Female health: ಸ್ತ್ರೀ ದೇಹ ಮತ್ತು ಆರೋಗ್ಯ

ಪ್ರತೀ ಮಹಿಳೆಯೂ ತಿಳಿದಿರಬೇಕಾದ 10 ಪ್ರಮುಖ ಅಂಶಗಳು

Team Udayavani, May 26, 2024, 12:41 PM IST

5-health

ಮಹಿಳೆಯರ ಆರೋಗ್ಯದ ಕುರಿತಾದ ಮಾದರಿ ದೃಷ್ಟಿಕೋನಕ್ಕೆ ಅವರ ದೇಹದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಿರುವ ಪ್ರಾಮುಖ್ಯಗಳು ತಳಪಾಯವಾಗಿದೆ. ಪುರುಷರು ಮತ್ತು ಮಹಿಳೆಯರಿಬ್ಬರೂ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು.

ಆದರೆ ಮಹಿಳೆಯರ ಆರೋಗ್ಯದ ವಿಚಾರಕ್ಕೆ ಬಂದರೆ; ವಿವಿಧ ಸಮಾಜಗಳಲ್ಲಿ ಮಹಿಳೆಯರ ಆರೋಗ್ಯವನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬುದರ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ಮಹಿಳೆಯರ ಆರೋಗ್ಯದ ವಿಚಾರದಲ್ಲಿ ವೈಜ್ಞಾನಿಕ ತಳಹದಿಯ ದೃಷ್ಟಿಕೋನ ಹೇಗಿರಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

1. ಸಭ್ಯತೆಯ ಪ್ರಾಮುಖ್ಯ

ಸಭ್ಯತೆಯು ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಪುರುಷ ಮತ್ತು ಸ್ತ್ರೀ – ಇಬ್ಬರೂ ಸಭ್ಯತೆಯನ್ನು ಅಳವಡಿಸಿಕೊಂಡು ಪಾಲಿಸಿದಾಗ ಮಹಿಳೆಯು ತನ್ನ ಖಾಸಗಿತನವನ್ನು ಕಾಪಾಡಿಕೊಳ್ಳಬಹುದಾದ, ಕಳಂಕರಹಿತವಾದ ಘನತೆಯ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮಹಿಳೆಯ ಆತ್ಮವಿಶ್ವಾಸ ಮತ್ತು ಘನತೆ ವೃದ್ಧಿಸುತ್ತದೆ. ಸಭ್ಯತೆಯು ಸಚ್ಚಾರಿತ್ರ್ಯದ ಸೂತ್ರಗಳನ್ನು ಎತ್ತಿಹಿಡಿಯುವ ಮೂಲಕ ಆರೋಗ್ಯಯುತ ಲೈಂಗಿಕ ನಡವಳಿಕೆಯನ್ನು ಪ್ರೋತ್ಸಾಹಿಸುವುದರಿಂದ ಸ್ವತ್ಛಂದ ಪ್ರವೃತ್ತಿಯಿಂದ ತಲೆದೋರಬಲ್ಲ ಲೈಂಗಿಕವಾಗಿ ಪ್ರಸಾರವಾಗುವ ರೋಗಗಳು ಮತ್ತು ಇತರ ಆರೋಗ್ಯ ಅಪಾಯಗಳಿಂದಲೂ ರಕ್ಷಣೆ ಒದಗಿಸುತ್ತದೆ. ಉಡುಗೆ-ತೊಡುಗೆಗಳಲ್ಲಿ ಸಭ್ಯತೆಯು ನೈರ್ಮಲ್ಯ ಮತ್ತು ಪಾರಿಸರಿಕ ಅಂಶಗಳಿಂದ ರಕ್ಷಣೆ ಒದಗಿಸುವ ಮೂಲಕ ಮಹಿಳೆಯ ಆರೋಗ್ಯವನ್ನು ಸಂರಕ್ಷಿಸುವಲ್ಲಿ ಸಹಕರಿಸುತ್ತದೆ ಎಂದು ನಂಬಲಾಗಿದೆ.

