“ಅಡ್ವಾಣಿ ಹತ್ತಿಕ್ಕಿದ್ದು ಬಿಜೆಪಿಯ ಯಾವ ಸಂಸ್ಕೃತಿ?’

Team Udayavani, Apr 18, 2019, 3:00 AM IST

ಧಾರವಾಡ: “ಬಿಜೆಪಿಯವರು ಸಂಸ್ಕೃತಿ ಬಗ್ಗೆ ಬಹಳ ಮಾತನಾಡುತ್ತಾರೆ. ಆದರೆ, ಅಡ್ವಾಣಿ ಬಗ್ಗೆ ಮೋದಿ ನಿಲುವು ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಹೇಳಿದರು.

ನಗರದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ಬಿಜೆಪಿ ಕಟ್ಟಿ ಬೆಳೆಸಿದವರಿಗೆ ಇವರು ನಮಸ್ಕಾರ ಮಾಡೋದಿಲ್ಲ. ಇಂಥವರು ಬೇರೆಯವರ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದರು.

ಯಾವುದೇ ನಾಗರಿಕ ಮಿಲಿಟರಿ ಸಮವಸ್ತ್ರ ಹಾಕಬಾರದು ಎಂಬ ಕಾನೂನೇ ಇದೆ. ಆದರೆ, ಮೋದಿ ಆ ಕಾನೂನನ್ನು ಮೀರಿ ಮಿಲಿಟರಿ ಸಮವಸ್ತ್ರ ಹಾಕಿಕೊಳ್ಳಲು ನಾಚಿಕೆ ಬರೋದಿಲ್ಲವೇ? ಮಿಲಿಟರಿ ಸಮವಸ್ತ್ರ ಹಾಕಿಕೊಂಡು ಯವಕರನ್ನು ಆಕರ್ಷಿಸಬಹುದು ಅನೋ ಉದ್ದೇಶ ಮೋದಿಗಿದೆ.

ಆ ಸಮವಸ್ತ್ರ ಹಾಕಿಕೊಳ್ಳುವುದಷ್ಟೇ ಅಲ್ಲ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಪೋಸ್‌ ಕೊಡುತ್ತಾರೆ. ದೇಶದಲ್ಲಿ ಈವರೆಗೆ ಯಾವ ಪಕ್ಷದವರು ದೇಶದ ಹೆಮ್ಮೆ ಆಗಿರುವ ಯೋಧರನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಮೋದಿ ಅವರು ಅದನ್ನು ಮಾಡಿ ಕೀಳು ರಾಜಕೀಯ ಪ್ರದರ್ಶಿಸಿದ್ದಾರೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