ಸಿಗಂದೂರು : ಚಾಲಕನಿಗೆ ಫಿಟ್ಸ್ ಕಾಣಿಸಿಕೊಂಡು ಉರುಳಿದ ಟಿಟಿ
ಇಬ್ಬರಿಗೆ ತೀವ್ರ ತರದ ಗಾಯ
Team Udayavani, May 14, 2022, 5:35 PM IST
ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ತುಮರಿ ಸಮೀಪ ಸಿಗಂದೂರು ದೇವಾಲಯಕ್ಕೆ ಆಗಮಿಸಿದ ಬೆಂಗಳೂರಿನ ಬಿಡದಿ ಮೂಲದ ಪ್ರವಾಸಿಗರ ಟಿಟಿ ವಾಹನ ದೇವಾಲಯದ ಸಮೀಪವೇ ಅಪಘಾತವಾಗಿದೆ. ಇದ್ದಕ್ಕಿದ್ದಂತೆ ಟಿಟಿಯ ಚಾಲಕನಿಗೆ ಫಿಟ್ಸ್ ಬಂದ ಹಿನ್ನೆಲೆಯಲ್ಲಿ ಟಿಟಿ ನಿಯಂತ್ರಣ ತಪ್ಪಿ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಾಹನದಲ್ಲಿ 4 ಮಕ್ಕಳು ಸೇರಿ ಒಟ್ಟು 11 ಜನ ಇದ್ದು ಇಬ್ಬರಿಗೆ ಸ್ವಲ್ಪ ತೀವ್ರ ತರದ ಗಾಯಗಳಾಗಿವೆ. ಗಾಯಗೊಂಡವರಿಗೆ ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ದ್ವೀಪದಲ್ಲಿ ಸರ್ಕಾರ ಒದಗಿಸಿದ ಎರಡು ಆಂಬುಲೆನ್ಸ್‌ನಲ್ಲಿ ಒಂದು ಸಾಗರಕ್ಕೆ ತೆರಳಿದ್ದು, ಇನ್ನೊಂದು ಆರ್‌ಟಿಓ ದಾಖಲೆಗಳು ಪೂರ್ಣಗೊಳಿಸಿಲ್ಲದ ಕಾರಣ ಬಳಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಗಂದೂರು ದೇವಸ್ಥಾನದ ಆಂಬುಲೆನ್ಸ್‌ನ್ನೇ ಬಳಸುವಂತಾಗಿದೆ. ಇಂತಹ ಪರಿಸ್ಥಿತಿ ಪದೇ ಪದೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ತುಮರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.