ಖಾಲಿ ಕನ್ನಡಿ : ಮಾನವೀಯತೆಯೇ ಆದ್ಯತೆಯಾಗಲಿ


Team Udayavani, Apr 20, 2018, 3:10 AM IST

Voting-19-4.jpg

ಚುನಾವಣೆಯ ಚಳಿ, ತಿಳಿ ಬೇಸಿಗೆಯಲ್ಲಿ ಆವರಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗ ಎಲ್ಲರಲ್ಲೂ ಕಳ್ಳರನ್ನು ಹುಡುಕುತ್ತಿದೆ. ಟೀವಿಗಳಲ್ಲಿ ನ್ಯೂಸು ಓದುವವರು ನಮಗಿಂತಾ ಹಿರಿಯರ್ಯಾರು ಎನ್ನುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳಂತೂ ತುರ್ತು ಪರಿಸ್ಥಿತಿ ಜಾರಿಯಾಗಿರುವುದನ್ನು ನೆನಪಿಸುತ್ತಿವೆ. ಹೊಸ ಪಕ್ಷಗಳು, ಬಟ್ಟೆ ಬದಲಾಯಿಸಿದಷ್ಟು ಸುಲಭವಾಗಿ ಪಕ್ಷ ಬದಲಾಯಿಸುತ್ತಿರುವ ಸ್ವಘೋಷಿತ ನೇತಾರರುಗಳು, ಜನರ ಹಣದ ಸುತ್ತ ಹುಟ್ಟಿಕೊಳ್ಳುತ್ತಿರುವ ಹೊಸ ಪದಪುಂಜಗಳು, ಅವುಗಳಲ್ಲಿ ಹುಟ್ಟಿಸಲಾಗುತ್ತಿರುವ ಹಸಿ ಆಸೆಗಳು…

ರಟ್ಟಾಗಬಾರದ ರೀತಿಯಲ್ಲಿ ಗುಟ್ಟಿನ ಮೌನಗಳು ಸರದಿಯ ಸಾಲಿನಲ್ಲಿ ಹೆಪ್ಪುಗೊಂಡಿರುತ್ತವೆ. ಪ್ರತೀಕ್ಷಿಸುತ್ತಾ ಕಡೆಗೂ ಒಳಗೆ ಹೋಗುವ ಆ ನಡು ವಯಸ್ಕ ವ್ಯಕ್ತಿ ತನ್ನ  ಬೆರಳಿನ ಉಗುರ ಮೇಲೆ ಚೆಲ್ಲುವ ಶಾಯಿಯ ಚುಕ್ಕೆ ಆತ್ಮಾಭಿಮಾನದ ಸಂಕೇತವಾ ಅಥವಾ ಸುದೀರ್ಘ‌ ಅವಧಿಯ ಮೌನಕ್ಕೆ ಮುನ್ನುಡಿಯಾ ಎನ್ನುವ ಗೊಂದಲದಲ್ಲಿಯೇ ಮತಗಟ್ಟೆಯ ಕೋಣೆಯಿಂದ ಹೊರಬರುತ್ತಾನೆ. ಅಪ್ಪನ ಕೈಹಿಡಿದು ಆ ಕೊಠಡಿಯೊಳಕ್ಕೆ ನುಗ್ಗಿದ್ದ ಮಗಳ ಬೊಗಸೆ ಕಣ್ಣಿಗೂ ಅದು ಕೌತುಕದ ಕುರುಹು. ಜೀವನದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವಕನೊಬ್ಬನ ಕಣ್ಣಲ್ಲಿ ತನ್ನ ಬೆರಳ ಉಗುರ ಮೇಲೆ ಎರಚಲಾದ ಚುಕ್ಕೆಯ ಚಿತ್ತಾರ ಯಾವುದೋ ವಿಜಯ ಸಂಕೇತದ ಹೆಮ್ಮೆಯಾಗಿ ಹೊಳೆಯುತ್ತಿದ್ದರೆ ಅಂತಹುದನ್ನೇ ತನ್ನ ಕೈ ಬೆರಳ ಮೇಲೂ ಅಂಟಿಸಿಕೊಂಡು ನೋಡುತ್ತಾ ಅಲ್ಲೆಲ್ಲೋ ನಿಂತುಕೊಂಡ ಅನುಭವಿ ವೃದ್ಧರೊಬ್ಬರ ಭಾವಕ್ಕೆ ಅದು ಸಮಾಜ ತಮ್ಮ ಮರೆತೇಹೋದ ಯೌವನಕ್ಕೆ ತಿಳಿಸಿಕೊಟ್ಟ ಆಜೀವ ಹೊಣೆಗಾರಿಕೆ. ದೂರದೆಲ್ಲೆಲ್ಲೋ ನಿರೀಕ್ಷೆಯ ನೊಗವನ್ನು ಹೊತ್ತು ಆತಂಕದಿಂದ ಕೂತ ಉಮೇದುವಾರನ ಜೀವತಂತನ್ನು ಮೀಟಿ ಆತನ ಮೋಕ್ಷಕ್ಕೆ ದಾರಿ ಮಾಡುವ ವೋಟಿಂಗ್‌ ಯಂತ್ರದ ಮೇಲಿನ ಹೆಬ್ಬೆರಳಗಲದ ಸ್ವಿಚ್ಚುಗಳ ಪೈಕಿ ಒಂದನ್ನು ಒತ್ತುವ ಕ್ಷಣದಲ್ಲಿ ಅವರೆಲ್ಲರನ್ನೂ ಪ್ರೇರೇಪಿಸಿದ್ದು ಯಾವುದು ಎನ್ನುವುದು ಮಿಲಿಯನ್‌ ಡಾಲರ್‌ ಎಂಬ ಕ್ಲೀಷೆಯ ಪ್ರಶ್ನೆಯಾಗಿಯೇ ಕಳೆದುಹೋಗುತ್ತದೆ. 

