CONNECT WITH US  

ಚಟಗಳಿಂದ ಹೊರಬರುವ ವಿಧಾನ

ಸಾಂದರ್ಭಿಕ ಚಿತ್ರ

ಮಾದಕ ವಸ್ತುಗಳನ್ನು ಬಳಸುವವರಿಗೆ ಅದೇ ಜೀವನವಾಗಿಬಿಟ್ಟಿರುತ್ತದೆ. ಸಮಯ ಕಳೆದಂತೆ ಅದರಿಂದ ಹೊರಬರಬೇಕೆಂದು ಆಲೋಚಿಸಿದರೂ ಅದು ಅಸಾಧ್ಯವೆಂದು ತೋರುತ್ತದೆ ಹಾಗೂ ಹೊರಬರುವುದಾದರೂ ಅದರ ದಾರಿ ಹೇಗೆ ಎಂದು ತಿಳಿಯುವುದಿಲ್ಲ. ಅದಕ್ಕಾಗಿ ಕುಟುಂಬದವರು ಮತ್ತು ಸ್ನೇಹಿತರು ಅವರಿಗೆ ಸಲಹೆ ನೀಡಬಹುದು ಮತ್ತು ಚಿಕಿತ್ಸೆಗಾಗಿ ಅವರನ್ನು ಕರೆದುಕೊಂಡು ಬರಬಹುದು. ಮಾದಕ ವಸ್ತುಗಳನ್ನು ಬಳಸುವ ವ್ಯಕ್ತಿ ತೆಗೆದುಕೊಳ್ಳಬಹುದಾದ ಕೆಲವು ನಿರ್ಧಾರಗಳೆಂದರೆ;

ಮೊದಲನೇ ಹಂತ: ಬದಲಾಗಲು ದೃಢ 
ನಿರ್ಧಾರ ಮಾಡುವುದು

ಮಾದಕ ವಸ್ತುಗಳ ಚಟದಿಂದ ಒದ್ದಾಡುತ್ತಿರುವ ವ್ಯಕ್ತಿ ಅದರಿಂದ ಹೊರಬರಲು ಪ್ರಯತ್ನಿಸುವಾಗ ತೆಗೆದುಕೊಳ್ಳಬೇಕಾದ ತುಂಬಾ ಜಟಿಲವಾದ ಮತ್ತು ದೊಡ್ಡದಾದ ನಿರ್ಧಾರವೆಂದರೆ; ಬದಲಾಗಲು ನಿರ್ಧರಿಸುವುದು. ಬದಲಾಗಲು ನಿರ್ಧರಿಸುವುದು ತುಂಬಾ ಗೊಂದಲದಿಂದ ಕೂಡಿದ ನಿರ್ಧಾರವೆಂದು ವ್ಯಕ್ತಿಗೆ ತೋರುತ್ತದೆ. 

ಆದರೆ ಚಟದಿಂದ ಜೀವನದ ವಿವಿಧ ಭಾಗಗಳಲ್ಲಾಗುತ್ತಿರುವ ತೊಂದರೆಗಳನ್ನು ಪರಿಗಣಿಸಿ ವ್ಯಕ್ತಿಯು ಮುಂದುವರಿಯಬೇಕು. ಚಟದಿಂದ ಹೊರಬರುವ ನಿರ್ಧಾರದ ಜೊತೆಗೆ ಜೀವನದ ಇತರ ಭಾಗಗಳಲ್ಲೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
 
ಯಾವುದೋ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು ಮಾದಕ ವಸ್ತುವಿನ ಮೊರೆ ಹೋಗದೇ ಬೇರೆ ವಿಧಾನ ಹುಡುಕಬೇಕು, ಯಾವ ತರಹದ ಜನರೊಟ್ಟಿಗೆ ಸಮಯ ಕಳೆಯಬೇಕು, ಬಿಡುಗಡೆಯ ಸಮಯದಲ್ಲಿ ಏನು ಮಾಡಬೇಕು, ಮಾದಕ ವಸ್ತು ಸೇವಿಸಲು ಉಪಯೋಗಿಸುತ್ತಿದ್ದ ಸಮಯದಲ್ಲಿ ಏನು ಮಾಡಬೇಕು, ವ್ಯಕ್ತಿಯು ತನ್ನ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾನೆ ಮತ್ತು ಯಾವ ಅಭಿಪ್ರಾಯ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. 

