CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಮ್ಮ ನಗರಗಳೆಂದರೆ ಒಂದು ಸುದೀರ್ಘ‌ ಚರ್ಚೆಯ ಹಾಗೆ

ಹಿಂದಿ ಮತ್ತು ಪಂಜಾಬಿ ಭಾಷೆಯ ಕವಯತ್ರಿ, ಸಾಹಿತಿ ಅಮೃತಾ ಪ್ರೀತಂ ಅವರ ನಗರದ ಕುರಿತ ಒಂದು ಕವಿತೆ ಬಹಳ ಅರ್ಥಪೂರ್ಣವಾಗಿದೆ. ನಗರದ ಪರಿಕಲ್ಪನೆ ಹೇಗೆ ಎನ್ನುವುದನ್ನು ಆ ಕವಿತೆ ವಿವರಿಸುತ್ತಾ ಹೋಗುವುದನ್ನು ನೋಡಬೇಕು. ನಿಜ ಆ ಕವಿತೆಯಲ್ಲಿ ಬರುವ ಹಾಗೆಯೇ ನಮ್ಮ ನಗರಗಳು.
ಕವಿತೆಯ ಆರಂಭವಿದು-
'ನನ್ನ ನಗರ ಒಂದು ಸುದೀರ್ಘ‌ ಚರ್ಚೆಯ ಹಾಗೆ, 
ಅದರ ರಸ್ತೆಗಳು ಮೊಂಡು ವಾದಗಳಂತೆ
ಕುರುಡು ಕಾಲುದಾರಿಗಳಿಗೆ ಕರೆದೊಯ್ಯುವಂಥದ್ದು
ಅದರ ಬೀದಿಗಳ್ಳೋ ಅಸಂಖ್ಯಾತ ದಿಕ್ಕುಗಳಿಂದ 
ಒಂದೇ ಸಮನೆ ನುಗ್ಗಲು ಹವಣಿಸುತ್ತಿವೆ...'
ಹೀಗೆ ಕವಿತೆ ಸಾಗುತ್ತದೆ. 
ನಗರವೆಂದರೆ ಅಂತ್ಯವಿಲ್ಲದ ವೃಥಾ ಚರ್ಚೆಯಂತೆ ಕಾಣುತ್ತದೆ. ಯಾಕೆಂದರೆ ಕೊನೆಯೇ ಇಲ್ಲದ ರಸ್ತೆಗಳಲ್ಲಿ ಎಷ್ಟು ದೂರ ನಡೆದರೂ ನಗರ ಮುಗಿಯುವುದಿಲ್ಲ. ಅದು ತೆರೆದುಕೊಂಡಂತೆ ನಾವೂ ಸಾಗುತ್ತಾ ಇರಬೇಕು. 

