ನಿಮಗೆ ಬುಕಿಗಳಿಂದ ಆಮಿಷ ಬಂದಿತ್ತಾ?: ಮಿಥಾಲಿಗೆ ಐಸಿಸಿ ಪ್ರಶ್ನೆ
Team Udayavani, Apr 24, 2018, 6:45 AM IST
ಕೋಲ್ಕತಾ: ನಿಮಗೆ ಯಾವತ್ತಾದರೂ ಬುಕಿಗಳಿಂದ ಆಮಿಷ ಬಂದಿದೆಯಾ? ಇದು ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಅಧಿಕಾರಿಗಳು ಕೇಳಿದ ಪ್ರಶ್ನೆ. ಕೋಲ್ಕತಾದಲ್ಲಿ ನಡೆಯುತ್ತಿರುವ ಐಸಿಸಿಯ ಐದು ದಿನಗಳ ಸಭೆಯಲ್ಲಿ ಈ ಅಚ್ಚರಿಯ ಪ್ರಶ್ನೆಯೊಂದನ್ನು ಮಿಥಾಲಿ ಎದುರಿಸಿದರು. ಐಸಿಸಿ ಪ್ರಶ್ನೆಗೆ ಮಿಥಾಲಿ ಇಲ್ಲ, ನನಗೆ ಅಂತಹ ಅನುಭವಗಳು ಆಗಿಲ್ಲ ಎಂದುತ್ತರಿಸಿದ್ದಾರೆ.
ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ಫಿಕ್ಸಿಂಗ್ ಪೆಡಂಭೂತವಾಗಿ ಬೆಳೆದಿರುವುದರಿಂದ ಮಹಿಳಾ ತಂಡಗಳ ಪರಿಸ್ಥಿತಿಯನ್ನೂ ಐಸಿಸಿ ಪರಿಶೀಲಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ಮಹಿಳಾ ಕ್ರಿಕೆಟಿಗರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಮಿಥಾಲಿಗೆ ಈ ಪ್ರಶ್ನೆ ಎದುರಾಯಿತು. ಮಿಥಾಲಿಗೂ ಮುನ್ನ 19 ವಯೋಮಿತಿಯೊಳಗಿನ ಭಾರತ ಮಹಿಳಾ ತಂಡವೂ ಐಸಿಸಿಯಿಂದ ಈ ಪ್ರಶ್ನೆಯನ್ನು ಎದುರಿಸಿತು. ಮಹಿಳಾ ಕ್ರಿಕೆಟ್ ಈಗ ಜನಪ್ರಿಯತೆ ಗಳಿಸುತ್ತಿರುವುದರಿಂದ ಸಂಭಾವ್ಯ ಅಪಾಯ ತಡೆಯಲು ಐಸಿಸಿ ಈಗಲೇ ಮುನ್ನೆಚ್ಚರಿಕೆ ವಹಿಸಿದೆ.