ಸಭ್ಯತೆ ಮತ್ತು ಖಾಸಗಿತನಗಳು ನಿರ್ದಿಷ್ಟವಾಗಿ ಪ್ರಜನನಾತ್ಮಕ, ಲೈಂಗಿಕ ಮತ್ತು ಮಾನಸಿಕ ಆರೋಗ್ಯ ಸಹಿತವಾಗಿ ಮಹಿಳೆಯ ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತವೆ. ಪ್ರಸ್ತುತ ದಿನಗಳ ಸಮಾಜದಲ್ಲಿಯೂ ಇವುಗಳ ಪ್ರಾಮುಖ್ಯಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಮಹಿಳೆಯರು ತಮ್ಮ ಖಾಸಗಿತನದ ಅಗತ್ಯಕ್ಕೆ ಗೌರವ ಹೊಂದಿರುವ ವಾತಾವರಣದಲ್ಲಿ ತಮ್ಮ ಸಮಗ್ರ ಕಲ್ಯಾಣಕ್ಕೆ ಅಗತ್ಯವಾದ ಆರೈಕೆ, ಸೇವೆಗಳನ್ನು ಅನುಕೂಲಕರವಾಗಿ ಪಡೆಯುವಂತಿರಬೇಕು. ತೀರ್ಮಾನ ಬರುವುದು ಅಥವಾ ಗೌಪ್ಯತೆಗೆ ಧಕ್ಕೆಯುಂಟಾಗುವ ಬಗ್ಗೆ ಭಯರಹಿತವಾಗಿ ಸೂಕ್ಷ್ಮ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬಲ್ಲ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಇದರಲ್ಲಿ ಸೇರಿದೆ.

2. ಕೌಟುಂಬಿಕ ಜೀವನ ಮತ್ತು ತಾಯ್ತನ

ಕೌಟುಂಬಿಕ ಜೀವನ ಮತ್ತು ತಾಯ್ತನಗಳು ಮಹಿಳೆಯರ ಆರೋಗ್ಯದ ಮೇಲೆ ಗಮನಾರ್ಹವಾದ ಧನಾತ್ಮಕ ಪರಿಣಾಮವನ್ನು ಬೀರುತ್ತವೆ. ಕುಟುಂಬದಿಂದ ಲಭ್ಯವಾಗುವ ಭಾವನಾತ್ಮಕ ಬೆಸುಗೆ ಮತ್ತು ಬೆಂಬಲವು ಮಹಿಳೆಯರ ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆಗೆ ತಳಹದಿಯಾಗುವ ಮೂಲಕ ಒತ್ತಡವನ್ನು ಕಡಿಮೆಗೊಳಿಸಲು ಕಾರಣವಾಗುತ್ತದೆಯಲ್ಲದೆ ಜೀವನದಲ್ಲಿ ಹೆಚ್ಚು ಸಂತೃಪ್ತಿಯ ಭಾವವನ್ನು ಹೊಂದಲು ನೆರವಾಗುತ್ತದೆ. ಕೌಟುಂಬಿಕ ಚಟುವಟಿಕೆಗಳಲ್ಲಿ ಒಳಗೊಳ್ಳುವುದರಿಂದ ಸಕ್ರಿಯ ಜೀವನ ಶೈಲಿ ಸಾಧ್ಯವಾಗಿ ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ. ತಾಯ್ತನದಿಂದಾಗಿ ಮಹಿಳೆಯಲ್ಲಿ ಉದ್ದಿಶ್ಯ ಮತ್ತು ಸಾಧನೆಯ ಭಾವ ತುಂಬಿಕೊಳ್ಳುವ ಮೂಲಕ ಖನ್ನತೆಯ ಪ್ರಮಾಣ ಕಡಿಮೆಯಾಗುವಂತಹ ಮಾನಸಿಕ ಆರೋಗ್ಯ ಲಾಭಕ್ಕೆ ಕೊಡುಗೆಯಾಗುತ್ತದೆ. ಇದರ ಜತೆಗೆ ತಾಯ್ತನ, ಮಗುವಿನ ಲಾಲನೆ-ಪಾಲನೆಗಳ ಮೂಲಕ ಮಹಿಳೆಯು ಅನುಭವಿಸುವ ಮಾನಸಿಕ ಬೆಳವಣಿಗೆಯು ಹೆಚ್ಚು ಸಹಿಷ್ಣುತೆ ಮತ್ತು ಪರಿಶ್ರಮದ ಕೌಶಲಗಳನ್ನು ಹೊಂದಲು ಕಾರಣವಾಗುತ್ತದೆ. ದೈಹಿಕವಾಗಿ, ಗರ್ಭಧಾರಣೆ ಮತ್ತು ಶಿಶುವಿಗೆ ಎದೆಹಾಲು ಉಣಿಸುವ ಅವಧಿಯಲ್ಲಿ ಮಹಿಳೆಯರು ಹೊಂದುವ ಹಾರ್ಮೋನ್‌ ಸಂಬಂಧಿ ಬದಲಾವಣೆಗಳಿಂದ ಕೆಲವು ಕ್ಯಾನ್ಸರ್‌ಗಳು ಉಂಟಾಗುವ ಅಪಾಯ ಕಡಿಮೆಯಾಗುವುದು ಮತ್ತು ಶಿಶು ಜನನದ ಬಳಿಕ ಚೆನ್ನಾಗಿ ಚೇತರಿಸಿಕೊಳ್ಳುವಂತಹ ದೀರ್ಘ‌ಕಾಲೀನ ಆರೋಗ್ಯ ಲಾಭಗಳು ಉಂಟಾಗಬಹುದಾಗಿದೆ. ಮಹಿಳೆಯನ್ನು ತಾಯಿ ಮತ್ತು ಆರೈಕೆದಾರರ ಪಾತ್ರದಲ್ಲಿ ಕಾಣುವುದಕ್ಕೆ ಇನ್ನಷ್ಟು ಮಹತ್ವ ಒದಗಬೇಕಾಗಿದ್ದು, ಈ ಮೂಲಕ ಗರ್ಭಧಾರಣೆ ಮತ್ತು ಎದೆಹಾಲು ಉಣಿಸುವಿಕೆಯಂತಹ ಕಾರ್ಯಗಳಿಗೆ ಬೆಂಬಲ ಸಿಗುವಂತಹ ಪರಿಸರ, ವಾತಾವರಣ ನಿರ್ಮಾಣವಾಗಬೇಕಾಗಿದೆ.

