯೋಜನವು ಬೆಳೆಗಾರರಿಗೆ ತ್ವರಿತಗತಿಯಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು. ವಿಮೆ ಕಟ್ಟುವುದನ್ನು ಕಡ್ಡಾಯಗೊಳಿಸಿರುವುದು ಸರಿಯಲ್ಲ. ಹೀಗಾಗಿ, ಕಡ್ಡಾಯವೆಂಬುದನ್ನು ತೆಗೆದು, ವಿಮೆ ಕಂಪನಿಗಳೇ ರೈತರ ವಿಮೆ ಹಣ ಕಟ್ಟಬೇಕು. ಜತೆಗೆ, ವಿಮೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಇಲ್ಲ. ಡಿಸಿಗೆ ಪ್ರಶ್ನಿಸಿದರೆ ಅವರು ಮೇಲಿನವರಲ್ಲಿ ವಿಚಾರಿಸುವುದಾಗಿ ಹೇಳುತ್ತಾರೆ. ಈ ಎಲ್ಲವುಗಳ ಮಧ್ಯೆ ರೈತ ಕಂಗಾಲಾಗಿದ್ದಾನೆ. ಆದ್ದರಿಂದ, ಬರುವ ದಿನಗಳಲ್ಲಿ ಶಿವಮೊಗ್ಗದಲ್ಲಿ ವಿಮೆ ಕಂಪನಿ ಕಚೇರಿ ಆರಂಭಿಸಬೇಕೆಂದು ಬಸವರಾಜಪ್ಪ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌, ವಿಮೆ ಹಣ ಬಿಡುಗಡೆಯಾಗಿರುವ ಬಗ್ಗೆ ಗೊತ್ತಿಲ್ಲ. ಅದನ್ನು ಪರಿಶೀಲಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ಬಗೆಹರಿಸಲಾಗುವುದು. ಜತೆಗೆ, ರೈತರ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಲಾಗುವುದು. ಮುಂದಿನ ವಾರ ವಿಮೆ
ಕುರಿತು ಚರ್ಚಿಸುವುದಕ್ಕಾಗಿಯೇ ಸಭೆ ಕರೆಯಲಾಗಿದ್ದು, ಮಾಮ್‌ಕೋಸ್‌ನ ನಿರ್ದೇಶಕರಿಗೂ ಆಹ್ವಾನಿಸಲಾಗಿದೆ. ಅಲ್ಲಿ ಸಮಸ್ಯೆಗಳನ್ನು ವ್ಯಕ್ತಪಡಿಸುವಂತೆ ತಿಳಿಸಿದರು.

ಬಹುಮಾನ ಹಣ ಏರಿಕೆ ಮಾಡಿ: ಪ್ರತಿಭಾ ಪುರಸ್ಕಾರಕ್ಕಾಗಿ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಗುತ್ತಿರುವ ಬಹುಮಾನ ರೂಪದ ಹಣದಲ್ಲಿ ಏರಿಕೆ ಮಾಡಬೇಕು. ನಿಗದಿಸಿರುವ ಹಣ ಪೂರ್ಣ ಪ್ರಮಾಣದಲ್ಲಿ ಖರ್ಚಾಗುತ್ತಿಲ್ಲ. ಹೀಗಾಗಿ, ಪ್ರತಿಭಾ ಪುರಸ್ಕಾರದಲ್ಲಿ ನೀಡಲಾಗುವ ಬಹುಮಾನದಲ್ಲಿ ನೀಡುವ ಹಣದ ಪ್ರಮಾಣ ಏರಿಕೆ ಮಾಡಿ ಎಂದು ಸದಸ್ಯರೊಬ್ಬರು ಮನವಿ ಮಾಡಿದರು. ಆ ರೀತಿ ಮಾಡಿದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾದರೆ ತೊಂದರೆ ಆಗುವ ಸಾಧ್ಯತೆಯೂ ಇದೆ. ಆದ್ದರಿಂದ, ಮಾಡಲು ಆಗುವುದಿಲ್ಲ ಎಂದು ಸುಬ್ರಹ್ಮಣ್ಯ ಹೇಳಿದರು.