1937ರ ಪ್ರಾಂತೀಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದೇಶಾದ್ಯಂತ ಕೈಗೊಂಡ ಪ್ರವಾಸದಲ್ಲಿ ಎದುರಿಸಿದ ಕೆಲವು ಆಸಕ್ತಿದಾಯಕ ಆತಂಕಗಳನ್ನು ನೆಹರೂ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮತದಾನ ಹಾಗೂ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪೇಕ್ಷಿತ ಅನಿವಾರ್ಯ ಹೌದು. ಆದರೆ ಬಹುಸಾಮಾನ್ಯವಾಗಿ ಅವು ಆಯ್ಕೆ ಬಯಸುವ ವ್ಯಕ್ತಿಯ ದುರುಳ ಭಾವವನ್ನೇ ಅಭಿವ್ಯಕ್ತಿಸುತ್ತವೆ. ಹಾಗಾಗಿ ಅದು ಸಾಮಾನ್ಯವಾಗಿ ಉತ್ತಮ ವ್ಯಕ್ತಿಗೆ ಯಶಸ್ಸನ್ನು ದೊರಕಿಸಿಕೊಡಲಾರದು. ಸೂಕ್ಷ್ಮ ವ್ಯಕ್ತಿಗಳು, ಮುನ್ನುಗ್ಗಲು ಒರಟುತನವನ್ನು ಆಯ್ಕೆ ಮಾಡಿಕೊಳ್ಳದ ವ್ಯಕ್ತಿಗಳು ಚುನಾವಣೆಯಲ್ಲಿ ಪ್ರತಿಕೂಲ ಪರಿಸ್ಥಿತಿಗೆ ಸಾಕ್ಷಿಯಾಗುತ್ತಾರೆ ಹಾಗೂ ಅನಿವಾರ್ಯವಾಗಿ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ. ಹಾಗಾದರೆ ಪ್ರಜಾಪ್ರಭುತ್ವವೆನ್ನುವುದು ಒರಟರ, ಏರು ಕಂಠದವರ, ಅವಕಾಶವಾದಿಗಳ ಸ್ವತ್ತೇ? 