ಈ ತರಹದ ಬದಲಾವಣೆಗಳನ್ನು ತಂದುಕೊಂಡರೆ, ತಾನು ಬದುಕುವುದು ಹೇಗೆ ಎನ್ನುವ ಸಂಶಯ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಆದರೆ ಚಟದಿಂದ ಹೊರಬರುವ ವಿಧಾನ ಸ್ವಲ್ಪ ನಿಧಾನಗತಿಯದ್ದು ಮತ್ತು ಚಟಕ್ಕೊಳಗಾಗಿ ಗೊತ್ತಿರದೇ ವ್ಯಕ್ತಿಯು ತನಗೆ ತಿಳಿಯದೇನೆ ಹಲವಾರು ಬದಲಾವಣೆಗಳನ್ನು ತಂದುಕೊಂಡಿರುತ್ತಾನೆ. ಇವುಗಳಿಂದ ಹಿಮ್ಮರಳಿ ತನ್ನ ಸಹಜ ಜೀವನಶೈಲಿಗೆ ಮರಳುವ ಪ್ರಕ್ರಿಯೆಗೆ ಹೆಜ್ಜೆಯಿಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಬದಲಾವಣೆಯ ಬಗ್ಗೆ ಆಲೋಚಿಸುವುದು
- ವ್ಯಕ್ತಿಯು ಉಪಯೋಗಿಸುತ್ತಿರುವ ಮಾದಕ ವಸ್ತುವಿನ ಬಗ್ಗೆ ಮಾಹಿತಿಯನ್ನಿಟ್ಟುಕೊಳ್ಳಬೇಕು; ಯಾವ ವಸ್ತು, ಎಷ್ಟು ಪ್ರಮಾಣದಲ್ಲಿ, ಎಷ್ಟು ಸಲ ಬಳಸುತ್ತಿರುವುದು. ಇವುಗಳ ಮಾಹಿತಿಯಿಂದ ಜೀವನದಲ್ಲಿ ಚಟ ಎಷ್ಟರ ಮಟ್ಟಿಗೆ ಮಹತ್ವದ ಪಾತ್ರ ವಹಿಸುತ್ತಿದೆ ಎನ್ನುವುದು ಅರಿವಾಗುತ್ತದೆ. 

- ಮಾದಕ ವಸ್ತುಗಳ ಉಪಯೋಗದಿಂದ ಆಗುವ ಲಾಭ ಮತ್ತು ಹಾನಿಗಳನ್ನು ವ್ಯಕ್ತಿಯು ಬರೆಯಬೇಕು. ಅನಂತರ ಮಾದಕ ವಸ್ತು ನಿಲ್ಲಿಸುವುದರಿಂದ ಆಗುವ ಲಾಭ ಮತ್ತು ಹಾನಿಗಳನ್ನು ಬರೆಯಬೇಕು. ಅನಂತರ ಇವೆರಡನ್ನು ಹೋಲಿಸಿ ನೋಡಬೇಕು.

- ವ್ಯಕ್ತಿಯು ತನ್ನ ಜೀವನದಲ್ಲಿ ಮುಖ್ಯ ಪಾತ್ರವಹಿಸುವ ವಿಷಯಗಳ ಬಗ್ಗೆ ಆಲೋಚಿಸಿ ಬರೆಯಬೇಕು. ಉದಾ: ಹೆಂಡತಿ, ಮಕ್ಕಳು, ಕುಟುಂಬ, ಆರೋಗ್ಯ, ವಿದ್ಯಾಭ್ಯಾಸ, ಕೆಲಸ, ಸ್ನೇಹಿತರು, ಸಮಾಜ, ಹಣಕಾಸು. ಅನಂತರ ಮಾದಕ ವಸ್ತುಗಳ ಚಟದಿಂದಾಗಿ ಈ ಎಲ್ಲ ವಿಷಯಗಳಲ್ಲಿ ಹೇಗೆ ತೊಂದರೆಗಳುಂಟಾಗಿವೆಯೆಂದು ಅವಲೋಕಿಸಬೇಕು ಮತ್ತು ಸಾಧ್ಯವಾದರೆ ಬರೆದಿಡಬೇಕು.

- ವ್ಯಕ್ತಿಯು ತನ್ನ ನಂಬಿಕಸ್ಥರಲ್ಲಿ ಈ ವಿಷಯದ ಬಗ್ಗೆ ಮಾತಾಡಬೇಕು ಮತ್ತು ತನ್ನ ಚಟದ ಬಗ್ಗೆ ಅವರಿಗೇನನ್ನಿಸುತ್ತದೆ ಎಂದು ಕೇಳಿ ತಿಳಿದುಕೊಳ್ಳಬೇಕು.

- ಇದರ ಬಳಿಕ ವ್ಯಕ್ತಿಯು ತಾನು ಬದಲಾವಣೆಯಾಗುವುದಕ್ಕೆ ಅಡ್ಡಗೋಲಾಗಿರುವ ವಿಷಯಗಳೇನೆಂದು ಗುರುತಿಸಬೇಕು.

