CONNECT WITH US  

ಹೊಗೆ ಕೊಳವೆಯಲ್ಲಿ ಹೋಗಿಬರುವುದ‌ು ರೂಢಿಸಿಕೊಳ್ಳಬೇಕು!

ಹೊಗೆ ಕೊಳವೆಯೊಳಗೆ ಹೋಗಿಬರುವ ಅನುಭವ ಬಹಳ ಕಠಿಣವಾದುದು. ದಿಲ್ಲಿಯ ಸ್ಥಿತಿ ಹಾಗೆಯೇ ಇದೆ ಎನ್ನುತ್ತಿದ್ದಾರೆ ಪ್ರತ್ಯಕ್ಷ ದರ್ಶಿಗಳು. ಈಗಲಾದರೂ ನಮ್ಮ ಸಣ್ಣ ಸಣ್ಣ ನಗರಗಳನ್ನು ಉಳಿಸಿಕೊಳ್ಳೋಣ

ಹತ್ತಿರದ ದಿಲ್ಲಿಯಲ್ಲಿ ಇಡೀ ವಾರ ನಗರಕ್ಕೆ ನಗರವೇ ಉಸಿರುಗಟ್ಟಿ ಬದುಕಲು ಶತ ಪ್ರಯತ್ನವನ್ನು ಮಾಡುತ್ತಿತ್ತು. ಆ ಹೊಗೆ, ಈ ಹೊಗೆ ಎನ್ನುತ್ತಾ ಎಲ್ಲವೂ ಸೇರಿಕೊಂಡು ನಗರವನ್ನು ಶೀರ್ಷಾಸನ ಸ್ಥಿತಿಗೆ ದೂಡಿತ್ತು. ಅಲ್ಲಿದ್ದವರೆಲ್ಲಾ ಸ್ವಲ್ಪ ದಿನಕ್ಕಾದರೂ ಪರ ಊರಿಗೆ ಹೋಗುವುದೇ ಲೇಸೆಂದುಕೊಂಡು ಅಲ್ಲಿಂದ ಓಟ ಕಿತ್ತಿದ್ದರು. ಇತ್ತ ನ್ಯಾಯಾಲಯಗಳೂ ಏನಾದರೂ ಮಾಡಿ ಸ್ವಾಮಿ ಎಂದು ನಮ್ಮನ್ನಾ ಳುವವರನ್ನು ಕೇಳುತ್ತಿದ್ದವು. ನಮ್ಮನ್ನು ಆಳುವವರೂ ಸಹ, ತಲೆಗೊಂದು ಯೋಚನೆಯಂತೆ ಬಂದದ್ದನ್ನೆಲ್ಲ ಮಾಧ್ಯಮದ ಎದುರು ಹೇಳಿ ನಗೆಪಾಟಲಿಗೀಡಾಗುತ್ತಿದ್ದರು. 

