ಹಾಂಕಾಂಗ್ ಜನರ ಪ್ರಜಾಪ್ರಭುತ್ವದ ಕೂಗಿಗೆ ಮನ್ನಣೆ ನೀಡಿದ ಜಿ7
ಜಿ7 ರಾಷ್ಟ್ರಗಳ ವಿರುದ್ಧ ಚೀನ ಕೆಂಡಾಮಂಡಲ
Team Udayavani, Aug 29, 2019, 6:30 AM IST
ಬೀಜಿಂಗ್: ಚೀನದ ಪ್ರಾಬಲ್ಯದಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಹಾಂಕಾಂಗ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಹಿಂಸೆಯ ರೂಪವನ್ನು ಪಡೆದುಕೊಂಡಿದೆ. ಹಾಂಕಾಂಗ್ ನ ಪ್ರತಿ ರಸ್ತೆಯಲ್ಲಿ ಚೀನ ವಿರುದ್ಧ ಆಕ್ರೋಶ ಬಲವಾಗಿ ಕೇಳಿಬರುತ್ತಿದೆ. ಆದರೆ ಚೀನ ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸುಮ್ಮನಾಗಿದೆ. ಇದೀಗ ಜಿ7 ರಾಷ್ಟ್ರಗಳು ಒಕ್ಕೊರಲಿನಿಂದ ಹಾಂಕಾಂಗ್ ನ ಪ್ರತಿಭಟನೆಯನ್ನು ಬೆಂಬಲಿಸಿ ನೀಡಿದ ಹೇಳಿಕೆ ಚೀನದ ಕಣ್ಣನ್ನು ಕೆಂಪಗಾಗಿಸಿದೆ. ಹಾಂಕಾಂಗ್ ಪ್ರಜಾಪ್ರಭುತ್ವಕ್ಕಾಗಿ ಪ್ರತಿಭನೆ ನಡೆಯುತ್ತಿದ್ದ ಜಿ7 ಆ ಕಾರಣಕ್ಕೆ ಬೆಂಬಲಿಸಿದೆ.
ಪ್ರತಿಭಟನೆ ಯಾಕೆ ?
ಆರೋಪಿಗಳನ್ನು ಮತ್ತು ಸಂಶಯಾಸ್ಪದ ವ್ಯಕ್ತಿಗಳನ್ನು ಚೀನಕ್ಕೆ ಗಡಿಪಾರು ಕುರಿತಾದ ವಿವಾದಾತ್ಮಕ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿರುವ ಹಾಂಕಾಂಗ್ ಸರಕಾರದ ವಿರುದ್ಧ ಅಲ್ಲಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಂಕಾಂಗ್ ನ ಯಾವ ರಸ್ತೆಯಲ್ಲಿ ನೋಡಿದರೂ ಮೈಲುದ್ದದ ಜನರ ಸಾಲುಗಳೇ ಕಾಣಸಿಗುತ್ತಿದೆ. 3 ತಿಂಗಳುಗಳಿಂದ ಪ್ರಕ್ಷುಬ್ದಗೊಂಡ ಪರಿಸ್ಥಿತಿ ಅಲ್ಲಿನ ಬೀದಿಗಳಲ್ಲಿ ಸೃಷ್ಟಿಯಾಗಿದೆ.
ಏನಿದು ವಿಧೇಯಕ ವಿವಾದ ?
