ಅಪಘಾತ: ಐವರು ಲಿಫ್ಟರ್ ಸಾವು
Team Udayavani, Jan 8, 2018, 11:54 AM IST
ಹೊಸದಿಲ್ಲಿ: ವಿಶ್ವ ಚಾಂಪಿಯನ್ ಪವರ್ಲಿಫ್ಟರ್ ಸಕ್ಷಮ್ ಯಾದವ್ ಸೇರಿದಂತೆ ಒಟ್ಟಾರೆ ಐವರು ಪವರ್ಲಿಫ್ಟರ್ಗಳು ದಿಲ್ಲಿ ಹೊರವಲಯದ ಸಿಂಗೂ ಗಡಿಭಾಗದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ದಾರುಣ ಸಾವಿಗೀಡಾದ ಘಟನೆ ನಡೆದಿದೆ.
6 ಮಂದಿ ಕ್ರೀಡಾಪಟುಗಳು ಪಾಣಿಪತ್ನಿಂದ ಆ್ಯತ್ಲೆಟಿಕ್ಸ್ ಕೂಟವೊಂದನ್ನು ಮುಗಿಸಿ ದಿಲ್ಲಿಗೆ ಹೊರಡುತ್ತಿದ್ದರು. ರವಿವಾರ ಬೆಳಗ್ಗೆ ಆಲಿಪುರ ಸಮೀಪಿಸುತ್ತಿದ್ದಂತೆ ಕ್ರೀಡಾಪಟುಗಳು ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮತ್ತೂಂದು ಕಾರನ್ನು ಓವರ್ಟೆಕ್ ಮಾಡಲು ಪ್ರಯತ್ನಿಸಿದೆ. ಈ ಸಂದರ್ಭ ಅಪಘಾತ ಸಂಭವಿಸಿದೆ. ದಿಲ್ಲಿಯ ದಟ್ಟವಾದ ಮಾಲಿನ್ಯ ಹಾಗೂ ಬೆಳಗ್ಗಿನ ಮಂಜಿನ ವಾತಾವರಣ ಹೊರತಾಗಿಯೂ ಕಾರು ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್(23), ಟಿಕಮ್ಚಂದ್, ಸೌರಭ್, ಯೋಗೇಶ್ ಹಾಗೂ ಹರೀಶ್ ರಾಯ್ ಎಂದು ಗುರುತಿಸಲಾಗಿದೆ.