3. ಮಹಿಳೆಯ ಆರೋಗ್ಯದ ಮೇಲೆ ಪೌಷ್ಟಿಕಾಂಶದ ಪ್ರಭಾವ

ಮಹಿಳೆಯರ ಒಟ್ಟಾರೆ ಆರೋಗ್ಯದಲ್ಲಿ ಪೌಷ್ಟಿಕಾಂಶವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕ್ಯಾಲ್ಸಿಯಂ, ಕಬ್ಬಿಣದಂಶ ಮತ್ತು ವಿಟಮಿನ್‌ಗಳಂತಹ ಆವಶ್ಯಕ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಎಲುಬುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ರಕ್ತಹೀನತೆಯನ್ನು ತಡೆಗಟ್ಟುವುದು ಮತ್ತು ಒಟ್ಟಾರೆ ಸೌಖ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತುಂಬಾ ಅಗತ್ಯವಾಗಿದೆ. ಇದರ ಜತೆಗೆ ಸಮತೋಲಿತ ಆಹಾರ ಕ್ರಮವನ್ನು ಪಾಲಿಸುವುದು ಹಾರ್ಮೋನ್‌ ಸಮತೋಲನ ಹೊಂದಿರುವುದು, ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಉತ್ತಮ ಮಾನಸಿಕ ಆರೋಗ್ಯ ಹೊಂದುವುದರ ಮೇಲೆ ಅಪಾರ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

4. ಮಾನಸಿಕ ಆರೋಗ್ಯ ಮತ್ತು ಕಲ್ಯಾಣ

ಮಾನಸಿಕ ಆರೋಗ್ಯದತ್ತ ಸರಿಯಾಗಿ ಗಮನ ಹರಿಸುವುದು ಮಹಿಳೆಯ ಒಟ್ಟಾರೆ ಆರೋಗ್ಯ ಮತ್ತು ಕಲ್ಯಾಣದ ಅವಿಭಾಜ್ಯ ಅಂಗವಾಗಿದೆ. ಒತ್ತಡ, ಆತಂಕ, ಚಿಂತೆ, ಖನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸವಾಲುಗಳು ಎದುರಾದ ಸಂದರ್ಭದಲ್ಲಿ ಮಹಿಳೆಯರು ಸೂಕ್ತವಾದ ನೆರವು ಮತ್ತು ಸಂಪನ್ಮೂಲಗಳನ್ನು ಪಡೆಯುವುದನ್ನು ಪ್ರೋತ್ಸಾಹಿಸಬೇಕಾಗಿದೆ. ಮಾನಸಿಕ ಆರೋಗ್ಯ ವಿಷಯವನ್ನು ಮುಕ್ತ ಮತ್ತು ಬೆಂಬಲಯುತವಾಗಿ ಸಮಾಲೋಚಿಸ ಬಹುದಾದಂತಹ ವಾತಾವರಣವನ್ನು ಸೃಷ್ಟಿಸುವುದು ಅವರು ಅಗತ್ಯ ನೆರವನ್ನು ಪಡೆಯುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ.

