CONNECT WITH US  

ಕಣ್‌ ತೆರೆದು ನೋಡಿ

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! 

ಜೇಡರಬಲೆ, ಸ್ಟೀಲ್‌ಗಿಂತಲೂ ಶಕ್ತಿಯುತವಾದುದು!
ನಿಮ್ಮ ಮನೆಯ ಸಂದು ಗೊಂದಿನಲ್ಲಿ, ಗೋಡೆಯ ಮೂಲೆಗಳಲ್ಲಿ ಜೇಡರ ಬಲೆಯನ್ನು ನೋಡಿಯೇ ಇರುತ್ತೀರಿ. ಕಸ ಗುಡಿಸುವಾಗ ಎಲ್ಲರಿಗೂ ಜೇಡರ ಬಲೆಯ ಮೇಲೆಯೇ ಕಣ್ಣು. ಎಷ್ಟು ಬಾರಿ ಗುಡಿಸಿ ಹಾಕಿದರೂ ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಜೇಡರ ಬಲೆ ಮತ್ತೆ ಪ್ರತ್ಯಕ್ಷವಾಗಿರುತ್ತೆ. ಮನುಷ್ಯ ಮೀನುಗಳನ್ನು ಹಿಡಿಯಲು ಬಲೆ ಬೀಸುವ ಉಪಾಯಕ್ಕೆ ಜೇಡರ ಬಲೆಯೇ ಪ್ರೇರಣೆ ಇರಬಹುದು. ಜೇಡ ಬಲೆ ನೇಯುವುದರ ಮೂಲ ಉದ್ದೇಶ ವಾಸಿಸಲು ಮಾತ್ರವಲ್ಲದೆ ಆಹಾರ ಬೇಟೆಯೇ ಆಗಿದೆ. ಹಾರಾಡುವ ಹುಳ ಹುಪ್ಪಟೆಗಳು ಕಣ್ಣಿಗೆ ಬೀಳದ ಜೇಡರ ಬಲೆಗೆ ಸಿಕ್ಕಿ ಬಿಡಿಸಿಕೊಳ್ಳಲಾಗದೆ ಅಂಟಿಕೊಂಡು ಬಿಡುತ್ತವೆ. ನಂತರ ಜೇಡಕ್ಕೆ ಆಹಾರವಾಗುತ್ತದೆ. 

ಜೇಡದ ಬಲೆ ಪ್ರೋಟೀನ್‌ ಫೈಬರ್‌ನಿಂದ ರೂಪಿತವಾಗಿದೆ. ಈ ಎಳೆ ಮನುಷ್ಯನ ಕೂದಲಿಗಿಂತಲೂ ಸಪೂರವಾಗಿದೆ. ಜೇಡರ ಬಲೆ ಎಲಾಸಿcಕ್‌ ಗುಣವನ್ನು ಹೊಂದಿದೆ. ಹೀಗಾಗಿ ಅದನ್ನು ಜಗ್ಗಿದರೆ ಸ್ಪ್ರಿಂಗ್‌ನಂತೆ ವರ್ತಿಸುತ್ತದೆ. ನೋಡಲು ಚಿಕ್ಕದಾದರೂ, ಜೇಡರ ಬಲೆಯ ಸಾಮರ್ಥ್ಯ ಎಷ್ಟಿದೆಯೆಂದರೆ ಅದರಷ್ಟೇ ಸಪೂರವಾದ ಸ್ಟೀಲ್‌ಗಿಂತಲೂ ಹೆಚ್ಚು ಶಕ್ತಿಯುತವಾಗಿರುತ್ತೆ. ಜೇಡರ ಬಲೆಯ ಶಕ್ತಿಯ ಕಲ್ಪನೆ ನಿಮಗೆ ಮೂಡಿಸಲು ಇಲ್ಲೊಂದು ಒಳ್ಳೆಯ ಉದಾಹರಣೆಯಿದೆ. ಜೇಡರ ಬಲೆಯನ್ನು ಬಳಸಿ ತಯಾರಾದ 2 ಇಂಚು ದಪ್ಪದ ಹಗ್ಗದಿಂದ ಬೋಯಿಂಗ್‌ ವಿಮಾನವನ್ನೇ ತಡೆಹಿಡಿಯಬಹುದಂತೆ.

ಜೇಡರ ಬಲೆಯ ಶಕ್ತಿಯನ್ನು ತಿಳಿದುಕೊಂಡೇ ವಿಜ್ಞಾನಿಗಳು ಅದನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಲು ಹರಸಾಹಸ ಪಡುತ್ತಿದ್ದಾರೆ. ಕೇಂಬ್ರಿಜ್‌ ವಿಶ್ವವಿದ್ಯಾಲಯದ ಸಂಶೋಧಕರು ಈಗಾಗಲೇ ಆ ಕೆಲಸದಲ್ಲಿ ಬಹುತೇಕ ಯಶಸ್ಸನ್ನೂ ಕಂಡಿದ್ದಾರೆ. ಮುಂದೊಂದು ದಿನ ಈ ಸಂಶೋಧನೆ ಬಳಸಿ ಹೆಲ್ಮೆಟ್‌, ಬುಲೆಟ್‌ಪ್ರೂಫ್ ಜಾಕೆಟ್‌, ವಿಮಾನದ ರೆಕ್ಕೆಗಳು, ಪ್ಯಾರಾಚೂಟು ಮುಂತಾದ ವಸ್ತುಗಳನ್ನು ತಯಾರಿಸುವ ಯೋಚನೆ ವಿಜ್ಞಾನಿಗಳಿಗಿದೆ. ನೋಡಿ ನಾವೆಲ್ಲರೂ ನಿರ್ಲಕ್ಷಿಸುವ ಜೇಡರ ಬಲೆಯಿಂದ ಎಷ್ಟೆಲ್ಲಾ ಉಪಯೋಗಗಳಿವೆ, ವಿಚಾರಗಳಿವೆ ಅಂತ...

