ಮಾಲೂರು ಬಾಲಕಿಯ ಬರ್ಬರ ಹತ್ಯೆ:ರೇಖಾ ಚಿತ್ರ ಆಧರಿಸಿ ಕಾಮುಕ ವಶಕ್ಕೆ

ಮಾಲೂರು: ಪಟ್ಟಣದ ಬಿಜೆಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಕಾಮುಕ ನನ್ನು ಗುರುವಾರ ರಾತ್ರಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಸುರೇಶ್ ಎನ್ನುವವನಾಗಿದ್ದು, ಮಾಲೂರು ಮೂವದವನೇ ಆಗಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕಿಯ ಮನೆಯ ಬಳಿ ಗಾರೆ ಕೆಸಲಕ್ಕೆ ಆಗಮಿಸುತ್ತಿದ್ದ ಎಂದು ಹೇಳಲಾಗಿದೆ.
ಆರೋಪಿಯ ರೇಖಾ ಚಿತ್ರ ಬರೆದು ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಅದರನ್ವಯ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಯನ್ನೂ ನಡೆಸಿದ್ದರು ಎಂದು ತಿಳಿದು ಬಂದಿದೆ.
ಶುಕ್ರವಾರ ಪೊಲೀಸರು ಬಂಧಿತನನ್ನು ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೋರ್ಟ್‌ಗೆ ಕರೆತರುವ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರೀತಿ ನಿರಾಕರಿಸಿದ್ದೇ ಕಾರಣವೆ?
ಬಂಧಿತ ರಂಜಿತ್ ಬಾಲಕಿಯ ಬಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ತಿರಸ್ಕರಿಸಿದ ಕಾರಣಕ್ಕಾಗಿ ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದೂ ಹೇಳಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ವ್ಯಾಪಕ ಆಕ್ರೋಶ
ಆರೋಪಿಯ ಬಂಧನಕ್ಕೆ ಆಗ್ರಹಿಸಿ ಮಾಲೂರಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದರು.
ಮೂಲೂರು ತಾಲೂಕಿನಲ್ಲಿ ಅತ್ಯಂತ ಕರಾಳ ಎನ್ನುವ ಬಾಲಕಿ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ದಲಿತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ಕೃಷಿಕ ಸಮಾಜದಲ್ಲಿ ಸಭೆ ನಡೆಸಿ ಶನಿವಾರ ಮಾಲೂರು ತಾಲೂಕು ಬಂದ್ ನಡೆಸಲು ತೀರ್ಮಾನಿದ್ದರು.
ಮಾಲೂರಿನ ಇಂದಿರಾ ನಗರದ ವಾಸಿ ಸ್ಥಳೀಯ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ 15 ರ ಹರೆಯದ ಪುತ್ರಿ ಪಟ್ಟಣದ ಬಿಜೆಎಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಶಾಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಭಾಗವಹಿಸಿ ಪಕ್ಕದ ಇಂದಿರಾ ನಗರಕ್ಕೆ ಕಾಲ್ನಡಿಗೆಯಲ್ಲಿ ತನ್ನ ಗೆಳತಿಯೊಂದಿಗೆ ನಡೆದು ಕೊಂಡು ಹೋಗುತ್ತಿದ್ದಳು. ಈ ವೇಳೆ ರೈಲ್ವೆ ಸೇತುವೆ ಬಳಿ ಬಾಲಕಿಯನ್ನು ಅಡ್ಡಗಟ್ಟಿದ ದುಷ್ಕರ್ಮಿ ಆಕೆಯ ಬಟ್ಟೆಗಳನ್ನು ಹರೆದು ದುಷ್ಕೃತ್ಯ ಎಸಗಿದ್ದ. ಈ ವೇಳೆ ಜೊತೆಯಲ್ಲಿದ್ದ ಇನ್ನೊಬ್ಬವಿದ್ಯಾರ್ಥಿನಿ ಕಿರುಚಿಕೊಂಡು ಓಡಿಹೋಗಿದ್ದಳು. ಆಗ ಅರೆಬರೆ ಬಟ್ಟೆಯಲ್ಲಿ ಓಡಿ ಹೋಗಲು ಮುಂದಾದ ಬಾಲಕಿ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪಾಪಿ ತಲೆ ಮರೆಸಿಕೊಂಡಿದ್ದ.