ಕೇಂದ್ರ ಸರಕಾರದ ಹೊಸ ಸವಲತ್ತು ಸಹಮತಿ

Team Udayavani, Oct 7, 2019, 6:16 AM IST

ಕೇಂದ್ರ ಸರಕಾರ “ಸಹಮತಿ’ ಎಂಬ ಹೊಸ ಸವಲತ್ತೂಂದನ್ನು ಪರಿಚಯಿಸಿದೆ. ಸಾಲ ಪಡೆಯುವುದು, ಮ್ಯೂಚುವಲ್‌ ಫ‌ಂಡ್‌ ಖರೀದಿಸುವುದು ಸೇರಿದಂತೆ, ಯಾವುದೇ ಹಣಕಾಸು ವಹಿವಾಟುಗಳನ್ನು ಸುಲಭವಾಗಿಸುವುದು ಇದರ ಉದ್ದೇಶವಾಗಿದೆ.

ಒಂದು ಸಾಲ ತೆಗೆದುಕೊಳ್ಳಲು ಹೋಗಬೇಕು ಎಂದರೆ, ಕನಿಷ್ಠ 100 ಪುಟದ ಕಾಗದ ಪತ್ರಗಳಾದರೂ ವರ್ಗಾವಣೆಯಾಗುತ್ತವೆ. ಸಾಲಗಾರರು ತಮ್ಮ ದಾಖಲೆಗಳನ್ನೆಲ್ಲ ಫೋಟೋ ಕಾಪಿ ತೆಗೆದು ಬ್ಯಾಂಕಿಗೆ ಕೊಡಬೇಕು. ಬ್ಯಾಂಕ್‌ ಕಡಿಮೆಯೆಂದರೂ 40 50 ಪುಟಗಳ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳುತ್ತದೆ. ಬ್ಯಾಂಕ್‌ನಿಂದ ಸಾಲ ಪಡೆಯುವುದು ನಿಜಕ್ಕೂ ದೀರ್ಘಾವಧಿಯ ಕಾರ್ಯಕ್ರಮ. ನಮ್ಮ ಕೆಲಸವನ್ನೆಲ್ಲ ಬಿಟ್ಟು ಬ್ಯಾಂಕಿಗೆ ಹೋಗಬೇಕು. ಅಲ್ಲಿ ಗಂಟೆಗಟ್ಟಲೆ ಕಾದು, ಅಲ್ಲಿನ ಎಕ್ಸಿಕ್ಯೂಟಿವ್‌ಗಳಿಗೆ ದಾಖಲೆ ನೀಡಬೇಕು. ಪ್ರತಿ ಬ್ಯಾಂಕ್‌ಗಳು, ಪ್ರತಿ ಸಾಲಗಾರನೂ ಇಷ್ಟೂ ಕೆಲಸವನ್ನು ಮಾಡಲೇಬೇಕು. ಈಗ ಡಿಜಿಟಲ್‌ ವ್ಯವಸ್ಥೆ ಬಂದಿದೆ. ಆದರೂ ನಾವು ಯಾಕೆ ಈ ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುತ್ತೇವೆ ಎಂಬ ಪ್ರಶ್ನೆ ಬಂದಾಗಲೇ ಸರಕಾರ ಹೊಸದೊಂದು ವ್ಯವಸ್ಥೆಯನ್ನು ರೂಪಿಸಲು ಹೆಜ್ಜೆ ಇಟ್ಟಿದೆ.

