ಎಲ್ಲರಿಗೂ ಅತೀ ವಿಶ್ವಾಸ

ಅತೃಪ್ತರ ವಿರುದ್ಧ ಸಿಎಂ ವಿಶ್ವಾಸಮತದ ಅಸ್ತ್ರ; ಮಂಗಳವಾರದವರೆಗೆ ಸರ್ಕಾರಕ್ಕೆ, ಅತೃಪ್ತರಿಗೆ ಸುಪ್ರೀಂ ನಿರಾಳ

Team Udayavani, Jul 13, 2019, 5:57 AM IST

ರಾಜ್ಯ ರಾಜಕಾರಣ ಈಗ ವಿಶ್ವಾಸದ ಮೇಲೆ ನಿಂತಿದೆ… ಸಿಎಂ ಕುಮಾರಸ್ವಾಮಿಗೆ ಸರ್ಕಾರ ಉಳಿಸಿಕೊಳ್ಳುವ ವಿಶ್ವಾಸ; ಬಿಜೆಪಿಗೆ ಈ ಸರ್ಕಾರ ಬಿದ್ದು, ಹೊಸ ಸರ್ಕಾರ ರಚನೆ ಮಾಡುವ ವಿಶ್ವಾಸ; ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರ ವಾಪಸ್‌ ಕರೆತರುವ ವಿಶ್ವಾಸ; ಅತೃಪ್ತರಿಗೆ ತಮ್ಮ ರಾಜೀನಾಮೆ ಸ್ವೀಕಾರಗೊಂಡು, ಅನರ್ಹತೆಯಿಂದ ಪಾರಾಗುವ ವಿಶ್ವಾಸ… ಎಲ್ಲಾ ಆತಂಕಗಳ ನಡುವೆ ಮೂಡುತ್ತಿರುವ ಈ ವಿಶ್ವಾಸಕ್ಕೆ ಮಂಗಳವಾರ ಸುಪ್ರೀಂ ತೀರ್ಪು, ಬುಧವಾರದ ವಿಶ್ವಾಸದೊಂದಿಗೆ ವಿರಾಮ ಬೀಳಬಹುದು.

ಬೆಂಗಳೂರು: ವಾರದ ಹಿಂದೆ ಶುರುವಾಗಿದ್ದ ರಾಜ್ಯ ರಾಜಕಾರಣಕ್ಕೆ ಶುಕ್ರವಾರ ಮಹತ್ವದ ತಿರುವು ಸಿಕ್ಕಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾರೂ
ನಿರೀಕ್ಷಿಸಿರದ ರೀತಿಯಲ್ಲಿ “ವಿಶ್ವಾಸ ಮತ’ದ ಅಸ್ತ್ರ ಪ್ರಯೋಗಿಸಿದ್ದಾರೆ. ಇದರಿಂದಾಗಿ ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿವೆ. ಅತ್ತ ಸುಪ್ರೀಂಕೋರ್ಟ್‌ ಕೂಡ,ಮಂಗಳವಾರದವರೆಗೆ ಯಥಾಸ್ಥಿತಿಗೆ ಆದೇಶಿಸಿದ್ದು, ಅತೃಪ್ತರೂ ಮುಂಬೈ ಪ್ರವಾಸ ಮುಂದುವರಿಸಿದ್ದಾರೆ.

ಶುಕ್ರವಾರದಿಂದ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗಿದ್ದು, ಆರಂಭದಲ್ಲೇ ಸ್ಪೀಕರ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ನಾನೇನೂ ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದುಕೊಂಡಿಲ್ಲ. ಎಲ್ಲದಕ್ಕೂ ತಯಾರಾಗಿಯೇ ಇದ್ದೇನೆ” ಎಂದು ಹೇಳುವುದರ ಜತೆಗೆ, “”ಇವತ್ತು ಸದನದ ಬೆಂಬಲ ಇದ್ದಾಗ ಮಾತ್ರ ಈ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತ. ವಿಶ್ವಾಸಮತ ಸಾಬೀತು ಮಾಡಲು ಸಿದ್ಧನಿದ್ದೇನೆ, ನೀವು ಸಮಯ ನಿಗದಿ ಮಾಡಿ” ಎಂದು ಮನವಿ ಮಾಡಿದರು. ಸಿಎಂ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಬಹುಮತದ ವಿಶ್ವಾಸವಿದ್ದರೆ ಇಂದೇ ಮಾಡಬೇಕಿತ್ತು. ಇದು ಅನಗತ್ಯ ವಿಳಂಬ ಮಾಡುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿತು.

