Mental health: ಉದ್ಯೋಗದ ಸ್ಥಳದಲ್ಲಿ ಮಾನಸಿಕ ಆರೋಗ್ಯ


Team Udayavani, Nov 5, 2023, 1:06 PM IST

5-mental-health

ರಾಘವ 35 ವರ್ಷ ವಯಸ್ಸಿನ ಯುವಕ, ಕಾರ್ಪೊರೇಟ್‌ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ತುಂಬಾ ಬುದ್ಧಿವಂತ, ಲವಲವಿಕೆಯ ವ್ಯಕ್ತಿ, ಆದರೆ ಕಳೆದ ಆರು ತಿಂಗಳುಗಳಿಂದ ಉದ್ಯೋಗ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಪ್ರತೀ ದಿನ ಬೆಳಗ್ಗೆ ಹಾಸಿಗೆಯಿಂದ ಎದ್ದು ಪ್ರಾತಃ ರ್ವಿಧಿಗಳನ್ನು ಪೂರೈಸಿ ಕೆಲಸಕ್ಕೆ ಹೋಗುವುದು ಅವರಿಗೆ ಒಂದು ಸವಾಲೇ ಆಗಿಬಿಟ್ಟಿದೆ. ತಾನು ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಆಲೋಚಿಸಿದಾಗ ಅವರಿಗೆ ಸಾಕೋ ಸಾಕು ಅನ್ನಿಸುತ್ತದೆ ಮತ್ತು ಕೊನೆಗೆ ಯಾವುದೂ ಬೇಡ ಅನ್ನಿಸುತ್ತದೆ. ಇವತ್ತಲ್ಲ ನಾಳೆ ಮ್ಯಾನೇಜರ್‌ ನಿಂದ ತನಗೆ ಬೈಗುಳ ಕಾದಿದೆ ಎಂದು ಆತಂಕಗೊಳ್ಳುತ್ತಾರೆ. ಉದ್ಯೋಗಕ್ಕೆ ರಾಜೀನಾಮೆ ಎಸೆದುಬಿಡಬೇಕು ಎಂದು ಆಗಾಗ ಅವರಿಗೆ ಅನ್ನಿಸುತ್ತದೆ; ಆದರೆ ಪಾವತಿಸಬೇಕಾಗಿರುವ ಸಾಲದ ಕಂತಿನ ನೆನಪಾಗಿ ವಿಧಿಯಿಲ್ಲದೆ ಮತ್ತೆ ಕೆಲಸಕ್ಕೆ ಹೊರಡುತ್ತಾರೆ.

ಇದು ರಾಘವ ಒಬ್ಬರದೇ ಕಥೆಯಲ್ಲ. ನಮ್ಮ ನಮ್ಮ ಸನ್ನಿವೇಶಗಳನ್ನು ಆಧರಿಸಿ ವಿವಿಧ ಉದ್ಯೋಗಗಳಲ್ಲಿ ತೊಡಗಿರುವ ನಮ್ಮೆಲ್ಲರಿಗೂ ಯಾವಾಗದರೊಮ್ಮೆ ಅಥವಾ ಆಗಾಗ ಇಂತಹುದೇ ಅನುಭವ ಆಗಿರುತ್ತದೆ. ಇಂಥ ಅನುಭವಕ್ಕೆ ಒಳಗಾಗಲು ಹಲವು ಕಾರಣಗಳು ಇರಬಹುದು; ಆದರೆ ಒಂದು ಸತ್ಯಾಂಶ ಎಂದರೆ ಇಂತಹ ಆಲೋಚನೆ ಪದೇಪದೆ ಮೂಡುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.

