ಉಡುಪಿ ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್!
Team Udayavani, Jan 20, 2022, 6:35 AM IST
ಉಡುಪಿ: ಕೊರೊನಾ ಮತ್ತು ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಜತೆಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ರಾಜ್ಯದ 1ರಿಂದ 10ನೇ ತರಗತಿಯ 6,826 ವಿದ್ಯಾರ್ಥಿಗಳಿಗೆ ಹಾಗೂ 1,819 ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ. ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ 1,600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಾಧಿಸಿದೆ.
ಉಡುಪಿಯಲ್ಲಿ ಮಕ್ಕಳು, ದ.ಕ.ದಲ್ಲಿ ಶಿಕ್ಷಕರು!
ಉಡುಪಿಯ 5 ವರ್ಷದೊಳಗಿನ ಸುಮಾರು 25 ವಿದ್ಯಾರ್ಥಿಗಳು, 5ರಿಂದ 10 ವರ್ಷದ 90, 10ರಿಂದ 15 ವರ್ಷದ 360, 15ರಿಂದ 20 ವರ್ಷದ 650 ಹಾಗೂ 20ರಿಂದ 25 ವರ್ಷದ 600 ವಿದ್ಯಾರ್ಥಿಗಳು ಸೇರಿದಂತೆ 1,600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ 12 ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ. ದ.ಕ.ದಲ್ಲಿ ಸುಮಾರು 150 ವಿದ್ಯಾರ್ಥಿಗಳು, 30 ಶಿಕ್ಷಕರಿಗೆ ಕೊರೊನಾ ಬಾಧಿಸಿದೆ.
ಹಾಸನದಲ್ಲಿ 900 ವಿದ್ಯಾರ್ಥಿಗಳು, 250 ಶಿಕ್ಷಕರು, ಮಂಡ್ಯದಲ್ಲಿ 660 ವಿದ್ಯಾರ್ಥಿಗಳು, 160 ಶಿಕ್ಷಕರು, ತುಮಕೂರು, ಮಧುಗಿರಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಸರಾಸರಿ 500 ವಿದ್ಯಾರ್ಥಿಗಳಿಗೆ ಹಾಗೂ 100ರಿಂದ 150 ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ.
ಆಸ್ಪತ್ರೆ ದಾಖಲಾಗಿಲ್ಲ
ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ನಿರ್ದಿಷ್ಟ ತರಗತಿಗಳನ್ನು 5 ದಿನ ಬಂದ್ ಮಾಡಿ, ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿಲ್ಲ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ.
ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ರ್ಯಾಪಿಡ್ ಆ್ಯಂಟಿಜನ್ ರ್‍ಯಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಗೊತ್ತಾಗುತ್ತಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮ ಸಾಧ್ಯವಾಗುತ್ತಿದೆ. ತಾಲೂಕುವಾರು ಶಾಲೆಗಳಲ್ಲಿ ಕೊರೊನಾ ಪರೀಕ್ಷೆಯನ್ನು ಅಭಿಯಾನದಂತೆ ನಡೆಸುತ್ತಿದ್ದೇವೆ. ಕೊರೊನಾ ದೃಢಪಟ್ಟ ಮಕ್ಕಳಲ್ಲಿ ರೋಗ ಲಕ್ಷಣ ಕಡಿಮೆ ಇರುವವರೇ ಹೆಚ್ಚು ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.
ವಿದ್ಯಾರ್ಥಿಗಳಲ್ಲಿ ಕೊರೊನಾ ಬಗ್ಗೆ ಪ್ರತೀ ದಿನ ಮಾಹಿತಿ ಪಡೆಯಲಾಗುತ್ತಿದೆ. ಅಧಿಕಾರಿಗಳಿಗೂ ಅಗತ್ಯ ಸೂಚನೆ ನೀಡುತ್ತಿದ್ದೇವೆ. ಪರಿಸ್ಥಿತಿ ಅವಲೋಕಿಸಿ ಸ್ಥಳೀಯವಾಗಿ ಶಾಲೆ ಅಥವಾ ತರಗತಿ ಬಂದ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
-ಬಿ.ಸಿ. ನಾಗೇಶ್, ಪ್ರಾಥಮಿಕ ಹಾಗೂ
ಪ್ರೌಢ ಶಿಕ್ಷಣ ಸಚಿವ
ಮಕ್ಕಳಲ್ಲಿ ಕೊರೊನಾ ದೃಢಪಡುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಪರೀಕ್ಷೆ ಪ್ರಮಾಣಕ್ಕೆ ಹೋಲಿಸಿದರೆ ಪಾಸಿಟಿವಿಟಿ ದರದಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಆದರೂ ವಿಶೇಷ ಜಾಗೃತಿ ಜತೆಗೆ ಶಾಲಾ ಕಾಲೇಜುಗಳಲ್ಲಿ ಅರಿವು ಅಭಿಯಾನ ನಡೆಸಲಿದ್ದೇವೆ.
– ಕೂರ್ಮಾ ರಾವ್ ಎಂ.,
ಉಡುಪಿ ಜಿಲ್ಲಾಧಿಕಾರಿ
– ರಾಜು ಖಾರ್ವಿ ಕೊಡೇರಿ