ಈಗ ಮತ್ತೆ ನಗರಗಳ ಅಭಿವೃದ್ಧಿ ಕುರಿತಾದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕೇಂದ್ರ ನಗರಾಭಿವೃದ್ಧಿ ಸಚಿವರಾದ ಎಂ. ವೆಂಕಯ್ಯ ನಾಯ್ಡು ಅವರೂ, ನಗರಗಳ ಅಭಿವೃದ್ಧಿ, ನಗರಗಳತ್ತ ಹೆಚ್ಚುತ್ತಿರುವ ವಲಸೆ ಎಲ್ಲವನ್ನೂ ಇತ್ತೀಚೆಗಷ್ಟೇ ಆಂಗ್ಲ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಪ್ರಸ್ತಾಪಿಸಿದ್ದರು. ಅಲ್ಲಿನ ಕೆಲ ಅಂಶಗಳು ನಮಗೆ ಬರೀ ನಗರದ ಬೆಳವಣಿಗೆಯ ಮಹತ್ವವನ್ನು ತೋರಿಸುವುದಿಲ್ಲ; ಬದಲಾಗಿ ನಾವಿರುವ ವಾಸ್ತವದ ಭೀಕರತೆಯನ್ನು ಹೇಳುತ್ತವೆ. 
ದಿನೇ ದಿನೇ ವಿಶ್ವಾದ್ಯಂತ ನಗರಗಳತ್ತ ವಲಸೆ ಹೋಗುವವರು ಹೆಚ್ಚಾಗಿದ್ದಾರೆ. ಅದರಲ್ಲೂ ಹಳ್ಳಿ, ಸಣ್ಣ ಪಟ್ಟಣಗಳಿಂದ ನಗರದತ್ತ ಹೊರಡುವವರ ಸಂಖ್ಯೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಎರಡು ವರ್ಷಗಳ ಹಿಂದೆ ಹೈದರಾಬಾದ್‌ ನಲ್ಲಿ ಒಂಬತ್ತನೇ ಮಹಾನಗರಗಳ ವಿಶ್ವ ಸಮ್ಮೇಳನ (ಮೆಟ್ರೊಪೊಲಿಸ್‌ ವರ್ಲ್ಡ್ ಕಾಂಗ್ರೆಸ್‌) ದಲ್ಲಿಯೂ ಸಚಿವರು ಪ್ರಸ್ತಾಪಿಸಿದ ಅಂಶವೂ ಇದನ್ನೇ ಹೇಳುತ್ತಿತ್ತು. 2030ರ ವೇಳೆಗೆ ವಿಶ್ವದ ಶೇ. 66ರಷ್ಟು ಜನಸಂಖ್ಯೆ ನಗರಗಳಲ್ಲಿರುತ್ತದೆ. ಪ್ರಸ್ತುತ ಆ ಪ್ರಮಾಣ ಶೇ. 54-55ರ ಹತ್ತಿರವಿದೆ. ಉತ್ತರ ಅಮೆರಿಕದ ಪ್ರಾಂತ್ಯದಲ್ಲಿ ಶೇ. 82ರಷ್ಟು ಜನರು ಈಗಾಗಲೇ ನಗರಕ್ಕೆ ಬಂದಾಗಿದೆ. ಇದೇ ಪ್ರಮಾಣ ಯುರೋಪ್‌ ಖಂಡದಲ್ಲಿ ಶೇ. 73ರಷ್ಟಿದೆ. ಆಫ್ರಿಕಾ ಮತ್ತು ಏಷ್ಯಾದಲ್ಲಿ ಅನುಕ್ರಮವಾಗಿ ಈ ಪ್ರಮಾಣ ಶೇ. 40 ಹಾಗೂ ಶೇ. 48ರಷ್ಟಿದೆ. ಇದೇ ಕೋಲನ್ನು ಭಾರತದ ಹತ್ತಿರ ತಂದು ಹಿಡಿದರೆ, ಶೇ. 32ರಷ್ಟು ಮಂದಿ ಈಗಾಗಲೇ ನಗರದಲ್ಲಿ ಕುಳಿತುಕೊಂಡಿದ್ದಾರೆ. ಮುಂದಿನ ದಶಕದಲ್ಲಿ ಈ ಪ್ರಮಾಣ ಶೇ.50ಕ್ಕೆ ಮುಟ್ಟುವ ಎಲ್ಲ ಲಕ್ಷಣಗಳೂ ಇವೆ. ಈ ಕ್ಷಿಪ್ರಗತಿ ನಗರಗಳಲ್ಲಿ ಮೂಲ ಸೌಲಭ್ಯವನ್ನು ಕಲ್ಪಿಸುವತ್ತ ದೊಡ್ಡ ಸವಾಲುಗಳನ್ನೇ ಸೃಷ್ಟಿಸಿವೆ. 

ಇದು ನಮ್ಮ ವಾಸ್ತವವೂ ಹೌದು. ಅದರಂತೆ ಲೆಕ್ಕ ಹಾಕಿದರೆ, ನಾವೀಗ 22 ಬೆಂಗಳೂರುಗಳನ್ನು ನಿರ್ಮಿಸಬೇಕಂತೆ. ಅಷ್ಟೇ ಆದರೆ ಸಾಲದು. ಪರಿಣಿತರು ಹೇಳುವಂತೆ, ಆ 22 ಬೆಂಗಳೂರುಗಳ ಜತೆಗೆ, 4,041 ನಗರಗಳನ್ನು ಪುನರೂಪಿಸಬೇಕು. ಅಂದರೆ ತಹಬದಿಗೆ ತರಬೇಕು. ಅಲ್ಲೆಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಅವುಗಳನ್ನು ಬದುಕಲು ಯೋಗ್ಯವಾಗುವಂಥ ಸ್ಥಳಗಳನ್ನಾಗಿ ರೂಪಿಸಬೇಕು. ಇದೆಲ್ಲ ಸಾಧ್ಯವೇ? ಎಂದು ಅನಿಸುವುದು ಸರ್ವೇ ಸಾಮಾನ್ಯ. 