ಉದ್ಯೋಗವು ವಯಸ್ಕರ ಬದುಕಿನ ಅವಿಭಾಜ್ಯ ಅಂಗವಾಗಿದೆ ಮತ್ತು ಉದ್ಯೋಗಸ್ಥರಾಗಿರುವ ಎಲ್ಲರೂ ಪ್ರಾಯಃ ತಮ್ಮ ತಮ್ಮ ಮನೆಗಳಲ್ಲಿ ಸುಖವಾಗಿ ಕಾಲ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ಕಚೇರಿಗಳಲ್ಲಿ ಕಳೆಯುತ್ತಾರೆ. ಪ್ರತೀ ದಿನ ನಾವು ಕನಿಷ್ಠ ಎಂಟು ತಾಸುಗಳನ್ನು ಉದ್ಯೋಗ ಸ್ಥಳದಲ್ಲಿ ಮತ್ತು ಇನ್ನೊಂದಿಷ್ಟು ಸಮಯವನ್ನು ಕಚೇರಿಗೆ ಪ್ರಯಾಣ ಅವಧಿಯಾಗಿ ವ್ಯಯಿಸುತ್ತೇವೆ. ಬಹುತೇಕ ವಯಸ್ಕರು ಬರೇ ಆದಾಯ ಗಳಿಸುವುದಕ್ಕೆ ಮಾತ್ರವಲ್ಲದೆ ಉತ್ಪಾದಕ ಸಾಮರ್ಥ್ಯವನ್ನು ಉಳಿಸಿಕೊಳ್ಳುವುದಕ್ಕಾಗಿಯೂ ಮಾನಸಿಕ ಆರೋಗ್ಯ ಉದ್ಯೋಗ ನಿರ್ವಹಿಸಬೇಕಾಗುತ್ತದೆ. ನಮ್ಮ ಉದ್ಯೋಗಸ್ಥ ಜೀವನವು ನಮ್ಮ ನಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಕೊಡುಗೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಜನರನ್ನು ಅವರ ಉದ್ಯೋಗದಿಂದ ಪ್ರಾಪ್ತವಾಗುವ ಔದ್ಯೋಗಿಕ ಸ್ಥಾನಮಾನ, ಆದಾಯ, ಸಾಮಾಜಿಕ ಸ್ಥಿತಿಗತಿಗಳಿಂದ ಅಳೆಯಲಾಗುತ್ತದೆ. ಉದ್ಯೋಗ ನಿರ್ವಹಿಸುವ ಸಾಮರ್ಥ್ಯವುಳ್ಳವರಾಗಿರುವುದು ನಮಗೆ ಆತ್ಮವಿಶ್ವಾಸವನ್ನು ಮತ್ತು ನಾವು ಸಮರ್ಥರು ಎಂಬ ಆತ್ಮಗೌರವವನ್ನು ಒದಗಿಸಿಕೊಡುತ್ತದೆ.

ನಮ್ಮ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಲ್ಲುದು? ಸಾಮಾನ್ಯವಾಗಿ ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿಗಿನ ಒತ್ತಡದ ವಾತಾವರಣ ಇದ್ದೇ ಇರುತ್ತದೆ. ನಿರ್ದಿಷ್ಟ ಅಂತಿಮ ಗಡುವುಗಳ ಒಳಗೆ ನಮಗೆ ವಹಿಸಿದ ಜವಾಬ್ದಾರಿಗಳನ್ನು ಪೂರ್ಣಗೊಳಿಸಬೇಕಾದ ಸಂದರ್ಭ ಇರುವಾಗ ಒಂದಷ್ಟು ಪ್ರಮಾಣದ ಒತ್ತಡ ಉಂಟಾಗುತ್ತದೆ. ಕೆಲವೊಮ್ಮೆ ನಮಗೆ ವಹಿಸಲಾದ ಹೊಣೆಗಾರಿಕೆಯು ನಮ್ಮ ನಮ್ಮ ಕೌಶಲ ಮಿತಿಗಿಂತ ಹೆಚ್ಚಿನದ್ದಾಗಿದ್ದು, ನಿರೀಕ್ಷೆಯನ್ನು ಪೂರೈಸುವಲ್ಲಿ ಶ್ರಮಿಸಬೇಕಾದಾಗ ಹತಾಶೆ ಉಂಟಾಗಬಲ್ಲುದು.

