Desi Swara:ತಾಂತ್ರಿಕ ದಿನಗಳಲ್ಲಿ ಎಲ್ಲವೂ ಬದಲಾಗುತ್ತಿದೆ… ಓಗೊಡು… ಮಗುವೇ ! ಓಗೊಡು

ಅಯ್ಯೋ! ಒಂದು ತುತ್ತು ತಿನ್ನುವುದಕ್ಕಾಗಿ ನಾನು ಹನ್ನೆರಡು ಸಾರಿ ಕೂಗಬೇಕು...

Team Udayavani, Dec 23, 2023, 1:16 PM IST

Desi Swara:ತಾಂತ್ರಿಕ ದಿನಗಳಲ್ಲಿ ಎಲ್ಲವೂ ಬದಲಾಗುತ್ತಿದೆ… ಓಗೊಡು… ಮಗುವೇ ! ಓಗೊಡು

ತೇಜಸ್‌ .. ತೇಜಸ್‌… ಒಂದ್ಸರಿ ಕೂಗಿದರೆ, ಓ ಎಂದು ಹೇಳುವ ಜಾಯಮಾನನೇ ಅಲ್ಲ ನಿಂದು. ತೇಜಸ್‌ ಈಗ ತಾನೇ ಆರನೇ ತರಗತಿ ತೇರ್ಗಡೆಯಾಗಿ ಏಳನೇ ತರಗತಿಗೆ ಕಾಲಿಟ್ಟಿದ್ದಾನೆ. ಚಿಕ್ಕಂದಿನಿಂದಲೂ ಒಂದು ಚೂರೂ ತೊಂದರೆ ಕೊಡದ ಇವನು ಈಗ ಮಾತಿಗೊಮ್ಮೆ ರೇಗುತ್ತಾನೆ.

ಚಿಕ್ಕವನಿದ್ದಾಗ ನಗು ಮೊಗದಿಂದ ಎಲ್ಲರನ್ನೂ ಸೆಳೆದು ಎಲ್ಲರ ಹತ್ತಿರ ಹೋಗುತ್ತಿದ್ದವನು ಈಗ ಯಾರಾದರು ಮಾತನಾಡಿಸಿದರೆ ಉತ್ತರಿಸುವುದಿಲ್ಲ. ತಾನಾಗಿಯೇ ಅಂತೂ ಯಾರನ್ನೂ ಮಾತನಾಡಿಸುವುದೇ ಇಲ್ಲ. ಎಲ್ಲರೂ ಹೇಳುತ್ತಿದ್ದರು ಈ ರೀತಿಯ ಒಂದು ಡಜನ್‌ ಮಕ್ಕಳಿದ್ದರೂ ಆರಾಮಾಗಿ ಬೆಳೆಸಬಹುದು ಅಂತ. ಆದರೆ ಈಗ ಅವನೊಬ್ಬನನ್ನು ನಾನು ಹೇಗೆ ಬೆಳೆಸಲಿ ಅಂತ ಯೋಚಿಸುತ್ತಿದ್ದೇನೆ. ಅವನು ಕಾಡಿದಾಗ ನಾನು ರೇಗುತ್ತೇನೆ, ಬೈಯುತ್ತೇನೆ, ಕೆಲವೊಮ್ಮೆ ಹೊಡೆದು ಬಿಡುತ್ತೇನೆ. ಆಗ ನನ್ನ ಅತ್ತೆ ಹೇಳುವುದು- ಬೈದರೆ ಹೊಡೆದರೆ ಮಕ್ಕಳು ಇನ್ನೂ ಹಠಮಾರಿಯಾಗುತ್ತಾರೆ. ಗಂಡ ಹೇಳುವುದು- ಈಗ ಅವನಿಗೆ ಹಾರ್ಮೋನ ಪ್ರಾಬ್ಲಮ್‌ ಆಗುತ್ತಿರಬಹುದು ಅದಕ್ಕೇ ಹೀಗೆ ವರ್ತಿಸುತ್ತಿದ್ದಾ ನೆ. ಅವನಿಗೆ ಏನೂ ಅನ್ನಬೇಡ ಬಿಟ್ಟು ಬಿಡು ಎಂದು. ಹೀಗೆ ಎಲ್ಲರೂ ಹೇಳುವುದನ್ನು ಕೇಳಿಕೊಂಡು ನಾನೇ ಬದಲಾಗಬೇಕೆ ಹೊರತು ಅವನೇನು ಬದಲಾಗುವುದಿಲ್ಲ. ಆದರೂ ಒಂದು ದಿನ ಅವನು ಬದಲಾದಾನು ಎಂದು ಕಾಯುತ್ತಿದ್ದೇನೆ.

