CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶಶಿಕಲಾ ಆಸೆಗೆ ಕೊನೆ ಮೊಳೆ

ಕಡೆಗೂ ನ್ಯಾಯವೇ ಗೆಲ್ಲುತ್ತದೆ ಎನ್ನುವ ಮಾತು ಶಶಿಕಲಾ ವಿಚಾರದಲ್ಲಿ ಅಕ್ಷರಶಃ ಸತ್ಯವಾಗಿದೆ. ರಾಜಕೀಯಕ್ಕೆ ಬರುವವರು ಜನರನ್ನು ಮರೆತು ತಮ್ಮ ಮತ್ತು ತಮ್ಮವರ ಉದ್ಧಾರವನ್ನೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ಅಣಕಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.

ವಿ.ಕೆ. ಶಶಿಕಲಾ ನಟರಾಜನ್‌ ತಮಿಳುನಾಡು ಮುಖ್ಯಮಂತ್ರಿ ಪಟ್ಟದ ಮೆಟ್ಟಿಲಿನಲ್ಲಿ ಎಡವಿ ಬಿದ್ದ ಘಟನೆ ದೇಶದ ರಾಜಕೀಯ ಇತಿಹಾಸದಲ್ಲೊಂದು ವಿಶಿಷ್ಟ ಅಧ್ಯಾಯವಾಗಿ ದಾಖಲಾಗಲಿದೆ. ಜಯಲಲಿತಾ ನಿಧನ ಹೊಂದಿದ ಬಳಿಕ ಈ ರಾಜ್ಯದ ರಾಜಕೀಯದಲ್ಲಿ ನಡೆದಿರುವ ಅನಿರೀಕ್ಷಿತ ಬೆಳವಣಿಗೆಗಳು ಪ್ರಜಾಪ್ರಭುತ್ವದ ಅಣಕದಂತಿದ್ದವು. ತಮಿಳರ ಪ್ರೀತಿಯ ಅಮ್ಮನ ಹೆಸರನ್ನೇ ಬಳಸಿಕೊಂಡು ಚಿನ್ನಮ್ಮ ಖ್ಯಾತಿಯ ಶಶಿಕಲಾ ಆಡಿದ ಆಟಗಳು ಊಹೆಗೂ ನಿಲುಕದಂತಿದ್ದವು. ಆದರೆ ಸುಪ್ರೀಂ ಕೋರ್ಟ್‌ 21 ವರ್ಷ ಹಿಂದಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಮತ್ತು ಅವರ ಇಬ್ಬರು ಬಂಧುಗಳಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿರುವ ತೀರ್ಪು ಆಕೆಯ ರಾಜಕೀಯ ಮಹತ್ವಾಕಾಂಕ್ಷೆಗೆ ಕೊನೆ ಮೊಳೆ ಜಡಿದಿದೆ. ತೀರ್ಪಿನ ಪರಿಣಾಮವಾಗಿ ಮೂರೂವರೆ ವರ್ಷ ಶಶಿಕಲಾ ಜೈಲಿನಲ್ಲಿ ಕಳೆಯಬೇಕು. ಅನಂತರ 6 ವರ್ಷ ಚುನಾವಣೆಗೆ ಪ್ರವೇಶಿಸುವಂತಿಲ್ಲ. ಅಂದರೆ ಕನಿಷ್ಠ 10 ವರ್ಷ ಅವರು ಸಕ್ರಿಯ ರಾಜಕೀಯದಿಂದ ದೂರವಿರಬೇಕು.

ಕಡೆಗೂ ನ್ಯಾಯವೇ ಗೆಲ್ಲುತ್ತದೆ ಎನ್ನುವ ಮಾತು ಶಶಿಕಲಾ ವಿಚಾರದಲ್ಲಿ ಅಕ್ಷರಶಃ ಸತ್ಯವಾಗಿದೆ. ರಾಜಕೀಯಕ್ಕೆ ಬರುವವರು ಜನರನ್ನು ಮರೆತು ತಮ್ಮ ಮತ್ತು ತಮ್ಮವರ ಉದ್ಧಾರವನ್ನೇ ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ಅಣಕಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಶಶಿಕಲಾ ಪ್ರಕರಣವೇ ಸಾಕ್ಷಿ. ಬಹಳಷ್ಟು ತಡವಾಗಿದ್ದರೂ ತಮಿಳುನಾಡಿನ ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಕಾಲದಲ್ಲಿ ಸರಿಯಾದ ತೀರ್ಪು ಪ್ರಕಟವಾಗಿದೆ. ಹಾಗೆಂದು ಇದು ಶಶಿಕಲಾ ವಿರುದ್ಧ ನೇರವಾಗಿ ದಾಖಲಾದ ಪ್ರಕರಣವಲ್ಲ. ಪ್ರಮುಖ ಆರೋಪಿ ಜಯಲಲಿತಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಶಶಿಕಲಾ ಮತ್ತಿಬ್ಬರು ಸಹ ಆರೋಪಿಗಳು. ಜಯಲಲಿತಾ ತೀರಿಕೊಂಡಿರುವುದರಿಂದ ಶಿಕ್ಷೆಯಿಂದ ಪಾರಾಗಿದ್ದಾರೆ. ಉಳಿದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬರುವವರು ಈ ತೀರ್ಪಿನಿಂದ ಪಾಠ ಕಲಿತುಕೊಳ್ಳಬೇಕು.

