ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಐತಿಹಾಸಿಕ ಗಡಾಯಿಕಲ್ಲು

Team Udayavani, Nov 21, 2019, 4:06 AM IST

ಐತಿಹಾಸಿಕ, ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗಡಾಯಿಕಲ್ಲು ಪ್ರವಾಸಿಗರನ್ನು ಗಮನಸೆಳೆಯುವ ತಾಣವಾಗಿದೆ. ಕಲ್ಲು-ಬಂಡೆಗಳ ಮೇಲೆ ನಿರ್ಮಿತವಾಗಿರುವ ಮೆಟ್ಟಿಲು ಹತ್ತುವುದು ಕೂಡ ಸಾಹಸ. ಹೀಗೆ ಪ್ರವಾಸ ತಾಣದ ವಿಶೇಷತೆ ಮತ್ತು ಅನುಭವವನ್ನು ಪ್ರವಾಸಿಗರೊಬ್ಬರು ಅಕ್ಷರ ರೂಪದಲ್ಲಿ ಹಂಚಿಕೊಂಡಿದ್ದಾರೆ.

ಮುಂಜಾನೆಯ ಮೈ ಕೊರೆಯುವ ಚಳಿ. ಸಿಹಿ ನಿದ್ದೆಯಿಂದ ಎದ್ದೇಳಲು ಮನಸ್ಸು ಒಪ್ಪುತ್ತಿಲ್ಲವಾದರೂ ಬೇಗ ಎದ್ದೇಳಲೇಬೇಕು. ಏಕೆಂದರೆ ಅದು ಚಾರಣದ ಸಮಯ. ಬೆಳ್ತಂಗಡಿ ತಾಲೂಕಿನಲ್ಲಿರುವ ಗಡಾಯಿಕಲ್ಲು ಚಾರಣಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಚಾರಣಪ್ರಿಯರಿಗೆ ಆಕರ್ಷಣೀಯವಾಗಿರುವ ಬೃಹತ್‌ ಕಲ್ಲು ಬಂಡೆಗಳನ್ನು ಸುತ್ತುವರೆದ ಜಮಲಾಬಾದ್‌ ಕೋಟೆ, ಸ್ಥಳೀಯವಾಗಿ ಗಡಾಯಿಕಲ್ಲು, ನರಸಿಂಹ ಗಢ ಎಂದು ಚಿರಪರಿಚಿತವಾಗಿದೆ. ಈ ಬಂಡೆಗಳ ಸಮೂಹ ಎತ್ತರವಾಗಿ ಮುಗಿಲಿಗೆ ಮುತ್ತಿಡುವಂತೆ ದೂರದಿಂದ ಗೋಚರಿಸುತ್ತಿತ್ತು.

ಸರಿ ಸುಮಾರು 1,700 ಅಡಿ ಎತ್ತರದ ಈ ಕಲ್ಲು ಬಂಡೆಯನ್ನು ಒಮ್ಮೆ ಏರಲೇಬೇಕು. ಅಲ್ಲಿನ ಸೊಬಗನ್ನು ಸವಿಯಲೆಂದು ಮನಸ್ಸು ಹಾತೊರೆಯುತ್ತಿತ್ತು. ಗಡಾಯಿಕಲ್ಲು ಸಮೀಪಿಸುತ್ತಿದ್ದಂತೆ ಆ ಬೃಹತ್‌ ಕಲ್ಲು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುತ್ತಿತ್ತು. ಆ ಬೃಹತ್‌ ಕಲ್ಲಿನ ಆಕಾರದಲ್ಲಿ ಪ್ರಕೃತಿಯ ವಿಸ್ಮಯ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಈ ಬೆಟ್ಟವನ್ನು ಏರುತ್ತಿದ್ದಂತೆ ಸ್ವಲ್ಪದೂರದವರೆಗೆ ಮಾತ್ರ ಪ್ರಕೃತಿ ನೆರಳಿನ ಆಶ್ರಯ ನೀಡಿತ್ತಾದರೂ ಕಲ್ಲಿನ ಮೇಲೆ ಕಾಲಿಡುತ್ತಿದ್ದಂತೆ ನೆತ್ತಿಯ ಮೇಲೆ ರಣ ಬಿಸಿಲು. ಮೈಯಲ್ಲಿ ಬೆವರು ಹರಿಯಲು ಆರಂಭಿಸಿತು. ತುಸು ಹೊತ್ತು ಪಯಣ ಬೆಳೆಸಿ ಅಲ್ಲಲ್ಲಿ ಬೆಳೆದ ಮರದಡಿಯ ನೆರಳಿನಲ್ಲಿ ವಿಶ್ರಮಿಸುತ್ತಿದ್ದೆವು . ಅಂತೂ ಇಂತೂ ಏದುರುಸಿರು ಬಿಡುತ್ತ ಗಡಾಯಿಕಲ್ಲಿನ ಒಂದು ಹಂತದ ತುದಿ ತಲುಪಿದಾಗ ತಂಪು ಪಾನೀಯ ಪೂರ್ತಿ ಕರಗಿತ್ತು.