ಸ್ವಾತಂತ್ರ್ಯಪೂರ್ವದ ಪ್ರಾತಿನಿಧಿಕ ಚುನಾವಣೆಗಳ ಸಂದರ್ಭದಲ್ಲಿ ದೇಶದ ಮೊದಲ ಪ್ರಧಾನಿ ನೆಹರೂರವರ ಆ  ಆಲೋಚನೆಗಳು ಸಾರ್ವಕಾಲಿಕ ಸತ್ಯಗಳಾಗಿಬಿಟ್ಟಿರುವುದು ಪ್ರಜಾಪ್ರಭುತ್ವದ ಕಲ್ಪನೆಯ ದೃಷ್ಟಿಯಿಂದ ನಮ್ಮನ್ನು ಮೂಕರನ್ನಾಗಿಸಬೇಕಷ್ಟೇ. ಇನ್ನು 1946ರಲ್ಲಿ ಸಂವಿಧಾನ ಸಭೆಯು ಭಾರತವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವೆಂದು ಘೋಷಿಸುವ ಸಂದರ್ಭದಲ್ಲಿ ಗಾಂಧೀಜಿ ದೂರದೆಲ್ಲೆಲ್ಲೋ ಜಾತಿ ವೈಷಮ್ಯದ ಕಿಡಿಯನ್ನು ನಂದಿಸಲು ಹೆಣಗುತ್ತಿದ್ದದ್ದು ಅಣಕವಾಗಿಯೇ ನಮ್ಮನ್ನು ಅಪ್ಪಿಕೊಳ್ಳಬೇಕು. 1952ರ ಚುನಾವಣಾ ಸಂದರ್ಭದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜನತೆ ಮತಪತ್ರಗಳನ್ನು ಮಾರಿಕೊಂಡ ಬಗ್ಗೆ ಅಡ್ವಾಣಿ ತಮ್ಮ My Country, My Life ಪುಸ್ತಕದಲ್ಲಿ ದಾಖಲಿಸಿದ್ದಾರೆನ್ನುವುದೂ ಗಮನಿಸಬೇಕಾದ ಅಂಶ.

ಅಂದು ಮತಪತ್ರ. ಇಂದು ಮತಯಂತ್ರವಷ್ಟೆ. ಇದು ಇಂದಿಗೂ ನಮ್ಮ ಮನಸ್ಥಿತಿಯೇ ಆಗಿಬಿಟ್ಟಿದೆ. ಅಂದಿನಿಂದಲೂ ಅನ್ಯ ದಾರಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದ ಸ್ವಾತಂತ್ರ್ಯದ ಹಕ್ಕನ್ನು ಬೇರೆ ಸಂವಿಧಾನ ನಮಗೆ ನೀಡಿಬಿಟ್ಟಿದೆ. ಆದರೆ ನಿಜಕ್ಕೂ ನಾವು ಕಾಣಬಯಸುವ ಸತ್ಯ ಅದೇನಾ ಎಂದರೆ ನಮ್ಮಲ್ಲಿ ಉತ್ತರವಿಲ್ಲ. ನಮಗೆ ಬುದ್ಧಿ ಬಂದಾಗಿನಿಂದ ನಾವು ಏನನ್ನು ನೋಡುತ್ತಿದ್ದೇವೆ? ಗೆಲ್ಲಬೇಕಾದವರು ಗೆಲ್ಲಲು ಶ್ರಮ ವಹಿಸುವುದು. ಸಾಮಾನ್ಯವಾಗಿ ಹಣವಿದ್ದವರು ಗೆಲ್ಲುವುದು. ಜಾತ್ಯತೀತ ರಾಷ್ಟ್ರವೆಂದು ಸುಳ್ಳೇ ನಂಬಿಸುತ್ತಾ ಜಾತಿಗಳ ಮೇಲೇ ಎಲ್ಲವನ್ನೂ ನಿರ್ಧರಿಸುವುದು. ನಮ್ಮ ಬಡತನವನ್ನು ವೋಟುಗಳನ್ನಾಗಿ ಮಾಡಿಕೊಳ್ಳಲು ಅವರು ಆರ್ಥಿಕ ಸಶಕ್ತರು. 

