CONNECT WITH US  

ಒಂದು ಹನಿ ನೀರು ಇದ್ದರೆ ಸಾಲ ಕೊಡುತ್ತೀರಾ?

ನೀತಿ ಆಯೋಗದ ಇತ್ತೀಚಿನ ವರದಿಯ ಅಂಶ ಗಮನಿಸಿದರೆ ಹತ್ತು ವರ್ಷಗಳಲ್ಲಿ ಕನಿಷ್ಠ ಒಂದಿಷ್ಟು ನಗರಗಳಾದರೂ "ನಮ್ಮಲ್ಲಿ ನೀರು ಲಭ್ಯವಿಲ್ಲ' ಎಂಬ ಫ‌ಲಕಗಳನ್ನು ತೂಗು ಹಾಕಬೇಕು. ಅದರೊಂದಿಗೇ "ಒಂದು ಹನಿ ನೀರು ಇದ್ದರೆ ಸಾಲ ಕೊಡಿ' ಎಂಬ ಫ‌ಲಕಗಳನ್ನೂ ಹಾಕಬೇಕು! 

ಕೇಂದ್ರದ ನೀತಿ ಆಯೋಗ ಮೂರು ತಿಂಗಳ ಹಿಂದೆ ಒಂದು ವರದಿಯನ್ನು ಬಿಡುಗಡೆ ಮಾಡಿತು. ಅದರಲ್ಲಿನ ಕೆಲವು ಅಂಶಗಳು ಆತಂಕ ಹುಟ್ಟಿಸಿದ್ದೂ ನಿಜ. ಸಾಕಷ್ಟು ಮಾಧ್ಯಮಗಳಲ್ಲೂ ಆ ವರದಿ ಪ್ರಸಾರವಾಯಿತು. ಆದರೆ ಯಾವುದೇ ಸರಕಾರ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡದ್ದು ಕಂಡು ಬರಲಿಲ್ಲ. ಅದಕ್ಕೆ ಸಂಬಂಧಪಟ್ಟ ಇಲಾಖೆಯಾಗಲೀ, ಅಧಿಕಾರಿಗಳಾಗಲೀ ಅದರಲ್ಲಿನ ಅಂಶಗಳ ಕುರಿತು ಪ್ರಸ್ತಾಪಿಸಿದ್ದಾಗಲೀ, ಚರ್ಚೆ ನಡೆಸಿದ್ದಾಗಲೀ, ಹೀಗಾದರೆ ಮುಂದೇನು ಎಂದು ಆತಂಕ ಪಡುತ್ತಲೇ ಮಾರ್ಗೋಪಾಯಗಳನ್ನು ಹುಡುಕುವಲ್ಲಿ ತೊಡಗಿದ್ದಾಗಲೀ ಕಂಡು ಬರಲಿಲ್ಲ. 

ಬಹುಶಃ ಅದಕ್ಕೆ ಇದೊಂದು ಕಾರಣವಿರಬಹುದೇನೋ? ಸ್ವಲ್ಪ ವ್ಯಂಗ್ಯವೆನಿಸಬಹುದು. ಆದರೆ ಕೆಲವೊಮ್ಮೆ ಸರಕಾರಿ ವ್ಯವಸ್ಥೆಯಲ್ಲಿ ಈ ವ್ಯಂಗ್ಯವೂ ಸಹಜವಾಗಿಯೇ ಇರುತ್ತದೆ. ಅಂದರೆ ದಿನದ ಪದ್ಧತಿಯಂತಾಗಿರುತ್ತದೆ. ನೀತಿ ಆಯೋಗದ ವರದಿ ಪ್ರಸ್ತಾಪಿಸಿದ್ದು ನಮ್ಮ ಮಹಾನಗರಗಳಲ್ಲಿನ ನೀರಿನ ಸೆಲೆ ಬತ್ತಿ ಹೋಗುವ ಕುರಿತು. ಯಾವ್ಯಾವ ನಗರಗಳಲ್ಲಿ ಯಾವ್ಯಾವ ವರ್ಷದಿಂದ ನೀರಿಗಾಗಿ ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆಂದು ಅಂಕಿ ಅಂಶ ಸಮೇತ ವಿವರಿಸಿತ್ತು. 

