CONNECT WITH US  

ಇಷ್ಟೆಲ್ಲಾ ಸರ್ಕಸ್‌ ಅಗತ್ಯವಿತ್ತಾ?

ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದೊಂದು ತಿಂಗಳಿನಿಂದ ನಡೆದಿದ್ದ "ಕೆಪಿಸಿಸಿ ಅಧ್ಯಕ್ಷ ಗಾದಿ' ಪ್ರಹಸನಕ್ಕೆ ತೆರೆ ಬಿದ್ದಿದೆ. ಸಾಕಷ್ಟು ಚರ್ಚೆ, ಸಮಾಲೋಚನೆ, ಕಸರತ್ತು, ಲಾಬಿ, ಒತ್ತಡ ಎಲ್ಲದರ ನಡುವೆಯೂ ಅಂತಿಮವಾಗಿ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರನ್ನೇ ಮುಂದುವರಿಸಲು ಹೈಕಮಾಂಡ್‌ ತೀರ್ಮಾನ ಕೈಗೊಂಡಿದೆ. ಜತೆಗೆ ಕೆಪಿಸಿಸಿಗೆ ಮತ್ತೂಬ್ಬ ಕಾರ್ಯಾಧ್ಯಕ್ಷ, ಪ್ರಚಾರ ಸಮಿತಿಗೆ ಅಧ್ಯಕ್ಷರ ನೇಮಕವೂ ಆಗಿದೆ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಡೆದ ಈ ಕಸರತ್ತು ನಿಜಕ್ಕೂ ಕಾಂಗ್ರೆಸ್‌ಗೆ ಲಾಭವಾಗುತ್ತಾ? ಪರಮೇಶ್ವರ್‌ ಅವರನ್ನೇ ಮುಂದುವರಿಸುವುದಾದರೆ ಇಷ್ಟೆಲ್ಲಾ "ಪ್ರಹಸನ' ಬೇಕಿತ್ತಾ, ಮತ್ತೂಬ್ಬ ಕಾರ್ಯಾಧ್ಯಕ್ಷರ ನೇಮಕದಿಂದ ದಿನೇಶ್‌ ಗುಂಡೂರಾವ್‌ ಅಧಿಕಾರಕ್ಕೆ ಕತ್ತರಿ ಬಿತ್ತಾ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್‌ ಜತೆ ಮಾತುಕತೆಗೆ ಇಳಿದಾಗ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಇಷ್ಟೆಲ್ಲಾ ಕಸರತ್ತು ಅಗತ್ಯವಿತ್ತಾ?
ಕೆಪಿಸಿಸಿ ಅಧ್ಯಕ್ಷರ ಸ್ಥಾನದ ವಿಷಯಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣ ಆಗುತ್ತೆ ಅಂತ ವಿರೋಧ ಪಕ್ಷದವರು ಮತ್ತು ಅನೇಕ ರಾಜಕೀಯ ವಿಶ್ಲೇಷಕರು ಅಂದುಕೊಂಡಿದ್ದರು. ಆದರೆ, ನಮ್ಮ ಹೈಕಮಾಂಡ್‌ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲಕ್ಕೆ ಎಡೆ ಮಾಡಿಕೊಡದೆ ತೀರ್ಮಾನ ಮಾಡಿದೆ. ಚುನಾವಣೆ ವರ್ಷವಾಗಿರುವುದರಿಂದ ಎಲ್ಲರಿಗೂ ಜವಾಬ್ದಾರಿಗಳನ್ನು ನೀಡಿದ್ದಾರೆ. ಪಕ್ಷದಲ್ಲಿ ಜವಾಬ್ದಾರಿ ಇರುವ ವ್ಯಕ್ತಿಗಳಿಗೆ ಅಧಿಕಾರ ನೀಡಿದ್ದಾರೆ. ಚುನಾವಣೆ ಯಾರ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಗೊಂದಲಕ್ಕೂ ತೆರೆ ಎಳೆದಿದೆ. 

ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಅಂದ್ರೆ, ಮುಂದಿನ ಸಿಎಂ ಅವರೇ ಆಗ್ತಾರಾ?
ಖಂಡಿತವಾಗಿಯೂ, ಸಿದ್ದರಾಮಯ್ಯ ಅವರೇ ನಮ್ಮ ಕ್ಯಾಪ್ಟನ್‌. ಹೈಕಮಾಂಡ್‌ ಅದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವುದರಿಂದ ಅಟೊಮೆಟಿಕಲಿ ಅವರೇ ಮುಂದಿನ ಮುಖ್ಯಮಂತ್ರಿಯಾಗ್ತಾರೆ. 

ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಬೇಡಿಕೆ ಇದೆಯಲ್ಲಾ?
ನೋಡಿ, ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಅಂತ ಹೈಕಮಾಂಡ್‌ ಸಷ್ಟವಾಗಿ ಹೇಳಿದೆ. ಅವರ ನೇತೃತ್ವ ಅಂದ ಮೇಲೆ ಮುಂದೆಯೂ ಅವರೇ ಮುಖ್ಯಮಂತ್ರಿಯಾಗ್ತಾರೆ. ಈ ಸಂದರ್ಭದಲ್ಲಿ ದಲಿತ ಸಿಎಂ ವಿಷಯ ಅಪ್ರಸ್ತುತ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಅಭ್ಯರ್ಥಿ ಅಂತ ಬಿಂಬಿಸಿದ್ದೆವು. ಆದರೆ, ಆಗ ನಮ್ಮ ಸರ್ಕಾರ ಬರಲಿಲ್ಲ. ಸಿದ್ದರಾಮಯ್ಯ ಯಾವುದೇ ಜಾತಿಯ ನಾಯಕ ಅಲ್ಲ. ಅವರೊಬ್ಬ ಜನನಾಯಕ. ಅವರಿಗೆ ಅವರದ್ದೇ ಆದ ವರ್ಚಸ್ಸಿದೆ.  

ಹಾಗಾದರೆ ಕಾಂಗ್ರೆಸ್‌ನಲ್ಲಿನ‌ ದಲಿತ ಸಮುದಾಯದ ನಾಯಕರಿಗೆ ಸಿಎಂ ಆಗುವ ಅರ್ಹತೆ ಇಲ್ವಾ?
ನಮ್ಮಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ದಲಿತ ನಾಯಕರಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ, ದಲಿತ ಮುಖ್ಯಮಂತ್ರಿ ಮಾಡಬಹುದು. ಆದರೆ, ಈಗ ಆ ವಿಷಯ ಅಪ್ರಸ್ತುತ ಎನ್ನುವುದಷ್ಟೇ ನನ್ನ ವಾದ. ಕಾಂಗ್ರೆಸ್‌ನಲ್ಲಿ ಯಾವತ್ತೂ ದಲಿತ ನಾಯಕರನ್ನು ಕಡೆಗಣಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಎಚ್‌. ಸಿ. ಮಹದೇವಪ್ಪ, ಆಂಜನೇಯ ಅವರಿಗೆಲ್ಲ ಈಗ ಪಕ್ಷ ಒಳ್ಳೆಯ ಹುದ್ದೆಯನ್ನೇ ನೀಡಿದೆ. ಕಾಂಗ್ರೆಸ್‌ ಸರ್ಕಾರವೂ ದಲಿತ ಸಮುದಾಯದ ಪರ ಇದೆ. ದಲಿತರ ಅಭಿವೃದ್ಧಿಗೆ ವಿಶೇಷ ಕಾನೂನು ಜಾರಿಗೊಳಿಸಿದ್ದು ಐತಿಹಾಸಿಕ ನಿರ್ಧಾರ. 

