CONNECT WITH US  

ಗೋರ್ಖಾಲ್ಯಾಂಡ್‌: ದೀದಿಗೆ ಬಿಜೆಪಿ ಚೆಕ್‌!

ಬಂಗಾಲವನ್ನು ಕಡ್ಡಾಯ ಮಾಡಿ ಬಿಜೆಪಿಯ ಹಿಂದೂ ಧಾರ್ಮಿಕವಾದವನ್ನು ಸಾಂಸ್ಕೃತಿಕವಾಗಿ ಎದುರಿಸುವ ಯತ್ನ ಮಮತಾ ಬ್ಯಾನರ್ಜಿಯವರದ್ದು. ಬಂಗಾಳಿ ಭಾಷಿಕರು ಪ್ರಬಲವಾದರೆ, ಹಿಂದೂ, ಹಿಂದಿಯ 
ಜಾರಿಗೆ ಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಬಿಜೆಪಿಯ ಯತ್ನ ದೂರಾಗಬಹುದು ಎಂಬ ಲೆಕ್ಕಾಚಾರ ಅವರದ್ದು.

ಮಲಗಿದ್ದ ಹಾವನ್ನು ತುಳಿದು ಕಚ್ಚಿಸಿಕೊಂಡ ಪರಿಸ್ಥಿತಿ ಸದ್ಯ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು. ಕಳೆದೊಂದು ವಾರದಿಂದ ಪಶ್ಚಿಮ ಬಂಗಾಲದ ಉತ್ತರದಲ್ಲಿರುವ ಪ್ರಮುಖ ಪ್ರವಾಸೋದ್ಯಮ ತಾಣ ಡಾರ್ಜಿಲಿಂಗ್‌ ಹೊತ್ತಿ ಉರಿಯುತ್ತಿದೆ. ಈಗಾಗಲೇ ಪರಿಸ್ಥಿತಿ ವಿಷಮಕ್ಕೆ ಹೋಗಿದ್ದು, ಶಾಂತಿ ಸ್ಥಾಪನೆಗೆ ಹೆಣಗಾಡುವಂತಾಗಿದೆ. ಇದಕ್ಕೆ ನೆವವಾದದ್ದು, ಮಮತಾ ಬ್ಯಾನರ್ಜಿ ಅವರ ಸರ್ಕಾರ ಬಂಗಾಳಿ ಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸಿದ್ದು. ಇದರ ವಿರುದ್ಧ ಹುಟ್ಟಿಕೊಂಡ ಪ್ರತಿಭಟನೆ ಇದೀಗ ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯ ರಚನೆಗೆ ಆಗ್ರಹಿಸುವಷ್ಟಕ್ಕೆ ಮುಟ್ಟಿದೆ. ಸಾವು ನೋವುಗಳೂ ಸಂಭವಿಸಿದ್ದು, ಗೋರ್ಖಾಲ್ಯಾಂಡ್‌ ಪ್ರದೇಶ  ರಣರಂಗವಾಗಿದೆ. 