ವಿಚಿತ್ರವೆಂದರೆ ಆ ಹೊತ್ತಿಗೆ ಮುಂಗಾರು ಪ್ರವೇಶಕ್ಕೆ ಸಿದ್ಧತೆ ನಡೆದಿತ್ತು. ಮೋಡಗಳೂ ಕಪ್ಪಾಗುತ್ತಿದ್ದವು. ತಂಗಾಳಿಯೂ ಬೀಸತೊಡಗಿತ್ತು. ಇಂಥ ತಂಪು ಹೊತ್ತಿನಲ್ಲಿ ಯಾರು ತಾನೇ ಬರದ ಭೀಕರ ಕನಸನ್ನು ನೆನಪಿಸಿಕೊಳ್ಳುತ್ತಾರೆ ಅಲ್ಲವೇ? ಇದಕ್ಕೆ ಜತೆಯಾಗಿ ಮೂರು ತಿಂಗಳು ಚೆನ್ನಾಗಿ ಮಳೆ ಸುರಿಯಿತು (ಕೆಲವು ಪ್ರದೇಶಗಳಲ್ಲಿ ಬರವಿದ್ದಿರಬಹುದು). ಕೊಡಗು ಬಿರಿಯಿತು, ಕೇರಳ ಮುಳುಗಿತು. ಹೀಗೆಲ್ಲಾ ಆದಾಗ ಮುಂದಿನ ಎರಡು ವರ್ಷಗಳಲ್ಲೋ, ಐದು ವರ್ಷಗಳಲ್ಲೋ ಪ್ರತಿ ಹನಿಗೂ ಕಷ್ಟಪಡುವ ದಿನಗಳು ಬರುತ್ತವೆಂದು ಹೇಳಿದರೆ ನಂಬುವುದಾದರೂ ಹೇಗೆ? 

ಇದೇ ಸಮಸ್ಯೆ ನಮ್ಮ ಸರಕಾರ, ಇಲಾಖೆಗಳು, ಅಧಿಕಾರಿಗಳಿಗೆ ಬಂದಿರಬೇಕು. ಹಾಗಾಗಿಯೇ ವರದಿ ಕುರಿತು ಸಣ್ಣದೊಂದು ಚರ್ಚೆಯೂ ನಡೆಯದಿರುವುದು ಸ್ಪಷ್ಟ. ಹಾಗೆಂದು ಪರಿಸ್ಥಿತಿ ಬದಲಾಗುತ್ತದೆಯೇ? ಖಂಡಿತಾ ಇಲ್ಲ. ಇಂಥ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಲು ಪ್ರಯತ್ನಿಸಬೇಕು. ಅದಕ್ಕಾಗಿಯೇ ಇಂಥ ಸಂಸ್ಥೆಗಳು ಅಧ್ಯಯನ ನಡೆಸುವುದು. 

