CONNECT WITH US  

ಹಕ್ಕಿಗಳಿಗೆ ಕಲ್ಲು ಹೊಡೆಯುವುದು ಇಲ್ಲಿ ಅಪರಾಧ!

ವರುಷಕ್ಕೆ ಮೂರು ಬಾರಿ ಚೌಕಗಳು ತುಂಬಿಕೊಂಡರೆ ಹುಲುಸಾಗಿ ಹುಲ್ಲುಗಳು ಬೆಳೆಯುತ್ತವೆ. ಬೇಗನೆ ಒಣಗುವುದಿಲ್ಲ. ಇವುಗಳಲ್ಲಿ ಜಾನುವಾರುಗಳು ಇಷ್ಟ ಪಡುವ ಹುಲ್ಲೂ ಇರುವುದರಿಂದ ನಾಲ್ಕೈದು ತಿಂಗಳು ಮೇವಿಗೆ ಬರವಿಲ್ಲ. 

ಲಾಪೋಡಿಯಾ - ಮಹಾರಾಷ್ಟ್ರದ ಚಿಕ್ಕ ಗ್ರಾಮ. ಜೈಪುರದಿಂದ ಅರವತ್ತೈದು ಕಿಲೋಮೀಟರ್‌ ದೂರ. ಇಲ್ಲಿನ ವಾರ್ಷಿಕ ಸರಾಸರಿ ಮಳೆ ಸುಮಾರು 330 ಮಿ.ಮೀ. ಇನ್ನೂರು ಕುಟುಂಬಗಳು. ಆಜೂಬಾಜು ಎರಡೂಕಾಲು ಸಾವಿರ ಜನಸಂಖ್ಯೆ. ನಾಲ್ಕು ದಶಕದ ಹಿಂದೆ ಜಲಯೋಧ ಲಕ್ಷ್ಮಣಸಿಂಗ್‌ ನೇತೃತ್ವದಲ್ಲಿ ಆದ ಜಲ ಸಂರಕ್ಷಣೆಯ ಕಾಯಕವು ಬರಕ್ಕೊಂದು ಸವಾಲು. ಸೌಲಭ್ಯ
ವಂಚಿತ ಊರಿಗೆ ದನಿಯಾಗಿ, ಹಸಿರ ಚಾದರದ ಸಮೃದ್ಧಿಗೆ ಕಾರಣರಾದ ಲಕ್ಷ್ಮಣ ಸಿಂಗ್‌ ಅವರ ಕನಸು ನನಸಾಗಿದೆ. ಲಾಪೋಡಿ ಯಾದಂತಹ ಹಳ್ಳಿಯ ಜಲಸಂರಕ್ಷಣೆಯ ಮಾದರಿಯು ದೇಶ ಅಲ್ಲ, ವಿದೇಶದಲ್ಲೂ ಸುದ್ದಿ. 