ಹಾಗೆಂದು ಈ ಸ್ಥಿತಿಯನ್ನು ಇಂಥದ್ದೇ ಯಾವ ನಗರಗಳೂ ಬಹಳ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಎಲ್ಲವೂ ತಮ್ಮ ತಮ್ಮ ನೆಲೆಗಳಲ್ಲಿ ಅಂದುಕೊಳ್ಳುವ ಹಾಗೆ, "ನಮ್ಮ ನಗರ ಹಾಗಲ್ಲ. ಇಂಥ ಸ್ಥಿತಿಗೆ ಬೇಕಾಬಿಟ್ಟಿ ಬೆಳೆಯಲು ಬಿಟ್ಟಿದ್ದೇ ಕಾರಣ' ಎಂದು ಕೊಳ್ಳತೊಡಗಿವೆ ನಗರಗಳು. ಹಾಗಾಗಿ ತಮ್ಮ ವಾಹನ ನೋಂದಣಿ ವ್ಯಾಪಾರವನ್ನೇನೂ ನಿಲ್ಲಿಸಿಲ್ಲ. ಮೆಟ್ರೋಗಳು ಬೆಳೆಯಬೇಕಾದದ್ದರ ಬಗ್ಗೆ ಹೆಚ್ಚು ಮಾತನಾ ಡದೇ, ಬೇರೇನನ್ನೋ ಯೋಚಿಸುತ್ತಿರುವುದೇ ಇದಕ್ಕೆ ಕಾರಣ. ನಮ್ಮಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ ಎಂದರೆ, ಅದು ಸರಿಯಲ್ಲ. ವಾಹನಗಳಿಗೆ ರಸ್ತೆ ಕಲ್ಪಿಸುವುದು ಹೆಚ್ಚು ಸೂಕ್ತವಾದುದು ಎನ್ನುತ್ತಾರೆ ಹಲವರು. ನಗರವೆಂದ ಮೇಲೆ ಜನ ವಲಸೆ ಬರುವುದು ಸಾಮಾನ್ಯ. ಅಲ್ಲಿ ಉದ್ಯೋಗ, ಶಿಕ್ಷಣ ಎಲ್ಲವೂ ಸಿಗುವುದೂ ಇದಕ್ಕೆ ಕಾರಣ. ಇದನ್ನು ತಡೆಯಲಾಗದು ಎಂದು ವಾದಿ ಸುವ ಹಲವು ಅಭಿವೃದ್ಧಿ ಪರ ಆಡಳಿತಗಾರರೂ ಇದ್ದಾರೆ. ಅವರೆಲ್ಲರಿಗೂ ಒಂದು ನಗರ ಬೆಳೆಯವುದೆಂದರೆ ಯಾವುದೇ ನಿರ್ದಿಷ್ಟ ಯೋಜನೆ ಮತ್ತು ಯೋಚನೆಗಳಿಲ್ಲದೇ ಬೆಳೆಯುವುದು. ಇದು ಸಾಧ್ಯವೇ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ಕೊಡುವ ರೀತಿಯೂ ಬೇರೆ ಇದೆ. "ಸಾಧ್ಯವೇ? ಇಲ್ಲವೇ ಎಂಬುದು ಮುಖ್ಯ ವಲ್ಲ. ನಾವು ಪ್ರಯತ್ನಿಸಬೇಕು. ಪ್ರಯತ್ನಿಸಿದರೆ ಮಾತ್ರ ಸಾಧ್ಯ' ಎಂದು ಬೋಧನೆಯಲ್ಲಿ ತೊಡಗುತ್ತಾರೆ. 

ನಮ್ಮ ಸರಕಾರಗಳಿಗೂ ವಾಹನ ನೋಂದಣಿಯಿಂದ ಬರುವ ತೆರಿಗೆ ಬದುಕಲಿಕ್ಕೆ ಬೇಕೆನಿಸುವ ಸ್ಥಿತಿ ಇದೆ. ಹೆಚ್ಚು ವಾಹನಗಳು ಮಾರಾಟವಾದರೆ ಅವುಗಳಿಂದ ತೆರಿಗೆ ರೂಪದಲ್ಲಿ ಬೊಕ್ಕಸಕ್ಕೆ ಹಣ ಸಂದಾಯವಾಗುತ್ತದೆ. ಅದರಿಂದ ನಾವು ಕೋಟಿಗಟ್ಟಲೆ ಬಜೆಟ್‌ ಮಂಡಿಸಲು ಸಾಧ್ಯವಾಗುತ್ತದೆ ಎಂದು ಯೋಚಿಸುತ್ತವೆ. ನೋಂದಣಿಯಾದ ಇಷ್ಟೊಂದು ವಾಹನಗಳು ಭೂ ಮಾರ್ಗದಲ್ಲಿ ಸಂಚರಿಸದೇ ವಾಯು ಮಾರ್ಗದಲ್ಲಿ ಸಂಚರಿಸುತ್ತವೆಯೆ ಎಂದೂ ಯೋಚಿಸುವುದಿಲ್ಲ. 

ಅಲ್ಲೇನು ಆಯಿತು?
ಸರಿ, ದಿಲ್ಲಿಯಲ್ಲಿ ಧೂಮ ಜಾಸ್ತಿಯಾಗಿ ಅನಾಹುತ ಸೃಷ್ಟಿಸುತ್ತಿರು ವಾಗ ಅತ್ತ ಸಿಂಗಾಪುರ ಆಡಳಿತ ಯಾವುದೇ ಮುಜುಗರವಿಲ್ಲದೇ "ಇನ್ನು ಮುಂದೆ 2020ರವರೆಗೂ ಹೊಸ ವಾಹನ ಖರೀದಿಸುವಂತಿಲ್ಲ' ಎಂದು ಘೋಷಿಸಿತು. ಅಂದರೆ ಶೋರೂಂನಿಂದ ಹೊರ ತಂದರೂ ನೋಂದಣಿಯಾಗುವುದಿಲ್ಲ. ಈ ನಿರ್ಬಂಧ ಫೆಬ್ರವರಿಯಿಂದಲೇ ಆರಂಭ. ಅಲ್ಲಿನ ಸಾರಿಗೆ ಪ್ರಾಧಿಕಾರ (ಎಲ್‌ಟಿಎ)ವು, ಕಾರು ಇತ್ಯಾದಿ ಸಾರಿಗೆ ವಾಹನಗಳ ಖರೀದಿಯನ್ನು 0.25ರಿಂದ ಶೂನ್ಯಕ್ಕೆ ಇಳಿಸಲು ನಿರ್ಧರಿಸಿದೆ. ಹಾಗಾಗಿ ಹೊಸ ವಾಹನಗಳನ್ನು ಕೊಳ್ಳುವಂತಿಲ್ಲ.

