ನಾಯಕತ್ವ ವಿಫ‌ಲವಾಯಿತೇ?

Team Udayavani, May 24, 2019, 6:00 AM IST

ಪ್ರಧಾನಿ ನರೇಂದ್ರ ಮೋದಿಗೆ ಪೈಪೋಟಿ ನೀಡುವಂತೆ ದೇಶಾದ್ಯಂತ ಹಲವು ಚುನಾವಣಾ ಪ್ರಚಾರ ರ್ಯಾಲಿಗಳು, ರೋಡ್‌ ಶೋಗಳನ್ನು ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ಗುರಿ ಮುಟ್ಟುವಲ್ಲಿ ಸೋತಿದ್ದಾರೆ. ತಮ್ಮನ್ನು ತಾವು ಪರ್ಯಾಯ ನಾಯಕನೆಂದು ಗುರುತಿಸಿಕೊಳ್ಳುವ ಬದಲಾಗಿ ಪ್ರಧಾನಿ ಮೋದಿ ವಿರುದ್ಧ ‘ಚೌಕಿದಾರ್‌ ಚೋರ್‌ ಹೇ’ ಎಂಬ ಅಸ್ತ್ರವನ್ನೇ ಪ್ರಯೋಗಿಸಿಕೊಂಡು ಗೆಲ್ಲುತ್ತೇನೆಂಬ ಅವರ ಮೂರ್ಖತನದ ಲೆಕ್ಕಾಚಾರವೇ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣವಾಯಿತು.

ರಫೇಲ್, ನಿರುದ್ಯೋಗ, ಕೃಷಿ ಸಮಸ್ಯೆ ಸೇರಿದಂತೆ ರಾಹುಲ್ ಯಾವ ವಿಚಾರಗಳನ್ನು ಎತ್ತಿಕೊಂಡು ಚುನಾವಣೆ ಎದುರಿಸಿದರೋ, ಅದ್ಯಾವುದೂ ಕಾಂಗ್ರೆಸ್‌ ಪರ ಮತಗಳಾಗಿ ಬದಲಾಗಲೇ ಇಲ್ಲ. ಎರಡೂ ಕೈಗಳನ್ನು ಬೆನ್ನ ಹಿಂದಕ್ಕೆ ಕಟ್ಟಿಕೊಂಡೇ ಚುನಾವಣಾ ರಣಾಂಗಣಕ್ಕೆ ಇಳಿದ ರಾಹುಲ್, ಜನರ ವಿಶ್ವಾಸ ಗಳಿಸುವಲ್ಲಿ ವಿಫ‌ಲವಾದರು. ಒಂದು ಹಂತದಲ್ಲಿ ದೇಶದ ಬಡ ಕುಟುಂಬಗಳಿಗೆ ಆದಾಯ ಖಾತ್ರಿ ಒದಗಿಸುವಂಥ ‘ನ್ಯಾಯ್‌’ ಯೋಜನೆಯನ್ನು ಘೋಷಿಸಿ, ಅದು ಬಡತನದ ವಿರುದ್ಧದ ಸರ್ಜಿಕಲ್ ದಾಳಿ ಎಂದು ಹೇಳುತ್ತಲೇ ದೇಶದ ಬಡ ವರ್ಗದ ಮತಗಳನ್ನು ಸೆಳೆಯಲು ರಾಹುಲ್ ಪ್ರಯತ್ನಿಸಿದರು. ಆದರೆ, ಅವರು ‘ನ್ಯಾಯ್‌’ ಯೋಜನೆಯ ಮೂಲಕ ದೇಶದ ಜನರಲ್ಲಿ ಕನಸು ಬಿತ್ತಲು ಹೊರಟರೆ, ಬಿಜೆಪಿಯು ಅದಾಗಲೇ ಜಾರಿಗೆ ತಂದಿದ್ದ ಕಿಸಾನ್‌ ಸಮ್ಮಾನ್‌ ಯೋಜನೆ, ಉಜ್ವಲ, ಆಯುಷ್ಮಾನ್‌ ಭಾರತ್‌ ಯೋಜನೆ ಗಳು ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿಯಾಗಿತ್ತು.