ಪ್ರತಿಭಟನೆಯ ಎಳೆ 
ಮೊನ್ನೆಯಷ್ಟೇ ಕೇರಳದಲ್ಲಿ ರಾಜ್ಯಾದ್ಯಂತ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ, ಕನ್ನಡ ಭಾಷಿಕ ಕಾಸರಗೋಡಿನಲ್ಲಿ ಪ್ರತಿಭಟನೆಯ ಕಿಚ್ಚು ಏಳಲು ಕಾರಣವಾದಂತೆಯೇ ಮಮತಾ ಸರ್ಕಾರವೂ, ನೇಪಾಳಿ ಭಾಷೆ ಪ್ರಾಬಲ್ಯದ ಪ್ರದೇಶದಲ್ಲಿ ಬಂಗಾಳಿಯನ್ನು ಹೇರ ಹೊರಟಿದ್ದೇ. ಸಮಸ್ಯೆ ಧುತ್ತನೆ ಬಿಗಡಾಯಿಸಲು ಕಾರಣವಾಯಿತು. ಆದರೆ ಡಾರ್ಜಿಲಿಂಗ್‌ನಲ್ಲಿ ಬಂಗಾಲ ಕಡ್ಡಾಯವಿಲ್ಲ ಎಂದು ಮಮತಾ ಸಂಪುಟ ಸಮಿತಿ ತೀರ್ಮಾನ ಕೈಗೊಂಡಿದ್ದರೂ, ಪ್ರತಿಭಟನೆ ಕಿಚ್ಚು ಹಚ್ಚಲು ಇದಿಷ್ಟೇ ಸಾಕಾಯ್ತು.  ಸದ್ಯ ಗೋರ್ಖಾಲ್ಯಾಂಡ್‌ನ‌ಲ್ಲಿ ಪ್ರಬಲವಾಗಿರುವ, ಭಾರತೀಯ ಜನತಾ ಪಕ್ಷದ ಮಿತ್ರ ಪಕ್ಷವೂ ಆಗಿರುವ  ಬಿಮಲ್‌ ಗುರಂಗ್‌ ಅವರ ನೇತೃತ್ವದ ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ) ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಒಂದು ಕಾರಣ ಗೋರ್ಖಾಲ್ಯಾಂಡ್‌ ಅನ್ನಿಸಿಕೊಳ್ಳುವ ಡಾರ್ಜಿಲಿಂಗ್‌, ಕಾಲಿಪಾಂಗ್‌, ಕುರ್ಸೆಯಾಂಗ್‌ ಇನ್ನಿತರ ಪರ್ವತಾಚ್ಛಾ ದಿತ ಜಿಲ್ಲೆಗಳಲ್ಲಿ ನೇಪಾಳಿ ಭಾಷೆಯೇ ಪ್ರಮುಖವಾಗಿರುವುದು. ಇವರ ಸಂಸ್ಕೃತಿ, ಮೂಲ ಎಲ್ಲವೂ ಪಶ್ಚಿಮ ಬಂಗಾಲದ ಸಂಸ್ಕೃತಿ, ಜನ ಜೀವನಕ್ಕಿಂತ ತೀರ ಭಿನ್ನ. ಗೋರ್ಖಾಲ್ಯಾಂಡ್‌ ಪ್ರತ್ಯೇಕ ರಾಜ್ಯದ ಬೇಡಿಕೆಯ ಜೊತೆಗೆ ನೇಪಾಳಿಯನ್ನು ಅಧಿಕೃತ ಭಾಷೆಯನ್ನಾಗಿಸಬೇಕು ಎಂಬ ಕೂಗುಗಳೆದ್ದಿದ್ದರಿಂದ 1961ರಲ್ಲಿ ಈ ಬೇಡಿಕೆಗೆ ಮಣಿದಿದ್ದ ಪಶ್ಚಿಮ ಬಂಗಾಲ ಸರ್ಕಾರ ಅದನ್ನು ಮಾನ್ಯ ಮಾಡಿತ್ತು. ಜೊತೆಗೆ 1992ರಲ್ಲಿ ಕೇಂದ್ರ ಸರ್ಕಾರವೂ ನೇಪಾಳಿ ಭಾಷೆಗೆ ಅಧಿಕೃತ ಭಾಷೆಯ ಸ್ಥಾನವನ್ನು ಕೊಟ್ಟಿತ್ತು.  