ನಾವು, ನಮ್ಮ ಕೈಯಲ್ಲಿ ಆಮಿಷವನ್ನು ಇಟ್ಟಾಗ ನಿರಾಕರಿಸಲಾಗದ ನಿರ್ಗತಿಕರು. ಇಂದು ಹಣಕ್ಕಾಗಿಯೇ ರಾಜಕಾರಣ ಮಾಡುವ, ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ರಾಜಕೀಯದ ಹರಸಾಹಸ ಮಾಡುವ, ಅಧಿಕಾರವೆಂದರೆ ದರ್ಪದ ಇನ್ನೊಂದು ಮುಖವೆಂದು ಮೆರೆಯುವ, ಅಹಂಕಾರಕ್ಕೆ ಏಟುಬಿದ್ದರೆ ಎದುರು ನಿಂತವನ ಬದುಕು ಹಾಳು ಮಾಡುವ, ಮಕ್ಕಳು-ಮೊಮ್ಮಕ್ಕಳಿಗೂ ಅಧಿಕಾರ ಹಸ್ತಾಂತರ ಮಾಡಿ ಜೀವನ ಭದ್ರತೆ ಗಳಿಸಿಕೊಳ್ಳುವ ರಾಜಕೀಯ ನಾಯಕರುಗಳೇ ಇಂದಿಗೂ ಬಹುಸಂಖ್ಯಾತರು. ಸಮಾಜದ ಪ್ರಬಲರು. ಅಂತೆಯೇ ಅಂಥವರ ಬೆನ¤ಟ್ಟುತ್ತಾ ನಿಲ್ಲುವ ನಾವು ಚುನಾವಣೆಯ ಮರುದಿನದಿಂದ ನಗಣ್ಯರು.

ಪದೇ ಪದೇ ಇಡೀ ಸಮಾಜದ ಸಾಕ್ಷಿಪ್ರಜ್ಞೆಯೇ ತಿರುಗು ಮುರುಗಾಗಿದೆಯೆನ್ನುವ ಭಾವ ಆವರಿಸಿಕೊಳ್ಳುತ್ತದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರನ ಪ್ರಬುದ್ಧತೆಯ ಆಧಾರದ ಮೇಲೆ ಮತದಾನದ ಹಕ್ಕು ಪ್ರಾಪ್ತವಾಗುವ ವ್ಯವಸ್ಥೆ ಜಾರಿಗೆ ಬರದೇ ಜವಾಬ್ದಾರಿಯುತ ಸಮಾಜ ನಿರ್ಮಾಣವಾಗಲು ಹೇಗಾದರೂ ಸಾಧ್ಯ ಎಂದು ನಮಗೆಂದೂ ಅನಿಸಿಲ್ಲ. ಜವಾಬ್ದಾರಿಯುತ ಸಮಾಜ ನಿರ್ಮಾಣವಾಗದೇ ಹಣ ಚೆಲ್ಲಿ ಹಣ ಬಾಚುವ ವ್ಯಕ್ತಿಗಳು ಚುನಾವಣೆಯಿಂದ ದೂರವಾದರೂ ಹೇಗೆ ಸರಿದಾರು ಎನ್ನುವ ಕಲ್ಪನೆಯ ಬಗ್ಗೆ ಇಂದಿಗೂ ನಮಗೆ ತಿರಸ್ಕಾರ ಭಾವ.