ವರದಿ ಏನು ಹೇಳುತ್ತದೆ? 
ಅಷ್ಟಕ್ಕೂ ವರದಿ ಏನು ಹೇಳುತ್ತದೆಂಬುದು ಗೊತ್ತೇ? ಪ್ರಸ್ತುತ ನೀರಿನ ಕೊರತೆಯಿಂದ ದೇಶದ 60 ಕೋಟಿ ಜನರು ಬಸವಳಿದಿದ್ದಾರೆ. ಇದು ಸಾಮಾನ್ಯ ಕೊರತೆಯಲ್ಲ; ತೀವ್ರ ಕೊರತೆ. ಅತ್ಯಂತ ಬೇಸರದ ಸಂಗತಿಯೆಂದರೆ ಸುಮಾರು 2 ಲಕ್ಷ ಮಂದಿ ಸೂಕ್ತ ಕುಡಿಯಲು ನೀರು ಸಿಗದೇ ಸಾಯುತ್ತಾರೆ. ಇದು ಇಂದಿನ ಕಥೆ. ಆದರೆ 2030ರ ಹೊತ್ತಿಗೆ ಈಗಿರುವ ಬೇಡಿಕೆ ದುಪ್ಟಟ್ಟುಗೊಂಡು ಕೊರತೆ ಎಂಬುದು ಮುಗಿಲು ಮುಟ್ಟುತ್ತದೆ. ಒಂದು ಅಂದಾಜಿನ ಪ್ರಕಾರ ನೂರು ಕೋಟಿಯಷ್ಟು ಜನ ಈ ತೀವ್ರ ಕೊರತೆಯ ಪಟ್ಟಿಗೆ ಸೇರಬಹುದಂತೆ. ಇದರಿಂದ ರಾಷ್ಟ್ರೀಯ ಒಟ್ಟೂ ಆದಾಯ ಶೇ. 6 ರಷ್ಟು ಕುಸಿಯಬಹುದಂತೆ. ಈ ವರದಿಯನ್ನು ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಬಿಡುಗಡೆಗೊಳಿಸಿದ್ದರು. 

ವರದಿ ಹೇಳುವಂತೆ 2020ರೊಳಗೆ ದೇಶದ ಕನಿಷ್ಠ 21 ನಗರಗಳ ಅಂತರ್ಜಲ ಬರಿದಾಗುತ್ತದೆ. ಇದು ಒಂದು ಬಗೆಯ ಸಮಸ್ಯೆ ಸೃಷ್ಟಿಸಿದರೆ, ಮತ್ತೂಂದು ಬಗೆಯಲ್ಲಿ ದೇಶದಲ್ಲಿರುವ ಶೇ. 70ರಷ್ಟು ನೀರು ಒಂದಲ್ಲಾ ಒಂದು ಅಂಶದಿಂದ ಕಲುಷಿತಗೊಂಡಿದೆ. ಅದೇ ಕಾರಣಕ್ಕಾಗಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ವಿಶ್ವದ 122 ರಾಷ್ಟ್ರಗಳ ಪೈಕಿ ನಮ್ಮ ದೇಶಕ್ಕೆ 120ನೇ ಸ್ಥಾನ ಸಿಕ್ಕಿದೆ. ಇದೇ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ವಿವಿಧ ಮಾನದಂಡಗಳ ಮೂಲಕ (ಅಂತರ್ಜಲ ಮಟ್ಟ, ಕೆರೆಗಳ ಅಭಿವೃದ್ಧಿ, ನೀರಾವರಿ, ಕೃಷಿ ಪದ್ಧತಿ, ಕುಡಿಯುವ ನೀರು ಹಾಗೂ ಅದಕ್ಕೆ ಸಂಬಂಧಿಸಿದ ನೀತಿ ನಿರೂಪಣೆ ಇತ್ಯಾದಿ) ರಾಜ್ಯಗಳನ್ನು ಪಟ್ಟಿ ಮಾಡಿತ್ತು.  

ಈ ಪಟ್ಟಿಯಲ್ಲಿ ಒಂದು ಸಮಾಧಾನದ ಸಂಗತಿಯೆಂದರೆ ಕೆಲವು ರಾಜ್ಯಗಳಲ್ಲಿ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒಂದಿಷ್ಟು ರಚನಾತ್ಮಕ ಕಾರ್ಯಕ್ರಮಗಳಾಗುತ್ತಿವೆ ಎಂಬುದು. ಮತ್ತೂ ಸಂತಸದ ಸಂಗತಿಯೆಂದರೆ, ಸ್ವಲ್ಪ ಪರವಾಗಿಲ್ಲ ಎನ್ನುವ ರಾಜ್ಯಗಳ ಅಗ್ರ ಪಂಕ್ತಿಯಲ್ಲಿ ಗುಜರಾತ್‌ ಇದ್ದರೂ, ಉಳಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೂ ಸ್ಥಾನವಿದೆ. ಉಳಿದಂತೆ ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳೂ ಜತೆಗಿವೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಸ್ಥಿತಿ ಶೋಚನೀಯವಾಗುತ್ತಿದೆ. 

