CONNECT WITH US  

ಉಚಿತ ಭಾಗ್ಯ ತರುವ ಸಮಸ್ಯೆ

ಲ್ಯಾಪ್‌ಟಾಪ್‌ ಯೋಜನೆ ಮೂಲೆಗುಂಪು?

ಸಾಂದರ್ಭಿಕ ಚಿತ್ರ

ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸುವ ಘೋಷಣೆ ಮಾಡಿದ್ದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಆರಂಭದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಎಂದಿದ್ದ ಈ ಯೋಜನೆಯನ್ನು ಅನಂತರ ಬಿಪಿಎಲ್‌ ಪರಿವಾರದ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು. ಬಜೆಟಿನಲ್ಲಿ ಘೋಷಿಸಲಾಗಿದ್ದ ಲ್ಯಾಪ್‌ಟಾಪ್‌ನ್ನು ಸಾಕಷ್ಟು ವಿಳಂಬವಾಗಿ ಅಂದರೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ವಿತರಿಸಿದ ಶಾಸ್ತ್ರ ಮಾಡಲಾಯಿತು. ಆದರೆ ಚುನಾವಣೆ ಬಳಿಕ ಮರಳಿ ಮುಖ್ಯಮಂತ್ರಿಯಾಗುವ ಅವಕಾಶ ಸಿದ್ದರಾಮಯ್ಯನವರಿಗೆ ಸಿಗಲಿಲ್ಲ. ಇದೀಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಈ ಯೋಜನೆಯನ್ನೇ ಮೂಲೆಗುಂಪು ಮಾಡುವ ಸಿದ್ಧತೆಯಲ್ಲಿರುವಂತಿದೆ. 

ಪ್ರಸಕ್ತ ಸಾಲಿನಲ್ಲಿ ಸರಕಾರಿ ಪದವಿ, ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಸರಕಾರದ ಲ್ಯಾಪ್‌ಟಾಪ್‌ಗಾಗಿ ಕಾಯುತ್ತಿದ್ದಾರೆ. ಆದರೆ ಸರಕಾರ ಇನ್ನೂ ಅನುದಾನ ಬಿಡುಗಡೆ ಮಾಡದಿರುವುದರಿಂದ ಲ್ಯಾಪ್‌ಟಾಪ್‌ ಸಿಗುವುದರ ಬಗ್ಗೆ ಖಚಿತತೆ ಇಲ್ಲ. ಅನುದಾನ ಬಿಡುಗಡೆಯಾಗುವ ಸಾಧ್ಯತೆಯೂ ಇಲ್ಲ. ಏಕೆಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ನಾಜೂಕಾಗಿದ್ದು, ಈ ಸಂದರ್ಭದಲ್ಲಿ ಉಚಿತ ಭಾಗ್ಯಗಳಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿದರೆ ಸಂಪೂರ್ಣ ಹದಗೆಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆಯಾಗಬೇಕು. ಕಡಿಮೆಯೆಂದರೂ ಇದಕ್ಕೆ 250 ಕೋ. ರೂ. ಬೇಕಾಗಬಹುದು. ಇಷ್ಟು ಹಣ ಹೊಂದಿಸಲಾಗದೆ ಸರಕಾರ ಅಸಹಾಯಕ ಸ್ಥಿತಿಯಲ್ಲಿದೆ. ಆದರೆ ಸರಕಾರದ ಭರವಸೆಯನ್ನು ನಂಬಿ ಕುಳಿತ ವಿದ್ಯಾರ್ಥಿಗಳಿಗಂತೂ ಸಮಸ್ಯೆ ಉದ್ಭವಿಸಿದೆ.

ಈಗ ಮಧ್ಯಮ, ಮೇಲ್ಮಧ್ಯಮ ವರ್ಗದ ಮಕ್ಕಳೂ ವೃತ್ತಿ ಪರ ಕೋರ್ಸ್‌, ಕಾಲೇಜುಗಳಿಗೆ ಸೇರುತ್ತಿದ್ದಾರೆ. ಇಂಥ ಕೋರ್ಸ್‌ಗಳಿಗೆ ಲ್ಯಾಪ್‌ಟಾಪ್‌ ಅನಿವಾರ್ಯ. ಪ್ರೊಜೆಕ್ಟ್ ಮತ್ತಿತರ ಕೆಲಸಗಳಿಗೆ ಲ್ಯಾಪ್‌ಟಾಪ್‌ ಬೇಕೆ ಬೇಕು. ಹೇಗಾದರೂ ಶುಲ್ಕ ಹೊಂದಾಣಿಕೆ ಮಾಡಿಕೊಂಡು ಕಾಲೇಜು ಸೇರಿದ ಬಡ ವಿದ್ಯಾರ್ಥಿಗಳಿಗೆ ಸರಕಾರ ಕೊಡುವ ಲ್ಯಾಪ್‌ಟಾಪ್‌ ಕಲಿಕೆಗೆ ಅನುಕೂಲವಾಗುತ್ತಿತ್ತು ಎಂಬುದು ನಿಜ. ಇದೀಗ ಸರಕಾರ ಲ್ಯಾಪ್‌ಟಾಪ್‌ ಕೊಡುವುದಿಲ್ಲ ಎಂದಾದರೆ ಅವರು ಅದಕ್ಕಾಗಿ ಇನ್ನೊಂದಿಷ್ಟು ಹಣವನ್ನು ಸಂಗ್ರಹಿಸಬೇಕಾದ ಸಂಕಷ್ಟ ಸ್ಥಿತಿಗೆಗೆ ತಲುಪುತ್ತಾರೆ.