ಅಂದಹಾಗೆ ಭಾರತೀಯ ಪ್ರಜ್ಞೆಯ ಬೇರುಗಳಲ್ಲಿ ಪ್ರಜಾಸತ್ತೆಯ ಕಸುವು ಎಂದಾದರೂ ಇತ್ತಾ? ಇತಿಹಾಸದ, ಪುರಾಣದ ಯಾವ ಘಟ್ಟಗಳಲ್ಲಿ ಎಂದು ನಾವು ಪ್ರಭುಗಳಾಗಿದ್ದೆವು? ಯಾರನ್ನು ಎಂದು ನಾವು ಆಯ್ಕೆ ಮಾಡಿಕೊಳ್ಳುವ ಶಕ್ತಿ ಹೊಂದಿದ್ದೆವು? ಸಾವಿರ ವರ್ಷಗಳ ಸಂಘರ್ಷದ ಬಳಿಕ ನಾವೇ ಆಳಬೇಕು ಎಂಬ ಹತಾಶೆಯ ಮನಸ್ಥಿತಿ ನಮ್ಮಲ್ಲಿ ಏಕೆ ಬಂತು? ಪ್ರಜಾಪ್ರಭುತ್ವದ ಸೋಂಕೇ ಇಲ್ಲದೇ ಶತ ಶತಮಾನಗಳನ್ನು ಸವೆಸಿದ ನಮಗೆ ಅಧಿಕಾರ ಮಾಡುವವರು ನಮ್ಮ ಸೇವಕರು ಎಂದು ಬಗೆಯುವ ಕೀಳರಿಮೆಯ ದರ್ಪವನ್ನು ಕಳೆದ 70 ವರ್ಷಗಳ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದೆ. ನಾವು ಅದನ್ನೇ ಪದೇ ಪದೇ ನೆನೆಸಿಕೊಂಡು ನಲಿಯುತ್ತೇವೆ.

ಚುನಾವಣೆಯ ಚಳಿ, ತಿಳಿ ಬೇಸಿಗೆಯಲ್ಲಿ ಆವರಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗ ಎಲ್ಲರಲ್ಲೂ ಕಳ್ಳರನ್ನು ಹುಡುಕುತ್ತಿದೆ. ಟೀವಿಗಳಲ್ಲಿ ನ್ಯೂಸು ಓದುವವರು ನಮಗಿಂತಾ ಹಿರಿಯರ್ಯಾರು ಎನ್ನುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುವ ಚರ್ಚೆಗಳಂತೂ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿರುವುದನ್ನು ನೆನಪಿಸುತ್ತಿವೆ. ಹೊಸ ಪಕ್ಷಗಳು, ಬಟ್ಟೆ ಬದಲಾಯಿಸಿದಷ್ಟು ಸುಲಭವಾಗಿ ಪಕ್ಷ ಬದಲಾಯಿಸುತ್ತಿರುವ ಸ್ವಘೋಷಿತ ನೇತಾರರುಗಳು, ಜನರ ಹಣದ ಸುತ್ತಲೂ ಹುಟ್ಟಿಕೊಳ್ಳುತ್ತಿರುವ ಹೊಸ ಪದಪುಂಜಗಳು, ಅವುಗಳಲ್ಲಿ ಹುಟ್ಟಿಸಲಾಗುತ್ತಿರುವ ಹಸಿ ಆಸೆಗಳು, ಅವರೇನು ಮಾಡಿದರು? ನಾವೇನು ಮಾಡಿದೆವು? ಅವರು ಮಾಡಿದರು, ಹಾಗಾಗಿ ನಾವು ಮಾಡಿದೆವು ಎನ್ನುವ ಉಸಿರು ನಿಲ್ಲದ ಕೆಸರೆರಚಾಟಗಳು ಪುನಃ ನಮ್ಮ ಆತ್ಮ ಭಾವವನ್ನು ಸುತ್ತುವರೆದುಕೊಳ್ಳುತ್ತಿವೆ. ನಾಳೆ ನಮಗೆ ಯಾರು ಬೇಕು? ನಮ್ಮೊಳಗೊಬ್ಬರಾಗಿ ನಮ್ಮ ಹಕ್ಕುಗಳನ್ನು ಕಾಪಾಡುವವರು ಎಂಥವರು? ಅವರು ಎಲ್ಲಿದ್ದಾರೆ?ಸಾಮಾಜಿಕವಾದ ಸಂಗತಿಗೆ ವೈಯಕ್ತಿಕ ನೆಲೆಯ ಹುಡುಕಾಟ ಸುಲಭಕ್ಕೆ ದಕ್ಕುವುದಾದರೂ ಹೇಗೆ? ಕಷ್ಟವಿದೆ. ಆದರೆ ಕಣ್ಣಲ್ಲಿ ಕಣ್ಣಿಟ್ಟು ಕಾಳಜಿಯಿಂದ ನೋಡುತ್ತಾ ನಿಂತಾಗ ಮಾತ್ರ ಇಂತಹ ಕೆಟ್ಟ ವ್ಯವಸ್ಥೆಯ ನಡುವೆಯೇ, ತಮ್ಮೊಳಗೆ ಸಂಗೀತದ ಧ್ಯಾನವನ್ನು ಕಾಪಿಟ್ಟುಕೊಂಡವರು, ಮಗುವಿನ ಅಬೋಧತೆಯನ್ನು ಆಲಂಗಿಸಿಕೊಂಡವರು, ತೆರೆಯ ಮೇಲೆ ತೆರೆದುಕೊಂಡರೂ ಮಾನವೀಯ ಮೌಲ್ಯಗಳನ್ನು ಮಂತ್ರಿಸಿಕೊಂಡವರು, ಹಣದ ಹೊಳೆಯ ಆರ್ಭಟದ ನಡುವೆ ಜನರ ನಿರೀಕ್ಷೆಗಳೆಂಬ ಹುಲ್ಲುಕಡ್ಡಿಯನ್ನು ಹಿಡಿದುಕೊಂಡವರು, ಹತಾಶೆಗೊಳಗಾದರೂ ಹಲ್ಲುಕಚ್ಚಿ ಸೇವಾ ಭಾವವನ್ನು ಆಶ್ರಯಿಸಿದವರು ಎಲ್ಲೋ ಅಲ್ಲಲ್ಲಿ ಕಾಣಿಸುತ್ತಾರೆ. ಅಂತಹ ವ್ಯಕ್ತಿಗಳು, ನೂರು ಜನ ತಮ್ಮ ಆತ್ಮವಿಶ್ವಾಸವನ್ನು ನಲುಗಿಸಲು ಯತ್ನಿಸುತ್ತಿದ್ದರೂ ನಿಶ್ಶಬ್ದವಾಗಿ ವಿಶಾಲವಾದ ಗುರಿಯ ಹಾದಿಯಲ್ಲಿ  ನಡೆಯುವ ಯತ್ನ ಮಾಡುತ್ತಿರುತ್ತಾರೆ. ಅವರ ಮುಂದೆಯೇ ತಮ್ಮ ದೇಹದ ಮೇಲೆ ಕರೆಂಟು ದೀಪಗಳನ್ನು ಜಗಮಗಿಸಿಕೊಂಡವರು ನಮ್ಮನ್ನು ಸಂಚಲನಕ್ಕೀಡುಮಾಡುತ್ತಿದ್ದಾಗ ಅವರು ಸ್ವಯಂಪ್ರಭೆಯ ನಡುವೆಯೂ ಬೆಳಗಲು ಹೆಣಗುತ್ತಾ ಕರಗುತ್ತಿರುತ್ತಾರೆ.

