ಅಶ್ರುತರ್ಪಣದ ನಡುವೆ ಪಂಚಭೂತಗಳಲ್ಲಿಅನಂತ ಲೀನ

Team Udayavani, Nov 14, 2018, 6:47 AM IST

ಬೆಂಗಳೂರು: ಗಣ್ಯಾತಿಗಣ್ಯರ ಕಂಬನಿ, ಕುಟುಂಬ ಸದಸ್ಯರು- ಸಂಬಂಧಿಗಳ ಅಶ್ರುತರ್ಪಣ, ಕಾರ್ಯಕರ್ತರು, ಅಭಿಮಾನಿಗಳ ಜೈಕಾರ, ರಾಜ್ಯ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌.ಅನಂತ ಕುಮಾರ್‌ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ನೆರವೇರಿದ್ದು, ಪಂಚಭೂತಗಳಲ್ಲಿ ಲೀನವಾಗಿ ಅನಂತ ನೆನಪಿಗೆ ಜಾರಿದರು. ನಗರದಲ್ಲಿ ಸೋಮವಾರ ವಿಧಿವಶರಾದ ಅನಂತ ಕುಮಾರ್‌ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬಿಜೆಪಿ ಕಾರ್ಯಾಲಯದಲ್ಲಿ ಹಾಗೂ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಕೆಲಕಾಲ ಇರಿಸಲಾಗಿತ್ತು. ಬಳಿಕ ಸೇನಾ ಬ್ಯಾಂಡ್‌ನೊಂದಿಗೆ ಸೇನೆ ಹಾಗೂ ಪೊಲೀಸ್‌ ಗೌರವಗಳೊಂದಿಗೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಚಾಮರಾಜಪೇಟೆಯ ರುದ್ರಭೂಮಿಗೆ ತರಲಾಯಿತು.

ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಡಿ.ವಿ.ಸದಾನಂದಗೌಡ ಸೇರಿ ಹಲವು ಸಚಿವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಾಜ್ಯ ಸರ್ಕಾರದ ಪರವಾಗಿ ಸಚಿವರಾದ ಡಿ.ಕೆ.ಶಿವಕುಮಾರ್‌, ಸಾ.ರಾ. ಮಹೇಶ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅಂತಿಮ ಗೌರವ ಸಲ್ಲಿಸಿದರು. ಅನಂತ ಕುಮಾರ್‌ ಅವರ ರಾಜಕೀಯ ಗುರು ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಇತರರು ಅಂತಿಮ ನಮನ ಸಲ್ಲಿಸಿದರು. ವಾಯುಸೇನೆ ಹಾಗೂ ಭೂಸೇನೆಯ ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಯೋಧರು ಸಲ್ಲಿಸುವ ಮೂಲಕ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಕ್ಕಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಸೇನಾ ಪಡೆ ಯೋಧರು 21 ಕುಶಾಲ ತೋಪು ಸಿಡಿಸಿ ಸೇನಾ ಗೌರವ ಅರ್ಪಿಸಿದರು. ನಂತರ ಸಹೋದರ ನಂದ ಕುಮಾರ್‌ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ವೈದಿಕ ವಿಧಿವಿಧಾನದಡಿ ಅನಂತ ಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ನಂದ ಕುಮಾರ್‌ ಅಗ್ನಿಸ್ಪರ್ಶ ಮಾಡಿದರು. “ಅನಂತ ಕುಮಾರ್‌ ಅಮರ್‌ರಹೇ…’ ಎಂಬ ಜಯಘೋಷ, ಮಂತ್ರಘೋಷಗಳ ನಡುವೆ ಅನಂತ ನೆನಪುಗಳ ಮಧ್ಯೆ ಅನಂತ ಕುಮಾರ್‌ ಪಂಚಭೂತಗಳಲ್ಲಿ ಮರೆಯಾದರು.