ಮೇಲಧಿಕಾರಿಗಳಾಗಿರಲಿ, ಕಿರಿಯ ಸಹೋದ್ಯೋಗಿಗಳಾಗಿರಲಿ ಅಥವಾ ಸಮಾನ ಹುದ್ದೆಯವರಿರಲಿ; ಆಗಾಗ ತಪ್ಪಭಿಪ್ರಾಯ ಅಥವಾ ವಾದವಿವಾದಗಳು ನಡೆಯುತ್ತಿದ್ದರೆ ಸಹೋದ್ಯೋಗಿಗಳ ಜತೆಗೆ ಸಂಬಂಧವು ಕೂಡ ಒತ್ತಡವನ್ನು ಉಂಟು ಮಾಡುತ್ತದೆ. ಕಚೇರಿಯ ವಾತಾವರಣವು ವಿಷಮವಾಗಿದ್ದು, ಗುಂಪುಗಾರಿಕೆಯಿಂದಾಗಿ ಉದ್ಯೋಗಿಯೊಬ್ಬ ತಿರಸ್ಕೃತನಾಗಬಹುದು; ಇದು ಆತನ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪ್ರತಿಕೂಲ ಪರಿಣಾಮವನ್ನು ಬೀರಬಲ್ಲುದು. ನಮ್ಮ ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಸ್ಥಿತಿಗತಿಗಳಿಂದಾಗಿ ಕೆಲವೊಮ್ಮೆ ಉದ್ಯೋಗದ ಮೇಲೆ ಗಮನ ಕೇಂದ್ರೀಕರಿಸಲು ಅಸಾಧ್ಯವಾಗಿ ಅದರಿಂದ ತಪ್ಪುಗಳು ಉಂಟಾಗಬಹುದು ಹಾಗೂ ಇದರ ಪರಿಣಾಮವಾಗಿ ಮ್ಯಾನೇಜರ್‌ಗಳು ನಮ್ಮತ್ತ ಬೊಟ್ಟು ಮಾಡುವಂತೆ ಆಗಬಹುದು. ಇದರ ಪರಿಣಾಮವಾಗಿ ಭಡ್ತಿಯ ಅವಕಾಶಗಳನ್ನು ಕಳೆದುಕೊಳ್ಳಬಹುದು ಹಾಗೂ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಋಣಾತ್ಮಕ ಅಭಿಪ್ರಾಯಗಳು ಹೊರಬೀಳಬಹುದು.

ಅತಿಯಾದ ನಿರೀಕ್ಷೆಗಳು ಮತ್ತು ಕಿರಿದಾದ ಅಂತಿಮ ಗಡುವುಗಳಿಂದ ಉದ್ಯೋಗಿಗಳ ಮೇಲೆ ಅತಿಯಾದ ಒತ್ತಡ ಉಂಟಾಗಬಹುದು ಮತ್ತು ದೀರ್ಘಾವಧಿಯಲ್ಲಿ ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಇನ್ನೊಂದೆಡೆ, ಕೆಲಸದಲ್ಲಿ ಹೆಚ್ಚೇನೂ ಸವಾಲುಗಳು ಇಲ್ಲದೆ ಇರುವುದು ಮತ್ತು ಕೆಲಸ ಕಡಿಮೆ ಇರುವುದರಿಂದ ಉದ್ಯೋಗಿಯಲ್ಲಿ ಆಲಸ್ಯ ತಲೆದೋರಬಹುದು ಮತ್ತು ತಾನು ಯಾವುದೇ ರೀತಿಯಲ್ಲಿ ಕೊಡುಗೆ ನೀಡುತ್ತಿಲ್ಲ ಎಂಬ ಭಾವನೆ ಉಂಟಾಗಬಹುದು.

ಇಂತಹ ಔದ್ಯೋಗಿಕ ಪರಿಸರವು ಅವರಿಗೆ ಯಾವುದೇ ರೀತಿಯಲ್ಲಿ ಉತ್ತೇಜನದಾಯಕವಾಗಿರುವುದಿಲ್ಲ. ಇವೆರಡರಲ್ಲಿ ಯಾವುದೇ ಆಗಿರಲಿ; ಉದ್ಯೋಗಿಯು ಕೆಲಸದ ಬಗ್ಗೆ ತೃಪ್ತನಾಗಿಲ್ಲದೆ ಇದ್ದರೆ ಅಥವಾ ಸಂತೋಷ ಹೊಂದಿರದೆ ಇದ್ದರೆ “ಮೌನ ಹಿಂಜರಿಕೆ’ ಎಂಬ ವಿದ್ಯಮಾನಕ್ಕೆ ಕಾರಣವಾಗಬಹುದು. ಇಲ್ಲಿ ಉದ್ಯೋಗಿಯು ದೈಹಿಕವಾಗಿ ಕೆಲಸದ ಸ್ಥಳದಲ್ಲಿ ಉಪಸ್ಥಿತನಿರುತ್ತಾನೆ; ಆದರೆ ಮಾನಸಿಕವಾಗಿ ಆತ ಕೆಲಸದಲ್ಲಿ ತೊಡಗಿಕೊಂಡಿರುವುದಿಲ್ಲ.