ಸಿಂಗ್‌ ಅವರ ಏಕವ್ಯಕ್ತಿ ಯೋಚನೆಯು ಯೋಜನೆಯಾಗಿ ಮಾರ್ಪಟ್ಟಾಗ ಅದು ಹಳ್ಳಿಗರ ಮನದಲ್ಲಿ ಬದುಕಿನ ಭವಿಷ್ಯದ ಬೀಜವನ್ನು ಬಿತ್ತಿತು. ಅದೀಗ ಮೊಳಕೆಯೊಡೆದು ಮರವಾಗಿದೆ. ಲಕ್ಷ್ಮಣ ಸಿಂಗ್‌ ಲಾಪೋಡಿಯಾಕ್ಕೆ ಸೂಕ್ತವಾಗುವ ಚೌಕ ವಿಧಾನ ಎಂದೇ ಜನಪ್ರಿಯವಾಗಿರುವ ನೆಲಜಲ ಸಂರಕ್ಷಣೆಯ ಮಾದರಿ ಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಯ ಯಶವೇ ಬರಕ್ಕೆ ಸಡ್ಡು. ಕಾರಣ ಜನ ಸಹಭಾಗಿತ್ವ. ಹೇಗೆ ಸಾಧ್ಯವಾಯಿತು? ಲಕ್ಷ್ಮಣ ಸಿಂಗ್‌ ಅವರ ಮೊದಲ ಕೆಲಸ ಊರಲ್ಲಿ ಶಾಲೆಯೊಂದರ ಸ್ಥಾಪನೆ. ಊರಿನ ಕೆರೆಯ ಪುನರ್ಜೀವ ಎರಡನೆಯದು. ಯಾವುದೇ ಆರ್ಥಿಕ ಸಂಪನ್ಮೂಲ ಗಳಿಲ್ಲ. ಒದಗಿಸುವವರಂತೂ ದೂರದ ಮಾತು. ಸಭೆ ಕರೆದರೂ ಪ್ರಯೋಜನವಾಗಿಲ್ಲ. ಊರಿನ ಆರ್ಥಿಕ, ಸಾಮಾಜಿಕ ಹಿಂಬೀಳಿ ಕೆಯ ನರನಾಡಿಯ ಪರಿಚಯವಿತ್ತು. ಲಕ್ಷ್ಮಣ ಸ್ವತಃ ಕೆರೆಯ ಕೆಲಸಕ್ಕಿಳಿದರು. ಒಂದಷ್ಟು ಮಂದಿ ಗೇಲಿ, ತಮಾಷೆಯಲ್ಲಿ ಸಂತೃ ಪ್ತಿ ಪಟ್ಟರು. ವಾರ ಕಳೆಯಿತು, ಒಂದಿಬ್ಬರು ಸ್ನೇಹಿತರು ಜತೆಯಾದರು. ನಂತರ ಒಬ್ಬೊಬ್ಬರಾಗಿಯೇ ಸಾಥ್‌ ಆದರು. ಸ್ವಲ್ಪ ಸಮಯ ದಲ್ಲೇ ಇಡೀ ಊರು ಲಕ್ಷ್ಮಣರ ಹಿಂದೆ ನಿಂತಿತ್ತು. "ಗ್ರಾಮೀಣ್‌ ವಿಕಾಸ್‌ ನವ್‌ಯುವಕ್‌ ಮಂಡಲ್‌, ಲಾಪೋಡಿಯಾ' ಎನ್ನುವ ಸಂಘಟನೆಯ ಹುಟ್ಟು. 

ಊರವರಿಗೆ ಶ್ರಮದಾನದಲ್ಲಿ ಭಾಗವಹಿಸುವುದು ಪ್ರತಿಷ್ಠೆ ಯಾಯಿತು. 1990ರ ಹೊತ್ತಿಗೆ "ಫ‌ೂಲ್‌ ಸಾಗರ್‌' ಮತ್ತು "ದೇವ್‌ ಸಾಗರ್‌' ಎನ್ನುವ ಎರಡು ಕೆರೆಗಳ ನಿರ್ಮಾಣ. ಇವುಗಳು ಅಂತ ರ್ಜಲ ಮರುಪೂರಣಕ್ಕಾಗಿಯೇ ಮೀಸಲು. ಜತೆಗೆ ನೀರಾವರಿಗೇ ಮೀಸಲಾದ "ಅನ್ನ ಸಾಗರ್‌' ಕೆರೆಯ ಪುನರ್ಜೀವನ. ನೀರಾವರಿ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾದಾಗ ಊರವರು ಖುಷ್‌. ನೆರೆ ಗ್ರಾಮದಿಂದ ಮಳೆಯ ನೀರು ಹರಿದು ದೂರದ ನಾಲೆಯನ್ನು ಸೇರುತ್ತಿತ್ತು. ಇದನ್ನು ಊರಿಗೆ ಹೇಗೆ ಬಳಸಬಹುದು? ನಿತ್ಯ ಯೋಚನೆ. ಸರಕಾರ ಪ್ರಚುರಪಡಿಸುವ ಸಮತಳ ಅಗಳುಗಳು, ಬಂಡ್‌ಗಳು ಹೇಳುವಂತಹ ಪ್ರಯೋಜನಕ್ಕೆ ಬಾರವು. ಈ ಕುರಿತು ನಿರಂತರ ಅಧ್ಯಯನ. 