ಕಾಡುಪ್ರಾಣಿಗಳಿಂದಾಗುವ ಹಾನಿ ಕುರಿತು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಾಧ್ಯಕ್ಷರು, ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಲ್ಲಿಂದ ಬಂದಿರುವ ಪ್ರತಿಯಂತೆ, ಹಾನಿ ತಡೆಗೆ ಅರಣ್ಯ ಇಲಾಖೆಯಿಂದ ಸೋಲಾರ್‌ ಫೆನ್ಸಿಂಗ್‌ಗೆ ಅವಕಾಶವಿದೆ ಎಂದರು.

ನಿರ್ದೇಶಕರ ಅಧ್ಯಯನ ಪ್ರವಾಸಕ್ಕೆ 6.03 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ, ಇದರಿಂದ ಸಂಘಕ್ಕೇನು ಲಾಭವಾಗಿದೆ ಎಂದು ಸದಸ್ಯರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಬ್ರಹ್ಮಣ್ಯ, ಅಂಡಮಾನ್‌ಗೆ ಭೇಟಿ ನೀಡಲಾಗಿತ್ತು. ಅಲ್ಲಿ ತೆಂಗು ಬೆಳೆಯುವುದು ಸೇರಿದಂತೆ ವಿವಿಧ ಕೃಷಿ ಪದ್ಧತಿ ಬಗ್ಗೆ ತಿಳಿದುಕೊಳ್ಳಲಾಯಿತು ಎಂದರು.

ಬರುವ ಅಧ್ಯಯನ ಪ್ರವಾಸಕ್ಕೆ ಹೋಗುವಾಗ ಪ್ರಗತಿಪರ ರೈತರು ಮತ್ತು ಯುವಪೀಳಿಗೆಯನ್ನೂ ಪರಿಗಣಿಸುವಂತೆ ಮನವಿ ಮಾಡಲಾಯಿತು. ಕೊಳೆ ಔಷಧ ಸಾಲವನ್ನು ಗುಂಟೆಗೆ 150 ರೂ.ನಂತೆ ಕೊಡುತ್ತಿದ್ದು, ಅದನ್ನು 300 ರೂ.ಗೆ ಹೆಚ್ಚಿಸಬೇಕು. ಪ್ರಸ್ತುತ ಕೊಳೆ ಔಷಧ ಸಾಲವನ್ನು ಮಾತ್ರ ಪಡೆದಲ್ಲಿ ಗುಂಟೆಗೆ 250 ರೂ. ನೀಡುತ್ತಿದ್ದು, ಇದು ಸೂಕ್ತವಾಗಿರುವುದಾಗಿ ಸಭೆಯಲ್ಲಿ ಸದಸ್ಯರು ತಿಳಿಸಿದರು.

ಗೋದಾಮುಗಳಿಗೆ ಪಾವತಿಸಿರುವ ಹಣ, ಕಾವಲು ಮತ್ತು ಭದ್ರತೆ ಹೆಸರಿನಲ್ಲಿವ್ಯಯ ಮಾಡಲಾಗುತ್ತಿರುವ ದುಬಾರಿ ಹಣ ಹಾಗೂ ಸಾಗರದಲ್ಲಿ ಇತ್ತೀಚೆಗೆ ಆದ 6 ಲಕ್ಷ ರೂ. ನಗದು ದರೋಡೆ ಮತ್ತಿತರ ವಿಷಯ ಕುರಿತು ಸಭೆಯಲ್ಲಿ ಪ್ರಶ್ನಿಸಲಾಯಿತು. ಮಾಮ್‌ಕೋಸ್‌ ನಿರ್ದೇಶಕರಾದ ಎಚ್‌.ಸಿ. ನಾಗೇಶ್‌ರಾವ್‌, ಜೆ. ವಿರೂಪಾಕ್ಷಪ್ಪ, ಎಚ್‌.ಆರ್‌. ಅಶೋಕ್‌ ನಾಯಕ, ಬಿ.ಸಿ. ನರೇಂದ್ರ, ಜಿ.ಆರ್‌. ವೆಂಕಪ್ಪ ಮತ್ತಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