CONNECT WITH US  

ಅಡುಗೆ ಮನೆಯಲ್ಲೇ ಇರುವ ದಿವ್ಯ ಔಷಧ: ಕೊಬ್ಬರಿ ಎಣ್ಣೆ

ಕೋಮಲ ತ್ವಚೆ, ರೇಷ್ಮೆಯಂಥ ಕಪ್ಪಗಿನ ಕೂದಲು ಇರಬೇಕೆಂದು ಎಲ್ಲ ಹೆಂಗಳೆಯರು ಇಷ್ಟಪಡುವುದು ಸಾಮಾನ್ಯ. ಇದಕ್ಕಾಗಿ ಸಿಕ್ಕಿದ್ದನ್ನೆಲ್ಲ ಬಳಸುತ್ತೇವೆ. ಬಿಸಿಲು, ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕ್ರೀಮ್‌, ಎಣ್ಣೆಗಳನ್ನು ಬಿಡುವುದಿಲ್ಲ.  ಸೌಂದರ್ಯವೆಂಬುದು ಹೊರಗಿಲ್ಲ, ನಮ್ಮ ಅಂತರಂಗದಲ್ಲೇ ಇದೆ ಎಂಬ ಅರಿವು ಬರುವಷ್ಟರಲ್ಲಿ ಇರುವ ನೈಸರ್ಗಿಕ ಸೌಂದರ್ಯವನ್ನೂ ಕಳೆದುಕೊಂಡು ಕೊರಗುತ್ತೇವೆ.

ಬಹುತೇಕವಾಗಿ ಅವ್ಯವಸ್ಥಿತ ಆಹಾರ ಪದ್ಧತಿ, ಕಲುಷಿತ ವಾತಾವರಣದಿಂದಾಗಿಯೇ ನಮ್ಮ ಆರೋಗ್ಯ ಕೆಡುತ್ತದೆ. ಚರ್ಮ ಮತ್ತು ಕೂದಲು ಬಹುಬೇಗನೆ ಇಂಥ ವಾತಾವರಣಕ್ಕೆ ಗುರಿಯಾಗುತ್ತದೆ. ಹೀಗಾಗಿ ಕೂದಲು ಉದುರುವುದು, ಬಾಲ್ಯ, ಯೌವ್ವನಾವಸ್ಥೆಯಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು, ಚರ್ಮದಲ್ಲಿ ಗಡಸುತನ ಉಂಟಾಗುವುದು ಸರ್ವ ಸಾಮಾನ್ಯ. ಇದನ್ನು ತಡೆಗಟ್ಟಲು ದುಬಾರಿ ಮೌಲ್ಯದ ಕ್ರೀಮ್‌, ಲೋಷನ್‌, ಎಣ್ಣೆಗಳ ಅಗತ್ಯವಿಲ್ಲ. ಮನೆಯಲ್ಲೇ ಸಿಗುವ ಅತ್ಯಂತ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ತೆಂಗಿನ ಎಣ್ಣೆಯೇ ಸಾಕು. ಬಿಳಿ ಕೂದಲು ಕಪ್ಪು ಮಾಡಲು ರಾಸಾಯನಿಕಯುಕ್ತವಾದ ಹೇರ್‌ಡೈ ಅನ್ನು ಬಹುತೇಕ ಮಂದಿ ಬಳಸುತ್ತಾರೆ. ಇದರಿಂದ ಅಡ್ಡಪರಿಣಾಮ ಜಾಸ್ತಿ. ಅದರ ಬದಲು ಕೊಬ್ಬರಿ ಎಣ್ಣೆಯನ್ನು  ಸ್ವಲ್ಪ ಬಿಸಿ ಮಾಡಿ ತಲೆಯ ಬುಡಕ್ಕೆ ದೀರ್ಘ‌ಧಿಕಾಲ ಮಸಾಜ್‌ ಮಾಡಿ ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಿದರೆ ಸಾಕು. ಕೆಲವು ದಿನಗಳಲ್ಲಿ ಕೂದಲು ಕಪ್ಪಾಗಿ, ಸದೃಢ ಮತ್ತು ಕಾಂತಿಯುತವಾಗುತ್ತದೆ.