ಹಲವು ಮಾಡಿ, ಬೇಡಿಗಳ ಬಳಿಕ "ಚೌಕ ವಿಧಾನದ' ಅಭಿವೃದ್ಧಿ. ಈ ಮಾದರಿ ಹೇಗಿದೆ? "ನೀರಿನ ಹರಿವಿಗೆ ಎದುರಾಗಿ ಖೀ ಆಕಾರದ ದೊಡ್ಡ ಆವರಣ ಗುರುತಿಸಿಕೊಳ್ಳುವುದು ಮೊದಲ ಕೆಲಸ. ಇದರ ಒಳಭಾಗದಲ್ಲಿ ಅಲ್ಲಲ್ಲಿ ಎಡೆ ಬಿಟ್ಟ ಇನ್ನೊಂದು ಖೀ ಆಕಾರ ಬರು
ವಂತೆ ಪುಟ್ಟಪುಟ್ಟ ಆಯತಾಕಾರದ ಚೌಕ. ಸಿಕ್ಕಿದ ಮಣ್ಣಿನಲ್ಲಿ ಹೊರಗಿನ ಖೀಆಕಾರದಲ್ಲಿ ಬದು ರಚನೆ. ಅಕ್ಕಪಕ್ಕದಲ್ಲಿರುವ 
ಇಂಥ ಬದುಗಳನ್ನು ಕ್ರಮಿಸಿ ಓಡುವ ನೀರಿನಲ್ಲಿ ಮಿಕ್ಕುಳಿದುದನ್ನು ಮತ್ತು ಮಣ್ಣಿನೊಳಕ್ಕಿಳಿದದ್ದನ್ನು ಅನಂತರ ಊರಿನ ಕೆರೆ ಎಲ್ಲಿದೆಯೋ ಅಲ್ಲಿಗೆ, ಬೇಕಾದರೆ ಎಡ-ಬದಿಯ ತಗ್ಗುಪ್ರದೇಶಗಳ ಕೆರೆಗಳಿಗೂ ಒಯ್ಯುವ ವ್ಯವಸ್ಥೆ'. ಜತೆಗೆ ಪಾಳುಬಿದ್ದ ಗೋಮಾಳ ಗಳಲ್ಲಿ ಮೂವತ್ತಕ್ಕೂ ಹೆಚ್ಚು ಸ್ಥಳೀಯ ಹುಲ್ಲಿನ ತಳಿಗಳ ನಾಟಿ. ಹೀಗೆ ಸತತ ಪ್ರಯೋಗ. 

ವರುಷಕ್ಕೆ ಮೂರು ಬಾರಿ ಚೌಕಗಳು ತುಂಬಿಕೊಂಡರೆ ಹುಲುಸಾಗಿ ಹುಲ್ಲುಗಳು ಬೆಳೆಯುತ್ತವೆ. ಬೇಗನೆ ಒಣಗುವುದಿಲ್ಲ. ಇವುಗಳಲ್ಲಿ ಜಾನುವಾರುಗಳು ಇಷ್ಟ ಪಡುವ ಹುಲ್ಲೂ ಇರುವು ದರಿಂದ ನಾಲ್ಕೈದು ತಿಂಗಳು ಮೇವಿಗೆ ಬರವಿಲ್ಲ. ಊರಿನಲ್ಲಿದ್ದ ಸಂಕರ ತಳಿಯ ದನಗಳಲ್ಲಿ ಹಾಲು ಕಡಿಮೆ.  ರ್‌ ತಳಿಯು ಲಾಪೋಡಿಯಾಕ್ಕೆ ಹೊಂದಿಕೊಳ್ಳುತ್ತವೆ. ಹಳ್ಳಿ ಹಳ್ಳಿಗಳಲ್ಲಿ  ರ್‌ ಅಭಿವೃದ್ಧಿಯಾಯಿತು. ನಿಜಾರ್ಥದ ಕ್ಷೀರ ಕ್ರಾಂತಿಗೆ ನಾಂದಿ ಯಾಯಿತು. ಹಾಲಿನ ಮಾರಾಟದಿಂದ ಉತ್ಪನ್ನಕ್ಕಿಂತ ಹೆಚ್ಚು ಆದಾಯ ಸಿಗುವಂತಾಯಿತು. ಹಲವು ಹಳ್ಳಿಗಳು ಹುಲ್ಲುಗಾವಲುಗಳನ್ನು ಹಸಿರುಗೊಳಿಸಿ, ಹಾಲಿನ ಮೂಲಕ ತಮ್ಮೂರನ್ನು ಬರ ನಿರೋಧಕವಾಗಿಸಿಕೊಂಡಿವೆ. 