ಸಂತಾಪ ಸೂಚನೆ ನಿರ್ಣಯದ ನಂತರ ಉಭಯ ಸದನಗಳಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿತ್ತು. ಇದರ ಸುಳಿವು ಅರಿತ ಸಿಎಂ ಸಂತಾಪ ನಿರ್ಣಯ ಕುರಿತು ಮಾತನಾಡುವ ಮುನ್ನವೇ ವಿಶ್ವಾಸಮತ ಯಾಚಿಸಲು ಮುಂದಾಗಿ, ಬಿಜೆಪಿಗೆ ತಿರುಗೇಟು ನೀಡಿದರು .

ಮುಂಬೈನಲ್ಲಿರುವ ಅತೃಪ್ತರು ಪಟ್ಟು ಸಡಿಸಿಲ್ಲ,ಇಬ್ಬರು ಪಕ್ಷೇತರರು ಬೆಂಬಲ ವಾಪಸ್‌ ಪಡೆದಿದ್ದು,ಯಾವ ಧೈರ್ಯದಲ್ಲಿ ಸಿಎಂ ವಿಶ್ವಾಸಮತ ಸಾಬೀತು ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಬುಧವಾರವೇ ವಿಶ್ವಾಸ ಮತ?
ಕಲಾಪ ಮುಂದೂಡಿಕೆ ನಂತರ ಮುಖ್ಯಮಂತ್ರಿ ಎಚ್‌.ಡಿ.  ಕುಮಾರಸ್ವಾಮಿ ಸದನ ಕಲಾಪ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಬುಧವಾರವೇ ವಿಶ್ವಾಸಮತ ಯಾಚನೆಗೆ ಸಿದಟಛಿ ಎಂದು ಹೇಳಿದರು. ಆದರೆ, ಕಲಾಪ ಸಲಹಾ ಸಮಿತಿ ಸಭೆಗೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಗೈರು ಹಾಜರಾಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಸಮಯ ನಿಗದಿ ಸರಿಯಲ್ಲ. ಸೋಮವಾರ ಅವರ ಜತೆ ಮಾತನಾಡಿ ಸಮಯ ನಿಗದಿಪಡಿಸುತ್ತೇನೆ ಎಂದು ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದರು.

ಕುಮಾರಸ್ವಾಮಿ ವಿಶ್ವಾಸದ ಪ್ಲಾನ್‌?
1. ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌ ಜತೆ ಮಾತುಕತೆ,ರಾಜೀನಾಮೆ ವಾಪಸ್‌ ಪಡೆಯುವಂತೆ ಮಾಡುವ ವಿಶ್ವಾಸ
2. ಅತೃಪ್ತ ಬಣದ ಐವರು ಶಾಸಕರ ಜತೆಗೆ ಸಂಪರ್ಕ, ಅವರನ್ನು ವಾಪಸ್‌ ಕರೆಸುವ ಯತ್ನ
3. ಬಿಜೆಪಿಯ ನಾಲ್ವರು ಶಾಸಕರನ್ನು ಸೆಳೆದು ರಿವರ್ಸ್‌ ಆಪರೇಷನ್‌ ಮಾಡುವ ತಂತ್ರಗಾರಿಕೆ

ನಿಮ್ಮ ಶಾಸಕರು ಎಲ್ಲಿ ಸಿಗುತ್ತಾರೆ!
ಬುಧವಾರದವರೆಗೆ ನಿಮ್ಮ ಶಾಸಕರು ಕ್ಷೇತ್ರದಲ್ಲಿ ಲಭ್ಯವಾಗದೆ ಇದ್ದರೆ ಇಲ್ಲಿ ಸಿಗುತ್ತಾರೆ. (ಎಂಎಲ್‌ಸಿಗಳೂ ಇದ್ದಾರೆ)