“ಸಹಮತಿ’ ಎಂಬ ಹೊಸ ವ್ಯವಸ್ಥೆಯೊಂದನ್ನು ಕೇಂದ್ರ ಸರಕಾರ ಪರಿಚಯಿಸಿದೆ. ಇದರಲ್ಲಿ ಹಣಕಾಸು ಡೇಟಾವನ್ನು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಮೊದಲು ಇದನ್ನು ಹಣಕಾಸು ವ್ಯವಸ್ಥೆಯಲ್ಲಿ ಮಾತ್ರ ಬಳಸಲಾಗುತ್ತದೆ. ಅಂದರೆ ಸಾಲ ಪಡೆಯುವುದು, ಮ್ಯೂಚುವಲ್‌ ಫ‌ಂಡ್‌ ಖರೀದಿಸುವುದು ಸಹಿತ ಯಾವುದೇ ಹಣಕಾಸು ವಹಿವಾಟಿಗೆ ಇದನ್ನು ಬಳಸಬಹುದು. ಅನಂತರದ ಹಂತದಲ್ಲಿ ಟೆಲಿಕಾಂ, ಆರೋಗ್ಯ ಸೇವೆ ಹಾಗೂ ಇತರ ವಲಯಗಳಲ್ಲೂ ಬಳಸಲಾಗುತ್ತದೆ. ಆರ್‌ಬಿಐ, ಸೆಬಿ, ಐಆರ್‌ಡಿಎ ಮತ್ತು ಪಿಎಫ್ ಆರ್‌ಡಿಎ ಮೂರೂ ಸಂಸ್ಥೆಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ.

ಆದರೆ ಸಹಮತಿಯಲ್ಲಿ ಈ ಎಲ್ಲ ಮಾಹಿತಿಯೂ ಒಂದೇ ಕಡೆ ಲಭ್ಯವಿರುತ್ತವೆ. ಇದರಲ್ಲಿ ನಮ್ಮ ಬ್ಯಾಂಕ್‌ ಖಾತೆಯ ಮಾಹಿತಿ, ವಿಮೆ, ಮ್ಯೂಚುವಲ್‌ ಫ‌ಂಡ್‌ಗಳು ಮತ್ತು ಆದಾಯ ತೆರಿಗೆ ಮಾಹಿತಿ ಇರುತ್ತದೆ. ನಾವು ಈ ಪೈಕಿ ಯಾವುದೇ ಒಂದು ಕ್ಷೇತ್ರದ ಕಂಪೆನಿಯಲ್ಲಿ ಖಾತೆ ತೆರೆಯಲು ಬಯಸಿದರೆ ಅಥವಾ ಒಂದು ವಿಮೆ ಖರೀದಿಸಬೇಕು ಎಂದಾದಲ್ಲಿ ಆ ಕಂಪೆನಿಯು ನಮಗೆ ರಿಕ್ವೆಸ್ಟ್‌ ಕಳಿಸುತ್ತದೆ. ಅದಕ್ಕೆ ನಾವು ಅನುಮತಿ ನೀಡಿದರೆ ಸಾಕು. ನಮ್ಮ ಎಲ್ಲ ಹಣಕಾಸು ಮಾಹಿತಿಯನ್ನೂ ಅದು ಪರಿಶೀಲಿಸಿಕೊಂಡು ನಾವು ಅದಕ್ಕೆ ಅರ್ಹರೋ ಅಥವಾ ಅಲ್ಲವೋ ಎಂಬುದನ್ನು ನಿರ್ಧರಿಸುತ್ತದೆ.

ಸಹಮತಿ ವ್ಯವಸ್ಥೆಯ ಕುರಿತು ಇರುವ ಮೊದಲ ಆಕ್ಷೇಪವೆಂದರೆ ನಮ್ಮ ಬ್ಯಾಂಕ್‌ ಖಾತೆ ವಿವರಗಳೆಲ್ಲ ಮೂರನೆಯವರಿಗೆ ಗೊತ್ತಾದರೆ ನಮ್ಮ ಗೌಪ್ಯತೆಯ ಕಥೆ ಏನಾದೀತು ಎಂಬುದು. ಅಲ್ಲದೆ ಬ್ಯಾಂಕ್‌ ಖಾತೆ ವಿವರಗಳನ್ನೆಲ್ಲ ಮತ್ಯಾರೋ ತೆಗೆದುಕೊಂಡು ಸಾಲ ಕೊಡುವ ನೆಪದಲ್ಲಿ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನೂ ತೆಗೆದುಕೊಂಡು ಬಿಟ್ಟರೆ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸುತ್ತಾರೆ.

