ಚೀನ ಕಟ್ಟಿ ಹಾಕಲು “ರಾಜತಾಂತ್ರಿಕ’ ಬಾಣ; ನಿರಂತರ ಸಭೆ ನಡೆಸುವ ಮೂಲಕ ತಿರುಗೇಟು
ಬೀಜಿಂಗ್‌ನಲ್ಲಿ ಸ್ವಿಚ್ ಆಫ್ ಆದರಷ್ಟೇ ಪಿಎಲ್‌ಎ ಸೈಲೆಂಟ್
Team Udayavani, Aug 15, 2020, 6:25 AM IST
ಚೀನದಲ್ಲಿ ಭಾರತದ ರಾಯಭಾರಿಯಾಗಿರುವ ವಿಕ್ರಂ ಮಿಸ್ರಿ ಅವರು ಶುಕ್ರವಾರ ಬೀಜಿಂಗ್‌ನಲ್ಲಿ ಚೀನದ ಹಿರಿಯ ಅಧಿಕಾರಿಗಳ ಜತೆಗೆ ಶುಕ್ರವಾರ ಸಮಾಲೋಚನೆ ನಡೆಸಿದರು. ಲಡಾಖ್ ಪರಿಸ್ಥಿತಿ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಲಡಾಖ್: ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಚೀನ ವಿರುದ್ಧ ಗುದ್ದಾಡಿ ಯಾವುದೇ ಪ್ರಯೋಜ ನವಿಲ್ಲ ಎಂಬ ನಿಲುವಿಗೆ ಭಾರತ ಬಂದಿದೆ. ಸೈನ್ಯದ ಮೂಲಕ ಕುತಂತ್ರಿ ಚೀನವನ್ನು ಎದುರಿಸುವುದಕ್ಕಿಂತ, ರಾಜತಾಂತ್ರಿಕ ಹಾದಿಯಲ್ಲಿ ಚೀನವನ್ನು ಮಣಿಸುವುದು ಲೇಸು ಎಂಬ ನೂತನ ರಣತಂತ್ರವನ್ನು ಭಾರತ ಹೆಣೆದಿದೆ.
ಗೋಗ್ರಾದ ಹಾಟ್‌ಸ್ಪ್ರಿಂಗ್ಸ್, ಪ್ಯಾಂಗಾಂಗ್ ತ್ಸೋದ ಉತ್ತರ ದಂಡೆಯಿಂದ ಚೀನ ಹಿಂದೆ ಸರಿಯುವ ಲಕ್ಷಣ ತೋರುತ್ತಿಲ್ಲ. ಅಲ್ಲದೆ, ಚೀನದ ಅತಿಕ್ರಮಣ ಬುದ್ಧಿಯಿಂದಾಗಿ ಶ್ಯೋಕ್‌ನ ಉಪನದಿಯಾದ ಕುಗ್ರಾಂಗ್ ನದಿಯವರೆಗೂ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಒಂದೇ ಉತ್ತರ: ಗಡಿಯಲ್ಲಿ ಚೀನದ ದುರಾಕ್ರಮಣದ ಸ್ವಿಚ್ ಅನ್ನು ಬೀಜಿಂಗ್‌ನ ರಾಜತಾಂತ್ರಿಕ ಕಚೇರಿ ಮೂಲಕವೇ ಆಫ್ ಮಾಡಲು ಭಾರತ ನಿರ್ಧರಿಸಿದೆ. ಬೀಜಿಂಗ್‌ನಲ್ಲಿನ ಭಾರತೀಯ ರಾಯಭಾರಿ ಮತ್ತು ಚೀನದ ವಿದೇಶಾಂಗ ವ್ಯವಹಾರ ಆಯೋಗದ ಉಪನಿರ್ದೇಶಕರ ನಡುವಿನ ನಿರಂತರ ಸಭೆ ಮೂಲಕ ಪಿಎಲ್‌ಎಯನ್ನು ಕಟ್ಟಿಹಾಕಬಹುದು ಎಂದು ಭಾರತ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಚೀನ ವಿದೇಶಾಂಗ ಸಚಿವಾಲಯ “ಭಾರತದೊಂದಿಗಿನ ಗಡಿ ಬಿಕ್ಕಟ್ಟನ್ನು ಶಾಂತಿ ಮಾರ್ಗ ದಿಂದ ಪರಿಹರಿಸಿಕೊಳ್ಳುವುದು ಚೀನದ ಆದ್ಯತೆಗಳಲ್ಲಿ ಒಂದು’ ಎಂದು ಹೇಳಿತ್ತು. ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಚೀನದ ಜನತೆಯ ಪ್ರಮುಖ ಬಯಕೆಗಳಲ್ಲಿ ಒಂದಾಗಿದೆ. ಜನರ ಈ ನಿಲುವನ್ನು ಧಿಕ್ಕರಿಸಲು ಬೀಜಿಂಗ್ ಹಿಂಜರಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನ ರಾಯಭಾರಿ ಕ್ಷುಲ್ಲಕ ಹೇಳಿಕೆ
ಇಷ್ಟೆಲ್ಲದರ ನಡುವೆ ಭಾರತದಲ್ಲಿನ ಚೀನ ರಾಯಭಾರಿ, ಗಾಲ್ವಾನ್ ಘರ್ಷಣೆ ಆರೋಪವನ್ನು ಭಾರತೀಯ ಸೇನೆಯ ತಲೆಗೆ ಕಟ್ಟುವ ಪಿತೂರಿ ರೂಪಿಸಿದ್ದಾರೆ. “ಗಾಲ್ವಾನ್‌ನಲ್ಲಿ ಅಂದು ಗಡಿ ಒಪ್ಪಂದ ಉಲ್ಲಂ ಸಿದ್ದೇ ಭಾರತೀಯ ಸೈನಿಕರು. ಮುಂಚೂಣಿಯ ಸೈನಿಕರನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧಗೊಳಿಸಿ. ಪ್ರಚೋದನಾತ್ಮಕ ಕೃತ್ಯಗಳನ್ನು ತಕ್ಷಣ ನಿಲ್ಲಿಸಲು ಸೂಚಿಸಿ’ ಎಂದು ಕೇಂದ್ರ ಸರಕಾರ ಕ್ಕೆ ಸನ್ ವೀಡಾಂಗ್ ಪುಕ್ಕಟ ಸಲಹೆ ಕೊಟ್ಟಿದ್ದಾರೆ.
ನೇಪಾಲದಲ್ಲಿ ಭಾರತೀಯರಿಗೆ ಐಡಿ ಕಾರ್ಡ್ ಕಡ್ಡಾಯ
ವಿವಾದಾತ್ಮಕ ನಕ್ಷೆ ಮೂಲಕ ಕ್ಯಾತೆ ತೆಗೆದಿದ್ದ ನೇಪಾಲ ಈಗ ಹೊಸ ತರಲೆ ಆರಂಭಿಸಿದೆ. ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಕೊರೊನಾ ನೆಪವೊಡ್ಡಿ ಐಡಿ ಕಾರ್ಡ್ ತೋರಿಸುವಂತೆ ಆದೇಶ ಹೊರಡಿಸಿದೆ. “ಡೇಟಾ ಸಂಗ್ರಹಣೆ ಮೂಲಕ ಕೊರೊನಾ ಎದುರಿಸಲು ನೇಪಾಳ ಈ ಯೋಜನೆ ರೂಪಿಸಿದೆ’ ಎಂದು ಗೃಹ ಸಚಿವ ರಾಮ್ ಬಹದ್ದೂರ್ ಥಾಪಾ ಹೇಳಿದ್ದಾರೆ. ಇಷ್ಟು ದಿನ ಭಾರತೀಯರಿಗೆ ನೇಪಾಳದಲ್ಲಿ, ನೇಪಾಳದವರಿಗೆ ಭಾರತದಲ್ಲಿ ಐಡಿ ಕಾರ್ಡ್ ಕಡ್ಡಾಯವಿರಲಿಲ್ಲ.