ಭೂಮಿಯನ್ನು ವಶಪಡಿಸಿಕೊಂಡಿರುವುದು ಮನುಷ್ಯನೊಬ್ಬನೇ ಅಲ್ಲ!

ಭೂಮಿಯನ್ನು ಮನುಷ್ಯ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ ಎನ್ನುವುದು ಒಂದು ಸಾಮಾನ್ಯ ಅಭಿಪ್ರಾಯ. ಆದರೆ ಈ ವಿಚಾರವನ್ನು ಇನ್ನೊಮ್ಮೆ ಪರಾಮರ್ಶಿಸುವಂತೆ ಮಾಡುವ ವಿಚಾರ ಇಲ್ಲಿದೆ. ಮನುಷ್ಯನಿಗಿಂತಲೂ ವಿಸ್ತಾರವಾಗಿ, ಆಳವಾಗಿ ಭೂಮಿ ಮೇಲೆ ತನ್ನ ಅಧಿಪತ್ಯವನ್ನು ಮೆರೆಯುತ್ತಿರುವ ಜೀವಿ ಯಾವುದೆಂದು ತಿಳಿದರೆ ನೀವು ಖಂಡಿತ ಆಶ್ಚರ್ಯಚಕಿತರಾಗುವಿರಿ. ಅದು ಬೇರಾವುದೂ ಅಲ್ಲ, ಕಷ್ಟಸಹಿಷ್ಣು ಎಂದೇ ಹೆಸರು ಮಾಡಿರುವ ಇರುವೆ. ಇರುವೆ ಮನುಷ್ಯರಂತೆ ಸಂಘಜೀವಿ. ಅದು ಗುಂಪುಗಳಲ್ಲಿ ವಾಸಿಸುತ್ತವೆ. ಈ ರೀತಿಯಾಗಿ ಸಮೂಹದಲ್ಲಿ ವಾಸಿಸುವ ಇರುವೆಗಳ ಗುಂಪನ್ನು ಕಾಲೋನಿಗಳೆಂದು ಕರೆಯುತ್ತಾರೆ. ಈ ಕಾಲೋನಿಗಳ ವಿಸ್ತಾರ ಚಿಕ್ಕದೂ ಇರಬಹುದು, ಕೆಲ ಸಂದರ್ಭಗಳಲ್ಲಿ ಜಾಸ್ತಿಯೂ ಇರಬಹುದು. ಕೆಲ ಸಮಯದ ಹಿಂದೆ ಅಮೆರಿಕದಲ್ಲಿ ವಿಜ್ಞಾನಿಗಳು ಭೂಮಿಯಡಿ ಹುದುಗಿದ್ದ ಇಂಥ ಇರುವೆ ಕಾಲೋನಿಯೊಂದರ ಅಧ್ಯಯನದಲ್ಲಿ ತೊಡಗಿದ್ದರು. ಅಧ್ಯಯನ ಮುಂದುವರಿಯುತ್ತಿದ್ದಂತೆ ಅವರಿಗೆ ಸಿಗುತ್ತಾ ಹೋದ ಮಾಹಿತಿಯಿಂದ ಅವರೆಲ್ಲರೂ ಬೆಚ್ಚಿ ಬಿದ್ದಿದ್ದರು. ಅದು ಬರೀ ಕಾಲೋನಿ ಆಗಿರಲಿಲ್ಲ, ಸೂಪರ್‌ ಕಾಲೋನಿಯಾಗಿತ್ತು. ಅದರ ವ್ಯಾಪ್ತಿ ಎಷ್ಟಿತ್ತು ಗೊತ್ತಾ ಸುಮಾರು 560 ಮೈಲಿಗಳು! ಇದು ಒಂದು ಕಾಲೇನಿಯ ಕತೆಯಾದರೆ ಇಂಥಾ ಕಾಲೋನಿಗಳು ಭೂಮಿಯಲ್ಲಿ ಅದೆಷ್ಟು ಹುದುಗಿವೆಯೋ? ಆವೆಲ್ಲವನ್ನೂ ವಿಚಾರ ಮಾಡಿದರೆ ಮನುಷ್ಯನಿಗಿಂತ ಹೆಚ್ಚಾಗಿ ಭೂಮಿಯನ್ನು ಆವರಿಸಿಕೊಂಡಿರುವ ಜೀವಿ ಇರುವೆ ಎಂದೆನ್ನಿಸದೇ ಇರದು. 

ಹರ್ಷ

Trending videos

Back to Top