ಆದರೆ, ಇದರಲ್ಲಿ ಬ್ಯಾಂಕ್‌ ಖಾತೆಯ ವಿವರಗಳು ಅಂದರೆ ನಮ್ಮ ಬ್ಯಾಂಕ್‌ ಖಾತೆಯ ಆನ್‌ಲೈನ್‌ ಪಾಸ್‌ವರ್ಡ್‌ಗಳಾಗಲಿ ಅಥವಾ ನಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆಯ ಅವಕಾಶವನ್ನಾಗಲಿ ನೀಡುವುದಿಲ್ಲ. ಬದಲಿಗೆ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳು ಮಾತ್ರ ಸಿಗುತ್ತವೆ. ಅದೇ ರೀತಿ, ವಿಮೆ ಹಾಗೂ ಮ್ಯೂಚುವಲ್‌ ಫ‌ಂಡ್‌ಗಳ ವಿಚಾರದಲ್ಲೂ ಕೂಡ. ಎಷ್ಟು ಮೊತ್ತದ ಯಾವ ವಿಮೆಯನ್ನು ನಾವು ಹೊಂದಿದ್ದೇವೆ ಮತ್ತು ಯಾವ ಕಂಪೆನಿಯ ಎಷ್ಟು ಮೊತ್ತದ ಮ್ಯೂಚುವಲ್‌ ಫ‌ಂಡ್‌ಗಳನ್ನು ನಾವು ಹೊಂದಿದ್ದೇವೆ ಎಂಬ ವಿವರ ಮಾತ್ರ ಇದರಲ್ಲಿರುತ್ತದೆ. ಇದೇ ರೀತಿ, ಯಾವ ಮಾಹಿತಿಯನ್ನು ನಾವು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು ಎಂಬುದನ್ನೂ ನಾವೇ ನಿರ್ಧರಿಸಬಹುದು. ಅಷ್ಟೇ ಅಲ್ಲ, ಎಷ್ಟು ದಿನಗಳವರೆಗೆ ನಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂಬುದನ್ನೂ ನಿರ್ಧರಿಸಬಹುದು. ಹೀಗಾಗಿ ಇದರಲ್ಲಿ ಗೌಪ್ಯತೆಯನ್ನು ನಿರ್ಧರಿಸುವ ಅವಕಾಶವನ್ನೂ ನಮಗೇ ನೀಡಲಾಗಿದೆ.

ಜನಸಾಮಾನ್ಯರಿಗೆ ಏನು ಅನುಕೂಲ?
ಸಹಮತಿ ಎಂಬ ವ್ಯವಸ್ಥೆ ನಮ್ಮ ಹಣಕಾಸು ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸಲು ಅನುಕೂಲ ಮಾಡುತ್ತದೆ. ಬೇರೆ ಬೇರೆ ವೆಬ್‌ಸೈಟುಗಳಿಂದ ಡೇಟಾ ಸಂಗ್ರಹಿಸಿಕೊಡುವ ಅಗತ್ಯವಿಲ್ಲ. ಈ ಅಗ್ರಿಗೇಟರ್‌ ವ್ಯವಸ್ಥೆಯಿಂದ ಕೆಲವೇ ನಿಮಿಷಗಳಲ್ಲಿ ಸಾಲ ಪಡೆದುಬಿಡಬಹುದು. ವಿಮೆ ಪಾಲಿಸಿ ಅಥವಾ ಮ್ಯೂಚುವಲ್‌ ಫ‌ಂಡ್‌ ಖರೀದಿಯಂತೂ ಕೆಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ. ಯಾಕೆಂದರೆ ಇಲ್ಲಿ ಕಾಗದಪತ್ರಗಳ ವರ್ಗಾವಣೆ ಇರುವುದಿಲ್ಲ.