ಅಗಲಿಕೆ ನೋವಲ್ಲೂ ಬಿಸಿಯೂಟ ಪೂರೈಕೆ
ಹುಬ್ಬಳ್ಳಿ: ಕೇಂದ್ರ ಸಚಿವ ಅನಂತಕುಮಾರ್‌ ಅಕಾಲಿಕ ನಿಧನದ ನಡುವೆಯೂ ಅವರ ಪ್ರಧಾನ ಪೋಷಕತ್ವದಲ್ಲಿ ನಡೆಯುತ್ತಿರುವ ಅನ್ನಪೂರ್ಣ ಯೋಜನೆಯ ಮೂಲಕ ಮಂಗಳವಾರ ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗಿದೆ. ಅದಮ್ಯ ಚೇತನ ಫೌಂಡೇಶನ್‌ ಮೂಲಕ ಅನ್ನಪೂರ್ಣ ಯೋಜನೆ ಮೂಲಕ ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಕೆಲ ತಾಲೂಕುಗಳ ಶಾಲೆಗಳಿಗೆ ನಗರದಿಂದ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತಿದೆ. ಅನಂತಕುಮಾರ್‌ ಅವರ ಅಗಲಿಕೆಯ ನಡುವೆಯೂ ಎಂದಿನಂತೆ 81 ಸಾವಿರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಪೂರೈಸಲಾಗಿದೆ. ನ.12ರಂದು ಅನಂತಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಣೆಯಾಗುವ ಮೊದಲೇ ದೂರದ ಊರುಗಳಿಗೆ ಸರಬರಾಜು ಮಾಡುವ ಆಹಾರ ತಯಾರಿಸಲಾಗಿತ್ತು. ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ತಯಾರಿಸಿದ ಆಹಾರವನ್ನು ನಗರದ ಮಠಗಳಿಗೆ ಪೂರೈಸಲಾಯಿತು ಎಂದು ಯೋಜನೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ಭಾವುಕರಾದ ಗಣ್ಯರು
ಸದಾ ಹಸನ್ಮುಖೀಯಾಗಿದ್ದ ಕ್ರಿಯಾಶೀಲ ಚೇತನ ನಗುಮೊಗದಿಂದಲೇ ಇಹಲೋಕ ತ್ಯಜಿಸಿದ ನೀಲಿಗಣ್ಣಿನ ಹುಡುಗನನ್ನು ನೆನೆದ ಬಿಜೆಪಿ ಭೀಷ್ಮ ಎಲ್‌.ಕೆ.ಅಡ್ವಾಣಿಯವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತೇಜಸ್ವಿನಿ ಅನಂತಕುಮಾರ್‌ ಅವರ ತಲೆಯನ್ನು ಪ್ರೀತಿಯಿಂದ ನೇವರಿಸಿ, ಕೈಹಿಡಿದು ಸಾಂತ್ವನ ಹೇಳಿದ ದೃಶ್ಯ ಮನಕಲಕುವಂತಿತ್ತು. ಅಮಿತ್‌ ಶಾ ಕೂಡ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು. ಬಹುಕಾಲದ ಒಡನಾಡಿ ಯನ್ನು ಕಳೆದುಕೊಂಡ ನೋವಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಅಂತ್ಯ ಕ್ರಿಯೆ ಸಂದರ್ಭದಲ್ಲಿ ಕಣ್ಣೀರಿಟ್ಟರು. ಕೇಂದ್ರ ಸಚಿವರು, ರಾಜ್ಯ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರು ಮಾತ್ರವಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌, ಜೆಡಿಎಸ್‌ ಮುಖಂಡರು, ವಿವಿಧ ಧರ್ಮದ ಮುಖಂಡರು, ಅಪಾರ ಬೆಂಬಲಿಗರು, ಕಾರ್ಯ ಕರ್ತರು ಅಶ್ರುತರ್ಪಣದೊಂದಿಗೆ ವಿದಾಯ ಹೇಳಿದರು. ನ್ಯಾಷನಲ್‌ ಹೈಸ್ಕೂಲ್‌ ಮೈದಾನಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂತಿಮ ದರ್ಶನ ಪಡೆದರು. ಬಳಿಕ ಕೇಂದ್ರ ಸಚಿವರ ಸಮ್ಮುಖದಲ್ಲಿ ಶಾಲಾಮಕ್ಕಳು, ಸಾರ್ವಜನಿಕರು ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡುವ ಮೂಲಕ ಭಾವಪೂರ್ವವಾಗಿ ಅಂತಿಮ ಯಾತ್ರೆಗೆ ಬೀಳೊಟ್ಟರು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪ್ರಮುಖರು
ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ಹರ್ಷವರ್ಧನ್‌, ಧರ್ಮೇಂದ್ರ ಪ್ರಧಾನ್‌, ಪಿಯೂಶ್‌ ಗೋಯೆಲ್‌, ರಾಮದಾಸ್‌ ಅಠಾವಳೆ, ರಾಮಲಾಲ್‌, ಆರ್‌ಎಸ್‌ಎಸ್‌ ಸಹಕಾರ್ಯವಾಹ ಭಯ್ನಾಜಿ ಜೋಷಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ
ಇತರರು ಪಾರ್ಥಿವ ಶರೀರಕ್ಕೆ ಹೂಗುತ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. 

ನ. 15ರಂದು ಶ್ರದ್ಧಾಂಜಲಿ ಸಭೆ
ಅನಂತ ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಭೆ ನ.15ರಂದು ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ನಡೆಯಲಿದೆ. ನಾನಾ ಗಣ್ಯರು, ಪ್ರಮುಖರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