ಮಾತುಕತೆಯಾದರೂ ಮೂಡದ ಒಮ್ಮತ

Team Udayavani, Mar 22, 2019, 7:35 AM IST

ತುಮಕೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸುತ್ತಾರೆ ಎನ್ನುವುದು ಖಚಿತವಾಗುತ್ತಿದ್ದು, ಮಾ.25ರಂದು ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದಕ್ಕಾಗಿ ಜೆಡಿಎಸ್‌ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತರುವ ಬೆನ್ನಲ್ಲೇ ದೋಸ್ತಿ ಪಕ್ಷದ ಮುಖಂಡರ ಜೊತೆ ಜೆಡಿಎಸ್‌ ಮುಖಂಡರು ಮಾತುಕತೆ ನಡೆಸಿದರೂ ಎರಡು ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎನ್ನುವುದು ಬೆಳಕಿಗೆ ಬರುತ್ತಿದೆ.

ಬೆಂಗಳೂರು ಉತ್ತರದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೋ ಅಥವಾ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ, ಎರಡು ಲೋಕಸಭಾ ಕ್ಷೇತ್ರದಿಂದ ಕಾರ್ಯಕರ್ತರ ಒತ್ತಡವಿದೆ. ಅದರಲ್ಲಿಯೂ ತುಮಕೂರಿನಿಂದ ಸ್ಪರ್ಧಿಸಬೇಕು ಎಂದು ಜೆಡಿಎಸ್‌ ಮುಖಂಡರು ದೇವೇಗೌಡರನ್ನು ಭೇಟಿ ಮಾಡಿ, ಮನವಿ ಮಾಡಿದ್ದಾರೆ.

ಮಹತ್ವದ ಚರ್ಚೆ: ಗುರುವಾರವೂ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಬೆಂಗಳೂರಿಗೆ ತಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಒತ್ತಡ ಹಾಕಿಸಿದ್ದಾರೆ. ಇತ್ತ ತುಮಕೂರಿನಲ್ಲಿ ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ, ಮಹತ್ವದ ಚರ್ಚೆ ಮಾಡಿದ್ದಾರೆ. 

ನಗರದ ಕಾಂಗ್ರೆಸ್‌ನ ಮಾಜಿ ಶಾಸಕ ಎಸ್‌.ರಫೀಕ್‌ ಅಹಮದ್‌ ಮನೆಯಲ್ಲಿ ಜೆಡಿಎಸ್‌ ಮುಖಂಡರು ಮತ್ತು ಕಾಂಗ್ರೆಸ್‌ ಮುಖಂಡರು ಸೇರಿ ಸಭೆ ಮಾಡಿದ್ದು, ಈ ಸಭೆ ಒಮ್ಮತಕ್ಕೆ ಬಂದಿಲ್ಲ. ಕಾರಣ ತುಮಕೂರು ಕ್ಷೇತ್ರವನ್ನು ಹಾಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡರಿಗೆ ಬಿಟ್ಟುಕೊಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಒತ್ತಾಯ ಹಾಕುತ್ತಿದ್ದಾರೆ. ಜೆಡಿಎಸ್‌ಗೆ ನಾವು ಬೆಂಲಿಸುವ ಬಗ್ಗೆ ವರಿಷ್ಠರಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ. ಅಲ್ಲಿಂದ ಆದೇಶ ಬಂದ ನಂತರ ನಾವು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಮುಖಂಡರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಚರ್ಚೆ ಮಾಡುವುದಾಗಿ ಸಭೆಯಲ್ಲಿ ತಿಳಿಸಿದ್ದು, ಕಾಂಗ್ರೆಸ್‌ ಮುಖಂಡರಾದ ಡಾ.ಎಸ್‌.ರಫೀಕ್‌ ಅಹಮದ್‌, ಎಸ್‌.ಷಫೀ ಅಹಮದ್‌, ಜೆಡಿಎಸ್‌ ಮುಖಂಡರಾದ ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಎಂಎಲ್‌ಸಿ ಬೆಮೆಲ್‌ ಕಾಂತರಾಜ್‌, ಎಚ್‌.ನಿಂಗಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ರಾಮಕೃಷ್ಣ, ಕೆಂಚಮಾರಯ್ಯ ಸೇರಿದಂತೆ ಹಲವು ಮುಖಂಡರು ಚರ್ಚೆ ನಡೆಸಿದ್ದಾರೆ.

ಮಾ.24ರಂದು ಸಭೆ: ನಗರ ಸಮೀಪದ ಎಚ್‌.ಎಂ.ಎಸ್‌.ಕಾಲೇಜಿನಲ್ಲಿ ಮಾ.24ರಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳು ಇದ್ದು, ಈ ಸಭೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿಯೇ ನಡೆಯಲಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಸದರಿಗೆ ಟಿಕೆಟ್‌ ವಂಚನೆಯಾಗಿ ಮೂಡಿರುವ ಅಸಮಾಧಾನದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳು ಇದ್ದು, ಈ ಸಭೆ ಮಹತ್ವ ಪಡೆದಿದೆ.