ಇಂಥವರು ಯಾವುದೇ ರೀತಿಯಲ್ಲಿ ಮುಂದಾಳ್ತನ ವಹಿಸುವುದಿಲ್ಲ, ಅಸಡ್ಡೆ ಹೊಂದಿರುತ್ತಾರೆ ಮತ್ತು ಬಹಳ ಕಹಿ, ಉದಾಸೀನ, ಸಾಕೋ ಸಾಕು ಎಂಬ ಭಾವ ಹೊಂದಿರುತ್ತಾರೆ. ಇದು ಯಾವುದೇ ರೀತಿಯ ಔದ್ಯೋಗಿಕ ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇತರ ಉದ್ಯೋಗಿಗಳಿಗೂ ಸೋಂಕುರೋಗದಂತೆ ಹರಡುತ್ತದೆ.

ನಮ್ಮ ಜೀವನದಲ್ಲಿ ನಮ್ಮ ಉದ್ಯೋಗದ ಪ್ರಾಮುಖ್ಯ ಮತ್ತು ಉದ್ಯೋಗ ಸ್ಥಳದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದರ ಮಹತ್ವವನ್ನು ಪರಿಗಣಿಸಿ ನಾವು ಕೆಲವು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಒಬ್ಬ ವ್ಯಕ್ತಿಯಾಗಿ ಯಾವುದೇ ಉದ್ಯೋಗ ಸ್ಥಳದಲ್ಲಿ ಒತ್ತಡ ಉಂಟಾಗುವುದು ಸಹಜ. ಇದನ್ನು ನಿಭಾಯಿಸುವುದಕ್ಕಾಗಿ ಒತ್ತಡ ನಿಭಾವಣೆಯ ಕೆಲವು ಪ್ರಾಥಮಿಕ ಕೌಶಲಗಳನ್ನು ಕಲಿತು ಅಳವಡಿಸಿಕೊಳ್ಳುವ ಮೂಲಕ ಉದ್ಯೋಗಿಗಳು ಉದ್ಯೋಗ ಸ್ಥಳದಲ್ಲಿ ತಮ್ಮ ಸ್ಥಿತಿಗತಿಯನ್ನು ಉತ್ತಮಪಡಿಸಿಕೊಳ್ಳಲು ಶ್ರಮಿಸಬಹುದಾಗಿದೆ. ಸಮಯ ನಿರ್ವಹಣೆ, ಪರಿಣಾಮಕಾರಿ ಸಂವಹನ, ಸಾಂಸ್ಥಿಕ ಕೌಶಲಗಳಂತಹ ಪ್ರಾಥಮಿಕ ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉದ್ಯೋಗಿ ತನ್ನ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಇದರ ಪರಿಣಾಮವಾಗಿ ಆತನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಉದ್ಯೋಗದ ಮೂಲ ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು, ಇದರಿಂದ ಉದ್ಯೋಗದಲ್ಲಿ ಪ್ರಗತಿ ಸಾಧ್ಯವಾಗಿ ಔದ್ಯೋಗಿಕ ಸಂತೃಪ್ತಿ ಹೆಚ್ಚುತ್ತದೆ.

ವ್ಯಕ್ತಿ ತನಗೆ ಸಂತೋಷ ನೀಡುವ ಇತರ ಹವ್ಯಾಸಗಳು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕೆ ಪ್ರಜ್ಞಾಪೂರ್ವಕವಾಗಿ ಸಮಯ ಹೊಂದಿಸಿಕೊಳ್ಳುವ ಮೂಲಕ ಉದ್ಯೋಗ ಮತ್ತು ವೈಯಕ್ತಿಕ ಬದುಕುಗಳ ನಡುವೆ ಸಮತೋಲನ ಸಾಧಿಸಬೇಕು.