ಹಾಗೆ ನೋಡಿದರೆ, ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯ ರಚನೆಯ ಬೇಡಿಕೆ ಸುಮಾರು 110 ವರ್ಷದಷ್ಟು ಹಿಂದಿನದ್ದು. 1907ರಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗೆ ಮನವಿ ಸಲ್ಲಿಸಲಾಗಿತ್ತು. 1952ರಲ್ಲೂ ಆಗಿನ ಪ್ರಧಾನಿ ಪಂ.ಜವಾಹರಲಾಲ್‌ ನೆಹರೂ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಅದನ್ನು ಪುರಸ್ಕರಿಸಿರಲಿಲ್ಲ. ಗೋರ್ಖಾಲ್ಯಾಂಡ್‌ನ‌ ಜಿಲ್ಲಾ ಶಮಿಕ್‌ ಸಂಘ ರಾಜ್ಯ ಪುನರ್‌ಸಂಘಟನಾ ಸಮಿತಿ (ಎಸ್‌ಆರ್‌ಸಿ)ಗೆ ಈ ಬಗ್ಗೆ ಮನವಿ ಸಲ್ಲಿಸಿ, ಡಾರ್ಜಿಲಿಂಗ್‌, ಸಿಲಿಗುರಿ ಕೂಚ್‌ ಬೇಹಾರ್‌ ಒಳಗೊಂಡ ಪ್ರತ್ಯೇಕ ಗೋರ್ಖಾಲ್ಯಾಂಡ್‌ಗೆ ಆಗ್ರಹಿಸಿತ್ತು. ಆದರೆ ಇದು ಪೂರೈಸಿರಲಿಲ್ಲ. 1973ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದ್ದ ವೇಳೆ ಪ್ರತ್ಯೇಕ ಗೋರ್ಖಾ ಲ್ಯಾಂಡ್‌ ಮತ್ತೆ ಒತ್ತಾಯಗಳು ಕೇಳಿಬಂದಿದ್ದರೂ, ಆ ದನಿ ತೂಕ ಕಳೆದುಕೊಂಡು, ಬೇಡಿಕೆ ಈಡೇರಿರಲಿಲ್ಲ. 1981ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಗೋರ್ಖಾ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ತೀವ್ರ ಪ್ರತಿಭಟನೆ ಹಮ್ಮಿಕೊಂಡಿತ್ತು. ರಾಜೀವ್‌ ಗಾಂಧಿ ಅವರು ಪ್ರಧಾನಿಯಾ ಗಿದ್ದ ವೇಳೆ 1986, 1988ರ ಅವಧಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ವೇಳೆ 1200 ಮಂದಿ ಮೃತಪಟಿದ್ದರು. 1990ರಲ್ಲೂ ಪ್ರತಿಭಟನೆ ಗಳು ಮುಂದುವರಿದಿದ್ದವು. 2011ರಲ್ಲಿ ಗೋರ್ಖಾಲ್ಯಾಂಡ್‌ ಟೆರಿಟೋರಿಯಲ್‌ ಅಡ್ಮಿನಿಸ್ಟ್ರೇಷನ್‌ (ಜಿಟಿಎ) ಸ್ಥಾಪನೆ ಮಾಡ ಲಾಗಿದ್ದು, ಕೇಂದ್ರ-ಪ.ಬಂಗಾಲ ಸರ್ಕಾರ ಸಂವಿಧಾನದ 6ನೇ ಪರಿಚ್ಛೇದ ಅನ್ವಯ ಅರೆ ಸ್ವಾಯತ್ತ ಸ್ಥಾನಮಾನ ನೀಡಿತ್ತು. ಈ ಸಮಿತಿಗೆ ಜಿಜೆಎಂನ ಮುಖ್ಯಸ್ಥ ಬಿಮಲ್‌ ಗುರುಂಗ್‌ರನ್ನೇ ನೇಮಿಸಿತ್ತು. ಬಳಿಕ ಪ್ರತಿಭಟನೆ ತಗ್ಗಿತ್ತು. 2013ರಲ್ಲಿ ತೆಲಂಗಾಣ ರಾಜ್ಯ ಸ್ಥಾಪನೆಯಾದಾಗಲೂ ಹೆಚ್ಚಿನ ಕೂಗು ಕೇಳಿರಲಿಲ್ಲ. ಆದರೆ ಬಳಿಕ ಬಿಮಲ್‌ ಅವರು ಬಂಗಾಲ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿ ಸಮಿತಿಯಿಂದ ಹೊರನಡೆದಿದ್ದರು. 