1997ರವರೆಗೆ ಬ್ರಿಟಿಷ್ ಕಾಲೊನಿ ಎಂದು ಕರೆಯಲಾಗುತ್ತಿದ್ದ ಹಾಂಕಾಂಗ್ ನಗರ ಬಳಿಕ ಚೀನದೊಂದಿಗೆ ಗುರುತಿಸಿಕೊಂಡಿತ್ತು. ಇಲ್ಲಿ ರಾಷ್ಟ್ರ ಒಂದಾಗಿದ್ದರೂ ಎರಡು ವ್ಯವಸ್ಥೆ ಎಂಬ ಆಡಳಿತ ಸೂತ್ರದನ್ವಯ ಎಲ್ಲ ವಿಧದಲ್ಲಿ ಸ್ವಾಯತ್ತತೆಯಿರುವ ಪ್ರಾಂತ್ಯ ಎಂಬ ಸ್ಥಾನಮಾನವನ್ನು ಹಾಂಕಾಂಗ್ ಗೆ ನೀಡಲಾಗಿತ್ತು.
ಕಾನೂನು ಏನು ಹೇಳುತ್ತೆ?
ಇಷ್ಟಕ್ಕೂ ವಿವಾದಕ್ಕೆ ಕಾರಣವಾಗಿರುವ ಅಲ್ಲಿನ ಒಂದು ಕಾನೂನು. “ಫುಜಿಟಿವ್ ಅಫೆಂಡರ್ಸ್ ಆ್ಯಂಡ್ ಮ್ಯೂಚುಯೆಲ್ ಲೀಗಲ್ ಅಸಿಸ್ಟೆನ್ಸ್ ಇನ್ ಕ್ರಿಮಿನಲ್ ಮ್ಯಾಟರ್ಸ್ ಲೆಜಿಸ್ಲೇಷನ್’ ಎಂಬ ತಿದ್ದುಪಡಿ ವಿಧೇಯಕ ಹಾಂಕಾಂಗ್ ಜನರಲ್ಲಿ ಭಯ ಮೂಡಿಸಿದೆ. ಇದರನ್ವಯ ಇಲ್ಲಿನ ಆರೋಪಿಗಳು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಹಾಕಿಕೊಂಡರೆ ಇಂತಹವರ ವಿಚಾರಣೆಯನ್ನು ಚೀನದಲ್ಲಿ ನಡೆಸಲಾಗುತ್ತದೆ. ಈ ಒಂದು ಕಾನೂನಿನ ಅಂಶ ಹಾಂಕಾಂಗ್ ನ ಕಾನೂನಿನ ಸ್ವಾಯತ್ತತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂಬುದು ಅಲ್ಲಿನ ಜನರ ಆತಂಕ.
ಅಷ್ಟಕ್ಕೂ ಕಾರಣ ಆ ಒಂದು ಕೊಲೆ
ಹಾಂಕಾಂಗ್ ನಿವಾಸಿಯೊಬ್ಬ ಗರ್ಭಿಣಿಯಾಗಿದ್ದ ಸ್ನೇಹಿತೆಯನ್ನು ತೈವಾನ್ ನಲ್ಲಿ ಕೊಲೆಮಾಡಿದ್ದ. ಈ ಆರೋಪಿಯನ್ನು ಬಂಧಿಸಿ ಕೊಂಡೊಯ್ಯಲು ಚೀನ ಪೊಲೀಸರು ಬೇಡಿಕೆ ಇಟ್ಟಾಗ ಹಾಂಕಾಂಗ್ ತಿರಸ್ಕರಿಸಿತು. ಈ ಹಕ್ಕನ್ನು ಹಾಂಕಾಂಗ್ ಬಳಸಿಕೊಂಡಿತು. ಈ ಒಂದು ಕಾನೂನಿನ ರಕ್ಷಣೆ ಪಡೆಯುತ್ತಿರುವ ಹಾಂಕಾಂಗ್ ಅನ್ನು ತನ್ನ ಸುಪರ್ಧಿಗೆ ಒಳಪಡಿಸಲು ಚೀನ ಆ ಕಾನೂನಿನ ಮೊರೆ ಹೋಗಿದೆ. ಹಾಂಕಾಂಗ್ ನ ವಿಪಕ್ಷ ಪ್ರತಿಭಟನೆಗೆ ಬೆಂಬಲಿಸಿದ್ದಾರೆ.