5. ನಿಯಮಿತವಾಗಿ ವ್ಯಾಯಮ ಮಾಡುವುದರ ಪ್ರಾಮುಖ್ಯ

ನಿಯಮಿತವಾಗಿ ವ್ಯಾಯಾಮ ಮಾಡುವುದು ಮಹಿಳೆಯ ಆರೋಗ್ಯಕ್ಕೆ ಮುಖ್ಯವಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದಾಡ್ಯì ಚೆನ್ನಾಗಿರುವುದು ಮಾತ್ರವಲ್ಲದೆ ಮಾನಸಿಕ ಸೌಖ್ಯವೂ ಉತ್ತಮವಾಗಿರುತ್ತದೆ. ಜತೆಗೆ ಹೃದ್ರೋಗಗಳು, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.

6. ಲೈಂಗಿಕ ಆರೋಗ್ಯ ಶಿಕ್ಷಣ

ಸ್ಥಳೀಯ ಸಾಂಸ್ಕೃತಿಕ ನೀತಿ ನಿಯಮಗಳು ಮತ್ತು ಘನತೆಗೆ ಅನುಗುಣವಾಗಿರುವ ಸಮಗ್ರ ಲೈಂಗಿಕ ಆರೋಗ್ಯ ಶಿಕ್ಷಣವನ್ನು ಮಹಿಳೆಗೆ ಒದಗಿಸುವುದು ಮುಖ್ಯವಾಗಿರುತ್ತದೆ. ಮದುವೆಯ ಪ್ರಾಪ್ತ ವಯಸ್ಸು ಮತ್ತು ಕೌಟುಂಬಿಕ ಜೀವನದ ಕುರಿತಾದ ಜ್ಞಾನವನ್ನು ಇದೇ ಚೌಕಟ್ಟಿನಲ್ಲಿ ಅಡಕಗೊಳಿಸಬಹುದಾಗಿದೆ.

7. ದೈಹಿಕ ಸಂರಚನೆ

ಒಟ್ಟಾರೆಯಾಗಿ ಹೇಳುವುದಾದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯ ದೇಹದಲ್ಲಿ ದೈಹಿಕ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಮತ್ತು ಸ್ನಾಯು ಪ್ರಮಾಣ ಕಡಿಮೆ ಇರುತ್ತದೆ. ಇದು ಚಯಾಪಚಯ ಕ್ರಿಯೆ ಮತ್ತು ಶಕ್ತಿಯ ಅಗತ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಬಿಎಂಐ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳ ವಿಷಯಕ್ಕೆ ಬಂದಾಗ, 18.5-25 ಬಿಎಂಐ ಹೊಂದಿರುವ ಮಹಿಳೆಯರು ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು, ಬಿಎಂಐ 30 ಅಥವಾ ಅದಕ್ಕಿಂತ ಹೆಚ್ಚಿರುವವರು ಅಧಿಕ ರಕ್ತದೊತ್ತಡ, ಅಸ್ತಮಾ ಮತ್ತು ಅನಿಯಮಿತ ಋತುಚಕ್ರದಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಗಮನಕ್ಕೆ ಬಂದಿದೆ. ಇನ್ನೊಂದೆಡೆ, ಬಿಎಂಐ 18.5ಕ್ಕಿಂತ ಕಡಿಮೆ ಇರುವ ಮಹಿಳೆಯರು ಕಡಿಮೆ ಕಬ್ಬಿಣಾಂಶ ಪ್ರಮಾಣ, ಅನಿಯಮಿತ ಋತುಚಕ್ರದಂತಹ ಸಮಸ್ಯೆಗಳನ್ನು ಹೊಂದಿದ್ದು, ಬಿಎಂಐ ತೀರಾ ಕಡಿಮೆ ಅಥವಾ ತೀರಾ ಹೆಚ್ಚು ಇರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

