ರಶೀದ್ಖಾನ್ ಬಲೆಗೆ ಬಿದ್ದ ಬಾಂಗ್ಲಾದೇಶ
Team Udayavani, Jun 5, 2018, 6:00 AM IST
ಡೆಹ್ರಾಡೂನ್: ಐಪಿಎಲ್ನಲ್ಲಿ ಸನ್ರೈಸರ್ ಹೈದರಾಬಾದ್ ಪರ ಮಿಂಚಿನ ದಾಳಿ ನಡೆಸಿ ವಿಶ್ವದ ಗಮನ ಸೆಳೆದಿದ್ದ ಅಫ್ಘಾನಿಸ್ಥಾನದ ಸ್ಪಿನ್ನರ್ ರಶೀದ್ ಖಾನ್ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಇದೇ ಆಕ್ರಮಣವನ್ನು ಮುಂದುವರಿಸಿದ್ದಾರೆ. ರವಿವಾರ ಡೆಹ್ರಾಡೂನ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 13 ರನ್ನಿಗೆ 3 ವಿಕೆಟ್ ಕಿತ್ತು ಅಫ್ಘಾನ್ ತಂಡದ 45 ರನ್ನುಗಳ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 8 ವಿಕೆಟಿಗೆ 167 ರನ್ ಪೇರಿಸಿದರೆ, ಬಾಂಗ್ಲಾದೇಶ 19 ಓವರ್ಗಳಲ್ಲಿ 122 ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. 3 ಪಂದ್ಯಗಳ ಸರಣಿಯಲ್ಲೀಗ ಅಫ್ಘಾನ್ 1-0 ಮುನ್ನಡೆಯಲ್ಲಿದೆ. ಇದು ಡೆಹ್ರಾಡೂನ್ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಉಳಿದ ಪಂದ್ಯಗಳೂ ಇಲ್ಲಿಯೇ ನಡೆಯಲಿವೆ.
ಮೊದಲ ಎಸೆತಕ್ಕೇ ಔಟ್
ತಮಿಮ್ ಇಕ್ಬಾಲ್ ಅವರನ್ನು ಇನ್ನಿಂಗ್ಸಿನ ಮೊದಲ ಎಸೆತದಲ್ಲೇ ಲೆಗ್ ಬಿಫೋರ್ ಬಲೆಗೆ ಬೀಳಿಸುವ ಮೂಲಕ ಮುಜೀಬ್ ಅಫ್ಘಾನ್ಗೆ ಅಬ್ಬರದ ಆರಂಭ ಕೊಡಿಸಿದರು.
ರಶೀದ್ ಘಾತಕ ದಾಳಿ
ರಹೀಂ ಅವರನ್ನು ಬೌಲ್ಡ್ ಮಾಡಿದ ರಶೀದ್ ಬಳಿಕ ಮಹಮದುಲ್ಲ (29) ಮತ್ತು ರುಬೆಲ್ ಹೊಸೇನ್ (0) ಅವರನ್ನು 3 ಎಸೆತಗಳ ಅಂತರದಲ್ಲಿ ಉರುಳಿಸಿದರು.