ಕುಸಿಯದ ನಂಬಿಕೆ
ಆಗಿರುವ ಸಮಸ್ಯೆಯೂ ಇದೇ. ಇಷ್ಟೆಲ್ಲ ಕಷ್ಟ -ಸಂಕಷ್ಟಗಳಿದ್ದರೂ, ಅವ್ಯವಸ್ಥೆಯನ್ನು ಸರಿಪಡಿಸಿ ಸುವ್ಯವಸ್ಥೆಯನ್ನು ಸೃಷ್ಟಿಸುವ ಸವಾಲುಗಳಿದ್ದರೂ ನಗರದ ಮೇಲಿನ ಮೋಹ ಸೋಲನ್ನು ಒಪ್ಪಿಕೊಳ್ಳಲು ಬಿಡುತ್ತಿಲ್ಲ. ಹಾಗಾಗಿ ವಿವಿಧ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಸ್ಮಾರ್ಟ್‌ ಸಿಟಿಯಂಥ ಯೋಜನೆ ಜಾರಿಗೆ ಬರುತ್ತದೆ, ಜೆಎನ್‌ಎನ್‌ಯುಆರ್‌ಎಂ ಯೋಜನೆ ರೂಪುಗೊಳ್ಳುತ್ತದೆ, ಅಮೃತ್‌ ಚಿಂತನೆ ಅನುಷ್ಠಾನಕ್ಕೆ ಬರುತ್ತದೆ, ಪ್ರಧಾನಿ ಆವಾಸ್‌ ಯೋಜನೆ ಬರುತ್ತದೆ. ಆದರೂ ಖರ್ಚು ಮುಗಿದಿಲ್ಲ, ನಗರಗಳು ನಿರ್ಮಾಣಗೊಂಡಿಲ್ಲ, ಯೋಜನೆ ಮುಗಿದಿಲ್ಲ-ಇದೇ ಸದ್ಯದ ಸ್ಥಿತಿ. ನಗರಗಳತ್ತ ಹೆಚ್ಚುತ್ತಿರುವ ವಲಸೆಗೂ, ನಾವು ಲಕ್ಷಾಂತರ ಕೋಟಿ ಖರ್ಚು ಮಾಡಿ ಸೃಷ್ಟಿಸುತ್ತಿರುವ ಮೂಲ ಸೌಕರ್ಯಗಳಿಗೂ ಒಂದಕ್ಕೊಂದು ತಾಳೆ ಹೋಗುತ್ತಿಲ್ಲ. 