8. ಪ್ರಜನನಾತ್ಮಕ ಬದಲಾವಣೆಗಳು

ಮಹಿಳೆಯ ಪ್ರಜನನಾತ್ಮಕ ಜೀವನವು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಋತುಸ್ರಾವ ಆರಂಭದಿಂದ ತೊಡಗುತ್ತದೆ. ಋತುಸ್ರಾವ ಆರಂಭವು ಬಾಲಕಿಯ ಸಂತಾನೋತ್ಪತ್ತಿ ಶಕ್ತಿ ಮತ್ತು ಋತುಚಕ್ರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ಈ ಪರಿವರ್ತನಾತ್ಮಕ ಅವಧಿಯು ಋತುಸ್ರಾವ ಅಂತ್ಯಗೊಳ್ಳುವ ಋತುಚಕ್ರ ಬಂಧದ ವರೆಗೆ ಮುಂದುವರಿಯುತ್ತದೆ. ಈ ಸಂಕೀರ್ಣ ಪ್ರಯಾಣದ ಉದ್ದಕ್ಕೂ ತನ್ನ ಆರೋಗ್ಯ ಮತ್ತು ಸಮಗ್ರ ಸೌಖ್ಯದ ವಿವಿಧ ಆಯಾಮಗಳ ಮೇಲೆ ಪರಿಣಾಮ ಬೀರುವ ಅಸಂಖ್ಯಾಕ ಹಾರ್ಮೋನ್‌ ಏರಿಳಿತಗಳನ್ನು ಮಹಿಳೆ ಅನುಭವಿಸುತ್ತಾಳೆ.

ಮಹಿಳೆಯು ತನ್ನ ಪ್ರಜನನಾತ್ಮಕ ವ್ಯವಸ್ಥೆಯನ್ನು ಆಳವಾಗಿ ಅರ್ಥ ಮಾಡಿಕೊಂಡಿರುವುದು ಅಗತ್ಯ. ಇದರಿಂದ ಆಕೆಗೆ ಸಂತಾನ ನಿಯಂತ್ರಣ, ಗರ್ಭಧಾರಣೆ ಮತ್ತು ಲೈಂಗಿಕ ಆರೋಗ್ಯ ವಿಷಯಗಳಲ್ಲಿ ತಿಳಿವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಋತುಚಕ್ರ, ಅಂಡ ಬಿಡುಗಡೆ ಮತ್ತು ಸಂಭಾವ್ಯ ಪ್ರಜನನಾತ್ಮಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವನ್ನು ಹೊಂದಿರುವುದರಿಂದ ಮಹಿಳೆಗೆ ತನ್ನ ಪ್ರಜನನಾತ್ಮಕ ಸೌಖ್ಯದ ಮೇಲೆ ನಿಯಂತ್ರಣ ಹೊಂದುವುದು ಸಾಧ್ಯವಾಗುತ್ತದೆ.

ಪ್ಯಾಪ್‌ ಸ್ಮಿಯರ್‌ ಮತ್ತು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವ ಮೂಲಕ ಪ್ರಜನನಾತ್ಮಕ ಅಂಗಗಳಲ್ಲಿ ಯಾವುದೇ ಬದಲಾವಣೆಗಳು ಉಂಟಾಗಿದ್ದರೆ ತಿಳಿದುಕೊಳ್ಳಬಹುದಾಗಿದೆ ಮತ್ತು ಸೂಕ್ತವಾಗಿ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ.