ಜಿಜೆಎಂ ಅಸಮಾಧಾನ
ಗೋರ್ಖಾಲ್ಯಾಂಡ್‌ ಪ್ರತಿಭಟನೆ ಏಕಾಏಕಿ ಭುಗಿಲೇಳಲು ಬಂಗಾಳಿ ಭಾಷೆ ಕಡ್ಡಾಯದ ನೆಪವಿದ್ದರೂ, ಅದರ ಹಿಂದಿನ ಸತ್ಯ ಇನ್ನೊಂದಿದೆ. ಕಳೆದ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಾರ್ಜಿಲಿಂಗ್‌ನಲ್ಲಿ ತೃಣಮೂಲ ಕಾಂಗ್ರೆಸ್‌ 9 ಸೀಟುಗಳಲ್ಲಿ 6 ಸೀಟುಗಳನ್ನು ಗೆದ್ದು ಮೀಸೆ ತಿರುವಿತ್ತು. ಇದು ಗೋರ್ಖಾಲ್ಯಾಂಡ್‌ನ‌ಲ್ಲಿ ಪ್ರಬಲವಾಗಿರುವ ಜಿಜೆಎಂಗೆ ನುಂಗಲಾರದ ತುತ್ತಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಜಿಟಿಎ ಚುನಾವಣೆಯೂ ನಡೆಯಲಿದ್ದು, ಅದರಲ್ಲೂ ತೃಣಮೂಲ ಪ್ರಭಾವ ಹೆಚ್ಚುವ ಸಂಗತಿ ಕಾಣಿಸತೊಡಗಿತ್ತು. ಈ ಹಿನ್ನೆಲೆಯಲ್ಲೂ ಜಿಜೆಎಂ ಪ್ರತಿಭಟನೆ ಒಂದು ಬದಿಯಲ್ಲಿ ತೀವ್ರಗೊಳ್ಳಲು ಪರೋಕ್ಷ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ಐಡೆಂಟಿಯ ಗುದ್ದಾಟ
ಹಾಗೆ ನೋಡಿದರೆ ಇದೀಗ ಗೋರ್ಖಾಲ್ಯಾಂಡ್‌ ಪ್ರತ್ಯೇಕ ರಾಜ್ಯದ ನಡುವೆಯೂ ಇರುವುದು ಬಿಜೆಪಿ-ತೃಣಮೂಲ ಕಾಂಗ್ರೆಸ್‌ನ ಐಡೆಂಟಿಟಿ ಗುದ್ದಾಟ. ಪಶ್ಚಿಮ ಬಂಗಾಲದಲ್ಲಿ ಅಧಿಪತ್ಯ ಸ್ಥಾಪಿಸಲು ನಾನಾ ವಿಧದಲ್ಲಿ ಯತ್ನಿಸುತ್ತಿರುವ ಬಿಜೆಪಿ ಸ್ಥಾನಗಳಿಸಲು ಹವಣಿಸುತ್ತಿದೆ. ಹಿಂದೂ ವೋಟ್‌ ಬ್ಯಾಂಕ್‌ ಗಟ್ಟಿಮಾಡಲು ಹೊರಟ ಬಿಜೆಪಿ ಒಂದು ಹಂತದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ನೇರ ಬೆದರಿಕೆಯಾಗಿದೆ. ಇದನ್ನು ಪರೋಕ್ಷವಾಗಿ ಹಣಿಯಲು ಮಮತಾ ಹೊರಟಿದ್ದು, ಬಂಗಾಲವನ್ನು ಕಡ್ಡಾಯ ಮಾಡಿ ಈ ಮೂಲಕ ಧಾರ್ಮಿಕವಾದವನ್ನು ಸಾಂಸ್ಕೃತಿಕವಾಗಿ ಎದುರಿಸುವ ಯತ್ನ. ಬಂಗಾಳಿ ಭಾಷಿಕರು ಪ್ರಬಲವಾದರೆ, ಹಿಂದೂ, ಹಿಂದಿಯ ಜಾರಿಗೆ ಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಬಿಜೆಪಿಯ ಯತ್ನ ದೂರಾಗಬಹುದು ಎಂಬ ಲೆಕ್ಕಾಚಾರ ಅವರದ್ದು. ನಿಧಾನವಾಗಿ ಆದರೆ ನಿಂತ ಕಡೆಗಳಲ್ಲಿ ಆಳಕ್ಕೆ ಬೇರುಗಳನ್ನು ಚಾಚುತ್ತಿರುವ ಬಿಜೆಪಿಯನ್ನು ಹಣಿಯಲು ಮಮತಾ ಬಂಗಾಲ ಭಾಷೆ ಕಡ್ಡಾಯದ ಉಪಾಯದ ಬಾಣ ಪ್ರಯೋಗಿಸಿದ್ದಂತೂ ಹೌದು. ಆದರೆ ಮಮತಾ ಅವರ ಬಂಗಾಲ ಕಡ್ಡಾಯದ ನಡೆ ಗೋರ್ಖಾಲ್ಯಾಂಡ್‌ನ‌ಲ್ಲಿ ಮಾತ್ರವಲ್ಲ ಬಂಗಾಲದ ಹಲವೆಡೆ ಅಸಮಾಧಾನಕ್ಕೆ ಕಾರಣವಾಗಿದೆ.