ನಮ್ಮಲ್ಲಿ ಶೋರೂಂಗಳಿಗೆ ಹೋದರೆ ಸಾಕು. ಸಾಲದಿಂದ ಹಿಡಿದು ಎಲ್ಲವೂ ಕುಳಿತಲ್ಲೇ ಆಗಿ ಬಿಡುತ್ತವೆ. ಒಂದು ವಾರವೆನ್ನುವಷ್ಟರಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತೇವೆ. ಆದರೆ ಸಿಂಗಾಪುರ ದಲ್ಲಿ ಮನಸ್ಸಿಗೆ ಬಂದ ಕೂಡಲೇ ವಾಹನವನ್ನು ಖರೀದಿಸುವಂತಿಲ್ಲ. ಅಲ್ಲಿ ಏನಿದ್ದರೂ ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಪರವಾನಿಗೆಗಳನ್ನು ನೀಡಲಾಗುತ್ತದೆ. ಈ ವರ್ಷ ಒಂದು ಸಾವಿರ ವಾಹನಗಳನ್ನು ಖರೀದಿಸ    ಬಹುದು ಎಂದು ಎಲ್‌ಟಿಎ ಪ್ರಕಟಿಸಿದರೆ, ವಾಹನ ಖರೀದಿ ಸಲು ಇಚ್ಛಿಸುವ ನಾಗರಿಕರು ಅರ್ಜಿ ಹಾಕಿ (ವಾಹನದ ಅಗತ್ಯ ಕುರಿತು ಸಂಪೂರ್ಣ ವಿವರದೊಂದಿಗೆ) ಕಾಯಬೇಕು. ಎಲ್‌ಟಿಎ ಎಲ್ಲವನ್ನೂ ಪರಿಶೀಲಿಸಿ ಅನುಮತಿ ನೀಡಿದರೆ, ನೀವು ವಾಹನ ಕೊಳ್ಳಬಹುದು. ಅದಕ್ಕೆ ತಕ್ಕಂತೆ ವಾಹನ ಮಾರಾಟ ಕಂಪೆನಿಗಳೂ ಇವೆ.

ಒಂದು ಅಂದಾಜಿನ ಪ್ರಕಾರ ಸಿಂಗಾಪುರದಲ್ಲಿ ವಾಹನ ಖರೀದಿ ಎಷ್ಟೊಂದು ದುಬಾರಿಯೆಂದರೆ ಶೋಕಿಗೆಂದು ವಾಹನ ಕೊಳ್ಳು ವವರಿಗೆಲ್ಲ ಆಘಾತವಾದೀತು. ಅಮೆರಿಕಕ್ಕಿಂತಲೂ ನಾಲ್ಕು ಪಟ್ಟು ದರ ಹೆಚ್ಚಳ. ಅಮೆರಿಕದಲ್ಲಿ 8 ಲಕ್ಷ ರೂ.ಗೆ ಒಂದು ಕಾರು ಲಭ್ಯವಾಗು ದಾದರೆ, ಸಿಂಗಾಪುರದಲ್ಲಿ 32 ಲಕ್ಷ ಪಾವತಿಸಬೇಕೆಂದುಕೊಳ್ಳಿ. ಯಾರು ತಾನೇ ದುಸ್ಸಾಹಸಕ್ಕೆ ಕೈ ಹಾಕಿಯಾರು ಎನಿಸುವುದಿಲ್ಲವೇ?