ಇಂದಿನ ಮಕ್ಕಳು ತಂದೆ-ತಾಯಿ ಹೇಳುವುದನ್ನು ಒಂಚೂರೂ ಕೇಳುವುದಿಲ್ಲ. ಬದಲಾಗಿ ವಾದ ಮಾಡುತ್ತಾರೆ. ತಮಗೇ ಎಲ್ಲವೂ ಗೊತ್ತು ಎಂಬಂತೆ ವರ್ತಿಸುತ್ತಾರೆ. ಹಿರಿಯರಿಗೆ ಗೌರವ ಕೊಡುವುದಂತೂ ಸುಳ್ಳಾಗಿದೆ. ಅಮ್ಮ, ಊಟ ಮಾಡು ಎಂದು ಹೇಳಿದರೂ ತಪ್ಪು ಎಂಬಂತೆ ಭಾವಿಸುತ್ತಾರೆ. ಇನ್ನು ಆ ಊಟವನ್ನಂತೂ ಬೇಡ, ಬೇಡ ನನಗೆ ಇಷ್ಟ ಇಲ್ಲ, ಹೊಟ್ಟೆ ತುಂಬಿದೆ ಎನ್ನುತ್ತಾ ಸ್ವಲ್ಪವೇ ತಿನ್ನುತ್ತಾರೆ. ಮನೆಯಲ್ಲಿ ಮೃಷ್ಟಾನ್ನ ಭೋಜನ ತಯಾರಿಸಿದರೂ ತಿನ್ನಲ್ಲ. ಅದೇ ಹೊರಗಡೆ ಏನೇ ತಿಂದರೂ ಪ್ರೀತಿಯಿಂದ ತಿನ್ನುತ್ತಾರೆ. ಪಿಜ್ಜಾ, ಬರ್ಗರ್‌ ಇದ್ದರಂತೂ ಇವರಿಗೆ ಹಬ್ಬ. ಆದರೆ ಪ್ರತೀದಿನ ಅದನ್ನೇ ತಿನ್ನಲು ಆಗುವುದಿಲ್ಲವಲ್ಲ! ಹಾಗೇನಿಲ್ಲ ಪ್ರತಿದಿನವೂ ಅಷ್ಟೇ ಆಸಕ್ತಿಯಿಂದ ತಿನ್ನುತ್ತಾರೆ.

ಅಯ್ಯೋ! ಒಂದು ತುತ್ತು ತಿನ್ನುವುದಕ್ಕಾಗಿ ನಾನು ಹನ್ನೆರಡು ಸಾರಿ ಕೂಗಬೇಕು. ಇನ್ನು ಸಂಜೆ ಅಭ್ಯಾಸಕ್ಕೆ ಕುಳಿತರಂತೂ ! ಬಿಡಿ….ನನ್ನ ಕರುಳು ಕಿತ್ತು ನೇತು ಹಾಕಿದ ಹಾಗಾಗುತ್ತದೆ. ಗಂಡ -ಸ್ವಲ್ಪ ಟಿವಿ ನೋಡುತ್ತೇನೆ ! ಅಂತ ಟಿವಿ ಹಾಕುತ್ತಾರೆ. ಮಗ ಬಾಯಿ ತೆರೆದು ತನ್ನ ಇಡೀ ಸರ್ವಸ್ವವನ್ನೂ ಟಿವಿಗೆ ಅರ್ಪಿಸುತ್ತಾನೆ. ಬರೆಯೋ, ಓದೋ ಎಂದು ಕೂಗಿದರೂ ಓಗೊಡದೇ ಟಿವಿಯಲ್ಲಿ ಸಂಪೂರ್ಣವಾಗಿ ಮಗ್ನವಾಗಿರುತ್ತಾನೆ. ನಾನು ಅಡುಗೆ ಮಾಡುತ್ತಾ ಕೂಗಿ ಕೂಗಿ ಹೊಟ್ಟೆ ನೋವಾಗಿ, ತಲೆ ತಿರುಗಿ, ಗಂಟಲು ಒಣಗಿ ಹೋದರೂ ಅವನು ಹೋಂ ವರ್ಕ್‌ ಮುಗಿಸುವುದಿಲ್ಲ.