ಜೆಡಿಎಸ್‌ 35 ಶಾಸಕರು
ಪ್ರಸ್ಜಿàಜ್‌ ಗಾಲ್ಫ್ ಶೇರ್‌ ರೆಸಾರ್ಟ್‌, ದೇವನಹಳ್ಳಿ
– ವಿಧಾನಸೌಧದಿಂದ 45 ಕಿ.ಮೀ.
– ಸುಮಾರು 1.06 ಗಂಟೆ ದಾರಿ ಎಲ್ಲರಿಗಿಂತ ಮೊದಲು ರೆಸಾರ್ಟ್‌ ಸೇರಿಕೊಂಡವರು ಇವರೇ. ಶುಕ್ರವಾರವೂ
ಅಲ್ಲಿಂದಲೇ ಅಧಿವೇಶನಕ್ಕೆ ಬಂದು, ವಾಪಸ್‌ ಅಲ್ಲಿಗೇ ಹೋಗಿದ್ದಾರೆ.

ಕಾಂಗ್ರೆಸ್‌ 62 ಶಾಸಕರು
ತಾಜ್‌ ವಿವಾಂತ ಹೊಟೇಲ್‌,ಯಶವಂತಪುರ
– ವಿಧಾನಸೌಧದಿಂದ 12.5 ಕಿ.ಮೀ.
– ಸುಮಾರು 37 ನಿಮಿಷದ ದಾರಿ ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿದ್ದು, ಈ ಸಂಖ್ಯೆ ಹೆಚ್ಚಾಗದಂತೆ
ನೋಡಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ.

ಬಿಜೆಪಿ 100 ಶಾಸಕರು
ರಮಾಡ ಹೋಟೆಲ್‌,ರಾಜಾನುಕುಂಟೆ
-ವಿಧಾನಸೌಧದಿಂದ 24.8 ಕಿ.ಮೀ. ದೂರ
– ಸುಮಾರು ಒಂದು ಗಂಟೆಯ ದಾರಿ ವಿಶ್ವಾಸ ಮತಯಾಚನೆಗೆ ಸಿಎಂ ಮುಂದಾಗಿರುವುದು ಹಾಗೂ ಶಾಸಕರನ್ನು ಜೆಡಿಎಸ್‌ನತ್ತ ಸೆಳೆಯುವ ಅಪಾಯವಿರುವುದರಿಂದ
ಬಿಜೆಪಿಯಿಂದಲೂ ರೆಸಾರ್ಟ್‌ ವಾಸ ಆರಂಭ

ಅತೃಪ್ತರು 11 (ಅತೃಪ್ತರು)
ರೆನೈಸನ್ಸ್‌ ಕನ್ವೆನÒನ್‌ ಸೆಂಟರ್‌ಹೋಟೆಲ್‌, ಮುಂಬೈ
-ವಿಧಾನಸೌಧದಿಂದ 1,020 ಕಿ.ಮೀ. ದೂರ
– ಸುಮಾರು 17 ತಾಸುಗಳ ಹಾದಿ ಗುರುವಾರವಷ್ಟೇ ಬೆಂಗಳೂರಿಗೆ ಬಂದಿದ್ದ ಅತೃಪ್ತ ಶಾಸಕರು, ವಾಪಸ್‌ ಮುಂಬೈಗೆ ತೆರಳಿದ್ದು, ಹೊಟೇಲ್‌ನಲ್ಲೇ ವಾಸ ಮುಂದು
ವರಿಸಿದ್ದಾರೆ. ಕೆಲವರು ಶನಿವಾರ ಶಿರಡಿ ಯಾತ್ರೆ ಮಾಡಲಿದ್ದಾರೆ.

ಸುಪ್ರೀಂ ಕೋರ್ಟ್‌ ಕೊಟ್ಟ ಸಮಯ
ಅತೃಪ್ತ ಶಾಸಕರು ಮತ್ತು ಸ್ಪೀಕರ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ  ಕೋರ್ಟ್‌, ಮಂಗಳವಾರದ ವರೆಗೆ ಶಾಸಕರ ಅನರ್ಹತೆ ಅಥವಾ ಶಾಸಕರ ರಾಜೀನಾಮೆ ಅಂಗೀಕಾರದಂಥ ಯಾವುದೇ ನಿರ್ಧಾರ ಕೈಗೊಳ್ಳಕೂಡದು ಎಂದು ಸ್ಪೀಕರ್‌ಗೆ ಹೇಳಿತು.ಒಂದು ಕಡೆಯಲ್ಲಿ ಈ ನಿರ್ಧಾರ ಅತೃಪ್ತರಿಗೆ ಅನರ್ಹತೆಯಿಂದ ಬಚಾವ್‌ ಆದ ಸಮಾಧಾನ ನೀಡಿದರೂ, ಮಂಗಳವಾರದ ವರೆಗೆ ಸರ್ಕಾರಕ್ಕೆ ಸಿಕ್ಕ ಸಮಯದಿಂದಾಗಿ ಮುಂದೇನು ಮಾಡಬಹುದು ಎಂಬ ಆತಂಕಕ್ಕೂ ಕಾರಣವಾಯಿತು.