ಸಾರ್ವಜನಿಕ ಸಾರಿಗೆ ಅಭಿವೃದ್ಧಿ
ನಮಗೂ ಅವರಿಗೂ ಇರುವ ವ್ಯತ್ಯಾಸವೇ ಇಲ್ಲಿ. ನಾವು ವಾರ್ಷಿಕ ಲಕ್ಷಾಂತರ ವಾಹನಗಳನ್ನು ನೋಂದಣಿ ಮಾಡಿಕೊಳ್ಳುತ್ತಾ, ಒಂದೋ ಎರಡೋ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಾ, ಒಂದು ಮೇಲ್ಸೇತುವೆಗೆ ಶಂಕುಸ್ಥಾಪನೆ ಹಾಕುತ್ತಾ (ಇದು ಪೂರ್ಣಗೊಳ್ಳಲು ಹತ್ತು ವರ್ಷ ಬೇಕು. ಅಷ್ಟರೊಳಗೆ ಸಾವಿರ ಪಟ್ಟು ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುವುದು ಬೇರೆ ಮಾತು), ಹತ್ತು ಬಸ್ಸುಗಳನ್ನು ಹೆಚ್ಚಿಸುತ್ತಾ ದಿನಗಳನ್ನು ನೂಕುತ್ತೇವೆ. ಅದರೆ ಸಿಂಗಾಪುರ ಆಡಳಿತ ನಮಗಿಂತ ಭಿನ್ನವಾಗಿ, ಒಂದೆಡೆ ನಿರ್ಬಂಧ ಹೇರುತ್ತಲೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ದುಡ್ಡು ಸುರಿಯುತ್ತದೆ. ಪ್ರತಿ ವರ್ಷ ತನ್ನ ರೈಲು ಸಾರಿಗೆ ವ್ಯವಸ್ಥೆ ಸುಧಾರಣೆಗೆ (ಹೊಸ ಮಾರ್ಗ ಮತ್ತು ಮೂಲ ಸೌಕರ್ಯ ಇತ್ಯಾದಿ) 20 ಬಿಲಿಯನ್‌ ಸಿಂಗಾಪುರ್‌ ಡಾಲರ್‌ಗಳಷ್ಟನ್ನು ವ್ಯಯ ಮಾಡುತ್ತದೆ. ಹಾಗೆಯೇ ಬಸ್‌ ಮಾರ್ಗ ಹೆಚ್ಚಿಸಲು, ಖಾಸಗಿ ಬಸ್‌ ಸೇವೆಯ ಸಬ್ಸಿಡಿ ಇತ್ಯಾದಿಗೆ 4 ಬಿಲಿಯನ್‌ ಸಿಂಗಾಪುರ್‌ ಡಾಲರ್‌ ವೆಚ್ಚ ಮಾಡುತ್ತದೆ. 

ಪ್ರಸ್ತುತ ಸುಮಾರು 6 ಲಕ್ಷ ವಾಹನಗಳು (ಕಾರು ಇತ್ಯಾದಿ ಬಾಡಿಗೆ ವಾಹನ) ಸಿಂಗಾಪುರ ರಸ್ತೆಯಲ್ಲಿ ಓಡಾಡುತ್ತಿವೆಯಂತೆ. ಇಷ್ಟೊಂದು ನಿರ್ಬಂಧ ಮತ್ತು ನಿಯಮಗಳಿದ್ದಾಗ್ಯೂ 2000ದಿಂದ ಇದುವರೆಗೆ ಸುಮಾರು ಶೇ.40ರಷ್ಟು ವಾಹನ ಸಂಖ್ಯೆ ಹೆಚ್ಚಾಗಿದೆಯಂತೆ. ಒಂದು ವೇಳೆ ಯಾವುದೇ ನಿಯಮಗಳಿಲ್ಲದಿದ್ದರೆ ನಮ್ಮ ಬೆಂಗಳೂರು, ದಿಲ್ಲಿಯಂತೆಯೇ ಆಗುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.

ಎಲ್ಲಿಂದ ತರೋದು ರಸ್ತೆಯನ್ನು!
ಇದು ಸಿಂಗಾಪುರ ಸರಕಾರದ ಚಿಂತೆ. ವಾಹನಗಳಿಗೇನೋ ಅವಕಾಶ ಕೊಡಬಹುದು. ಆದರೆ, ಅವುಗಳಿಗೆ ರಸ್ತೆ ಬೇಡವೇ? 
ಅದೆ ಲ್ಲಿಂದ ತರೋದು ಎನ್ನುವುದು ಇದರ ಆತಂಕ. ಈಗಾಗಲೇ ಸಿಂಗಾ ಪುರದ ಶೇ.12ರಷ್ಟು ಭೂ ಪ್ರದೇಶವನ್ನು ರಸ್ತೆಗಳು ಆವರಿಸಿಕೊಂಡಿವೆ. ಭೂ ಪ್ರದೇಶದ ಕೊರತೆಯೂ ಸೇರಿದಂತೆ ಹಲವು ಕಾರಣಗಳಿಂದ ಇನ್ನಷ್ಟು ರಸ್ತೆಗಳನ್ನು ನಿರ್ಮಿಸುವುದು ಕಷ್ಟಸಾಧ್ಯ ಎಂಬುದು ಅಲ್ಲಿನ ಆಡಳಿತದ ಅಭಿಪ್ರಾಯ. ಈಗ ಹೇಳಿ. ನಾವು ಹೀಗೆ ಯೋಚಿಸುತ್ತೇ ವೆಯೇ? ಖಂಡಿತ ಇಲ್ಲ ಎಂಬುದು ನನ್ನ ಅಭಿಮತ. 

