ವಿಶ್ವಕಪ್‌ಗೆ ಮಂಗಳೂರಿನ ರಾಹುಲ್‌

ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಆಯ್ಕೆಯಾದ ಏಕೈಕ ಕನ್ನಡಿಗ

Team Udayavani, Apr 16, 2019, 9:44 AM IST

ಮಂಗಳೂರು: ಇಂಗ್ಲೆಂಡ್‌ನ‌ಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರನಾಗಿ ಕೆ.ಎಲ್‌. ರಾಹುಲ್‌ ಸ್ಥಾನ ಪಡೆದಿರುವುದು ಕರಾವಳಿಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ, ಹೆಮ್ಮೆ ಮೂಡಿಸಿದೆ.

ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್‌ ತರಬೇತಿ ಪಡೆದಿರುವ ರಾಹುಲ್‌ ಇತ್ತೀಚಿನ ಟೀಮ್‌ ಇಂಡಿಯಾ ಸರಣಿಗಳಲ್ಲಿ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿ ದ್ದರೂ ಐಪಿಎಲ್‌ನಲ್ಲಿ ಪಂಜಾಬ್‌ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್‌ ಆಯ್ಕೆಗೆ ಹೆಚ್ಚು ಶಕ್ತಿ ನೀಡಿತು.

ಡಾ| ಕಣ್ಣೂರು ಎನ್‌. ಲೋಕೇಶ್‌ ಮತ್ತು ರಾಜೇಶ್ವರಿ ಲೋಕೇಶ್‌ ಅವರ ಪುತ್ರ ಕಣ್ಣೂರು ಲೋಕೇಶ್‌ ರಾಹುಲ್‌ 1992ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದರು. ಬೆಳೆದದ್ದು ಮಂಗಳೂರಿನಲ್ಲಿ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ ಎನ್‌ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಬಳಿಕ ಕಾಲೇಜು ಪದವಿಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಪಿಯು ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದಾರೆ. ಬಳಿಕ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ಜೈನ್‌ ಕಾಲೇಜಿಗೆ ಸೇರ್ಪಡೆಯಾದರು.

ಮೆಚ್ಚಿದ ಆ ರಾಹುಲ್‌
ಅಂಡರ್‌-11 ವಲಯ ಮಟ್ಟದ ಕ್ರಿಕೆಟ್‌ನಲ್ಲಿ ಆಟವಾಡುವ ಮೂಲಕ ರಾಹುಲ್‌ ಕ್ರಿಕೆಟ್‌ ಜಗತ್ತಿಗೆ ಹೆಜ್ಜೆ ಇಟ್ಟಿದ್ದರು. ಬಳಿಕ 2004ರಲ್ಲಿ ನಡೆದ 13 ವರ್ಷ ವಯೋಮಿತಿಯ ಮಂಗಳೂರು ವಿಭಾಗದ 3 ಕ್ರಿಕೆಟ್‌ ಪಂದ್ಯಗಳ 4 ಇನ್ನಿಂಗ್ಸ್‌ನಲ್ಲಿ ರಾಹುಲ್‌ 650 ರನ್‌ ಪಡೆದು ಬೆಸ್ಟ್‌ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದಿದ್ದರು. ಬಳಿಕ ಅಂಡರ್‌-13 ವಿಭಾಗದ ಕರ್ನಾಟಕ ತಂಡದಲ್ಲಿ ಆಯ್ಕೆಯಾದ ರಾಹುಲ್‌ 5 ಪಂದ್ಯದಲ್ಲಿ 450 ರನ್‌ ಬಾರಿಸಿದ್ದರು. ಇದರಲ್ಲಿ 3 ಶತಕ ಹಾಗೂ ಒಂದು ಅರ್ಧ ಶತಕ ಸೇರಿತ್ತು.