ಉದ್ಯೋಗಿಗಳು ತಮ್ಮ ಕಚೇರಿಯ ಕೆಲಸ ಕಾರ್ಯಗಳ ನಡುವೆಯೇ ಆಗಾಗ ಪುಟ್ಟ ವಿರಾಮಗಳನ್ನು ತೆಗೆದುಕೊಂಡು ತಮಗೆ ಸಂತೋಷ ನೀಡುವ ಹವ್ಯಾಸಗಳು, ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಮಾನಸಿಕ ಸಂತೃಪ್ತಿ ಪಡೆಯುವ ಬಗ್ಗೆ ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ನೆರವಾಗುತ್ತಾರೆ.

ಉದ್ಯೋಗದ ನಡುಯವೇ ಪುಟ್ಟ ವಿರಾಮ ಅಥವಾ ಭೋಜನ ವಿರಾಮದ ಅವಧಿಯಲ್ಲಿ ಮನಸ್ಸಿಗೆ ಮುದ ನೀಡುವ ಮೆಲುವಾದ ಸಂಗೀತವನ್ನು ಕೇಳುವುದು, ಹಸುರಾದ ಪ್ರಕೃತಿಯನ್ನು ವೀಕ್ಷಿಸುತ್ತ ಸಣ್ಣ ನಡಿಗೆಗಳಿಂದ ಉದ್ಯೋಗಿಗಳು ಪುನಶ್ಚೇತನಗೊಳಿಸಿ ಕೊಳ್ಳಬಹುದಾಗಿದೆ.

ತಮ್ಮಿಷ್ಟದ ಪುಸ್ತಕವನ್ನು 10-15 ನಿಮಿಷಗಳ ಕಾಲ ಓದುವುದು, ಹೂದೋಟ ದಲ್ಲಿ ಸ್ವಲ್ಪ ಹೊತ್ತು ಕೆಲಸ ಮಾಡುವುದು ಅಥವಾ ಕುಟುಂಬದೊಂದಿಗೆ ಹಿತವಾಗಿ ಸಮಯ ಕಳೆಯುವುದು ಮನಸ್ಸಿಗೆ ಹಿತನೀಡಿ ಮನಸ್ಸನ್ನು ಸಂತೈಸುತ್ತದೆ. ಇದರಿಂದ ಉದ್ಯೋಗಿಗಳಿಗೆ ಮರುದಿನ ಹೆಚ್ಚು ಚೆನ್ನಾಗಿ, ದಕ್ಷವಾಗಿ ಕೆಲಸ ನಿರ್ವಹಿಸುವುದು ಸಾಧ್ಯವಾಗುತ್ತದೆ.

ಸಹೋದ್ಯೋಗಿಯಾಗಿ

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಆಯಾ ಉದ್ಯೋಗಿಯದು ಮಾತ್ರ ಅಲ್ಲ; ಅಲ್ಲಿರುವ ಎಲ್ಲರ ಜವಾಬ್ದಾರಿಯಾಗಿರುತ್ತದೆ. ಒಬ್ಬ ಸಹೋದ್ಯೋಗಿಯಾಗಿ ನಾವು ನಮ್ಮ ಸುತ್ತಮುತ್ತ ಇರುವವರ ಬಗ್ಗೆ ಅರಿವು ಹೊಂದಿರಲು ಸಾಧ್ಯವಿದೆ ಮತ್ತು ಯಾರಾದರೂ ಒತ್ತಡ ಅಥವಾ ಹತಾಶೆಯ ಆರಂಭಿಕ ಲಕ್ಷಣಗಳನ್ನು ಹೊಂದಿದ್ದರೆ ಗುರುತಿಸುವುದಕ್ಕೆ ಸಾಧ್ಯವಿದೆ.

ನಮ್ಮ ಸುತ್ತ ಇರುವ ಸಹೋದ್ಯೋಗಿಗಳು ಅವರ ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಿರಬಹುದು ಮತ್ತು ಅದರಿಂದಾಗಿ ಉದ್ಯೋಗ ಸ್ಥಳದಲ್ಲಿ ಸಹಜವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗದೆ ಇರಬಹುದು. ಆದರೆ ಇದರರ್ಥ ಆ ವ್ಯಕ್ತಿ ಸೋಮಾರಿ ಅಥವಾ ಅಸಮರ್ಥ ಎಂದಲ್ಲ.