ಹಿಂದೆಲ್ಲ ಬಿಳಿ ಕೂದಲು ವಯಸ್ಸಾದವರ ಲಕ್ಷಣವಾಗಿತ್ತು. ಈಗ ಹಾಗೇನಿಲ್ಲ. ಇದಕ್ಕಾಗಿ ಹಾಗೂ ಆರೋಗ್ಯವೃದ್ಧಿಗೆ ನಮ್ಮ ಹಿರಿಯರು ಕಂಡುಕೊಂಡ ಉಪಾಯವೇ ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣಗಳಿರುವುದರಿಂದ ಚರ್ಮದ ರಕ್ಷಣೆಗೆ ಇದಕ್ಕಿಂತ ಉತ್ತಮ ಔಷಧ ಇರಲಿಕ್ಕಿಲ್ಲ. ಕೊಬ್ಬರಿ ಎಣ್ಣೆ ಹಚ್ಚಿ ಮಾಡುವ ಅಭ್ಯಂಜನ ಸಕಲ ಚರ್ಮರೋಗಗಳಿಂದ ನಮ್ಮನ್ನು ರಕ್ಷಿಸಬಲ್ಲದು ಎನ್ನುತ್ತಾರೆ ಹಿರಿಯರು. ನೀರು, ಗಾಳಿ, ಧೂಳಿಗೆ ಹೆಚ್ಚಾಗಿ ಸೋಕುವ ಹಸ್ತ ಮತ್ತು ಪಾದಗಳು ಬಹುಬೇಗನೆ ನೀರಿನ ಅಂಶ ಕಳೆದುಕೊಂಡು ಒಣಗುತ್ತವೆ ಮತ್ತು ಒಡೆಯುತ್ತವೆ. ಇದಕ್ಕಾಗಿ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಉಜ್ಜಿದರೆ ಸಾಕು. ಜತೆಗೆ ಒಡೆದ ತುಟಿಗಳ ಆರೈಕೆಗೂ ಕೊಬ್ಬರಿ ಎಣ್ಣೆಯೇ  ದಿವ್ಯ ಔಷಧ.

ಈಗಿನ ಕಾಲದಲ್ಲಿ ಮೇಕಪ್‌ ಹಚ್ಚಿಕೊಂಡರೆ ಮಾತ್ರ ಸೌಂದರ್ಯ ಎಂಬಂತಾಗಿದೆ. ಇದಕ್ಕಾಗಿ ಬಳಸುವ ಪ್ರಸಾಧನಗಳು ತ್ವಚೆಗೆ ಹಾನಿಕಾರಕವೂ ಆಗಬಹುದು. ಕೆನ್ನೆಯ ಭಾಗವನ್ನು ಹೆಚ್ಚು ಕೆಂಪಾಗಿಸಲು ಬಳಸುವ ಪ್ರಸಾಧನ ರಾಸಾಯನಿಕಯುಕ್ತವಾಗಿರುತ್ತದೆ. ಇದಕ್ಕಿಂತ ಕೆಲವೇ ಹನಿ ಕೊಬ್ಬರಿ ಎಣ್ಣೆ ಹಚ್ಚಿ ನಯವಾಗಿ ಮಸಾಜ್‌ ಮಾಡಿದರೆ ಸಾಕು ಕೆನ್ನೆ ಕೆಂಪಾಗುತ್ತದೆ.

ಆಹಾರದಲ್ಲೂ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಇತ್ತೀಚೆಗೆ ನಡೆದ ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಮಾನಸಿಕ ಒತ್ತಡ ನಿಯಂತ್ರಣ, ಕೊಬ್ಬು ನಿಯಂತ್ರಣಕ್ಕೂ ಇದು ಸಹಕಾರಿ. ನೈಸರ್ಗಿಕವಾಗಿ ದೊರೆಯುವ ಕೊಬ್ಬರಿಯಿಂದ ಪರಿಶುದ್ಧವಾಗಿ ತಯಾರಿಸಿದ ಎಣ್ಣೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಎಣ್ಣೆ, ಕ್ರೀಮ್‌, ಲೋಷನ್‌ಗಳಿಗಿಂತ ಸುರಕ್ಷಿತ ಎಂಬುದನ್ನು ಕಣ್ಣುಮುಚ್ಚಿ ನಂಬಬಹುದು.

- ವಿದ್ಯಾ ಕೆ. ಇರ್ವತ್ತೂರು

ಇಂದು ಹೆಚ್ಚು ಓದಿದ್ದು

Trending videos

Back to Top