ಉಗ್ರರಿಗೆ ನೆರವು ಬೇಡ ಅಮೆರಿಕ ಖಡಕ್‌ ಎಚ್ಚರಿಕೆ

Team Udayavani, Feb 16, 2019, 12:30 AM IST

ಯಾವುದೇ ರೀತಿಯಲ್ಲಿ ಉಗ್ರರಿಗೆ ನೆರವು ನೀಡುವುದನ್ನು ತಕ್ಷಣ ನಿಲ್ಲಿಸಿ ಎಂದು ಪಾಕಿಸ್ಥಾನಕ್ಕೆ ಅಮೆರಿಕ ಸರಕಾರ ಕಟು ಎಚ್ಚರಿಕೆ ನೀಡಿದೆ. ಉಗ್ರ ಸಂಘಟನೆಗಳಿಗೆ ಕುಕೃತ್ಯ ನಡೆಸಲು ಭದ್ರ ನೆಲೆ ಎಂಬ ಭಾವನೆಯನ್ನೂ ಹೋಗಲಾಡಿಸಬೇಕು ಎಂದು ಶ್ವೇತಭವನ ಬಲವಾಗಿ ಪ್ರತಿಪಾದಿಸಿದೆ. ಪುಲ್ವಾಮಾ ದಾಳಿಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌  ಅಸುನೀಗಿದವರ ಕುಟುಂಬ ಸದಸ್ಯರ ದುಃಖದಲ್ಲಿ ನಾವೂ ಭಾಗಿಗಳು. ಭಾರತ ಸರಕಾರ, ಅಲ್ಲಿನ ಜನರ ಜತೆಗೆ ಅಮೆರಿಕ ಯಾವತ್ತೂ ನಿಲ್ಲುತ್ತದೆ ಎಂದು ಸ್ಯಾಂಡರ್ಸ್‌ ಹೇಳಿದ್ದಾರೆ. ಇದರ ಜತೆಗೆ ಅಮೆರಿಕದ ಡೆಮಾಕ್ರಾಟ್‌, ರಿಪಬ್ಲಿಕನ್‌ ಪಕ್ಷದ ಪ್ರಮುಖ ನಾಯಕರು, ಸಂಸದರು ದಾಳಿಯನ್ನು ಅತ್ಯುಗ್ರ ಶಬ್ದಗಳಿಂದ ಖಂಡಿಸಿದ್ದಾರೆ.

ಐಎಸ್‌ಐ ಪಾತ್ರದ ಬಗ್ಗೆ ಅಮೆರಿಕ ಶಂಕೆ: ದಾಳಿಯಲ್ಲಿ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಪಾತ್ರ ಇರುವ ಸಾಧ್ಯತೆ ಇದೆ ಎಂದು ದಕ್ಷಿಣ ಏಷ್ಯಾಕ್ಕಾಗಿರುವ ಅಮೆರಿಕದ ತಜ್ಞರು ಶಂಕಿಸಿದ್ದಾರೆ. ಈ ಘಟನೆಯಿಂದಾಗಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ಥಾನದ ಮೇಲೆ ಒತ್ತಡ ಹೇರುವಲ್ಲಿ ವಿಫ‌ಲವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