ಇಕ್ಕಟ್ಟಲ್ಲಿ ಬಿಜೆಪಿ
ಪಶ್ಚಿಮ ಬಂಗಾಲದಲ್ಲಿ ಹಾಗೆ ನೋಡಿದರೆ ಬಿಜೆಪಿ ಪ್ರಾಬಲ್ಯ ಅಷ್ಟಕಷ್ಟೇ. ಗೋರ್ಖಾಲ್ಯಾಂಡ್‌ನ‌ಲ್ಲಿ 2014ರ ಲೋಕಸಭಾ ಚುನಾವಣೆ ವೇಳೆ ಜಿಜೆಎಂ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಗೋರ್ಖಾಲ್ಯಾಂಡ್‌ನ‌ಲ್ಲಿ ಒಂದು ಸೀಟು ಬರುವ ಆಸೆಯನ್ನು ಕೈಗೂಡಿಸಿಕೊಂಡಿತು. ಜೊತೆಗೆ ಅಂದು ಚುನಾವಣಾ ಪ್ರಣಾಳಿಕೆಯಲ್ಲೂ ಪ್ರತ್ಯೇಕ ಗೋರ್ಖಾಲ್ಯಾಂಡ್‌ ಸ್ಥಾಪನೆಗೆ ಬೆಂಬಲಿಸುವುದಾಗಿ ಹೇಳಿತ್ತು. ಪಶ್ಚಿಮ ಬಂಗಾಲದಲ್ಲಿ ಕಮಲ ಅರಳಲು ಇದನ್ನೇ ಮೆಟ್ಟಿಲಾಗಿಸುವ ಪ್ಲಾನ್‌ ಬಿಜೆಪಿಯದ್ದಾಗಿತ್ತು. ಇದೀಗ ಪ್ರತ್ಯೇಕ ರಾಜ್ಯ ರಚನೆ ಕೂಗು ಪ್ರಬಲವಾಗುತ್ತಿದ್ದಂತೆಯೇ, ಬಿಮಲ್‌ ಅವರು ಬಿಜೆಪಿಯವರೇ ಎಲ್ಲಿದೆ ನಿಮ್ಮ ಮಾತು ಎಂದು ಪ್ರಶ್ನಿಸತೊಡಗಿದ್ದಾರೆ. ಇತ್ತೀಚೆಗೆ ಅವರು ಈ ಸಂಬಂಧ ಪಕ್ಷದ ಸಮಿತಿಯೊಂದನ್ನೂ ಬಂಗಾಲ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌ ಅವರ ಬಳಿಗೆ ಕಳಿಸಿಕೊಟ್ಟಿದ್ದರು. ಡಾರ್ಜಿಲಿಂಗ್‌ನಿಂದ ಬಿಜೆಪಿ ಸಂಸದರಾಗಿ ಸದ್ಯ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ರುವ ಎಸ್‌ಎಸ್‌ ಅಹ್ಲುವಾಲಿಯಾ ಅವರೂ ಈ ಬಗ್ಗೆ ಗೃಹಸಚಿವ ರಾಜನಾಥ್‌ ಸಿಂಗ್‌ಗೆ ಪತ್ರ ಬರೆದಿದ್ದಾರೆ. ಆದರೆ ಬಿಜೆಪಿ ಈ ಬಗ್ಗೆ ಸದ್ಯ ಜಾಣ ಮೌನ ಅನುಸರಿಸಲು ಮುಂದಾಗಿದೆ. ಕಾರಣ, ಗೋರ್ಖಾಲ್ಯಾಂಡ್‌ ಬೇಡಿಕೆ ಈಡೇರಿಸಿದರೆ, ದೇಶದ ಇನ್ನಿತರ ಸಣ್ಣ ಪುಟ್ಟ ಪ್ರದೇಶಗಳ ಬೇಡಿಕೆಯನ್ನೂ ಈಡೇರಿಸಬೇಕಾಗಬಹುದು. ಜೊತೆಗೆ ಪಶ್ಚಿಮ ಬಂಗಾಲದಲ್ಲಿ ಅಧಿಪತ್ಯ ಸ್ಥಾಪನೆಗೆ ಹೊರಟು ಗೋರ್ಖಾಲ್ಯಾಂಡ್‌ ಪೂರ್ತಿಯಾಗಿ ದಕ್ಕುವುದೂ ಕಷ್ಟ ಎಂಬ ಪರಿಸ್ಥಿತಿ ಬಿಜೆಪಿಯದ್ದು. 