ಈ ಶತಕದ ಆಟವನ್ನು ಅಂದು ರಾಹುಲ್‌ ದ್ರಾವಿಡ್‌ ಅವರೇ ನೋಡಿದ್ದರು. ಬಳಿಕ ಜೂನಿಯರ್‌ ರಾಹುಲ್‌ ಅವರನ್ನು ಕರೆದು ಮಾತನಾಡಿಸಿದ್ದಾರೆ. “ನನ್ನದೇ ಹೆಸರಿನ ಹುಡುಗ 13ರ ಹರೆಯದಲ್ಲಿ ಸೆಂಚುರಿ ಬಾರಿಸಿದ್ದು ನನಗೆ ಖುಷಿ ನೀಡಿದೆ’ ಎಂದು ಅಂದು ದ್ರಾವಿಡ್‌ ಜೂ. ರಾಹುಲ್‌ ಅವರನ್ನು ಶ್ಲಾಘಿಸಿದ್ದರು. ಈ ವರೆಗೆ 34 ಟೆಸ್ಟ್‌ ಆಡಿರುವ ರಾಹುಲ್‌, 14 ಏಕದಿನ ಪಂದ್ಯಗಳಲ್ಲಷ್ಟೇ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿ ಎಂಬುದು ಕರಾವಳಿ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.

ಅಮ್ಮನಿಂದ “ಆಲ್‌ ದಿ ಬೆಸ್ಟ್‌’
ಈ ಸಂದರ್ಭದಲ್ಲಿ “ಉದಯವಾಣಿ’ ಜತೆ ಮಾತಾಡಿದ ರಾಹುಲ್‌ ತಾಯಿ ರಾಜೇಶ್ವರಿ ಲೋಕೇಶ್‌, “ಎನ್‌ಐಟಿಕೆ ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ರಾಹುಲ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ತರಬೇತಿ ಆರಂಭಿಸಿದ್ದ. ಆ ಸಮಯದಲ್ಲಿ ಪಿ. ದೇವದಾಸ್‌ ನಾಯಕ್‌ ಹಾಗೂ ಜಯರಾಜ್‌ ಮುತ್ತು ಅವರಿಂದ ತರಬೇತಿ ಪಡೆದ. ಬಳಿಕ ಕಾಲೇಜು ಹಂತದಲ್ಲೂ ಕೂಡ ಕ್ರಿಕೆಟ್‌ ತರಬೇತಿ ನಿರಂತರವಾಗಿ ನಡೆಯಿತು. ಬಳಿಕ ಬೇರೆ ಬೇರೆ ವಯೋಮಿತಿಯ ಪಂದ್ಯದಲ್ಲಿ ಆಡಿದ ರಾಹುಲ್‌ ಇಂದು ವಿಶ್ವಕಪ್‌ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ ಎಂಬುದು ಸಂತಸ ತಂದಿದೆ. ಆತನಿಗೆ ಆಲ್‌ ದಿ ಬೆಸ್ಟ್‌’ ಎಂದರು.

ಮಂಗಳೂರಿನಲ್ಲಿ ತಂದೆ-ತಾಯಿ
ರಾಹುಲ್‌ ತಾತನ ಮನೆ ತುಮಕೂರು ಜಿಲ್ಲೆಯ ಕುದೂರು ತಾಲೂಕಿನ ಕಣನೂರು. ಇದು ಕಣ್ಣೂರು ಎಂದೂ ಪ್ರಚಲಿತ. ರಾಹುಲ್‌ನ ತಂದೆ ಹಾಗೂ ತಾಯಿ ಇಬ್ಬರೂ ಮೂಲತಃ ಅಲ್ಲಿಯವರು. ಆದರೆ, ರಾಹುಲ್‌ ತಂದೆ ಡಾ| ಕಣ್ಣೂರು ಎನ್‌.ಲೋಕೇಶ್‌ 1987ರಲ್ಲಿ ಸುರತ್ಕಲ್‌ನ ಎನ್‌ಐಟಿಕೆ ಜಿಯೋಲಜಿ ವಿಭಾಗದ ಪ್ರೊಫೆಸರ್‌ ಆಗಿ ನೇಮಕಗೊಂಡ ಅನಂತರ ಪತ್ನಿ ಜತೆ ಮಂಗಳೂರಿನಲ್ಲೇ ನೆಲೆಸಿದರು. ರಾಜೇಶ್ವರಿ ಲೋಕೇಶ್‌ ಮಂಗಳೂರು ವಿವಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ವೇಳೆ ರಾಹುಲ್‌ ಇಲ್ಲಿಗೆ ಬಂದು ಹೋಗುತ್ತಾರೆ.

*ದಿನೇಶ್‌ ಇರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