ನೈಜಪ್ರಭೆಯ ಅಂತಹ ವ್ಯಕ್ತಿಗಳನ್ನು ಗುರುತಿಸಿಕೊಳ್ಳುವ ಜವಾಬ್ದಾರಿ ಈಗ ನಮ್ಮದು. ಇಂದು ವೋಟಿಂಗ್‌ ಯಂತ್ರದ ಮೇಲೆ ಹಕ್ಕಿನ ಅಧಿಕಾರದ ಆಧಾರದ ಮೇಲೆ ಕೈಯಿಡುವ ನಮ್ಮ ಬೆರಳುಗಳು ರಾಜಕೀಯ ಕ್ಷೇತ್ರಕ್ಕೆ ಕಾವ್ಯದ ಕೋಮಲತೆಯನ್ನು, ಸಂಗೀತದ ಸೌಗಂಧವನ್ನು ತುಂಬಬೇಕಿರುವ ತಮ್ಮ ಹೊಣೆಗಾರಿಕೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಎಷ್ಟು ಚುನಾವಣೆ ಗೆದ್ದರೂ ಅಹಂಕಾರವನ್ನು ಸೋಕಿಸಿಕೊಳ್ಳದೇ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿರುವ ವ್ಯಕ್ತಿಗಳನ್ನು ಆ ಯಂತ್ರದ ದೀಪದ ಸುದೀರ್ಘ‌ ಸದ್ದಿನಲ್ಲಿ ಮರು ಆಲಂಗಿಸಿಕೊಳ್ಳಬೇಕಿದೆ. ಚುನಾವಣೆ ಬಂದಾಗಲಷ್ಟೇ ನಮ್ಮನ್ನು ಗೌರವಿಸುವ ನಾಟಕವಾಡುವವರನ್ನು, ನಮ್ಮದೇ ಹಣದಿಂದ ರಸ್ತೆ, ಮೋರಿ ನಿರ್ಮಿಸಿ ನಮ್ಮನ್ನೇ ಕೊಂಡುಕೊಳ್ಳುವ ಪ್ರಯತ್ನಕ್ಕೆ ಇಳಿಯುವವರನ್ನು, ಆ ಸದ್ದಿನ ಸೊಗಡಿನಲ್ಲಿಯೇ ತಿರಸ್ಕರಿಸಿ ಅಧಿಕಾರ ಕಂಡಾಗಲೂ ಸರಳವಾಗಿ, ಸಹಜವಾಗಿ ಉಳಿದ ವ್ಯಕ್ತಿಗಳನ್ನು ಪಕ್ಷ ಸಿದ್ಧಾಂತಗಳನ್ನು ಮೀರಿ ಒಪ್ಪಿಕೊಳ್ಳಬೇಕಿದೆ. ಅವರನ್ನು ಗುರುತಿಸಲು ನಮ್ಮ ಕಣ್ಣುಗಳಿಗೀಗ ಬಡಿದಿರುವ ಕೋಲ್ಮಿಂಚು ಕರಗಬೇಕಿದೆ. ಕೈಯಲ್ಲಿದ್ದದ್ದು ಕಳೆದುಹೋಗುವಾಗ ಅದನ್ನು ಹಿಡಿದುಕೊಳ್ಳಲಾಗದೇ ನಮ್ಮನ್ನು ಅಂಟಿಕೊಂಡ ಪಾರ್ಶ್ವವಾಯು ನಮಗೆ ಮುಕ್ತಿ ನೀಡಬೇಕಿದೆ.