ಆಯ್ತು, ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್‌ ಮುಂದುವರೆಸೋದಕ್ಕೆ ಇಷ್ಟೆಲ್ಲಾ ಸರ್ಕಸ್‌ ಬೇಕಿತ್ತಾ?
ಸರ್ಕಸ್‌ ಅಲ್ಲಾ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೀಗಾಗಿ ಎಲ್ಲ ಸಮುದಾಯದವರನ್ನು ಪರಿಗಣನೆಗೆ ತೆಗೆದುಕೊಂಡು ಹೈ ಕಮಾಂಡ್‌ ತೀರ್ಮಾನ ಮಾಡಿದೆ. ಪರಮೇಶ್ವರ್‌ 6 ವರ್ಷ ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯ ಜೊತೆಗೆ ಉತ್ತಮ ಹೊಂದಾಣಿಕೆ ಇದೆ. ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರನ್ನು ಬದಲಾಯಿಸಿ ಗೊಂದಲ ಸೃಷ್ಟಿಸಿಕೊಳ್ಳುವ ಬದಲು ಎಲ್ಲರ ಅಭಿಪ್ರಾಯ ಪಡೆದು ಅವರನ್ನೇ ಮುಂದುವರೆಸಿದ್ದಾರೆ. 

ಒಕ್ಕಲಿಗ ಹಾಗೂ ಲಿಂಗಾಯಿತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡೋ ಆಸೆ ತೋರಿಸಿದ್ದರಿಂದ ಆ ಸಮುದಾಯಕ್ಕೆ ಬೇಸರ ಆಗೊಲ್ವಾ?
ಕಾಂಗ್ರೆಸ್‌ನಲ್ಲಿ ಯಾವುದೇ ಸಮುದಾಯವನ್ನೂ ಕಡೆಗಣಿಸುವುದಿಲ್ಲ. ಎಸ್‌.ಆರ್‌. ಪಾಟೀಲ್‌ ಉತ್ತರ ಕರ್ನಾಟಕದಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದವರು, ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನಾನು ಬ್ರಾಹ್ಮಣ, ನನಗೂ ಕಾಂಗ್ರೆಸ್‌ನಲ್ಲಿ ಎಲ್ಲ ರೀತಿಯ ಅಧಿಕಾರ ನೀಡಿದ್ದಾರೆ. ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಬದ್ಧತೆ ಇರೋದ್ರಿಂದ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡುತ್ತೇವೆ. 

ಪಕ್ಷದಲ್ಲಿ ಜಾಸ್ತಿ ಹುದ್ದೆ ಗೊಂದಲಕ್ಕೆ ಕಾರಣ ಆಗಲ್ವಾ, ಇನ್ನೊಂದು ಕಾರ್ಯಾಧ್ಯಕ್ಷ ಹುದ್ದೆ ನೇಮಕದಿಂದ ನಿಮ್ಮ ಅಧಿಕಾರಕ್ಕೆ ಕತ್ತರಿ ಬೀಳಲಿಲ್ವಾ?
ಇಲ್ಲ, ಆ ರೀತಿ ಏನೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನದಿಂದ ಯಾವುದೇ ರೀತಿಯ ಬೇಸರ ಇಲ್ಲ. ಹೆಚ್ಚು ಹುದ್ದೆ ಇದ್ದರೆ ಹೆಚ್ಚು ಕೆಲಸ ಮಾಡಲು ಇನ್ನಷ್ಟು ಜನ ಸಿಕ್ಕಂತಾಗುತ್ತದೆ. ಪರಮೇಶ್ವರ್‌ ಅವರು ಅಧ್ಯಕ್ಷರಾಗಿ ಎಲ್ಲ ಕಡೆ ಹೋಗಲು ಆಗದಿದ್ದಾಗ, ಕಾರ್ಯಾಧ್ಯಕ್ಷರು ಹೋಗಬಹುದು. ಡಿ.ಕೆ. ಶಿವಕುಮಾರ್‌ ಅವರದು ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಲಸ. ಎಲ್ಲರಲ್ಲೂ ಒಗ್ಗಟ್ಟು ಇರುವುದರಿಂದ ಯಾವುದೇ ಗೊಂದಲ ಇಲ್ಲ.