ಲಾಪೋಡಿಯಾದಲ್ಲಿ ಮರಗಳನ್ನು ಕಡಿಯುವುದು ಅಪರಾಧ! ಯಾರಾದರೂ ಕಡಿದರೆ ಕಠಿಣ ಶಿಕ್ಷೆ! ಒಂದು ಕಡಿದುದಕ್ಕೆ ಎರಡು ಗಿಡ ನೆಟ್ಟು ಸಾಕುವ ಶಿಕ್ಷೆ! ಹಕ್ಕಿಗಳತ್ತ ಯಾರೂ ಕಲ್ಲು ಎಸೆಯ ಬಾರದು. ಎಸೆದುದು ಗೊತ್ತಾದರೆ ಐನೂರು ರೂಪಾಯಿ ದಂಡ! ಹಕ್ಕಿಗಳಿಗಾಗಿ ಅಲ್ಲಲ್ಲಿ ಧಾನ್ಯ ಬ್ಯಾಂಕ್‌ ಸ್ಥಾಪಿಸಿದ್ದಾರೆ. ಜಾನುವಾರು, ಹಕ್ಕಿಗಳಿಗೆ ಸುಲಭದಲ್ಲಿ ನೀರು ಸಿಗುವ ವ್ಯವಸ್ಥೆಗಳಿವೆ. 

ಒಂದರ ಬಳಿಕ ಒಂದರಂತೆ ಜಲ ಸಂರಕ್ಷಣೆಯ ಕಾಯಕವು ಲಕ್ಷ್ಮಣ ಸಿಂಗರ ಬದ್ಧತೆ. ಮೂವತ್ತೂಂದು ಕೆರೆಗಳನ್ನು ಪರಸ್ಪರ ಜೋಡಿಸಿದ್ದಾರೆ. ಒಂದೂರಿನಲ್ಲಿ ಹೊರ ಹರಿಯುವ ನೀರು ನೆರೆ ಊರಿನವರಿಗೆ ಪ್ರಯೋಜನಕಾರಿ. ಪಾದಯಾತ್ರೆ ಮೂಲಕ ಮರ ಗಳಿಗೆ ರಾಖೀ ಕಟ್ಟುವ, ಗಿಡ ನೆಡುವ, ಕೆರೆಗೆ ಪೂಜೆ ಸಲ್ಲಿಸುವ ಅಪರೂಪದ ಆಚರಣೆಯು ಜಲ ಸಂರಕ್ಷಣೆಯ ಧೀಶಕ್ತಿ. ಈ ಸಂದರ್ಭದಲ್ಲಿ ಅಗತ್ಯಬಿದ್ದರೆ ಕೆರೆಗಳ ರಿಪೇರಿ, ಹೂಳೆತ್ತುವ ಕಾರ್ಯವೂ ನಡೆಯುತ್ತದೆ. ಇದು ನೆಲ, ಜಲ, ಮರ, ಹಕ್ಕಿ, ಪ್ರಾಣಿಗಳ ಕುರಿತು ಅರಿವನ್ನು ಮತ್ತು ಕಳಕಳಿಯನ್ನು ಎಳೆಯರಲ್ಲಿ ಮೂಡಿಸುವ ಟೂಲ್ಸ್‌. 

