ಫೈನಲ್ ತನಕ ಮೊಬೈಲ್ ಸ್ವಿಚ್‌ಆಫ್: ಕಿರಿಯರಿಗೆ ದ್ರಾವಿಡ್ ಸೂಚನೆ
Team Udayavani, Feb 3, 2018, 12:14 PM IST
ಮೌಂಟ್ ಮೌಂಗನುಯಿ: ಕಿರಿಯ ಕ್ರಿಕೆಟಿಗರ ಗಮನವೆಲ್ಲ ಆಟದತ್ತ ಹಾಗೂ ಗುರಿಯತ್ತ ಕೇಂದ್ರೀಕೃತವಾಗಬೇಕೆಂಬ ಉದ್ದೇಶದಿಂದ ಫೈನಲ್ ಪಂದ್ಯದ ತನಕ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಕೋಚ್ ದ್ರಾವಿಡ್ ಸೂಚಿಸಿದ್ದಾರೆ. ಪೃಥ್ವಿ ಶಾ ಬಳಗ ಇದನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ. ಐಪಿಎಲ್ ಹರಾಜಿನ ವೇಳೆಯೂ ಕ್ರಿಕೆಟಿಗರ ಗಮನ ಇದರತ್ತ ಹರಿಯದಂತೆ ದ್ರಾವಿಡ್ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಐಪಿಎಲ್ ಹರಾಜು ವರ್ಷಂಪ್ರತಿ ಬರುತ್ತದೆ, ವಿಶ್ವಕಪ್ ಗೆಲ್ಲುವ ಅವಕಾಶ ಅಷ್ಟು ಸುಲಭದಲ್ಲಿ ದಕ್ಕದು ಎಂದಿದ್ದರು. ಭಾರತದ ಕೋಚ್ ಓರ್ವ ಆಟಗಾರರ ಮೊಬೈಲ್ ಫೋನ್‌ಗಳಿಗೆ ನಿರ್ಬಂಧ ವಿಧಿಸಿದ್ದು ಇದೇ ಮೊದಲಲ್ಲ. ರಿಯೋ ಒಲಿಂಪಿಕ್ಸ್‌ಗೆ ತೆರಳುವ ಮೊದಲೇ ಶಟ್ಲರ್ ಪಿ.ವಿ. ಸಿಂಧು ಅವರಿಗೆ ಮೊಬೈಲ್ ಬಳಸದಂತೆ ಸೂಚಿಸಿದ್ದು ಇದಕ್ಕೊಂದು ಉತ್ತಮ ಉದಾಹರಣೆ. ಈ ಕುರಿತು ಅಂಡರ್ -19 ತಂಡದ ವೇಗಿ ಶಿವಂ ಮಾವಿ ಅವರ ತಂದೆ ಪಂಕಜ್ ಮಾವಿ ಪ್ರತಿಕ್ರಿಯಿಸಿದ್ದು, “ನಾವು ಕೊನೆಯ ಸಲ ಭಾನುವಾರ ಶಿವಂ
ಜತೆ ಮಾತಾಡಿದ್ದೆವು. ಅದೂ ಕೆಲವೇ ಕ್ಷಣ ಮಾತ್ರ. ಆಗ, ಸೆಮಿಫೈನಲ್ ಹಾಗೂ ಫೈನಲ್ ತನಕ ಮೊಬೈಲ್ ಸ್ವಿಚ್ ಆಫ್ ಮಾಡಲು ಕೋಚ್ ಸೂಚಿಸಿದ್ದಾರೆ ಎಂಬುದಾಗಿ ಆತ ತಿಳಿಸಿದ’ ಎಂದು ಹೇಳಿದ್ದಾರೆ.