ಪ್ರಾಕೃತಿಕ ಸುಂದರವಾದ ಕಾಡು
ಉಳಿದ ಕೊನೆಯ ಇನ್ನೊಂದು ಹಂತದ ತುದಿ ತಲುಪಿದರೆ ಚಾರಣಕ್ಕೆಂದು ಬಂದ ನಮ್ಮ ಗುರಿ ಸಾರ್ಥಕ. ಆದರೆ ಆ ಮೆಟ್ಟಿಲನ್ನು ನೋಡಿದಾಗ ದಂಗಾಗಿ ನಿಂತುಬಿಟ್ಟೆವು. ನೇರವಾದ ಮರವೊಂದಕ್ಕೆ ಒರಗಿಸಿಟ್ಟ ಏಣಿಯಂತಿತ್ತು ಆ ಮೆಟ್ಟಿಲುಗಳು. ಅಂಬೆಗಾಲಿಡುತ್ತ ತ್ರಾಸಪಟ್ಟು ಅದೇ ಹಳೆಯ, ಹೊಸ ವಿಚಾರಗಳೊಂದಿಗೆ ಗುರಿ ತಲುಪಿದಾಗ ಅಲ್ಲಿ ಹಸುರು ಚಾಪೆಯಂತೆ ದೂರಕ್ಕೂ ಹರಡಿತ್ತು ಬರೀ ಕಾಡು. ಈ ದಟ್ಟ ಕಾಡನ್ನು ನೋಡಲು ಇಷ್ಟೊಂದು ಕಷ್ಟಪಟ್ಟು ಬರಬೇಕಿತ್ತಾ ಅಂತೆನಿಸಿದರೂ ಅಲ್ಲಿ ಅಷ್ಟೆತ್ತರಕ್ಕೂ ಕೆತ್ತಿರುವ ಮೆಟ್ಟಿಲುಗಳು ದೊಡ್ಡ -ದೊಡ್ಡ ಬಂಡೆಕಲ್ಲುಗಳಿಂದ ನಿರ್ಮಿಸಿದ ಭದ್ರ ಕೋಟೆ ಕೆರೆಗೆ ಕಟ್ಟಿರುವ ಕೆಂಪು ಇಟ್ಟಿಗೆಯ ದಂಡೆ ಅಚ್ಚರಿ ಮೂಡಿಸಿತು. ಅಂದಿನ ಜನತೆಯ ಶ್ರಮ ಹಾಗೂ ಇದನ್ನು ನಿರ್ಮಿಸಲು ಉಪಯೋಗಿಸಿದ ವೈಜ್ಞಾನಿಕತೆ ನಿಜವಾಗಿಯೂ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು.