ಕೇಂದ್ರ ಸರಕಾರ ನೀಡುವ ಅಂಕಿಅಂಶದ ಪ್ರಕಾರ, 2030-31ರವರೆಗೂ ಪ್ರತಿ ವರ್ಷ 2 ಲಕ್ಷ ಕೋಟಿ ರೂ.ಗಳನ್ನು ಈ ನಗರಗಳ ಅಭಿವೃದ್ಧಿಗೆ ಹೂಡಿಕೆ ಮಾಡಿದರೂ ಸಮಸ್ಯೆ ಬಗೆಹರಿಯುವ ಲಕ್ಷಣವಿಲ್ಲ. ಯಾಕೆಂದರೆ, ನಾವು ಒಂದು ಫ್ಲೈಓವರ್‌ನ್ನು ಐದು ವರ್ಷಗಳ ಲೆಕ್ಕಾಚಾರವಿಟ್ಟುಕೊಂಡು ಯೋಜಿಸುತ್ತೇವೆ. ಅದು ಸರಕಾರಿ ವ್ಯವಸ್ಥೆಯಲ್ಲಿ ಅನುಮೋದನೆ ಪಡೆದು, ಗುತ್ತಿಗೆದಾರರು ನಿರ್ಮಿಸಿ ಲೋಕಾರ್ಪಣೆ ಮಾಡುವಾಗ ನಾಲ್ಕು ವರ್ಷ ಕಳೆದಿರುತ್ತದೆ. ಅದಾದ ಒಂದು ವರ್ಷದಲ್ಲಿ ಆ ಫ್ಲೈ ಓವರ್‌ನ ಭವಿಷ್ಯ ಮುಗಿದಿರುತ್ತದೆ. ಯಾಕೆಂದರೆ ಅದರ ಹತ್ತು ಪಟ್ಟು ಹೆಚ್ಚಿಗೆ ವಾಹನಗಳಿಗೆ ನಾವು ಅನುಮತಿ ಕೊಟ್ಟಿರುತ್ತೇವೆ. ಆ ಫ್ಲೈಓವರ್‌ ಮೇಲೆ ಮತ್ತೆ ವಾಹನ ದಟ್ಟಣೆ ಹೆಚ್ಚಿ ಟ್ರಾಫಿಕ್‌ ಜಾಮ್‌ನಲ್ಲಿ ಮುಳುಗುತ್ತೇವೆ. ಆದ ಕಾರಣವೇ ಇದು ಬಕಾಸುರನ ಹೊಟ್ಟೆಗೆ ಮಜ್ಜಿಗೆ ಹಾಕಿದಂತೆಯೂ ಅಲ್ಲ.
ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನಗರಾಭಿವೃದ್ಧಿಗೆ ವಿವಿಧ ಯೋಜನೆಗಳಡಿ (ಸ್ಮಾರ್ಟ್‌ ಸಿಟಿ ಯೋಜನೆ, ಅಟಲ್‌ ಮಿಶನ್‌, ಸ್ವತ್ಛ ಭಾರತ್‌ ಮಿಷನ್‌) 4 ಲಕ್ಷ ಕೋಟಿ ರೂ. ಗಳನ್ನು ಹೂಡಿಕೆ ಮಾಡಿದೆಯಂತೆ. ಈ ಹೂಡಿಕೆಯ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇದೊಂದೇ ಸರಕಾರವಲ್ಲ, ಹಿಂದಿನ ಸರಕಾರಗಳೂ ಹೀಗೆಯೇ ಹಣವನ್ನು ಸುರಿಯುತ್ತಲೇ ಬಂದಿವೆ. ಮುಂದೆ ಬರುವ ಸರಕಾರಗಳು ಎಲ್ಲ ಹಣವನ್ನೂ ನಗರಗಳ ಅಭಿವೃದ್ಧಿಗೆ ಸುರಿಯಬಹುದು. ಆದರೆ ಈ ಹಣ ಸುರಿಯುವ ಬಾಬತ್ತಿಗೆ ಕೊನೆ ಇಲ್ಲ. ಇತ್ತ ನಮ್ಮ ನಂಬಿಕೆ ಕೊನೆಗೊಳ್ಳುವುದಿಲ್ಲ, ಅತ್ತ ನಗರದತ್ತ ವಲಸೆ ನಿಲ್ಲುವುದಿಲ್ಲ. ಹಾಗಾದರೆ ಬದುಕುವ ನಗರಗಳನ್ನು ಸೃಷ್ಟಿಸುವುದು ನಿಜಕ್ಕೂ ಎಷ್ಟೊಂದು ದೊಡ್ಡ ಸವಾಲು?