ದೇವೇಗೌಡರದ್ದು ರಾಕ್ಷಸ ಕುಟುಂಬ
ತುಮಕೂರು: 
ದೇವೇಗೌಡರದ್ದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದುರುವುದಿಲ್ಲ. ಯಾರಿಗೂ ಹೆದುರುವುದಿಲ್ಲ. ಅವರು ಜೀವನದಲ್ಲಿ ಗೆಲ್ಲಲಿ, ಸೋಲಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತುಮಕೂರಿನಲ್ಲಿಯೂ ಹೋರಾಟ ಮಾಡಿ ಗೆಲ್ಲುತ್ತಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಮತ್ತೆ ಗೌಡರ ಕುಟುಂಬವನ್ನು ರಾಕ್ಷಸ ಕುಟುಂಬಕ್ಕೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.

ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಈ ರೀತಿಯ ವಿವಾದಿತ ಹೇಳಿಕೆಗಳನ್ನು ನೀಡುವುದು ಇದೇನು ಹೊಸತಲ್ಲ. ಈ ಹಿಂದೆ ದೇವೇಗೌಡರ ಕಾರ್ಯವೈಖರಿ ಬಗ್ಗೆ ಪ್ರಶಂಸಿಸುವ ಭರದಲ್ಲಿ ದೇವೇಗೌಡರು ಹುಚ್ಚು ನಾಯಿ ರೀತಿ ಸುತ್ತುತ್ತಾರೆ ಎಂದು ಹೇಳಿದ್ದರು.

ಯಾವುದಕ್ಕೂ ಹೆದರುವುದಿಲ್ಲ: ಈಗ ಜೆಡಿಎಸ್‌ ಬಗ್ಗೆ ಮತ್ತು ದೇವೇಗೌಡರ ಬಗ್ಗೆ ಟೀಕಿಸುವವರಿಗೆ ಟಾಂಗ್‌ ಕೊಡುವ ರೀತಿಯಲ್ಲಿ ಮಾತನಾಡುತ್ತಿರುವಾಗ ದೇವೇಗೌಡರ‌ದ್ದು ರಾಕ್ಷಸ ಕುಟುಂಬ. ಅವರು ಮಾಡಬೇಕು ಎನ್ನುವ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಅವರು ಯಾವುದಕ್ಕೂ ಹೆದುರುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೆ ಸೋಲುತ್ತೇವೆ ಎಂದು ಹೆದರಿ ತುಮಕೂರಿಗೆ ದೇವೇಗೌಡರು ಬರುತ್ತಿದ್ದಾರೆ ಎಂದು ಮಾಡುತ್ತಿರುವ ಆರೋಪಕ್ಕೆ ತಿರಿಗೇಟು ನೀಡುವ ಭರದಲ್ಲಿ ರಾಕ್ಷಸರ ಕುಟುಂಬ ಎನ್ನುವ ಪದಬಳಕೆ ಮಾಡಿದ್ದಾರೆ.

ಮಾ.25ರಂದು ನಾಮಪತ್ರ ಸಲ್ಲಿಕೆ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾ.25ಕ್ಕೆ ನಾಮಪತ್ರ ಸಲ್ಲಿಸುತ್ತಾರೆ ಎಂದು ಸಚಿವ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು. ಕಾಂಗ್ರೆಸ್‌ ಜೊತೆಯಲ್ಲಿ ಮಾತನಾಡಿದ್ದೇವೆ. ಮಾ.24ರಂದು ಜೆಡಿಎಸ್‌, ಕಾಂಗ್ರೆಸ್‌ ಮುಖಂಡರ ಒಟ್ಟಿಗೆ ಸಭೆ ನಡೆಸಿ, ನಂತರ ದೇವೇಗೌಡರು ನಾಮಪತ್ರ ಸಲ್ಲಿಸುವ ಬಗ್ಗೆ ಚರ್ಚಿಸಿ, ಮಾ.25ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೆ ಎನ್ನುವ ವಿಚಾರವಾಗಿ ಮಾತನಾಡಲು ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಬೆಮೆಲ್‌ ಕಾಂತರಾಜು, ಎಚ್‌.ನಿಂಗಪ್ಪ ಬಂದಿದ್ದರು. ನಮ್ಮ ಪಕ್ಷದ ಮುಖಂಡರು ಮಾತನಾಡಿದ್ದೇವೆ. ಆದರೆ, ನಮಗೆ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ನೀಡುವ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. 
-ಎಸ್‌.ರಫೀಕ್‌ ಅಹಮದ್‌, ಕಾಂಗ್ರೆಸ್‌ ಮಾಜಿ ಶಾಸಕ

* ಚಿ.ನಿ.ಪುರುಷೋತ್ತಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