ಒಮ್ಮೆ ಇನ್ನೂರ ಎಂಬತ್ತೂಂಬ‌ತ್ತು ಮಿ.ಮೀ. ಮಳೆ ಬಂದಿತ್ತು. ಕೆರೆಗಳು ತುಂಬಲೇ ಇಲ್ಲ. ಅಂತಹ ಸಂದರ್ಭದಲ್ಲಿ ಲಾಪೋಡಿ ಯಾದ ರೈತರು ತಮ್ಮ ಹೊಲದ ಅರ್ಧ ಭಾಗದಲ್ಲಿ ಮಾತ್ರ ಬೇಸಾಯ ಮಾಡಿದ್ದರು! ಲಕ್ಷ್ಮಣ ಸಿಂಗ್‌ ಒಂದೆಡೆ ಹೇಳುತ್ತಾರೆ, "ಬೇರೆ ಊರುಗಳಿಗೆ ಹೋಗಿ ನೋಡಿದಾಗ ಅಲ್ಲಿ ಒಳ್ಳೊಳ್ಳೆಯ ಕೆರೆಗಳಿದ್ದುವು; ಕೃಷಿಯೂ ಚೆನ್ನಾಗಿ ನಡೆಯುತ್ತಿತ್ತು. ಅನುಪಮ್‌ ಮಿಶ್ರಾ ಅವರಂತಹ ಜಲ ದಾರ್ಶನಿಕರ ಸಂಪರ್ಕ ಸಿಕ್ಕಿತು. ಅವರ ಸ್ಲೆ„ಡ್‌ಗಳನ್ನು ನೋಡಿದೆ, ಬಾಡೆ¾ರ್‌, ಜೈಪುರ ಮತ್ತಿತರ ಸ್ಥಳಗಳಿಗೆ ಹೋಗಿ ನೀರಿನ ವ್ಯವಸ್ಥೆ ನೋಡಿದೆ. ಈ ಜ್ಞಾನದಿಂದ ನಮ್ಮ ಸೋಲಿನ ಮೂಲ ಎಲ್ಲಿದೆ ಎನ್ನುವುದು ಸ್ಪಷ್ಟವಾಯಿತು.'

ಲಾಪೋಡಿಯಾದ ಅಭಿವೃದ್ಧಿಯ ಗಾಥೆಗೆ ಕನ್ನಡಿ ಹಿಡಿದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಅವರೆನ್ನುತ್ತಾರೆ, "ತನ್ನ ಊರಿಗೆ 
ಏನು ಬೇಕು, ಏನು ಬೇಡ ಎಂಬ ಸ್ಪಷ್ಟ ದರ್ಶನ ಲಕ್ಷ್ಮಣ್‌ ಸಿಂಗ್‌ ಅವರಲ್ಲಿತ್ತು. ಇಲಾಖೆ ಶಿಫಾರಸು ಮಾಡುವ ಪಠ್ಯ ಪುಸ್ತಕದ ನೆಲಜಲ ಸಂರಕ್ಷಣಾ ಕ್ರಮ ತಮ್ಮಲ್ಲಿಗೆ ಹೊಂದುವುದಿಲ್ಲ ಎಂದು ಹೊಸತೊಂದನ್ನು ಅಭಿವೃದ್ಧಿ ಪಡಿಸಿದಂತಹ ಜಾಣ್ಮೆ ಬಹುಶಃ ದೇಶದಲ್ಲೇ ಏಕೈಕ. ಜನರ ಮನವೊಲಿಸಿ ಇಪ್ಪತ್ತು ಗ್ರಾಮಗಳ ಕೆರೆ ಜೋಡಣೆ ಮಾಡಿದ ಉದಾಹರಣೆಯು ಸ್ವತಂತ್ರ ಭಾರತದಲ್ಲಿ ಬೇರೆಲ್ಲೂ ಸಿಗದು.'

ಶ್ರೀ ಪಡ್ರೆಯವರ ನೀರಿನ ಕತೆಗಳ ಗುತ್ಛ ಜನಶಕ್ತಿಯಿಂದ ನದಿಗಳಿಗೆ ಮರುಜೀವವು ಸಂಕಲನಗೊಳ್ಳುತ್ತಿದೆ. ಮಾರ್ಚ್‌ 16 ರಂದು ಉಜಿರೆಯ ಎಸ್‌.ಡಿ.ಎಂ.ಕಾಲೇಜಿನಲ್ಲಿ ಅನಾವರಣ. ಕೃಷಿ ಮಾಧ್ಯಮ ಕೇಂದ್ರ ಮತ್ತು ಜಲಕೂಟ ವಾಣಿನಗರ ಇವರ ಜಂಟಿ ಪ್ರಕಾಶನ. ಪುಸ್ತಕದ ಹೂರಣಗಳಲ್ಲೊಂದು ಲಾಪೋಡಿಯಾ ಕತೆ. ಮಹಾರಾಷ್ಟ್ರದ ಪಾನಿ ಫೌಂಡೇಶನ್‌, ನಾಂಡುವಾಲಿ ಮತ್ತು ವರಾಟ್ಟಾರ್‌ ನದಿಗಳಿಗೆ ಪುನರ್ಜನ್ಮ, ಬಾವಿಯ ಒಡಲಿಗೆ ಸೂರಿನ ಧಾರೆ, "ಅರಬರದಾಗೂ ಆರಾಣೆ' ಬೆಳೆ, ಬೆಳಗಾವಿಯ ಬಾವಿ ಪುನರ್ಜೀವನ, ಸಾಗರದ ಹಳ್ಳಿಗಳಲ್ಲಿ ಹೊಳೆಯೊಡಲ ಚಿಂತೆ... ಬರಹಗಳು ನೀರಿನ ಬರವನ್ನು ದೂರಮಾಡಿದ ಕ್ಯಾಪ್ಸೂಲುಗಳು. 