ರಾಹುಲ್ ಎಡವಿದ್ದೆಲ್ಲಿ?: ಪ್ರಧಾನಿ ಮೋದಿ ಅವರನ್ನು ಟೀಕಿಸುವುದನ್ನು ಬಿಟ್ಟರೆ, ಪ್ರಚಾರದ ವೇಳೆ ಬಳಸಲು ಬಲಿಷ್ಠ ಎನ್ನಬಹುದಾದ ಯಾವುದೇ ವಿಚಾರವು ಕಾಂಗ್ರೆಸ್‌ಗೆ ಸಿಗಲಿಲ್ಲ. ಅಲ್ಲದೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಹಾಮೈತ್ರಿ ಮಾಡಿಕೊಳ್ಳುವಲ್ಲೂ ರಾಹುಲ್ ಎಡವಿದರು. ಅತಿಯಾದ ಆತ್ಮವಿಶ್ವಾಸವು ಅವರಿಗೆ ಮುಳ್ಳಾಯಿತು ಎಂದರೆ ತಪ್ಪಾಗದು. ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಜತೆ ಇನ್ನೇನು ಮೈತ್ರಿ ನಡೆಯುತ್ತದೆ ಎಂದಿದ್ದರೂ, ಕೊನೇ ಕ್ಷಣದಲ್ಲಿ ಆ ಮಾತುಕತೆಯೂ ಮುರಿದುಬಿತ್ತು. ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ರಾಹುಲ್ಗೆ ಕೈಕೊಟ್ಟಾಗ, ಅವರ ಮನವೊಲಿಸುವ ಬದಲು ರಾಹುಲ್, ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ವಿಭಜನೆಗೆ ಕಾರಣರಾದರು. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನ ಸಂಘಟನಾ ಕೌಶಲ್ಯವು ಅತ್ಯಂತ ದುರ್ಬಲ ಎಂದೇ ಹೇಳಬಹುದು. ಪ್ರಚಾರದ ಪ್ಲಾನ್‌, ಪಬ್ಲಿಸಿಟಿ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೂ ಕಾಂಗ್ರೆಸ್‌ ಹಿಂದುಳಿಯಿತು. ಜತೆಗೆ ಕೆಲವು ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳೂ ಪಕ್ಷಕ್ಕೆ ಮುಳುವಾಯಿತು.

ಬ್ರಹ್ಮಾಸ್ತ್ರವೂ ಕೈ ಕೊಟ್ಟಿತು: ಈ ಚುನಾವಣೆಯ ಮತ್ತೂಂದು ಮಿಥ್ಯೆಯೆಂದರೆ- ಪ್ರಿಯಾಂಕಾ ಗಾಂಧಿ ವಾದ್ರಾ. ಪ್ರಿಯಾಂಕಾರಲ್ಲಿ ಜನ ಇಂದಿರಾರನ್ನೇ ಕಾಣುತ್ತಿದ್ದಾರೆ ಮತ್ತು ಅವರೊಬ್ಬ ವೋಟ್ ಕ್ಯಾಚರ್‌ ಎಂದು ಕಾಂಗ್ರೆಸ್‌ ಭ್ರಮಿಸಿತು. ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ದೊಡ್ಡ ‘ಬ್ರಹ್ಮಾಸ್ತ್ರ’ವಾಗಿ ಪ್ರಿಯಾಂಕಾರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸಿತು. ಪ್ರಿಯಾಂಕಾ ಉತ್ತಮ ವಾಗ್ಮಿ, ಸರಳ ನಾಯಕಿ ಹೌದು. ತಂದೆ ರಾಜೀವ್‌ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿಯವರ ವರ್ಚಸ್ಸು ಕೂಡ ಸ್ವಲ್ಪಮಟ್ಟಿಗೆ ಅವರಿಗಿರುವುದೂ ನಿಜ. ಆದರೆ, 2019ರ ಭಾರತವು 70 ಅಥವಾ 80ರ ದಶಕದ ಭಾರತಕ್ಕಿಂತ ಭಿನ್ನವಾದುದು ಎಂಬುದನ್ನು ಈ ಫ‌ಲಿತಾಂಶ ತೋರಿಸಿತು. ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಅವರು ನಿರಂತರ ರ್ಯಾಲಿಗಳು, ರೋಡ್‌ಶೋಗಳನ್ನು ನಡೆಸಿದರೂ, ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದರೂ, ಜನರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ, ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್‌ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