ಕಲ್ಲಿನ ತುತ್ತತುದಿಯಿಂದ ಒಮ್ಮೆ ಸುತ್ತಲಿನ ತೆರೆದ ಪ್ರದೇಶದೆಡೆ ಕಣ್ಣು ಹಾಯಿಸಿದಾಗ ಹೊಸತೊಂದು ಪ್ರಪಂಚ ಕಂಡಂತಾಯಿತು. ಉರಿ ಬಿಸಿಲಲ್ಲೂ ಬೀಸುವ ತಂಗಾಳಿಯ ಜತೆ ತುದಿ ತಲುಪಿದ ಆನಂದ ನಮ್ಮ ಸುಸ್ತನ್ನು ಮರೆಮಾಚಿತ್ತು. ಪ್ರಪಂಚದ ನಿಗೂಢತೆ ಇನ್ನೊಂದು ರೂಪದಲ್ಲಿ ಇಲ್ಲಿ ಅನಾವರಣವಾಗಿತ್ತು. ಏರಿದ ಮೆಟ್ಟಿಲನ್ನು ಹತ್ತಿದಷ್ಟೆ ಜೋಪಾನವಾಗಿ ಇಳಿಯಬೇಕಿತ್ತು. ಆಕಸ್ಮಾತ್‌ ಜಾರಿದಲ್ಲಿ ಅದು ಜೀವನದ ಅದೇ ಕೊನೆಯ ಕ್ಷಣ ಎನಿಸಿಬಿಟ್ಟಿತು.

ಐತಿಹಾಸಿಕ ಕೋಟೆ
ಇತಿಹಾಸದ ಪ್ರಕಾರ ಟಿಪ್ಪು ಸುಲ್ತಾನ್‌ ಈ ಕೋಟೆಯನ್ನು ವಶಪಡಿಸಿಕೊಂಡಿದ್ದ, ಬ್ರಿಟಿಷರ ವಿರುದ್ಧ ಹೋರಾಡಲು ಈ ಕೋಟೆಯನ್ನು ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ. ಕೋಟೆಯ ಬಳಿ ತಲುಪಿದಾಗ ಟಿಪ್ಪು ಬಳಸಿದ ಫಿರಂಗಿಗಳ ಅವಶೇಷಗಳು, ಬೀಸುವ ಕಲ್ಲು, ಮತ್ತಿತರ ಸಾಧನಗಳು ಕಣ್ಣಿಗೆ ಬೀಳುತ್ತದೆ. ಇಲ್ಲಿಗೆ ಹೋಗುವಾಗ ಟಿಪ್ಪು ತನ್ನ ಕುದುರೆಯ ಮೂಲಕ ಹೋಗುತ್ತಿದ್ದ ಸ್ಥಳ ಕಣ್ಣಿಗೆ ಬೀಳುತ್ತದೆ. ಸೈನಿಕರು ಇಲ್ಲಿಗೆ ಹೇಗೆ ನಡೆದುಕೊಂಡು ಹೋಗುತ್ತಿದ್ದರು ಎಂಬ ಅಚ್ಚರಿ ಮೂಡುವುದು ಸಹಜ.

ಗಡಾಯಿಕಲ್ಲಿನ ವೈಶಿಷ್ಟ್ಯ
ಗಡಾಯಿಕಲ್ಲಿನ ಮತ್ತೂಂದು ವೈಶಿಷ್ಟéವೆಂದರೆ ಎಂಥ ಬೇಸಗೆಯಲ್ಲೂ ಇಲ್ಲಿಯ ಕೊಳದ ನೀರು ಬತ್ತುವುದಿಲ್ಲ. ಚಾರಣಿಗರಿಗೆ ಈ ಕೊಳ ಅಮೃತದಂತೆ ಭಾಸವಾಗುವುದು. ಇಲ್ಲಿಗೆ ನಡೆದುಕೊಂಡು ಹೋಗುವಾಗ ಸುರಂಗ ಮಾರ್ಗವೊಂದು ಸಿಗುತ್ತದೆ. ಅದರ ಮೂಲಕ ಬಾಗಿಕೊಂಡು ಹೋದರೆ ತುತ್ತ-ತುದಿಯ ಕಟ್ಟಡ ತಲುಪಬಹುದು.

– ಸುಶಾಂತ್‌, ಮಂಗಳೂರು


ಈ ವಿಭಾಗದಿಂದ ಇನ್ನಷ್ಟು

  • "ದೇವರ ಸ್ವಂತ ನಾಡು' ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ...

  • ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ "ಗಿರಿಗಿಟ್‌' ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌,...

  • ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ "ಲುಂಗಿ'. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ "ಲುಂಗಿ' ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ....

  • ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ "ಆಟಿಡೊಂಜಿ ದಿನ' ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ....

  • ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು...

ಹೊಸ ಸೇರ್ಪಡೆ