ಅಷ್ಟರಲ್ಲಿ ನಿದ್ದೆ ತೂಕಡಿಸುತ್ತದೆ. ಅತ್ತೆ- ಅವನಿಗೆ ಮೊದಲು ಊಟ ಕೊಡು, ಪಾಪ! ನನ್ನ ಬಂಗಾರ, ಅವನಿಗೆ ನಿದ್ದೆ ಬಂದಿದೆ….ಎಂದು ಹೇಳುತ್ತಾರೆ. ಸರಿ ಹೋಯಿತು, ಊಟವಾದ ಮೇಲೆ ಇನ್ನೇನು?? ನಿದ್ದೆ ಅಷ್ಟೇ. ಗಂಡ ಹೇಳುತ್ತಾರೆ, ಅವನು ಮಲಗಲಿ ಬಿಡು, ಬೆಳಗ್ಗೆ ಎದ್ದು ಬ್ಯಾಗ್‌ ರೆಡಿ ಮಾಡಿಕೊಳ್ಳುತ್ತಾನೆ ಆಯಿತು ಎಂದು ಬೆಳಗ್ಗೆ ಎದ್ದು ಮತ್ತೆ ಕೂಗಲಾರಂಭಿಸಿದೆ. ಮೊದಲು ಸೂಕ್ಷ್ಮವಾಗಿ ಏಳು ಕಂದ ಬಂಗಾರ ಎಂದೆಲ್ಲ ಹೇಳಿದರೂ ಒಂಚೂರೂ ಓಗೊಡಲಿಲ್ಲ. ಟೈಮ್‌ ನೋಡಿದರೆ ರೇಸ್‌ನಲ್ಲಿ ಗೆಲ್ಲೊ ಕುದುರೆ ಥರ ಓಡುತ್ತಾ ಇದೆ. ಮತ್ತೆ ಗಂಟಲು ಹರೆಯುವ ಹಾಗೆ ಕೂಗಿ ಎಬ್ಬಿಸಿದೆ. ಸ್ನಾನ, ಟಿಫ‌ನ್‌ ಅನಂತರ ಬ್ಯಾಗ್‌ ರೆಡಿ ಮಾಡಿಕೊಳ್ಳುವುದು. ಆಗ ಅವನಿಗೆ ಪ್ರೊಜೆಕ್ಟ್ ನೆನಪಾಯಿತು. ಅಮ್ಮ ನಾನು ಒಂದು ಪ್ರಿಂಟ್‌ ತೆಗೆದುಕೊಳ್ಳಬೇಕು ಅಂದ.

