ದೇವರ ಸಂಸ್ಕಾರಕ್ಕೆ ಬಾಗಲಕೋಟೆ ಕ್ರಿಯಾಭಸ್ಮ!

Team Udayavani, Jan 24, 2019, 1:01 AM IST

ಬಾಗಲಕೋಟೆ: ಸೋಮವಾರ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳ ಸುತ್ತಲೂ ಬಾಗಲಕೋಟೆಯ ಶುದ್ಧ ಕ್ರಿಯಾಭಸ್ಮ ಇವೆ!.

ಹೌದು, ಇಡೀ ದೇಶದಲ್ಲೇ ಗೋವುಗಳ ಸಗಣಿಯಿಂದ ಶುದ್ಧ ಕ್ರಿಯಾಭಸ್ಮ ತಯಾರಿಸುವ ಎರಡು ಕೇಂದ್ರಗಳಿವೆ. ಅದರಲ್ಲಿ ಒಂದು ಬಾದಾಮಿಯ ಶಿವಯೋಗ ಮಂದಿರದಲ್ಲಿದ್ದರೆ, ಇನ್ನೊಂದು ಬಾಗಲಕೋಟೆಯ ಮುಚಖಂಡಿಯ ವೀರಯ್ಯ ಮಹಾಲಿಂಗಯ್ಯ ಹಿರೇಮಠ ಒಡೆತನದಲ್ಲಿದೆ. ಈ ಎರಡೂ ಕೇಂದ್ರಗಳಿಂದಲೇ ದೇಶದ ವಿವಿಧ ಭಾಗದ ಮಠ-ದೇವಸ್ಥಾನಗಳಿಗೆ ಶುದ್ಧ ಕ್ರಿಯಾಭಸ್ಮ ರವಾನೆಯಾಗುತ್ತವೆ.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಡಾ.ಶಿವಕುಮಾರ ಶ್ರೀಗಳ ಅಂತ್ಯ ಸಂಸ್ಕಾರ ವಿಧಿ-ವಿಧಾನಗಳಿಗೆ, ಶ್ರೀಗಳ ದೇಹದ ಸುತ್ತಲೂ ವಿಭೂತಿ ಇಡಲಾಗಿದ್ದು, ಆ ವಿಭೂತಿಯನ್ನು ಬಾಗಲಕೋಟೆಯಿಂದ ಕಳುಹಿಸಲಾಗಿತ್ತು ಎಂಬುದು ವಿಶೇಷ. ಮೂರು ತಲೆಮಾರುಗಳಿಂದ ಶುದ್ಧ ಕ್ರಿಯಾಭಸ್ಮ ತಯಾರಿಕೆಯಲ್ಲಿ ತೊಡಗಿರುವ ವೀರಯ್ಯ ಹಿರೇಮಠ, ವಾಹನದಲ್ಲಿ 10 ಸಾವಿರ ವಿಭೂತಿಗಳನ್ನು ಸಿದ್ಧಗಂಗಾ ಮಠಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶ್ರೀಗಳ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಂಡಿದ್ದಾರೆ.

ನಿರಂತರ ಪೂರೈಕೆ: ವೀರಯ್ಯ ಅವರು ತುಮಕೂರು ಸಿದ್ಧಗಂಗಾ ಮಠ ಅಷ್ಟೇ ಅಲ್ಲದೇ ನಾಡಿನ ಹಲವು ಮಠ-ಮಾನ್ಯಗಳಿಗೆ ಶುದ್ಧ ಕ್ರಿಯಾಭಸ್ಮ ಪೂರೈಕೆ ಮಾಡುತ್ತಾರೆ. ತಾಲೂಕಿನ ಮುಚಖಂಡಿಯಲ್ಲಿ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರ ಹೊಂದಿದ್ದು, 6 ಜನ ಕಾರ್ಮಿಕರೊಂದಿಗೆ ಗೋವುಗಳ ಸಗಣಿಯಿಂದ ವಿಭೂತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಪ್ರತಿವರ್ಷ ಸುಮಾರು 15 ಸಾವಿರ ವಿಭೂತಿಯನ್ನು ಸಿದ್ಧಗಂಗಾ ಮಠಕ್ಕೆ ಕಳುಹಿಸುತ್ತಾರೆ. ಆರು ತಿಂಗಳ ಹಿಂದೆ 10 ಸಾವಿರ ವಿಭೂತಿಗಳನ್ನು ಶ್ರೀಮಠಕ್ಕೆ ಕಳುಹಿಸುವಂತೆ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ವೀರಯ್ಯ ಅವರಿಗೆ ಹೇಳಿದ್ದರಂತೆ. ಪ್ರತಿವರ್ಷ ಸಾಮಾನ್ಯ ಬಳಕೆಗೆ ಕಳುಹಿಸುವಂತೆ ಮುಂಚಿತವಾಗಿ ಹೇಳಿದ್ದಾರೆ ಎಂದು ಭಾವಿಸಿ ವೀರಯ್ಯ ಅವರು 10 ಸಾವಿರ ವಿಭೂತಿ ಸಿದ್ಧಪಡಿಸಿ ಸೋಮವಾರ ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ತೆಗೆದುಕೊಂಡು ಹೋಗಿದ್ದರು. ತಾಕತಾಳೀಯ ಅಂದರೆ ಅದೇ ದಿನ ಶ್ರೀಗಳು ಲಿಂಗೈಕ್ಯರಾಗಿದ್ದರು.

