ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ
ರಾಜಕೀಯ ಸ್ವರೂಪ ಪಡೆದ ದಾಳಿ, ಮರಳು ಗಣಿಗಾರಿಕೆ ಆರೋಪ
Team Udayavani, Jan 18, 2022, 5:28 PM IST
ಪಂಜಾಬ್ : ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚೆನ್ನಿಯವರ ಸಂಬಂಧಿಕರ ಮನೆ ಹಾಗೂ ವ್ಯಾವಹಾರಿಕ ಸಂಸ್ಥೆಗಳ ಮೇಲೆ ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣಾ ಸಂದರ್ಭದಲ್ಲೇ ನಡೆದಿರುವ ಈ ದಾಳಿ ಈಗ ರಾಜಕೀಯ ತಿರುವು ತೆಗೆದುಕೊಂಡಿದೆ.
ಘಟನೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷದ ಮಧ್ಯೆ ತುರುಸಿನ ವಾಗ್ವಾದ ನಡೆಯಲಾರಂಭಿಸಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸಿಎಂ ಚೆನ್ನಿ ಆರೋಪಿಸಿದರೆ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ತಮ್ಮ ಕುಟುಂಬ ವರ್ಗದವರ ಜತೆ ಕೈ ಜೋಡಿಸಿದ್ದಾರೆಂದು ಆಪ್ ಆರೋಪಿಸಿದೆ.
ಮೋಹಾಲಿಯಲ್ಲಿರುವ ಸಿಎಂ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರ ನಿವಾಸ ಸೇರಿದಂತೆ 10 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಪಂಜಾಬ್ ರಿಲೇರ‍್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಭೂಪೇಂದ್ರ ಸಿಂಗ್ ಹನಿ ಮರಳು ಗಣಿಗಾರಿಕೆಯಿಂದ ಬಂದ ಹಣವನ್ನು ಇಲ್ಲಿ ವಿನಿಯೋಗಿಸುತ್ತಿದ್ದರು ಎಂಬ ಆಪಾದನೆಯನ್ನು ಎದುರಿಸುತ್ತಿದ್ದಾರೆ.
ಇಡಿ ಮೂಲಗಳ ಪ್ರಕಾರ ರಿಯಲ್‌ಎಸ್ಟೇಟ್ ಸಂಸ್ಥೆಗಳ ಮೂಲಕ ಚನ್ನಿ ಕುಟುಂಬ ವರ್ಗ ಮೊದಲಿನಿಂದಲೂ ಅಪಾರ ಪ್ರಮಾಣದ ಕಪ್ಪು ಹಣವನ್ನು ವಿನಿಯೋಗಿಸಿದೆ. ಈ ಬಗ್ಗೆ ಭಾರಿ ದೂರುಗಳು ಕೇಳಿ ಬಂದಿವೆ. ಆದರೆ ಫೆಬ್ರವರಿ 20ರಂದು ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ನಡೆದಿರುವ ದಾಳಿ ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿ ಬಂದಿವೆ. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೋಲಿನ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಇಂಥ ಬೆದರಿಕೆ ತಂತ್ರಕ್ಕೆ ತಾವು ಹೆದರುವುದಿಲ್ಲ ಎಂದು ಚನ್ನಿ ಪ್ರತಿಕ್ರಿಯೆ ನೀಡಿದ್ದಾರೆ.