ನನ್ನ 32 ಹಲ್ಲುಗಳೂ ಕಟಕಟನೇ ಶಬ್ದ ಮಾಡತೊಡಗಿದವು. ಆಯಿತು ಇನ್ನೇನು ಮಾಡುವುದು ಅಂತ ಪ್ರಿಂಟರ್‌ ಆನ್‌ ಮಾಡಿದರೆ ಕಾರ್ಟ್‌ರೇಜ ಖಾಲಿಯಾಗಿದೆ. ಗೂಗಲ್‌ನಲ್ಲಿ ಚಿತ್ರವನ್ನು ಡೌನ್‌ಲೋಡ್‌ ಮಾಡಿ ಚಿತ್ರ ಬಿಡಿಸಲು ಹೇಳಿದೆ. ಕಷ್ಟ ಪಟ್ಟು ಚಿತ್ರ ಬಿಡಿಸಿದ, ಪಟಪಟನೆ ರೆಡಿಯಾದ. ಬಸ್‌ ಹಾರ್ನ್ ಕೇಳಿಸಿತು. ನಾನು ನೈಟಿಯ ಮೇಲೆ ವೇಲ್‌ ಹಾಕಿಕೊಂಡು ಬ್ಯಾಗ್‌ ಹಿಡಿದು ಓಡಿದೆ. ಅಷ್ಟರಲ್ಲಿ ನೀರಿನ ಬಾಟಲ್‌ ಬಿಟ್ಟು ಬಂದ, ಮತ್ತೆ ಡ್ರೈವರ್‌ಗೆ ಕೈ ಮಾಡುತ್ತಾ ಮನೆ ಒಳಗೆ ಓಡಿ ಬಾಟಲ್‌ ತಂದು ಬಸ್‌ ಹತ್ತಿಸಿದೆ. ಬಸ್‌ ಹತ್ತಿ ಕುಳಿತ ನನ್ನ ಮಗ ತನ್ನ ಗೆಳೆಯರೊಂದಿಗೆ ಬೆರೆತುಹೋದ. ನನ್ನನ್ನು ತಿರುಗಿ ನೋಡಲೂ ಮರೆತುಹೋದ. ಇರಲಿ ಎಂದು ಮುಗುಳ್ನಗುತ್ತ ನಾನೂ ಮನೆಯ ಕಡೆಗೆ ನಡೆದೆ.

ಅಬ್ಬಾ ! ಯುದ್ಧದ ಒಂದು ಅಧ್ಯಾಯ ಮುಗಿಯಿತು ಅಂದುಕೊಂಡು ಹಾಯಾಗಿ ಒಂದು ಮಗ್‌ ಟೀ ಕುಡಿದು ನನ್ನ ದಿನಚರಿಯ ಕೆಲಸವನ್ನು ಮುಗಿಸುವಷ್ಟರಲ್ಲಿ ಸಂಜೆಯಾಯಿತು. ಮಗ ಮನೆಗೆ ಬರುವ ಸಮಯ. ಇನ್ನೇನು ಬಂದೇ ಬಿಡುತ್ತಾನೆ ಎನ್ನುವಷ್ಟರಲ್ಲಿ ಮಂಡಕ್ಕಿ ಉಸುಳಿ ಮಾಡಿ, ಹಾಲು ಕಾಯಿಸಿಟ್ಟೆ. ಬಂದ ತತ್‌ಕ್ಷಣ ಹಾಕಿ ಕೊಟ್ಟರೆ ಅವನ ಮುಖ ನೋಡಬೇಕು. ಸುಟ್ಟ ಬದನೆಕಾಯಿಯಂತಿತ್ತು. ಇನ್ನೇನು ವಾಂತಿ ಮಾಡಿಕೊಳ್ಳುತ್ತಾನೆ ಅನ್ನುವಂತಿತ್ತು. ಇಷ್ಟೊಂದು ಪ್ರೀತಿಯಿಂದ ತಯಾರಿಸಿದ ತಿಂಡಿಗೆ ಹೀಗೆ ಮಾಡುತ್ತಾನಲ್ಲ! ಅಂದುಕೊಳ್ಳುವಷ್ಟರಲ್ಲಿ ಮಮ್ಮಿ ನನಗೆ ಮ್ಯಾಗಿ ಮಾಡಿಕೊಡು ಎಂದ.