ಈಗ ಸರಿ, ಮುಂದೆ ಕಾರ್ಯನಿರ್ವಹಣೆ, ಹೊಣೆಗಾರಿಕೆ ಸಂದರ್ಭದಲ್ಲಿ ಕಿರಿ ಕಿರಿ ಆಗಲ್ವಾ?
ಯಾವಾಗಲೂ ಆಗಲ್ಲ. ನಾವೇನು ಬಿಜೆಪಿಯವರ ಹಾಗೆ ಬೀದಿಯಲ್ಲಿ ಜಗಳ ಆಡುವುದಿಲ್ಲ. ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣ ಇದೆ. ಯಡಿಯೂರಪ್ಪ ಸಿಎಂ ಆಗುವ ನಂಬಿಕೆ ಕಳೆದುಕೊಂಡು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರ ಇಮೇಜ್‌ ಕಡಿಮೆಯಾಗಿರುವುದರಿಂದ ಸುಳ್ಳು ಹೇಳುತ್ತ ತಿರುಗಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಗೊಂದಲ ಇದೆ. ನಾವೆಲ್ಲ ಟೀಮ್‌ ವರ್ಕ್‌ಆಗಿ ಕೆಲಸ ಮಾಡ್ತೀವಿ.

ಜಾತ್ಯತೀತ ಹೆಸರಲ್ಲಿ ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡ್ತಿದೆ ಅನಿಸುತ್ತಿಲ್ವಾ ?
ಎಲ್ಲ ಜಾತಿಯವರಿಗೆ ಪ್ರಾತಿನಿಧ್ಯ ನೀಡುವುದು ಜಾತೀಯತೆ ಅಲ್ಲ. ಬಿಜೆಪಿಯವರು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರಿಗೆ ಅವಕಾಶ ಕೊಡುವುದು ಜಾತೀಯತೆ ಅಂತಾದರೆ, ಸಂವಿಧಾನವೇ ತಪ್ಪು ಎನ್ನುವಂತಾಗುತ್ತದೆ. ಬಿಜೆಪಿಯವರು ಮೀಸಲಾತಿಯನ್ನೇ ತೆಗೆದು ಹಾಕಿ ಅನ್ನುವ ವಾದ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಕೆಳ ಜಾತಿಯ ಯಾವ ನಾಯಕರನ್ನೂ ಬೆಳೆಯಲು ಬಿಡುವುದಿಲ್ಲ.  ಈಶ್ವರಪ್ಪ ಅವರನ್ನೇ ನೋಡಿ ಯಡಿಯೂರಪ್ಪ ಎಷ್ಟು ಹಿಂಸೆ ಕೊಡುತ್ತಿದ್ದಾರೆ. ಒಬ್ಬ ಹಿಂದುಳಿದ ವರ್ಗದ ನಾಯಕನನ್ನು ತುಳಿಯುತ್ತಿದ್ದಾರೆ. ಆದರೂ, ಯಾವ ಬಿಜೆಪಿ ನಾಯಕರೂ ಅವರ ರಕ್ಷಣೆಗೆ ಬರುತ್ತಿಲ್ಲ. ಈಶ್ವರಪ್ಪ ನಿಜವಾಗಿಯೂ ಸ್ವಾಭಿಮಾನಿ ಆಗಿದ್ದರೆ, ಅಲ್ಲಿಂದ ಹೊರ ಬರಬೇಕು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಅಂತ ಹೇಳಿದ್ದರು. ಈಗ ಬೀಗ ಹಾಕಿದ್ದಾರೆ. 