ಬ್ಯಾಂಕ್‌ ಈ ವ್ಯವಸ್ಥೆಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ ಅದರಲ್ಲಿರುವ ನಮ್ಮ ಖಾತೆ ವಿವರಗಳು ಅಗ್ರಿಗೇಟರ್‌ನಲ್ಲಿ ಸಿಗುವುದಿಲ್ಲ. “ಸಹಮತಿ’ ಯೋಜನೆಯಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಸಣ್ಣ ಉದ್ದಿಮೆಗಳಿಗೂ ಅನುಕೂಲ. ಸಾಮಾನ್ಯವಾಗಿ ಸಣ್ಣ ಉದ್ದಿಮೆಗಳಿಗೆ ತತ್‌ಕ್ಷಣ ಸಾಲದ ಅಗತ್ಯವಿರುತ್ತದೆ. ಯಾವುದೋ ಟೆಂಡರ್‌ನಲ್ಲಿ ಭಾಗವಹಿಸಲು ಅಥವಾ ಯಾವುದೋ ಸಾಮಗ್ರಿಯನ್ನು ತುರ್ತಾಗಿ ಖರೀದಿಸಲು ಒಂದೆರಡು ದಿನದಲ್ಲಿ ಹಣ ಹೊಂದಿಸುವ ಅಗತ್ಯವಿರುತ್ತದೆ. ಆದರೆ ಸದ್ಯದ ವ್ಯವಸ್ಥೆಯಲ್ಲಿ ಎರಡು ವಾರಕ್ಕೂ ಮೊದಲು ಯಾವ ಹಣಕಾಸು ಸಂಸ್ಥೆಗಳಾಗಲೀ ಅಥವಾ ಬ್ಯಾಂಕ್‌ಗಳಾಗಲಿ ಸಾಲ ನೀಡುವುದಿಲ್ಲ. ಹೀಗಾಗಿ ಜನರು ಲೇವಾದೇವಿದಾರರ ಮೊರೆ ಹೋಗುತ್ತಾರೆ. ಆದರೆ ಸಹಮತಿಯಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಸಹಮತಿ ಎಂಬುದು ಒಂದು ಅಕೌಂಟ್‌ ಅಗ್ರಿಗೇಟರ್‌ ರೀತಿ ಕೆಲಸ ಮಾಡುತ್ತದೆ. ಅಂದರೆ ನಾವು ಒಂದು ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳಬೇಕಿದೆ ಅಂದುಕೊಳ್ಳೋಣ. ಆ ಸಾಲಕ್ಕೆ ನಾವು ಎಷ್ಟು ಅರ್ಹ, ನಮಗೆ ಮರುಪಾವತಿಯ ಸಾಮರ್ಥ್ಯ ಇದೆಯಾ ಎಂಬುದನ್ನೆಲ್ಲಾ ಸಾಬೀತು ಮಾಡಲು ನಾವು ಒಂದಷ್ಟು ದಾಖಲೆಯನ್ನು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗೆ ನೀಡಬೇಕಾಗುತ್ತದೆ. ಅದೇ ರೀತಿ ಸಾಲವನ್ನು ಮಂಜೂರು ಮಾಡುವುದಕ್ಕೂ ಮೊದಲು ಬ್ಯಾಂಕ್‌ ನಮ್ಮ ಹಣಕಾಸು ಮಾಹಿತಿಯನ್ನೂ ಪರಿಶೀಲಿಸುತ್ತದೆ. ಬ್ಯಾಂಕ್‌ ಖಾತೆ ಡೇಟಾ, ಸಂಬಳ ಮಾಹಿತಿ, ಈ ಹಿಂದೆ ಯಾವುದೇ ಸಾಲವನ್ನು ಪಡೆದಿದ್ದರೆ ಅದನ್ನು ಸರಿಯಾಗಿ ಪಾವತಿ ಮಾಡಲಾಗಿದೆಯೇ ಎಂಬುದನ್ನೆಲ್ಲ ಬ್ಯಾಂಕ್‌ಗಳು ವಿವಿಧ ಮೂಲಗಳಿಂದ ಸಂಗ್ರಹಿಸಿ ಪರಿಶೀಲಿಸುತ್ತವೆ. ಈ ಪ್ರಕ್ರಿಯೆ ಕನಿಷ್ಠ ಒಂದೆರಡು ವಾರಗಳಾದರೂ ತೆಗೆದುಕೊಳ್ಳುತ್ತದೆ.

-ಕೃಷ್ಣ ಭಟ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