ಮ್ಯಾಗಿ ತಿಂದರೆ ಏನೇನು ಅನಾಹುತಗಳಾಗುತ್ತವೆ ಎಂದು ಇತ್ತೀಚೆಗೆ ದಿನಪತ್ರಿಕೆಯಲ್ಲಿ ಓದಿದ್ದೆ. ಇವನು ಅದನ್ನೇ ತಿನ್ನುತ್ತೇನೆ ಅಂತಾನಲ್ಲ ಎಂಬ ಸಂಕಟ ನನಗೆ. ಆದರೂ ಏನೇನೋ ಕಥೆಗಳನ್ನ ಹೇಳಿ ಮಂಡಕ್ಕಿ ಉಸುಳಿ ತಿನ್ನಿಸುವವರೆಗೆ ಸಾಕು ಸಾಕಾಯಿತು. ಹೇಗೋ ನನ್ನ ಒತ್ತಾಯಕ್ಕೆ ತಿಂದು ಅವನ ಅಪ್ಪನ ಜತೆಗೆ ಕುಳಿತ. ಅಪ್ಪ ಟಿವಿ ನೋಡುತ್ತಿದ್ದರು. ಅವರ ಮೊಬೈಲ್‌ನ್ನು ಗಪ್ಪನೆ ತೆಗೆದುಕೊಂಡು ಗೇಮ್‌ ಆಡತೊಡಗಿದ. ಆದರೆ ನನಗೆ ನನ್ನ ಮಗ ಹೊರಗಡೆ ಹೋಗಿ ಆಡುತ್ತಿಲ್ಲ ಎಂಬ ಚಿಂತೆ. ಅವನ ಕಣ್ಣು ಏನಾಗಬೇಡ, ಹೊರಗಡೆ ಆಡದೇ ದೈಹಿಕ ಆರೋಗ್ಯ ಹೇಗೆ ನೆಟ್ಟಗಿರಬೇಕು?, ಮಾನಸಿಕ ಆರೋಗ್ಯ ಕುಂದುವುದಲ್ಲವೇ! . ವೈಜ್ಞಾನಿಕ ಮಾಹಿತಿಯ ಪ್ರಕಾರ ಅಂತರ್ಜಾಲವು ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಷ್ಟೆಲ್ಲ ಹೇಳಿದರೂ ನನ್ನ ಗಂಡ – ಸ್ವಲ್ಪ ಹೊತ್ತು ಆಡಲಿ ಬಿಡು ಅಂತಾರೆ.

ಎಲ್ಲ, ನನ್ನ ಹಣೆಬರಹವೇ ಸರಿ. ಹೀಗೇಯೇ ಪ್ರತಿದಿನವೂ ನಮ್ಮ ರಾಮಾಯಣ ಮುಂದುವರೆಯುತ್ತದೆ. ಇಂದಿನ ತಾಂತ್ರಿಕ ದಿನಗಳಲ್ಲಿ ಎಲ್ಲವೂ ಬದಲಾಗುತ್ತಿದೆ.ಇಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗುತ್ತಿತ್ತಾರೋ ! ಅಥವಾ ಹಿರಿಯರೇ ತಪ್ಪೋ ಗೊತ್ತಿಲ್ಲ. ಮಕ್ಕಳು ಏನು ಹೇಳಿದರೂ ಕೇಳುವುದಿಲ್ಲ, ಕೇಳಿದ್ದನ್ನು ಪಾಲಿಸುವುದಿಲ್ಲ, ಪಾಲಿಸಿದರೂ ಜೀವನದಲ್ಲಿ ಅಳವಡಿಸಿಕೊಳ್ಳದೇ ಅನುಭವಿಸಿದ ಪಾಠವನ್ನು ಕಲಿಯುವುದಿಲ್ಲ. ಹೀಗೇ ಆದರೆ ಮುಂದೆನು?? ಅದಕ್ಕೆ ನಾನು ಇಂದಿನ ಪೀಳಿಗೆಗೆ ಹೇಳುವುದಿಷ್ಟೆ !! ಓಗೊಡು… ಮಗುವೇ ! ಓಗೊಡು.

*ಜಯಾ ಛಬ್ಬಿ, ಮಸ್ಕತ್‌

ಟಾಪ್ ನ್ಯೂಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.