ಕರ್ನಾಟಕ ಹೈಕೋರ್ಟ್‌ 2015ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಹಾಗೂ ಉಳಿದ ಆರೋಪಿಗಳನ್ನು ನಿರ್ದೋಷಿ ಎಂದು ಘೋಷಿಸಿದಾಗ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಸದ್ಯದಲ್ಲೇ ಮೇಲ್ಮನವಿಯ ಮೇಲಿನ ತೀರ್ಪು ಬರುವ ಸಾಧ್ಯತೆಯಿದೆ ಎಂದು ಗೊತ್ತಿದ್ದರೂ ಶಶಿಕಲಾ ಮುಖ್ಯಮಂತ್ರಿಯಾಗುವ ಅವಸರಕ್ಕೆ ಬಿದ್ದರು. ವಿಧೇಯ ವಿದ್ಯಾರ್ಥಿಯಂತಿದ್ದ ಪನ್ನೀರ್‌ಸೆಲ್ವಂ ಬಂಡೇಳಬಹುದು ಎಂದು ಶಶಿಕಲಾ ಮಾತ್ರವಲ್ಲ ಯಾರೂ ನಿರೀಕ್ಷಿಸಿರಲಿಲ್ಲ. ಅನಂತರ ನಡೆದ ಬೆಳವಣಿಗೆಗಳೆಲ್ಲ ಕೊಳಕು ರಾಜಕೀಯದ ಹೀನ ಕಸರತ್ತುಗಳು.

ಮುಖ್ಯಮಂತ್ರಿಯಾಗಲು ಶಶಿಕಲಾ ಆತುರ ತೋರಿಸದಿರುತ್ತಿದ್ದರೆ ಕನಿಷ್ಠ ಜನರ ಅನುಕಂಪವಾದರೂ ಅವರ ಮೇಲಿರುತ್ತಿತ್ತು. ಹಾಗೆ ನೋಡಿದರೆ ಪನ್ನೀರ್‌ಸೆಲ್ವಂ ಕೂಡ ಅವಸರ ಮಾಡಿದರು. ಮೌನವಾಗಿ ಅಧಿಕಾರ ಬಿಟ್ಟುಕೊಟ್ಟಿದ್ದರೆ ಶಶಿಕಲಾ ಜೈಲಿಗೆ ಹೋಗುವಾಗ ಮತ್ತೆ ಅಧಿಕಾರ ಸಿಗುವ ಸಾಧ್ಯತೆಯಿತ್ತು. ಆಗ ಅಮ್ಮನ ಜತೆಗೆ ಚಿನ್ನಮ್ಮನ ವಿಶ್ವಾಸವನ್ನೂ ಅವರು ಆಗ ಸಂಪಾದಿಸಿಕೊಳ್ಳುತ್ತಿದ್ದರು. ಬಂಡಾಯ ಏಳುವ ಮೂಲಕ ಪನ್ನೀರ್‌ಸೆಲ್ವಂ ಈ ಅವಕಾಶವನ್ನು ಕಳೆದುಕೊಂಡರು. ಆದರೆ ಇದು ಅವರಿಗೆ ವೈಯಕ್ತಿಕವಾಗಿ ಆಗಿರುವ ನಷ್ಟ. ಬಂಡಾಯದ ಬಳಿಕ ರಾಜಕೀಯವಾಗಿ ಪ್ರಬಲರಾಗಿರುವುದು ಅವರಿಗಾಗಿರುವ ಲಾಭ.

ತೀರ್ಪಿನ ಬಳಿಕ ತಮಿಳುನಾಡಿನ ರಾಜಕೀಯ ಹಲವು ಆಯಾಮಗಳಿಗೆ ತೆರೆದುಕೊಂಡಿದೆ. ಶಶಿಕಲಾ ಆಯ್ಕೆಯಾಗಿರುವ ಪಳನಿಸ್ವಾಮಿ ಸರಕಾರ ರಚಿಸಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ. ಇತ್ತ ಪನ್ನೀರ್‌ಸೆಲ್ವಂ ಆದಷ್ಟು ಶಾಸಕರನ್ನು ತನ್ನತ್ತ ಸೆಳೆಯಲು ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಎಐಎಡಿಎಂಕೆಯನ್ನು ಹೋಳಾಗಿಸಲು ಡಿಎಂಕೆ ತೆರೆಮರೆಯ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯೂ ಈ ಅವಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ತಳವೂರುವ ಪ್ರಯತ್ನದಲ್ಲಿದೆ. ಹೊಸ ಪಕ್ಷ ಉದಯವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸದ್ಯಕ್ಕೆ ತಮಿಳುನಾಡು ರಾಜಕೀಯ ಯಾವ ಥ್ರಿಲ್ಲರ್‌ ಸಿನೇಮಾಕ್ಕೆ ಕಡಿಮೆಯಿಲ್ಲದಂತೆ ಕುತೂಹಲ ಕೆರಳಿಸಿದೆ. ಯಾರೇ ಮುಖ್ಯಮಂತ್ರಿಯಾದರೂ ರಾಜ್ಯದ ರಾಜಕೀಯ ಚಿತ್ರಣ ಹಿಂದಿನಂತಿರುವುದಿಲ್ಲ ಎನ್ನುವುದಂತೂ ಖಾತರಿ.

Back to Top