ಬಿಜೆಪಿ- ಜೆಡಿಎಸ್‌ನವರು ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ನೀವು?
ಚುನಾವಣೆಗೆ ಇನ್ನೂ ಒಂಬತ್ತು ತಿಂಗಳು ಸಮಯ ಇದೆ. ನಮ್ಮ ಸಚಿವರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಎಷ್ಟು ದಿನ ಪ್ರವಾಸ ಮಾಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪ‌ ಪ್ರವಾಸಕ್ಕೆ ಬಿಜೆಪಿ ನಾಯಕರೇ ಹೋಗುತ್ತಿಲ್ಲ. ಹೀಗಾಗಿ ಅವರು ಅಸ್ತಿತ್ವಕ್ಕಾಗಿ ಪ್ರವಾಸ ಕೈಗೊಂಡಿದ್ದಾರೆ. ದಲಿತರ ಮನೆಗೆ ಹೋಗುವ ನಾಟಕ ಮಾಡುತ್ತಿದ್ದಾರೆ. ಅವರ ಬೂಟಾಟಿಕೆ ಈಗ ಜನರ ಮುಂದೆ ನಡೆಯುವುದಿಲ್ಲ. ನಾವು ಅಧಿವೇಶನ ಮುಗಿದ ಮೇಲೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇವೆ. ನಾನಾಗಲೇ ಒಂದು ಸುತ್ತು ರಾಜ್ಯ ಪ್ರವಾಸ ಮಾಡಿದೆªàನೆ. 

2018ರ ಚುನಾವಣೆಯಲ್ಲಿ ನೇರ ಸ್ಪರ್ಧಿ ಯಾರು?
ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜೆಡಿಎಸ್‌ ನಮಗೆ ನೇರ ಸ್ಪರ್ಧಿ, ಉಳಿದೆಡೆ ಬಿಜೆಪಿ ಜೊತೆ ನಮ್ಮ ಸ್ಪರ್ಧೆ.

ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಈಗ್ಲೆà ಮಾನಸಿಕವಾಗಿ ಸಿದ್ಧರಾದಂತಿದೆ?
    ಚುನಾವಣೆ ಮುಂಚೆ ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಬಿಜೆಪಿ ಜೊತೆಗೆ ಹೋಗಲಾಗುವುದಿಲ್ಲ. ಜೆಡಿಎಸ್‌ನವರು ಜಾತ್ಯತೀತ ಸಿದ್ಧಾಂತಕ್ಕೆ ನೆಚ್ಚಿಕೊಂಡವರಲ್ಲ. ದೇವೇಗೌಡರಿಗೆ ಬಿಜೆಪಿ ಜೊತೆ ಹೋಗಲು ಮನಸ್ಸಿಲ್ಲ. ಆದ್ರೆ, ಕುಮಾರಸ್ವಾಮಿ ಯಾವಾಗ, ಏನು ತೀರ್ಮಾನ ತೆಗೆದುಕೊಳ್ತಾರೆ ಅನ್ನೋದು ಗೊತ್ತಿಲ್ಲ. ಹೊಂದಾಣಿಕೆ ಮಾಡಿ ಕೊಳ್ಳದೇ ಸ್ಪಷ್ಟ ಬಹುಮತ ಪಡೆಯಬೇಕೆನ್ನುವುದು ನಮ್ಮ ಗುರಿ.

ಡಿ.ಕೆ. ಶಿವಕುಮಾರ್‌ರಿಗೆ ಅಧ್ಯಕ್ಷ ಸ್ಥಾನ ತಪ್ಪಲು ಜೆಡಿಎಸ್‌ ಜೊತೆಗಿನ ಹೊಂದಾಣಿಕೆ ಕಾರಣವಂತೆ?
    ಅದೆಲ್ಲಾ ಸುಳ್ಳು, ನಮ್ಮ ಪಕ್ಷದಲ್ಲಿನ ಆಂತರಿಕ ತೀರ್ಮಾನಗಳನ್ನು ಕೈಗೊಳ್ಳಲು ಜೆಡಿಎಸ್‌ ನಾಯಕರ ಅಭಿಪ್ರಾಯ ಪಡೆಯಬೇಕಿಲ್ಲ. ನಮ್ಮ ಪಕ್ಷಕ್ಕೆ ಯಾವುದು ಅನುಕೂಲ ಅನ್ನೋದನ್ನ ನಮ್ಮ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಜೆಡಿಎಸ್‌ ನಾಯಕರ ಹಸ್ತಕ್ಷೇಪ ಸತ್ಯಕ್ಕೆ ದೂರವಾದದ್ದು. 