ದೇಶದಲ್ಲೇ ಎರಡು ಕೇಂದ್ರ: ಗೋವುಗಳ ಸಗಣಿಯನ್ನು ಬಿಸಿಲಿಗೆ ಒಣಗಿಸಿ, ಅದನ್ನು ಸುಟ್ಟು ಅದರಿಂದ ಬರುವ ಶುದ್ಧ ಭಸ್ಮದಿಂದ ತಯಾರಿಸುವ ಕ್ರಿಯಾಭಸ್ಮ ಕೇಂದ್ರಗಳಿರುವುದು ದೇಶದಲ್ಲೇ ಎರಡು ಮಾತ್ರ. ಒಂದು ಶಿವಯೋಗ ಮಂದಿರದಲ್ಲಿದೆ. ಇಲ್ಲಿ ಓರ್ವ ಭಕ್ತರಿಗೆ ಒಂದು ಕ್ರಿಯಾಭಸ್ಮ ಮಾತ್ರ ನೀಡಲಾಗುತ್ತದೆ. ಹಾಗೆಯೇ ಇನ್ನೊಂದು ಮುಚಖಂಡಿಯ ವೀರಭದ್ರೇಶ್ವರ ವಿಭೂತಿ ತಯಾರಿಕೆ ಕೇಂದ್ರ. ಈ ಕೇಂದ್ರದಿಂದ ಚಿಲ್ಲರೆ ಮಾರಾಟ ಮಾಡುವುದಿಲ್ಲ. ಮಠ-ದೇವಸ್ಥಾನಗಳಿಗೆ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಕಾಶಿ, ಕಂಚಿ, ಶ್ರೀಶೈಲ ಜಗದ್ಗುರು ಪೀಠಗಳು ಸೇರಿದಂತೆ ಹಲವು ಮಠಗಳಿಗೆ ಮುಚಖಂಡಿಯಿಂದ ಕ್ರಿಯಾಭಸ್ಮ ಕಳುಹಿಸಲಾಗುತ್ತದೆ.

ಹಾನಗಲ್‌ ಶ್ರೀಗಳ ಒಡನಾಟ: ಸದ್ಯ ಮುಚಖಂಡಿಯಲ್ಲಿ ಕ್ರಿಯಾಭಸ್ಮ ನಿರ್ಮಾಣ ಮಾಡುತ್ತಿರುವ ವೀರಯ್ಯ ಹಿರೇಮಠ ಅವರದ್ದು ಮೂರು ತಲೆಮಾರುಗಳಿಂದ ವಿಭೂತಿ ತಯಾರಿಕೆಯಲ್ಲಿ ತೊಡಗಿರುವ ಕುಟುಂಬ. ವೀರಯ್ಯ ಅವರ ತಂದೆ ಮಹಾಲಿಂಗಯ್ಯ, ಅಜ್ಜ ಗುರುಸಂಗಯ್ಯ ಹಿರೇಮಠ ಕೂಡ ವಿಭೂತಿ ತಯಾರಿಸುತ್ತಿದ್ದರು.

ಗುರುಸಂಗಯ್ಯ ಹಿರೇಮಠ ಅವರು ಶಿವಯೋಗ ಮಂದಿರ ಸ್ಥಾಪಕರಾಗಿರುವ ಹಾನಗಲ್‌ ಕುಮಾರ ಶಿವಯೋಗಿಗಳ ಒಡನಾಡಿಯಾಗಿದ್ದರು. ಕುಮಾರ ಶಿವಯೋಗಿಗಳ ಮಾರ್ಗದರ್ಶನದಲ್ಲೇ ಗುರುಸಂಗಯ್ಯ ಅವರು ಶಿವಯೋಗ ಮಂದಿರದಲ್ಲಿ ಕ್ರಿಯಾಭಸ್ಮ ತಯಾರಿಕೆ ಶುರು ಮಾಡಿದ್ದರು. ಬಳಿಕ ಅವರ ಪುತ್ರ ಮಹಾಲಿಂಗಯ್ಯ, ಮೊಮ್ಮಗ (ಸದ್ಯ ತಯಾರಿಸುತ್ತಿರುವವರು) ವೀರಯ್ಯ ಕೂಡ ಅದೇ ಕಾಯಕದಲ್ಲಿದ್ದಾರೆ.