ಎರಡನೇ ಹಂತ: ಲಭ್ಯವಿರುವ ಚಿಕಿತ್ಸಾ 
ವಿಧಾನಗಳನ್ನು ತಿಳಿದುಕೊಳ್ಳಬೇಕು

ವ್ಯಕ್ತಿಯು ಒಮ್ಮೆ ಮಾದಕ ವಸ್ತು ಬಿಡುವ ನಿರ್ಧಾರ ಮಾಡಿದಾಗ ತನಗೆ ಲಭ್ಯವಿರುವ ಚಿಕಿತ್ಸ ವಿಧಾನಗಳ ಬಗ್ಗೆ ವಿವರವಾಗಿ ಅರಿತುಕೊಳ್ಳಬೇಕು. ಅನಂತರ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ, ಅವುಗಳೆಂದರೆ; 
- ಎಲ್ಲ ಮಾದಕ ವಸ್ತುಗಳಿಗಾಗಿ ಒಂದೇ ತರಹದ ಚಿಕಿತ್ಸೆಯಿಲ್ಲ ಮತ್ತು ಎಲ್ಲ ವ್ಯಕ್ತಿಗಳಿಗೆ ಒಂದೇ ತರಹದ ಚಿಕಿತ್ಸೆ ಕೊಡಲಾಗುವುದಿಲ್ಲ. ವ್ಯಕ್ತಿಯ ಮಾದಕ ವಸ್ತುವಿಗೆ ತಕ್ಕಂತೆ ಮತ್ತು ಆತನ ಚಟದ ತೀವ್ರತೆಗೆ ತಕ್ಕಂತೆ ಚಿಕಿತ್ಸೆಯನ್ನೇ ನೀಡಲಾಗುತ್ತದೆ.
- ವ್ಯಕ್ತಿಯು ತನ್ನ ಚಿಕಿತ್ಸೆಯು ಕೇವಲ ಮಾದಕ ವಸ್ತುವಿನ ಚಟವನ್ನಲ್ಲದೇ ತನ್ನ ಜೀವನದ ಇತರ ತೊಂದರೆಗಳನ್ನು ಅರ್ಥೈಸಿಕೊಂಡು ಬಗೆಹರಿಸುವ ಸಂಸ್ಥೆಗಳಲ್ಲಿ ಚಿಕಿತ್ಸೆಪಡೆಯಲು ಪ್ರಯತ್ನಿಸಬೆಕು.
- ಚಿಕಿತ್ಸೆಯ ಅವಧಿ ದೀರ್ಘ‌ಕಾಲದ್ದಾಗಿರಬಹುದು ಆದರೆ ಅದು ವ್ಯಕ್ತಿಯ ಮಾದಕ ವಸ್ತುವಿನ ತೀವ್ರತೆಯ ಮೇಲೆ ಮತ್ತು ಅದರ ಜತೆಗಿರುವ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಮೇಲೆ ನಿರ್ಭರವಾಗಿರಬಹುದು. 
- ಆದುದರಿಂದ ಚಿಕಿತ್ಸೆಯ ಅವಧಿಯ ಬಗ್ಗೆ ಪೂರ್ವ ನಿರ್ಧಾರಮಾಡಿ ಚಿಕಿತ್ಸಾ ವೈದ್ಯರ ಮೆಲೆ ಒತ್ತಡ ಹೇರಬಾರದು. ಉದಾ: ನಾಲ್ಕೇ ದಿನದಲ್ಲಿ ಚಿಕಿತ್ಸೆ ಮಾಡಿ ಕಳುಹಿಸಿ ಎಂದು ಒತ್ತಾಯ ಮಾಡುವುದು. ಇದರ ಬದಲಾಗಿ ವೈದ್ಯರು ಸೂಚಿಸಿದಶಷ್ಟು ದಿನ ದಾಖಲಾಗಿ ಚಿಕಿತ್ಸೆಪಡೆಯಬೇಕು.
- ವಿವಿಧ ಚಿಕಿತ್ಸಾ ಸಂಸ್ಥೆಗಳು ಲಭ್ಯವಿರುತ್ತವೆ. ವ್ಯಕ್ತಿಯು ಸಂಪೂರ್ಣ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉದ್ದೇಶಿಸುವ ತನ್ನ ಚಿಕಿತ್ಸೆಗೆ ಸೂಕ್ತವಾದ ಸಂಸ್ಥೆಯನ್ನು ಆರಿಸಿಕೊಳ್ಳಬಹುದು. 