ಅವರೆಲ್ಲಾ ಏನು ಮಾಡಿದರು?
ಗುಜರಾತ್‌ನಲ್ಲಿ ಬಹಳ ಮುಖ್ಯವಾಗಿ ನೀರು ಬಳಕೆದಾರರ ಸಂಘಗಳನ್ನು ಮಾಡಲಾಗಿದೆ. ಸ್ಥಳೀಯರಿಂದಲೇ ನಿರ್ವಹಣೆಯಾಗುವ ಸಮಿತಿ, ನೀರು ವಿತರಣೆ ಇತ್ಯಾದಿಯ ಹೊಣೆಯನ್ನೂ ನಿರ್ವಹಿಸುತ್ತದೆ. ಒಂದು ಹನಿಯೂ ವ್ಯರ್ಥವಾಗಲು ಸಮಿತಿ ಬಿಡುವುದಿಲ್ಲ. ಹೀಗೆ ಹಗಲು ರಾತ್ರಿಯೆನ್ನದೇ ದುಡಿಯುತ್ತದೆ ಪ್ರತಿ ಹನಿ ಉಳಿಸಲು. 

ಮಧ್ಯ ಪ್ರದೇಶದ ಮಾಡೆಲ್‌ ಹೇಗಿದೆ ಗೊತ್ತೇ?
2006ರಲ್ಲಿ ಭಗೀರಥ ಕೃಷಿಕ್‌ ಅಭಿಯಾನ ಎಂಬ ಕಾರ್ಯಕ್ರಮ ದಿವಾಸ್‌ ಜಿಲ್ಲೆಯಲ್ಲಿ ಶುರು ಮಾಡಲಾಯಿತು. ಇದರ ಹಿಂದಿದ್ದು ಒಬ್ಬ ಐಎಎಸ್‌ ಅಧಿಕಾರಿ. ಅವರು ಬೇರೇನೂ ಮಾಡಲಿಲ್ಲ. ನಮ್ಮ ಕೆಂಪೇಗೌಡರು, ಉಳಿದ ರಾಜ ಮಹಾರಾಜರು ಮಾಡಿದ್ದನ್ನೇ ಮಾಡಿದರು. ಏನೆಂದರೆ ಸ್ಥಳೀಯವಾಗಿ ಲಭ್ಯವಿದ್ದ ಕೆರೆಗಳನ್ನೆಲ್ಲಾ ಅಭಿವೃದ್ಧಿಗೊಳಿಸಿದರು. ಅದರಲ್ಲಿನ ಹೂಳು ತೆಗೆದು, ನೀರು ಸಂಗ್ರಹ ಸಾಮರ್ಥಯ ಹೆಚ್ಚಿಸಿದರು. ಅದರ ಮೂಲಕ ನೀರಾವರಿ ಸೌಲಭ್ಯವನ್ನು ಹೆಚ್ಚಿಸುವತ್ತ ಮುಖ ಮಾಡಿದರು. ಅಲ್ಲಿಗೇ ಈ ಅಭಿಯಾನದ ಪ್ರಯತ್ನ ನಿಲ್ಲಲಿಲ್ಲ. ಜಿಲ್ಲೆಯಲ್ಲಿ ಒಟ್ಟು ಸುಮಾರು ಒಂದು ಸಾವಿರ ಕೆರೆಗಳನ್ನು ನಿರ್ಮಿಸಿದರು. ನಬಾರ್ಡ್‌ ಸಂಸ್ಥೆ ಇದಕ್ಕೆ ಕೈ ಜೋಡಿಸಿತು. ಸ್ಥಳೀಯ ಅಧಿಕಾರಿಗಳು, ರೈತರೂ ದುಡಿದರು. ಸೇವಾ ಸಂಸ್ಥೆಗಳೂ ಟೊಂಕ ಕಟ್ಟಿ ನಿಂತವು. ಎಲ್ಲರೂ ಕೈಕೆಸರು ಮಾಡಿಕೊಂಡಿದ್ದರಿಂದ ಬಾಯಿ ಮೊಸರು ಎಂಬಂತೆ ಕೆರೆಗಳಲ್ಲಿ ನೀರು ತುಂಬಿಕೊಂಡಿತು. 