ಕೂಸು ಬಡವಾಯ್ತು... 
ಇದೀಗ ಪ್ರತ್ಯೇಕ ಗೋರ್ಖಾಲ್ಯಾಂಡ್‌ ರಾಜ್ಯದ ಹೋರಾಟ ಹಿಂಸಾತ್ಮಕವಾಗಿ ನಡೆಯುತ್ತಿದ್ದರೂ, ಪರೋಕ್ಷ ಯುದ್ಧ ನಡೆ ಯುತ್ತಿರುವುದು ಕೇಂದ್ರ-ಪ.ಬಂಗಾಲ ಸರ್ಕಾರದ ಮಧ್ಯೆ. ಈವರೆಗೆ ಘಟನೆ ಬಗ್ಗೆ ವರದಿ ಕೊಟ್ಟಿಲ್ಲ. ಅದನ್ನು ಕೊಡದೇ ಹೆಚ್ಚಿನ ಕೇಂದ್ರೀಯ ಪಡೆಗಳನ್ನು ಹಿಂಸಾಚಾರ ನಿಯಂತ್ರಣಕ್ಕೆ ಕಳಿಸಿಕೊಡಲ್ಲ ಎಂದು ಕೇಂದ್ರ ಹೇಳುತ್ತಿದೆ. ಪರೋಕ್ಷವಾಗಿ ಇದು ಜಿಜೆಎಂ ಹೋರಾಟದ ಬೆಂಕಿಗೆ ತುಪ್ಪ ಸುರಿಯುವ ಯತ್ನ. ಇದಕ್ಕೆ ತಕ್ಕಂತೆ ಮಮತಾ ಅವರೂ ಇದರಲ್ಲಿ ಹೊರ ದೇಶದ ಕೈವಾಡವಿದೆ,  ಮೊನ್ನೆಯಷ್ಟೇ ಬಿಮಲ್‌ ಅವರ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದಾಗ ಸಿಕ್ಕ ಶಸ್ತ್ರಾಸ್ತ್ರಗಳೇ ಸಾಕ್ಷಿ ಎಂದು ಹೇಳತೊಡಗಿದ್ದಾರೆ. ನೇರವಾಗಿ ಅವರು ಜಿಜೆಎಂ ಅನ್ನು ದೂರಲಿಲ್ಲವಾದರೂ, ಇದರ ಹಿಂದೆ ಮಹತ್ತರ ಸಂಚಿದೆ ಎಂದು ಹೇಳತೊಡಗಿದ್ದಾರೆ. ಪರೋಕ್ಷವಾಗಿ ನೀಮೇಲಾ ನಾಮೇಲಾ ಎನ್ನುವ ಕೇಂದ್ರ-
ರಾಜ್ಯ ಸರ್ಕಾರದ ಈ ಪ್ರವೃತ್ತಿ ಡಾರ್ಜಿಲಿಂಗ್‌ನಂತಹ ಹೆಸರಾಂತ ಪ್ರವಾಸಿ ಸ್ಥಳಕ್ಕೆ ಕಪ್ಪುಚುಕ್ಕೆಯಾಗುತ್ತಿದೆ. ಕಳೆದೊಂದು ವಾರದಿಂದ ಉರಿಯುತ್ತಿರುವ ಬೆಂಕಿ ಶಮನಕ್ಕೆ ಇಬ್ಬರೂ ಯತ್ನಿಸುವಂತೆ ಕಾಣಿಸುತ್ತಿಲ್ಲ.

ಈಶ

Trending videos

Back to Top