9. ಸ್ತನ ಆರೋಗ್ಯದ ಮೇಲೆ ನಿಗಾ

ಸ್ತನದ ಆರೋಗ್ಯಕ್ಕಾಗಿ ನಿಯಮಿತವಾಗಿ ಸ್ವಯಂ ತಪಾಸಣೆ ಮಾಡಿಕೊಳ್ಳುವುದು, ನಿಯಮಿತವಾಗಿ ವೈದ್ಯಕೀಯ ತಪಾಸಣೆಗಳು ಮತ್ತು ಮ್ಯಾಮೊಗ್ರಾಮ್‌ಗೆ ಒಳಗಾಗುವುದು ಹಾಗೂ ಸ್ತನದ ಅಂಗಾಂಶ, ಆಕಾರ ಅಥವಾ ಸ್ವರೂಪದಲ್ಲಿ ಉಂಟಾಗಬಹುದಾದ ಯಾವುದೇ ಬದಲಾವಣೆಯ ಬಗ್ಗೆ ಗಮನ ಇರಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಯಸ್ಸು, ವಂಶವಾಹಿ ಇತಿಹಾಸ ಮತ್ತು ಜೀವನ ಶೈಲಿಗಳ ಸಹಿತ ಸ್ತನ ಕ್ಯಾನ್ಸರ್‌ನ ಅಪಾಯ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಸ್ತನದಲ್ಲಿ ಸತತ ನೋವು ಅಥವಾ ಸೋಂಕು ಉಂಟಾದರೆ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸಮತೋಲಿತ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ ಮಾಡುವುದು, ಮದ್ಯಪಾನ ಮಿತಿಯಲ್ಲಿ ಇರಿಸಿಕೊಳ್ಳುವುದು ಮತ್ತು ಧೂಮಪಾನವನ್ನು ವರ್ಜಿಸುವುದರಂತಹ ಆರೋಗ್ಯಯುತ ಜೀವನ ಶೈಲಿಯ ಅನುಸರಣೆಯಿಂದ ಸ್ತನಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಶಿಶುವಿಗೆ ಎದೆಹಾಲು ಉಣಿಸುವುದರಿಂದಲೂ ಕ್ಯಾನ್ಸರ್‌ ಅಪಾಯ ಕಡಿಮೆಯಾಗುತ್ತದೆ. ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಚರಿತ್ರೆ ಹೊಂದಿರುವ ಮಹಿಳೆಯರು ವಂಶವಾಹಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಸ್ತನದ ಆರೋಗ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಯಾವುದೇ ಸಮಸ್ಯೆಗಳು ಉಂಟಾದರೆ ಚಿಕಿತ್ಸೆಯಿಂದ ಉತ್ತಮ ಫ‌ಲಿತಾಂಶಗಳನ್ನು ಪಡೆಯಲು ರೋಗ ಪ್ರತಿಬಂಧ ಮತ್ತು ಶೀಘ್ರ ಪತ್ತೆಯ ಕಾರ್ಯತಂತ್ರ ಅನುಕೂಲಕರವಾಗಿದೆ.

10. ಹಾರ್ಮೋನ್‌ಗಳು ಮತ್ತು ಋತುಚಕ್ರಬಂಧಗಳನ್ನು ಅರ್ಥ ಮಾಡಿಕೊಳ್ಳುವುದು

ಮಹಿಳೆಯ ದೇಹವು ಋತುಸ್ರಾವ ಆರಂಭದಿಂದ ತೊಡಗಿ ಋತುಚಕ್ರ ಬಂಧದ ವರೆಗೆ ಸಂತಾನೋತ್ಪತ್ತಿ ಬದಲಾವಣೆಗಳ ಸಹಿತ ಅನೇಕ ಹಾರ್ಮೋನ್‌ ಮತ್ತು ಪ್ರಜನನಾತ್ಮಕ ಬದಲಾವಣೆಗಳನ್ನು ಹೊಂದುತ್ತದೆ. ಋತುಚಕ್ರ ಬಂಧವು ಋತುಸ್ರಾವ ನಿಲುಗಡೆಗೆ ದಾರಿ ಮಾಡಿಕೊಡುತ್ತದೆ ಹಾಗೂ ಓಸ್ಟಿಯೋಪೊರೋಸಿಸ್‌ ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಸ್ತ್ರೀ ದೇಹಶಾಸ್ತ್ರವು ಗರ್ಭಧಾರಣೆ, ಎದೆಹಾಲು ಉಣಿಸುವಿಕೆ, ಹಾರ್ಮೋನ್‌ ಏರಿಳಿತಗಳಿಂದ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಜೀವನದ ವಿವಿಧ ಹಂತಗಳಲ್ಲಿ ಹೆಚ್ಚುವರಿ ಪೌಷ್ಟಿಕಾಂಶ ಅಗತ್ಯಗಳನ್ನು ಕೂಡ ಒಳಗೊಂಡಿರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಮಹಿಳೆಯರ ಖಾಸಗಿತನದ ಅಗತ್ಯವನ್ನು ಗೌರವಿಸುವುದು ಹಾಗೂ ಸೂಕ್ಷ್ಮ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವಂತಹ ವಾತಾವರಣವನ್ನು ಸೃಷ್ಟಿಸುವುದು ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ಒದಗಿಸುವುದರಲ್ಲಿ ಒಳಗೊಂಡಿದೆ.