ಕೆಲವೇ ವರ್ಷಗಳಲ್ಲಿ ಈ ಸಂಖ್ಯೆ (ಕಿರು ಅಣೆಕಟ್ಟು ಮಾದರಿ) 8 ಸಾವಿರಕ್ಕೆ ಏರಿತು. ಇದರಿಂದ ಸುತ್ತಲಿನ 40 ಸಾವಿರ ಎಕ್ರೆಗೆ ನೀರಾವರಿಯ ಕನಸು ನನಸಾಯಿತು. ವರ್ಷಕ್ಕೆರಡು ಬೆಳೆ ತೆಗೆಯಲು ಸಮಸ್ಯೆಯೇ ಆಗುತ್ತಿಲ್ಲ. ಪೂರಕವಾಗಿ ರಸಗೊಬ್ಬರ ಬಳಕೆ ಕಡಿಮೆ ಮಾಡಿದರು, ವಿದ್ಯುತ್‌ ಬಳಸಿ ನೀರು ಪಂಪ್‌ ಮಾಡುವ ಪದ್ಧತಿಗೆ ಇತಿಶ್ರೀ ಹಾಡಿದರು. ಸಾವಿರಾರು ಗಂಟೆಗಳು ಅವರ ಬದುಕಿನಲ್ಲಿ ಉಳಿದವು. ಅವರ ಕೆರೆಗಳ ಸುತ್ತ ಹಕ್ಕಿಗಳು ಬರತೊಡಗಿದವು. ಸುತ್ತಲೂ ಹಸಿರು ಹೆಚ್ಚಿತು. ಇವೆಲ್ಲದರ ಒಟ್ಟು ಪರಿಣಾಮ ಅವರು ಸೇವಿಸುವ ಗಾಳಿ, ಆಹಾರದ ಗುಣಮಟ್ಟ ಹೆಚ್ಚಳದ ಮೇಲೂ ಪರಿಣಾಮ ಬೀರಿತು. ಒಟ್ಟಿನಲ್ಲಿ ಜೀವನಮಟ್ಟದಲ್ಲಿ ಗುಣಾತ್ಮಕ ಬದಲಾವಣೆ ಕಂಡರು. ಹೀಗೆಯೇ ನೀರಿಲ್ಲದೇ ಒಣಗಿಬಿಡಬಹುದಾದ 