ಕನ್ನಾಡಿನಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದೆ. ಕೃಷಿ, ಕೃಷಿಕನತ್ತ ಅಲ್ಪಕಾಲಿಕ ಒಲವು ಮೂಡುತ್ತಿದೆ. ಮೂಗಿಗೆ ತುಪ್ಪ ಸವರುವ ಯೋಜನೆಗಳು ಘೋಷಣೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನೆಲ-ಜಲ ಸಂರಕ್ಷಣೆಯ ಕುರಿತ ಶ್ರೀ ಪಡ್ರೆಯವರ ಮಾತುಗಳು ಮುಖ್ಯವಾಗುತ್ತದೆ, "ಎಲ್ಲಿ ಜನ ಸಹಭಾಗಿತ್ವದಲ್ಲಿ ನೀರ ಕಾಯಕ ನಡೆಯುತ್ತದೆಯೋ ಅಲ್ಲಿನ ಕಾಮಗಾರಿಗಳು ಕಳಪೆ ಆಗುವುದಿಲ್ಲ. ಆಯಾ ಊರ ಮಂದಿಯ ಬೆವರೇ ಈ ರಚನೆಗಳನ್ನು ಕಾಪಿಡುವ ಅದ್ಭುತ ಅಂಟು. ಈ ದೇಶದ ಬೇರೆಬೇರೆ ಪ್ರದೇಶಗಳಿಗೆ ಹೊಂದುವ ಸಿದ್ಧ ಜಲಸಮೃದ್ಧಿಯ, ಕಾಡು ಬೆಳೆಸುವ ವಿದ್ಯಾವೈವಿಧ್ಯಗಳಿವೆ. ಬರ ನಿರೋಧಕ ಜಾಣ್ಮೆಗಳಿವೆ. ಇಲ್ಲದಿರು ವುದು ದೃಢ ಮನಸ್ಸು, ಸಂಕಲ್ಪ.'

"ನದಿ ತಿರುಗಿಸುವ, ಜೋಡಿಸುವ, ಪಾತಾಳ ಗಂಗೆಗೆ ಭೈರಿಗೆ ಕೊರೆಯುವ, ಉಪ್ಪು ನೀರನ್ನು ಹೊತ್ತೂಯ್ಯುವ ಭೀಮ ಯೋಜನೆ ಗಳಲ್ಲ ಬೇಕಾಗಿರುವುದು. ರಾಜಕೀಯ ಮತ್ತಿತರ ಕ್ಷುಲ್ಲಕ ಕಾರಣ ಗಳಿಂದ ಒಡೆದ, ಮಾನಸಿಕ ತಡೆ, ಋಣಾತ್ಮಕ ಭಾವನೆ ಬೆಳೆಸಿ
ಕೊಂಡ ಸಮಾಜವನ್ನು ಊರಿನ ಅಭಿವೃದ್ಧಿಗಾಗಿ ಒಗ್ಗೂಡಿಸುವ, ಮನಸ್ಸನ್ನು ಆ ಕಡೆಗೆ ತಿರುಗಿಸುವ ಕೆಲಸ ಆಗಬೇಕಿದೆ. ಜಲ್‌-ಜಮೀನ್‌? ಜಂಗಲ್‌ ಸಂರಕ್ಷಿಸುವ ಸರಳ, ಸಿದ್ಧ ವಿದ್ಯೆ ಅನುಸರಿಸಿ ದರೆ ಸಾಕು, ಸುಜಲಾಂ? ಸುಫ‌ಲಾಂ ದೂರದ ಮಾತಲ್ಲ.'

ನಾ. ಕಾರಂತ ಪೆರಾಜೆ


Trending videos

Back to Top