ಮಹಿಳೆಯರ ಆರೋಗ್ಯದ ಮೇಲೆ ಕೌಟುಂಬಿಕ ಜೀವನ ಮತ್ತು ತಾಯ್ತನಗಳು ಬೀರುವ ಧನಾತ್ಮಕ ಪ್ರಭಾವಗಳು ಭಾವನಾತ್ಮಕ ಬೆಸುಗೆ ಮತ್ತು ಬೆಂಬಲದ ಪ್ರಾಮುಖ್ಯವನ್ನು ಒತ್ತಿಹೇಳುತ್ತವೆ. ಇದೇವೇಳೆ ಪೌಷ್ಟಿಕಾಂಶ, ಮಾನಸಿಕ ಆರೋಗ್ಯ, ನಿಯಮಿತವಾದ ವ್ಯಾಯಾಮ ಮತ್ತು ಮಹಿಳೆಯರ ಪ್ರಜನನಾತ್ಮಕ ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ಕಲ್ಯಾಣವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಜತೆಗೆ, ದೈಹಿಕ ಮಾಪನಗಳು ಮತ್ತು ಆರೋಗ್ಯ ಸೂಚಕಗಳ ನಡುವಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಸಮಗ್ರ ಆರೋಗ್ಯ ನಿರ್ವಹಣೆಗೆ ಅತ್ಯಗತ್ಯವಾಗಿದೆ.

ಪ್ರಜನನಾತ್ಮಕ ಬದಲಾವಣೆಗಳ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವುದು, ಸ್ತನಗಳ ಆರೋಗ್ಯದ ಮೇಲೆ ನಿಗಾ ಇರಿಸುವುದು ಮತ್ತು ಸ್ತನದ ಕ್ಯಾನ್ಸರ್‌ ಅಪಾಯ ಕಾರಣಗಳನ್ನು ಸೂಕ್ತವಾಗಿ ನಿರ್ವಹಿಸುವುದು ಮಹಿಳೆಯ ಆರೋಗ್ಯ ಆರೈಕೆಯಲ್ಲಿ ಅವಿಭಾಜ್ಯ ಅಂಗಗಳಾಗಿವೆ. ಈ ಪ್ರಮುಖ ಅಂಶಗಳನ್ನು ಅರ್ಥ ಮಾಡಿಕೊಂಡು ನಿರ್ವಹಿಸುವ ಮೂಲಕ ಆರೋಗ್ಯ ಸೇವಾ ಪೂರೈಕೆದಾರರು ಮತ್ತು ಬೆಂಬಲ ವ್ಯವಸ್ಥೆಗಳು ಮಹಿಳೆಯರ ಸಮಗ್ರ ಆರೋಗ್ಯ ಮತ್ತು ಕಲ್ಯಾಣಕ್ಕೆ ಪರಿಣಾಮಕಾರಿಯಾದ ಕೊಡುಗೆಗಳನ್ನು ನೀಡಬಹುದಾಗಿದೆ.

-ಡಾ| ಸಮೀನಾ ಹಾರೂನ್‌,

ಕನ್ಸಲ್ಟಂಟ್‌ ಒಬಿಜಿ,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

7–HPV

HPV: ಹ್ಯೂಮನ್‌ ಪ್ಯಾಪಿಲೋಮಾವೈರಸ್‌ (ಎಚ್‌ಪಿವಿ) ಮತ್ತು ಗರ್ಭಕಂಠದ ಕ್ಯಾನ್ಸರ್‌

4-

ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು

3-teeth

Health: ಬಾಯಿಯ ಆರೋಗ್ಯ: ಕೆಲ ಸಾಮಾನ್ಯ ಸುಳ್ಳು ಮತ್ತು ನಿಜ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

MUST WATCH

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

ಹೊಸ ಸೇರ್ಪಡೆ

First single of Ibbani Tabbida Ileyali Movie releasing on June 21

Vihan- Amar; ಜೂ.21ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು

Dhruva sarja’s bahaddur movie re releasing after 10 years

Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

Zap-X for painless treatment of brain tumors

ZAP-X Radiosurgery; ಬ್ರೈನ್‌ ಟ್ಯೂಮರ್‌ ನೋವುರಹಿತ ಚಿಕಿತ್ಸೆಗೆ ಝ್ಯಾಪ್‌- ಎಕ್ಸ್‌

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.