ಇದರ ಮಧ್ಯೆ ಸುಸ್ಥಿರತೆಯ ಮಾತು
ಇದೂ ಒಮ್ಮೊಮ್ಮೆ ಹಾಸ್ಯಾಸ್ಪದವೆನ್ನಿಸುವುದುಂಟು. ಬೆಂಗಳೂರಿನಿಂದ ಆರಂಭಿಸಿ ದೇಶದ ಯಾವುದೇ ನಗರದಲ್ಲೂ ಇನ್ನೂ ಶೇ. ನೂರಕ್ಕೆ ನೂರರಷ್ಟು ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆ ಮಾತು ದೂರವಿರಲಿ. ಎಷ್ಟೋ ನಗರಗಳಲ್ಲಿ ಕನಿಷ್ಟ ಸೌಲಭ್ಯಗಳಿಗೆ ಇನ್ನೂ ಆಗ್ರಹ ಕೇಳಿಬರುತ್ತಲೇ ಇದೆ. ಇದರ ಮಧ್ಯೆ ಸುಸ್ಥಿರತೆಯ ಮಾತು ಆರಂಭವಾಗಿದೆ. ಈಗಿರುವ ನಗರಗಳನ್ನು ಸುಸ್ಥಿರಗೊಳಿಸುತ್ತೀರೋ ಅಥವಾ ಇನ್ನು ಸೃಷ್ಟಿಸುವ ನಗರಗಳು ಸುಸ್ಥಿರತೆಯ ಮೂಲಸೂತ್ರದಡಿ ನಿರ್ಮಾಣಗೊಳ್ಳುತ್ತವೋ ಎಂಬುದರ ಬಗ್ಗೆ ಆಳುವವರಿಗೂ ಸ್ಪಷ್ಟವಿಲ್ಲ. ಜಾಗತಿಕ ಹವಾಮಾನ ಬದಲಾವಣೆಯಂಥ ಬೆಳವಣಿಗೆಗಳಿಗೆ ಒತ್ತುಕೊಟ್ಟು ನಮ್ಮ ನಗರಗಳನ್ನು ರೂಪಿಸಿಕೊಳ್ಳುವ ವಿವೇಕವನ್ನು ಪ್ರದರ್ಶಿಸದಿದ್ದರೆ ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳುವುದು ಸುಳ್ಳಲ್ಲ. ನಮ್ಮ ನಗರಗಳನ್ನು ಕ್ರಮಬದ್ಧಗೊಳಿಸುವಾಗ ಈ ಸಂಗತಿಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ನಗರದ ರಸ್ತೆಗಳೆಲ್ಲಾ ಏಕಮುಖ. ಒಮ್ಮೆ ಸಾಗಿ ಹೋದರೆ ಮರಳಿ ಬರುವಂತಿಲ್ಲ. 

ಕವಯತ್ರಿಯ ಕವಿತೆಯ ಸಾಲುಗಳು ಕೊನೆವರೆಗೂ ಸಾಗುವ ಬಗೆ ಈ ಎಲ್ಲ ಬೆಳವಣಿಗೆಗಳಿಗೆ ಕನ್ನಡಿ ಹಿಡಿದಿದೆ. 'ಒಂದು ಬೆಳಗ್ಗೆಯಿಂದ ಚರ್ಚೆ ಆರಂಭವಾಗುತ್ತದೆ. ಸೂರ್ಯ ನೆತ್ತಿಗೇರಿದಂತೆ ಚರ್ಚೆಯ ಕಾವೂ ಏರುತ್ತದೆ. ರಾತ್ರಿಯಾಯಿತು. ಮಲಗಲು ಹಾಸಿಗೆಗೆ ಹೋದರೂ ಚರ್ಚೆ ಮುಗಿದಿರುವುದಿಲ್ಲ. ನನ್ನ ನಗರವೆಂದರೆ ಹಾಗೆ, ಸುದೀರ್ಘ‌ ಚರ್ಚೆಯ ಹಾಗೆ'. ಅಕ್ಷರಶಃ ನಗರವೆಂದರೆ ಒಂದು ಸುದೀರ್ಘ‌ ಚರ್ಚೆಯೇ; ಅದು ಎಂದಿಗೂ ಮುಗಿಯದು. ಅದರಲ್ಲೂ ಆ ನಗರದ ಅಭಿವೃದ್ಧಿ ಎಂಬುದಂತೂ ಇನ್ನೂ ಸುದೀರ್ಘ‌ವಾದ ಚರ್ಚೆ.

- ಅರವಿಂದ ನಾವಡ

Tags: 

ಇಂದು ಹೆಚ್ಚು ಓದಿದ್ದು

Back to Top