ಮೂರನೇಯ ಹಂತ: ಸಹಾಯ 
ಪಡೆಯುವುದಕ್ಕಾಗಿ ಮುಂದೆಬರುವುದು

- ಮಾದಕ ವಸ್ತು ಚಟ ಚಿಕಿತ್ಸೆ ಪಡೆದು ಮುಂದುವರಿಯುವಾಗ ಒಬ್ಬರೇ ಮುನ್ನುಗ್ಗದೆ ಎಲ್ಲರ ಸಹಕಾರ ಪಡೆದಾಗ ಗುರಿ ಸಾಧನೆ ಸುಲಭವಾಗುತ್ತದೆ. 
- ವ್ಯಕ್ತಿಯು ತನ್ನ ಕುಟುಂಬದ ಮತ್ತು ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕು. ಅವರೊಂದಿಗೆ ಮನಸ್ತಾಪವಾಗಿದ್ದರೆ ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ತನ್ನ ಚಟ ನಿಲ್ಲಿಸುವ ನಿರ್ಧಾರಕ್ಕೆ ಸಹಕರಿಸುವಂತೆ ಕೇಳಿಕೊಳ್ಳಬಹುದು. ಇದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಚಿಕಿತ್ಸಕರು ಹೇಳಿಕೊಡುತ್ತಾರೆ.
- ವ್ಯಕ್ತಿಯು ಚಟವಿರುವ ಗೆಳೆಯರ ಗುಂಪನ್ನು ಬಿಟ್ಟು ರಚನಾತ್ಮಕ ಕ್ರಿಯಾಶೀಲ ವ್ಯಕ್ತಿಗಳ ಗುಂಪಿಗೆ ಸೇರಿ ಅವರೊಟ್ಟಿಗೆ ಒಡನಾಟ ಬೆಳಸಿಕೊಳ್ಳಲು ಪ್ರಯತ್ನಿಸಬೇಕು.

ಈ ರೀತಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ಮಾದಕ ವಸ್ತುವಿನ ಬಳಕೆ ಪುನಃ ಪ್ರಾರಂಭಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಬದಲಾವಣೆಯ ಸಿದ್ಧತೆಗೆ ಪಂಚ ಸೂತ್ರಗಳು
1. ವ್ಯಕ್ತಿಯು ತಾನು ಬದಲಾವಣೆಯಾಗಲು ಇರುವ ಕಾರಣಗಳನ್ನು ತನ್ನಷ್ಟಕ್ಕೆ ತಾನೇ ಹೇಳಿಕೊಂಡು ನೆನಪಿಸಿಕೊಳ್ಳುತ್ತಿರಬೇಕು.
2. ತಾನು ಕಳೆದ ಸಲ ಚಟದಿಂದ ಹೊರಬರಲು ಪ್ರಯತ್ನಿಸಿದಾಗ ಉಂಟಾದ ತೊಡಕುಗಳನ್ನು ನೆನಪಿಸಿಕೊಳ್ಳಬೇಕು ಮತ್ತು ಯಾವ ವಿಧಾನ ಉಪಯೋಗವಾಯಿತು ಯಾವ ವಿಧಾನ ಉಪಯೋಗವಾಗಲಿಲ್ಲ ಎಂದು ಅವಲೋಕಿಸಬೇಕು.
3. ವ್ಯಕ್ತಿಯು ಮಾದಕ ವಸ್ತುವಿನ ಉಪಯೋಗ ಬಿಡುವ ದಿನವನ್ನು ನಿಗದಿಪಡಿಸಿಕೊಳ್ಳಬೇಕು.
4. ವ್ಯಕ್ತಿಯು ತನಗೆ ತನ್ನ ಚಟವನ್ನು ನೆನಪಿಸುವ ವಸ್ತು/ಸನ್ನಿವೇಶಗಳನ್ನು ಅಳಿಸಬೇಕು ಅಥವಾ ಅವುಗಳಿಂದ ದೂರವಿರಬೇಕು.
5. ವ್ಯಕ್ತಿಯು, ತನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ, ತಾನು ಮಾದಕ ವಸ್ತುವಿನ ಉಪಯೋಗವನ್ನು ನಿಲ್ಲಿಸುವ ನಿರ್ಧಾರವನ್ನು ಅವರಿಗೆ ತಿಳಿಸಬೇಕು ಮತ್ತು ಅವರಿಗೆ ಈ ಕಾರ್ಯದಲ್ಲಿ ಸಹಕರಿಸಲು ಕೇಳಿಕೊಳ್ಳಬೇಕು. 

ಗಮನದಲ್ಲಿಡಿ
ಎಲ್ಲ ಮಾದಕ ವಸ್ತುಗಳು ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನುಂಟು ಮಾಡುತ್ತವೆ. ಹಾಗಾಗಿ, ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸೌಲಭ್ಯವಿರುವ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸುವುದು ಸೂಕ್ತ. ಈ ತರಹ ಚಿಕಿತ್ಸೆಗಾಗಿ ದಾಖಲಾದಾಗ ವ್ಯಕ್ತಿಯ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ.

- ಡಾ| ರವೀಂದ್ರ ಮುನೋಳಿ
ಮುಂದಿನ ವಾರಕ್ಕೆ  

Trending videos

Back to Top