ಜನಪ್ರಿಯ ಯೋಜನೆಗಳನ್ನು ಘೋಷಿಸಿ ಮತಗಳಿಸುವ ಲೆಕ್ಕಾಚಾರ ಹೊಸದೇನೂ ಅಲ್ಲ. ಕೆಲವೊಮ್ಮೆ ಈ ಜನಪ್ರಿಯ ಯೋಜನೆಗಳಲ್ಲಿ ಸ್ವಲ್ಪವಾದರೂ ಅನುಕೂಲ ಎಂದಿರುತ್ತದೆ. ಇನ್ನು ಕೆಲವು ಯೋಜನೆಗಳಲ್ಲಿ ಯಾವುದೇ ಕಣ್ಣಿಗೆ ಕಾಣುವಂಥ ಅನುಕೂಲಗಳೇ ಇರುವುದಿಲ್ಲ. ಲ್ಯಾಪ್‌ಟಾಪ್‌ ಘೋಷಣೆ ಈ ನಿಟ್ಟಿನಲ್ಲಿ ಮೊದಲನೆಯ ಗುಂಪಿನದು. ಆದರೆ ಯಾವುದೇ ರಾಜಕೀಯ ಪಕ್ಷಗಳು ಇಂಥ ಜನಪ್ರಿಯ ಘೋಷಣೆ ನೀಡುವಾಗ ಮತಬ್ಯಾಂಕ್‌ ಮೇಲೆ ಕಣ್ಣಿರುತ್ತದೆಯೇ ಹೊರತು ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನಲ್ಲ. 

ಈಗಲೂ ಲ್ಯಾಪ್‌ಟಾಪ್‌ ಯೋಜನೆಯೂ ತಲುಪಿರುವುದು ಇದೇ ಹಂತವನ್ನು. ಯೋಜನೆಯಿಂದ ರಾಜ್ಯದ ಆರ್ಥಿಕತೆಯ ಮೇಲೆ ಬೀಳುವ ಹೊರೆ ಏನು ಎಂಬುದನ್ನು ಆಗ ಯೋಚಿಸಿರಲಿಲ್ಲ. ಪುಕ್ಕಟೆ ಭಾಗ್ಯಗಳನ್ನು ಘೋಷಿಸುವುದರಲ್ಲೇ ಸರಕಾರಕ್ಕೆ ಖುಷಿಯಿತ್ತು. ತಮಿಳುನಾಡಿನಲ್ಲಿ ಇಂಥ ಅಭ್ಯಾಸ ತುಸು ಹೆಚ್ಚು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವುಗಳ ಅನುಷ್ಠಾನ ಎಷ್ಟು ಕಷ್ಟ ಎಂಬುದು ಅರಿವಿಗೆ ಬರುತ್ತದೆ. ಹಿಂದಿನ ಸರಕಾರದ ಬಹಳ ಜನಪ್ರಿಯವಾಗಿದ್ದ ಉಚಿತ ಅಕ್ಕಿ ವಿತರಣೆ ಯೋಜನೆಯಲ್ಲೂ ಪ್ರಸ್ತುತ ಸರಕಾರಕ್ಕೆ ಈ ಅನುಭವವಾಗುತ್ತಿರುವುದು ಸುಳ್ಳಲ್ಲ. ಯಾವುದೇ ಯೋಜನೆಗಳನ್ನು ಘೋಷಿಸುವ ಮೊದಲ ಸಾಧಕಬಾಧಕಗಳನ್ನು ಮತ್ತು ಬೊಕ್ಕಸದ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಬೇಕು. ಜನರನ್ನು ಮೆಚ್ಚಿಸಬೇಕೆಂಬ ಉದ್ದೇಶದಿಂದ ಪುಕ್ಕಟೆ ಭಾಗ್ಯಗಳನ್ನು ಒದಗಿಸುವ ವಾಗ್ಧಾನ ನೀಡಿದರೆ ಮುಂದೆ ಸಮಸ್ಯೆಯಾಗುತ್ತದೆ ಎನ್ನುವುದಕ್ಕೆ ಲ್ಯಾಪ್‌ಟಾಪ್‌ ಸ್ಕೀಂ ಉತ್ತಮ ಉದಾಹರಣೆಯಾಗಬಲ್ಲದು. ಒಂದು ಸಲ ಪ್ರಾರಂಭಿಸಿದ ಯೋಜನೆಯನ್ನು ಹಣ ಇಲ್ಲ ಎಂಬ ಕಾರಣಕ್ಕೆ ಮಧ್ಯದಲ್ಲಿ ಕೈಬಿಟ್ಟರೆ ಅದರಿಂದ ತೊಂದರೆಗೊಳಗಾಗುವುದು ಫ‌ಲಾನುಭವಿಗಳು. ಆದ ಕಾರಣ, ಸರಕಾರ ಕೂಡಲೇ ತನ್ನ ಆಯವ್ಯಯದಲ್ಲಿ ಪ್ರಕಟಿಸಿದ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು. ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಜನರ ವಿಶ್ವಾಸ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವದು. 


Trending videos

Back to Top