ಇದು ಬೆಂಗಳೂರು ಇದು ಬೆಂಗಳೂರು
ಸಾರಿಗೆ ಇಲಾಖೆ ನೀಡುವ ಮಾಹಿತಿ ಪ್ರಕಾರ 2017ರ ಸೆಪ್ಟೆಂಬರ್‌ ಅಂತ್ಯಕ್ಕೆ, ಸುಮಾರು 50 ಲಕ್ಷ (49.40 ಲಕ್ಷ) ದ್ವಿಚಕ್ರವಾಹನಗಳಿವೆ. 13.79 ಲಕ್ಷ ಕಾರುಗಳು ರಸ್ತೆಗಿಳಿದಿವೆ. ಅಂದರೆ ಒಟ್ಟು ಎಲ್ಲ ಬಗೆಯ ವಾಹನಗಳು ಸೇರಿದರೆ 71 ಲಕ್ಷ. ಇದರಲ್ಲಿ ಸಿಂಹಪಾಲು ಕಾರು ಮತ್ತು ದ್ವಿಚಕ್ರವಾಹನಗಳದ್ದೇ. ಅಂದರೆ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ನಮ್ಮ ಸರಕಾರಗಳು ತೋರುತ್ತಿರುವ ಆಸಕ್ತಿ ಯನ್ನು ಇದು ಬಿಂಬಿಸಬಲ್ಲದು. ಇದನ್ನು ಪುಷ್ಟೀಕರಿಸುವಂತೆ, 2009ರ ಸುಮಾರಿನಲ್ಲಿ ಸುಮಾರು 500 ಬಿಎಂಟಿಸಿ ಬಸ್ಸುಗಳಿದ್ದರೆ ಇಂದು ಅವುಗಳ ಸಂಖ್ಯೆ 6,400ಕ್ಕೆ ತಲುಪಿದೆ. ಅಂದರೆ ಸುಮಾರು ಎಂಟು ವರ್ಷಗಳಲ್ಲಿ 6 ಸಾವಿರ ಬಸ್ಸುಗಳು ಹೆಚ್ಚಳವಾಗಿರಬಹುದು.

ಇನ್ನಾದರೂ ನಾವು ಮತ್ತಷ್ಟು ದಿಲ್ಲಿಗಳನ್ನು ನಿರ್ಮಿಸೋದನ್ನು ತಡೆಯಲು ಈಗಲೇ ಕಾರ್ಯ ಪ್ರವೃತ್ತರಾಗಬೇಕಿದೆ. ಬೆಂಗಳೂರಿನಂಥ ಕೆಲವು ನಗರಗಳನ್ನು ಬಿಟ್ಟುಬಿಡೋಣ. ನಮ್ಮ ಸಣ್ಣ ನಗರಗಳನ್ನು, ಬೆಳೆಯುತ್ತಿರುವ ನಗರಗಳನ್ನು ಉಳಿಸಿಕೊಳ್ಳೋಣ. ಅವುಗಳನ್ನು ಯೋಜನಾಬದ್ಧ ಅಭಿವೃದ್ಧಿಗೆ ಅಳವಡಿಸೋಣ. ಆಗ, ನಾವು ನಿರಾಳ ವಾಗಿ ಉಸಿರಾಡಬಹುದು. ಭವಿಷ್ಯದ ತಲೆಮಾರುಗಳೂ ನಮ್ಮ ಬುದ್ಧಿ ವಂತಿಕೆಯನ್ನು ಕೊಂಡಾಡಬಹುದು. ಇಲ್ಲವಾದರೆ ನಾವೂ ಹೊಗೆ ಕೊಳವೆಯೊಳಗೆ ಹೋಗಿ ಬರುವುದನ್ನು ರೂಢಿಸಿಕೊಳ್ಳಬೇಕಾದೀತು.

ಅರವಿಂದ ನಾವಡ


Trending videos

Back to Top