ಅತೃಪ್ತ ಶಾಸಕರ ಗೈರು
ತಮ್ಮ ಮುಂದೆ ಹಾಜರಾಗಿ ರಾಜೀನಾಮೆ ನೀಡಿದ ಕಾರಣ ನೀಡಿ ಎಂದು ಸ್ಪೀಕರ್‌ ನೀಡಿದ್ದ ನೋಟಿಸ್‌ಗೆ ಅತೃಪ್ತ ಶಾಸಕರು ಕ್ಯಾರೇ ಅಂದಿಲ್ಲ.ಶುಕ್ರವಾರ ಆನಂದ್‌ ಸಿಂಗ್‌, ಪ್ರತಾಪಗೌಡ ಪಾಟೀಲ್‌, ನಾರಾಯಣಗೌಡ ಸ್ಪೀಕರ್‌ ಮುಂದೆ ಹಾಜರಾಗಬೇಕಿತ್ತು. ಜತೆಗೆ ತಾವು ನೈಜತೆ ಹಾಗೂ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿರುವ ಬಗ್ಗೆ ಸ್ಪೀಕರ್‌ ಸ್ಪಷ್ಟನೆ ಕೇಳಬೇಕಾಗಿತ್ತು. ಶುಕ್ರವಾರ ಸಂಜೆ ಆರು ಗಂಟೆವರೆಗೂ ಸ್ಪೀಕರ್‌ ಕಚೇರಿಯಲ್ಲೇ ಇದ್ದರು. ಮಧ್ಯಾಹ್ನದವರೆಗೂ ಬೆಂಗಳೂರಿನಲ್ಲಿಯೇ ಇದ್ದ ಆನಂದ್‌ ಸಿಂಗ್‌ ಮುಂಬೈಗೆ ತೆರಳಿ, ಅತೃಪ್ತರ ಜತೆ ಸೇರಿಕೊಂಡರು.

ಸಿಎಂ ವಿಶ್ವಾಸಮತ ಕೋರುತ್ತೇನೆ ಎಂದು ಹೇಳಿದ್ದಾರೆ. ಬುಧವಾರ ಸಮಯವನ್ನೂ ಕೇಳಿದ್ದಾರೆ. ಅವರ ಮನಸ್ಸಿನಲ್ಲಿ ಇರೋದನ್ನು ಸಡನ್‌ ಆಗಿ ಹೇಳಿದ್ದಾರೆ. ಈಗಲೇ ಏನೂ ಹೇಳಲ್ಲ.
– ರಮೇಶ್‌ಕುಮಾರ್‌, ಸ್ಪೀಕರ್‌

ಬಿಜೆಪಿಯ ತಂತ್ರಗಾರಿಕೆ ನನಗೆ ಗೊತ್ತಿದೆ. ಅದು ಏನೇ ಇದ್ದರೂ ಸರ್ಕಾರ ಶೇ.100ಕ್ಕೆ 100 ರಷ್ಟು ಸೇಫ್. ಯಾರಿಗೂ ಆ ಬಗ್ಗೆ ಅನುಮಾನ ಬೇಡ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಸುಪ್ರೀಂ ತೀರ್ಪಿನ ವರೆಗೆ ಕಾಯುತ್ತೇವೆ. ಕೋರ್ಟ್‌ ಆದೇಶ ದಿಂದ ರಾಜೀನಾಮೆ ನೀಡಿರುವ ಶಾಸಕರಿಗೆ ನೈತಿಕ ಬಲ ಹೆಚ್ಚಿದೆ.ವಿಶ್ವಾಸ ಮತ ಕುರಿತ ಸಿಎಂ ಪ್ರಸ್ತಾಪಕ್ಕೆ ನಾನ್ಯಾಕೆ ಬೇಡ ಎನ್ನಲಿ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