ಅಂತಹ ಗಂಧರ್ವರನ್ನು ಪುನಃ ಕೈಹಿಡಿದುಕೊಂಡು ಬಂದರಷ್ಟೇ ಅವರು ತಮ್ಮ ಬೆಳಕಿನ ಆದ್ರತೆಯನ್ನು ನಮ್ಮ ಆತ್ಮಗಳಿಗೆ ಅಂಟಿಸಬಲ್ಲರು. ಇಲ್ಲವಾದಲ್ಲಿ, ಒಂದಷ್ಟು ಸಮಯ. ಬನ್ನಿ, ನಮ್ಮನ್ನು ಪ್ರತಿನಿಧಿಸಿ ಎಂದು ಗೋಗರೆದರೂ ಕನಸುಗಳ ಮಧ್ಯೆಯೇ ಕರಗಿ ಹೋಗುವ ನಕ್ಷತ್ರಗಳಾಗಿ ಅವರುಗಳು ದೂರವಾಗಿಬಿಡುತ್ತಾರೆ. ನಾವು ಪರ್ಯಾಯ ಮಾದರಿಗಳನ್ನು ಹುಡುಕುತ್ತಾ ಹತಾಶರಾಗಿಯೇ ಉಳಿಯುತ್ತೇವೆ. ಹೇಗಿದ್ದರೂ ನಡೆಯುತ್ತದೆ. ಇದು ನವ ಯುಗ, ನಾವು ಹೀಗೇ, ನಮ್ಮ ಕರ್ಮವಿಷ್ಟೇ ಎನ್ನುವುದು ನಮ್ಮ ಪ್ರತಿಪಾದನೆಯಾದರೆ ಈ ಬಾರಿಯ ಆಯ್ಕೆಯೂ ನಮ್ಮದೇ.

— ಫ‌ಣಿಕುಮಾರ್‌ ಟಿ.ಎಸ್‌.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.