ಇಂತಹ ಸಮಸ್ಯೆಗಳನ್ನು ಹೊಂದಿರುವ ನಮ್ಮ ಸಹೋದ್ಯೋಗಿಯನ್ನು ಅರ್ಥ ಮಾಡಿಕೊಂಡು ಕೆಲಸದ ಹೊರೆಯನ್ನು ಹಂಚಿಕೊಳ್ಳುವುದರ ಮೂಲಕ ಅಥವಾ ಇತರ ರೀತಿಯಲ್ಲಿ ಅವರ ಸಮಸ್ಯೆ ಪರಿಹಾರಕ್ಕೆ ನೆರವಾಗಬೇಕು. ಕೆಲಸದ ಸ್ಥಳವು ಉಲ್ಲಾಸಮಯವಾಗಿ, ಉತ್ತಮ ವಾತಾವರಣ ಹೊಂದಿರುವುದಕ್ಕೆ ಪ್ರತಿಯೊಬ್ಬ ಉದ್ಯೋಗಿಯೂ ಶ್ರಮಿಸಬೇಕು.

ಒಂದು ಸಂಸ್ಥೆಯಾಗಿ

ಉದ್ಯೋಗಿಗಳ ಉತ್ಪಾದಕತೆ ಮತ್ತು ಕೆಲಸದಲ್ಲಿ ಉತ್ತಮ ಫ‌ಲಿತಾಂಶಗಳನ್ನು ಸಾಧಿಸಲು ಪ್ರತೀ ಸಂಸ್ಥೆಯು ತನ್ನ ಪ್ರತೀ ಉದ್ಯೋಗಿಯ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಪ್ರದರ್ಶಿಸಬೇಕು. ಪ್ರತೀ ಸಂಸ್ಥೆಯು ತನ್ನ ಎಲ್ಲ ಉದ್ಯೋಗಿಗಳ ಮಾನಸಿಕ ಸೌಖ್ಯ, ಭಾವನಾತ್ಮಕ ಕಲ್ಯಾಣಕ್ಕಾಗಿ ಉತ್ತಮ ಕ್ರಮಗಳನ್ನು ಆರಂಭಿಸಬೇಕು. ವೃತ್ತಿಪರರಿಂದ ಔದ್ಯೋಗಿಕ ನೆರವು ಒದಗಿಸುವುದು, ಉದ್ಯೋಗ ಸ್ಥಳದ ಸ್ಥಿತಿಗತಿ, ವಾತಾವರಣದ ಬಗ್ಗೆ ನಿಯಮಿತವಾಗಿ ಹಿಮ್ಮಾಹಿತಿ ಪಡೆಯುವುದು, ಅತಿಯಾದ ಕೆಲಸದ ಒತ್ತಡಗಳನ್ನು ನಿವಾರಿಸುವಂತಹ ಕ್ರಮಗಳ ಮೂಲಕ ಇದನ್ನು ಸಾಧಿಸಬಹುದಾಗಿದೆ.

ಕೆಲಸದ ಸಮಯ ಮುಗಿದ ಬಳಿಕವೂ ಕೆಲಸಕ್ಕೆ ಸಂಬಂಧಿಸಿದ ಕರೆಗಳನ್ನು ಮಾಡುವುದು, ಕೆಲಸದ ಹೊರೆಯನ್ನು ಮನೆಗೂ ಒಯ್ಯುವುದು ಇತ್ಯಾದಿಗಳನ್ನು ಕಡಿಮೆ ಮಾಡಬೇಕು.

-ಮುಂದಿನ ವಾರಕ್ಕೆ

-ಡಾ| ವಿನಿತಾ ಆಚಾರ್ಯ,

ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಮುಖ್ಯಸ್ಥರು,

ಆಕ್ಯುಪೇಶನಲ್‌ ಥೆರಪಿ ವಿಭಾಗ,

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಕ್ಯುಪೇಶನಲ್‌ ಥೆರಪಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.