ಬದುಕನ್ನು ಉಳಿಸಿಕೊಂಡರು.
ನಗರಗಳ ಕಥೆಯೂ ಹೌದು ಇದನ್ನು ನಾವು ಗ್ರಾಮೀಣ ಕಥೆಗಳೆಂದು ಮರೆತು ಬಿಡಬೇಕಿಲ್ಲ. ಇದರಿಂದ ನಗರಗಳೂ ಕಲಿತುಕೊಳ್ಳಬೇಕಾದದ್ದು ಬಹಳಷ್ಟಿದೆ. ನಮ್ಮ ಬೆಂಗಳೂರಿಂದ ಹಿಡಿದು ಎಲ್ಲ ನಗರಗಳೂ ಒಂದು ಕಾಲದಲ್ಲಿ ಕೆರೆಯನ್ನೇ ಅವಲಂಬಿಸಿದವು. ದಿನೇ ದಿನೆ ಕೆರೆಗಳು ಕರಗಿ ಕರಗಿ ಮಂಜುಗೆಡ್ಡೆಯಂತೆ ನೀರಾಗಿ ಹೋದ ಮೇಲೆ ಸಮಸ್ಯೆಗಳು ಆರಂಭವಾಗಿವೆ. ಮತ್ತೆ ಮತ್ತೆ ಬೆಂಗಳೂರಿನ ಕಥೆ ಹೇಳಬೇಕಿಲ್ಲ. 250 ಕ್ಕೂ ಹೆಚ್ಚು ಅತ್ಯುತ್ತಮ ಕೆರೆಗಳು ಇದ್ದ ರಾಜಧಾನಿಯಲ್ಲಿ ಈಗ ಆರೋಗ್ಯಕರ ಕೆರೆಗಳನ್ನು ದುರ್ಬೀನು ಹಾಕಿ ಹುಡುಕುವ ಸ್ಥಿತಿ ಇದೆ. ಒಂದಿಷ್ಟು ಕೆರೆಗಳನ್ನು ನಾವೇ ಕಟ್ಟಡದ ಅವಶೇಷಗಳನ್ನು ತುಂಬಿಯೋ, ತ್ಯಾಜ್ಯಗಳನ್ನು ಬಿಟ್ಟು ಕಲುಷಿತಗೊಳಿಸಿಯೋ ಸಾಯಿಸಿದೆವು. ಬಳಿಕ ದೊಡ್ಡ ವಸತಿ ಬಡಾವಣೆಯನ್ನೋ, ಜಗತ್ತು ಬೆಚ್ಚಿ ಬೀಳುವಂತಹ ವಸತಿ ಸಮುಚ್ಚಯವನ್ನೋ, ಬಸ್ಸು ನಿಲ್ದಾಣವನ್ನೋ ಸೃಷ್ಟಿಸಿ ಬೀಗಿದೆವು. ಈಗ ಪ್ರತಿ ಹನಿಗೆ ಎಷ್ಟು ದುಡ್ಡನ್ನಾದರೂ ಕೊಡಲು ಸಿದ್ಧವಿದ್ದೇವೆ, ಯಾಕೆಂದರೆ ಜೇಬು ಭರ್ತಿಯಾಗಿದೆ. 

ಮುಂದಿನ ದಿನಗಳಲ್ಲಿ ಜೇಬು ಭರ್ತಿಯಾಗಿಯೇ ಇರುತ್ತದೆ, ಖಾಲಿಯಾಗುವುದಿಲ್ಲ. ಆದರೆ ನೀರು ಮಾತ್ರ ಸಿಗುವುದಿಲ್ಲ. ಇದೇ ಭವಿಷ್ಯ. ಆದರ ಹೆಬ್ಟಾಗಿಲಿನಲ್ಲಿ ಹೋಗಿ ತಲೆ ತಗ್ಗಿಸಿ ನಿಲ್ಲುವ ಮೊದಲು ಎಚ್ಚೆತ್ತುಕೊಂಡರೆ, ನಾವು ಮತ್ತು ನಮ್ಮ ಮುಂದಿನ ತಲೆಮಾರುಗಳು ನೂರು ವರ್ಷ ತಲೆ ಎತ್ತಿ ನಿಲ್ಲಬಲ್ಲವು. ಅದು ಸಾಧ್ಯವಾಗಲು ನಾವೆಲ್ಲ ಪ್ರಯತ್ನಿಸಬೇಕು, ನಮಗೆ ಗೊತ್ತಿರುವ ಮಾದರಿಯಲ್ಲೇ ಜಲ ಸಂರಕ್ಷಣೆ, ಜಾಣ್ಮೆಯ ಜಲ ನಿರ್ವಹಣೆ- ಹೀಗೆ ಒಂದೊಂದು ಸಣ್ಣ ಸಣ್ಣ ಪ್ರಯತ್ನ ಮಾಡಿದರೆ ಸಾಕು, ದೊಡ್ಡ ಬೆಟ್ಟವನ್ನೇನೂ ಕಡಿಯಬೇಕಾಗಿಲ್ಲ. ನಮ್ಮ ಎಲ್ಲರ ಮನೆ-ಮನಗಳಲ್ಲಿ ಇಂದಿನಿಂದಲೇ ಒಂದು ಬೋರ್ಡು ಹಾಕಿಕೊಳ್ಳೋಣ-"ಒಂದು ಹನಿ ಬಳಸುವಾಗಲೂ ವಿವೇಚನೆಯಿಂದ ಬಳಸೋಣ'. 


Trending videos

Back to Top