ಅವಧಿಗೂ ಮುಂಚೆಯೇ ಚುನಾವಣೆ ಬರುತ್ತಾ?
    ಯಾವುದೇ ಕಾರಣಕ್ಕೂ ಅವಧಿಗೂ ಮುಂಚೆ ಚುನಾವಣೆ ಬರುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ. ಏಪ್ರಿಲ್‌ನಲ್ಲಿಯೇ ಚುನಾವಣೆಗೆ ಹೋಗುತ್ತೇವೆ. ಚುನಾವಣಾ ಆಯೋಗ ಸಂದರ್ಭ ನೋಡಿಕೊಂಡು ಚುನಾವಣೆ ಘೋಷಣೆ ಮಾಡಬಹುದು. ನಾವು ಚುನಾವಣೆ ಎದುರಿಸಲು ಸಿದ್ಧರಾಗಿಯೇ ಇದ್ದೇವೆ. 

ಮುಂದಿನ ಚುನಾವಣೆಗೆ ಕಾಂಗ್ರೆಸ್‌ ಅಜೆಂಡಾ?
    ಐದು ವರ್ಷ ನಮ್ಮ ಸರ್ಕಾರ ಮಾಡಿರುವ ಸಾಧನೆಗಳೇ ನಮ್ಮ ಚುನಾವಣಾ ವಿಷಯ. ಬಿಜೆಪಿಯವರು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡೋದಕ್ಕೆ ಅವರಿಗೆ ಯಾವುದೇ ವಿಷಯ ಇಲ್ಲ. ನಮ್ಮ ಯಾವ ಸಚಿವರೂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಸರ್ಕಾರ ಯಾವುದೇ ಹಗರಣದಲ್ಲಿ ಸಿಲುಕಿಕೊಂಡಿಲ್ಲ. ಹೀಗಾಗಿ ಬಿಜೆಪಿಗೆ ಜನರ ಬಳಿ ಹೋಗಲು ಯಾವುದೇ ವಿಷಯ ಇಲ್ಲದಿರುವುದರಿಂದ ಪ್ರಧಾನಿ ಹೆಸರು ಹೇಳಿ, ಗೋಹತ್ಯೆಯಂತಹ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ.

ರಾಜ್ಯಕ್ಕೆ ಹೊಸ ಉಸ್ತುವಾರಿ ಬಂದ ಮೇಲೆ ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲಾ ಮಟ್ಟದ ನಾಯಕರಲ್ಲಿ ಉತ್ಸಾಹ ಬಂದಿದೆ. ವೇಣುಗೋಪಾಲ್‌ ಮತ್ತು ನಾಲ್ವರು ಕಾರ್ಯದರ್ಶಿಗಳು ದಕ್ಷಿಣ ಭಾರತದವರೇ ಆಗಿರುವುದರಿಂದ ಇಲ್ಲಿನ ವಾತಾವರಣ ಬೇಗ ಅರ್ಥವಾಗಿದೆ. ಎಲ್ಲರೊಂದಿಗೆ ಹೊಂದಿಕೊಂಡು ಕೆಲಸ ಮಾಡಲು ಅವರಿಗೂ ಅನುಕೂಲ ಆಗಿದೆ. ಹೈಕಮಾಂಡ್‌ ನಮಗೆ ಒಳ್ಳೆಯ ಟೀಮ್‌ ಕೊಟ್ಟಿದೆ. 

ಸಂದರ್ಶನ ಶಂಕರ ಪಾಗೋಜಿ

Trending videos

Back to Top