ಇದೀಗ ವೀರಯ್ಯ ಅವರು ಮುಚಖಂಡಿ ದೇವಸ್ಥಾನದ ಅರ್ಚಕರಾದ ಪ್ರಭುಸ್ವಾಮಿ ಸರಗಣಾಚಾರಿ ಅವರ ನೆರವಿನೊಂದಿಗೆ ಸ್ವಂತ ವಿಭೂತಿ ತಯಾರಿಕೆ ಕೇಂದ್ರ ಸ್ಥಾಪಿಸಿದ್ದಾರೆ. ಈ ಕೇಂದ್ರಕ್ಕೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ (ಪ್ರಸಿದ್ಧ ಆಂಜನೇಯ ದೇವಸ್ಥಾನ) ಗೋ ಶಾಲೆಯಿಂದ ಗೋವುಗಳ ಸಗಣಿ ಬರುತ್ತದೆ.

ಈ ಬಾರಿ ಹಣ ಪಡೆಯಲಿಲ್ಲ

ತುಮಕೂರು ಮಠಕ್ಕೆ ನಾನು ಹಲವು ವರ್ಷಗಳಿಂದ ಕ್ರಿಯಾಭಸ್ಮ ಪೂರೈಸುತ್ತೇನೆ. 10 ಸಾವಿರ ಭಸ್ಮಕ್ಕೆ 30 ಸಾವಿರ ರೂ. ಕೊಡುತ್ತಿದ್ದರು. ಆರು ತಿಂಗಳ ಹಿಂದೆ 10 ಸಾವಿರ ಕ್ರಿಯಾಭಸ್ಮ ತಯಾರಿಸಿ ಕೊಡಲು ಕಿರಿಯ ಬುದ್ಧಿಗಳು ಹೇಳಿದ್ದರು. ಸೋಮವಾರ 10 ಸಾವಿರ ಕ್ರಿಯಾಭಸ್ಮ ತೆಗೆದುಕೊಂಡು ಬಂದಿದ್ದೆ. ಅಷ್ಟರೊಳಗೆ ಡಾ|ಶಿವಕುಮಾರ ಶ್ರೀಗಳು ಲಿಂಗಕ್ಯರಾಗಿದ್ದು ಕೇಳಿ ಬಹಳ ದು:ಖವಾಯಿತು. ಅವರ ಅಂತ್ಯಕ್ರಿಯೆಗೆ ಇದೇ ಕ್ರಿಯಾಭಸ್ಮ ಬಳಸುವುದಾಗಿ ಕಿರಿಯ ಶ್ರೀಗಳು ಹೇಳಿದರು. ನನ್ನ ಕೈಯಾರೆ ತಯಾರಿಸಿದ ಕ್ರಿಯಾಭಸ್ಮ ಶ್ರೀಗಳ ಸುತ್ತ ಇಟ್ಟಿರುವುದು ಒಂದೆಡೆ ಕಾಯಕ ಖುಷಿ ತಂದರೆ, ಶ್ರೀಗಳ ಅಗಲಿಕೆಯ ದು:ಖ ಇನ್ನೊಂದೆಡೆ ಆಗಿದೆ. ನಾನು ಇನ್ನೂ ತುಮಕೂರಿನಲ್ಲಿದ್ದೇನೆ. ಬುದ್ದಿಯವರು ಯಾವಾಗ ಹೋಗು ಅನ್ನುತ್ತಾರೋ ಆಗ ಮರಳಿ ಬಾಗಲಕೋಟೆಗೆ ಬರುತ್ತೇನೆ. 10 ಸಾವಿರ ಕ್ರಿಯಾಭಸ್ಮದ ಹಣ ಕೊಡಲು ಬಂದಿದ್ದರು. ನಾನು ಪಡೆದಿಲ್ಲ ಎಂದು ವೀರಭದ್ರೇಶ್ವರ ವಿಭೂತಿ ತಯಾರಿಕೆ ಕೇಂದ್ರದ ವೀರಯ್ಯ ಹಿರೇಮಠ ‘ಉದಯವಾಣಿ’ಗೆ ತಿಳಿಸಿದರು.

ಶ್ರೀಶೈಲ ಕೆ.ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