ಹಾಕಿ: ಭಾರತಕ್ಕೆ 6-0 ಗೆಲುವು
Team Udayavani, Jan 18, 2018, 11:01 AM IST
ಟೌರಾಂಗ: ದಿಲ್ಪ್ರೀತ್ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಅವರ ಜೋಡಿ ಗೋಲುಗಳ ಸಹಾಯದಿಂದ ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ಆಹ್ವಾನಿತ 4 ರಾಷ್ಟ್ರಗಳ ನಡುವಿನ ಹಾಕಿ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 6-0 ಗೋಲುಗಳ ಜಯ ಸಾಧಿಸಿದೆ.
ರೂಪೀಂದರ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಬಾರಿಸಿದ ತಲಾ ಒಂದು ಗೋಲುಗಳು ಭಾರತ ಎದುರಾಳಿ ತಂಡದೆದುರು ಹೆಚ್ಚು ಅಂತರ ಕಾಯ್ದುಕೊಳ್ಳಲು ನೆರವು ನೀಡಿತು. ತಂಡದ ಪರ ಮೊದಲ ಗೋಲನ್ನು ರೂಪೀಂದರ್ 7ನೇ ನಿಮಿಷದಲ್ಲಿ ಬಾರಿಸಿದರೆ, 12 ಮತ್ತು 28ನೇ ನಿಮಿಷದಲ್ಲಿ ವಿವೇಕ್ 2 ಗೋಲು ಹೊಡೆದರು. ಬಳಿಕ ದಿಲ್ಪ್ರೀತ್ ಸಿಂಗ್ ಅವರಿಂದ 35 ಹಾಗೂ 45ನೇ ನಿಮಿಷದಲ್ಲಿ 2 ಗೋಲುಗಳು ಸಿಡಿದವು.
ಈ ನಡುವೆ ಹರ್ಪ್ರೀತ್ ಸಿಂಗ್ ಅವರಿಂದ 41 ನಿಮಿಷದಲ್ಲಿ ಒಂದು ಗೋಲು ಸೇರ್ಪಡೆ ಗೊಂಡಿತು. ಆರಂಭದಿಂದಲೂ ಭಾರತ ಆಕ್ರಮಣ ಕಾರಿ ಆಟದ ಮೂಲಕ ಪ್ರಾಬಲ್ಯ ಮೆರೆಯಿತು. ಭಾರತ ತನ್ನ ದ್ವಿತೀಯ ಪಂದ್ಯವನ್ನು ಗುರುವಾರ ಬೆಲ್ಜಿಯಂ ವಿರುದ್ಧ ಆಡಲಿದೆ.