ಸೋಲು ಅಭ್ಯಾಸವಾಗದಿರಲಿ

Team Udayavani, Sep 16, 2019, 6:00 AM IST

ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ. ಇವೆರಡರ ನಡುವೆ ಒಬ್ಬಿಬ್ಬರು ಇರುತ್ತಾರೆ. ಅವರು ಏನೇ ಮಾಡಿದರೂ ಜೀವನದಲ್ಲಿ ಮೇಲೇಳುವುದೇ ಇಲ್ಲ. ಸೋಲು ಅವರಿಗೆ ಅಭ್ಯಾಸವಾಗಿದೆ ಅನ್ನುವ ಆಳವಾದ ನಂಬಿಕೆಯೇ ನಿಜವಾಗಿ ಅವರ ಸೋಲಿಗೆ ಕಾರಣವಾಗಿರುತ್ತದೆ.

ಜೀ”ವನ’ ಅಗೆದಷ್ಟೂ
ಆಳ ಮತ್ತು ಅದ್ಭುತ
ನಮ್ಮ ಜೀವನ ಅನ್ನುವುದು ಒಂದು ವನ. ಇಲ್ಲಿ ಪ್ರತಿದಿನ ಹೊಸ ಭಾವ, ಭಾವನೆ, ವ್ಯಕ್ತಿ ವ್ಯಕ್ತಿತ್ವ, ವಿಷಯ, ವಿಶೇಷ, ಅವಶೇಷ, ಸಾವು ನೋವು ಆಗಾಗ ಸಿಗುವ ನಲಿವು. ಎಲ್ಲವೂ ಒಂದು ದೊಡ್ಡ ವನದಲ್ಲಿ ಸಿಗುವ ಅದ್ಭುತ ಮತ್ತು ಆಶ್ಚರ್ಯ. ಅಂಬೆಗಾಲಿಟ್ಟು ನಮ್ಮ ಜೀ’ವನ’ದಲ್ಲಿ ಒಬ್ಬಂಟಿಯಾಗಿ ನಡೆಯುವುದು ಕಷ್ಟ. ಆದರೆ ಅಸಾಧ್ಯವಲ್ಲ. ಬಂಧು ಬಳಗ ತಂದೆ-ತಾಯಿ, ಅಕ್ಕ ತಂಗಿ ಎಲ್ಲರೂ ತಮ್ಮ ತಮ್ಮ ಜೀ’ವನ’ ದಲ್ಲೇ ನಡೆಯುವವರು,ಅವರೆಲ್ಲರಿಗೂ ನಾವು ಕತ್ತಲು ದಾಟಿಸಿ ಬೆಳಕಿಗೆ ಬಿಟ್ಟು ಬಿಡುವ ಆಸರೆ ಕೊಂಡಿಗಳಷ್ಟೇ. ಕೆಲವೊಮ್ಮೆ ನಮ್ಮ ಕಷ್ಟದಲ್ಲಿ ಯಾರ ಜೊತೆಯೂ ನೆರವಾಗದು ಆಗ ಬಂಧು ಬಳಗದ ಸಾಂತ್ವನ, ಸ್ನೇಹಿತರ ಹಿತವಚನ ಯಾವುದೂ ನಮ್ಮ ಕಿವಿಗೆ ಕೇಳದು, ಮನಸ್ಸು ಆಲಿಸದು, ಪಾಲಿಸದು. ನಮ್ಮ ಕಷ್ಟದಲ್ಲಿ ನಾವೆಲ್ಲ ಒಂಟಿ ಪಾದಚಾರಿಯಷ್ಟೇ ಅನ್ನುವುದು ಕಹಿ ಸತ್ಯ.

ಸೋಲು ರೋದನೆ, ಗೆಲುವು ಸಾಧನೆ
ನಮ್ಮಲ್ಲಿ ಬಹುತೇಕ ಎಲ್ಲರಿಗೂ ಒಂದು ಅಭ್ಯಾಸ ಹವ್ಯಾಸವಾಗಿ ಬಿಟ್ಟಿದೆ. ಮನೆಯಲ್ಲಿ ಅಪ್ಪ ಅಮ್ಮ ಕಾಲೇಜು ಫೀಸ್‌ ಕೊಟ್ಟಿಲ್ಲ, ನನಗೆ ಕಮ್ಮಿ ಮಾರ್ಕ್ಸ್ ಬಂತು, ಪೆಟ್ರೋಲ್‌ ಹಾಕೋಕೆ ಹಣಯಿಲ್ಲ, ಒಂದು ನೂರು ರೂಪಾಯಿ ಇದ್ರೆ ಕೂಡು ಇತ್ಯಾದಿ ಇತ್ಯಾದಿ.. ನಮ್ಮ ಕೊರತೆಗಳನ್ನು, ನಮ್ಮ ಸೋಲುಗಳನ್ನು ನಾವೇ ಪರಿಹರಿಸಿಕೊಳ್ಳುವ ಮಾರ್ಗವನ್ನು ಹುಡುಕುವ ಬದಲು, ಇನ್ನೊಬ್ಬರ ಬಳಿ ರೋದನೆಯಾಗಿ ಹೇಳಿಕೊಳ್ಳುವ ಅಭ್ಯಾಸ ಹಾಗೂ ಹವ್ಯಾಸ. ನಮ್ಮ ಕಷ್ಟ ಇನ್ನೊಬ್ಬರಿಗೆ ಹೊರೆಯಾಗಿಸುವ ಬದಲು ಗೆಲುವಾಗಿಸುವ ಮಾರ್ಗವಾಗಿ ಮಾರ್ಪಡಿಸಿಕೊಂಡರೆ ಅದು ಸಾಧನೆ. ಸೋತವರು ಗೆಲುವಿನ ಸಿದ್ಧತೆಯಲ್ಲಿರುತ್ತಾರೆ ಅನ್ನುವುದು ನೆನಪಿರಲಿ.

ಆಸೆ, ನಿರಾಶೆ = ದುರಾಸೆ
ಎಲ್ಲರೊಂದಿಗೆ ಬೆರೆತು ಹಾಯಾಗಿ ಇರಬೇಕೆಂಬದು ಆಸೆ.ಎಲ್ಲರನ್ನೂ ಮೀರಿ ಹಾಯಾಗಿ ಇರಬೇಕೆಂಬುದು ದುರಾಸೆ. ಸಾವಿರಾರು ಕೋಟೆಯನ್ನು ದುಡಿದು ಕವಾಟಿನಲ್ಲಿ ಹಣ ತುಂಬಿಸಿ ಇಟ್ಟ ವ್ಯಕ್ತಿ ತನ್ನ ಜೀವಿತದ ಕೊನೆ ಕ್ಷಣದಲ್ಲಿ ಆಸ್ಪತ್ರೆಯ ಬಿಲ…, ಬಿಪಿ, ಶುಗರ್‌ ಅದು ಇದು ಎನ್ನುವುದಕ್ಕೆ ವ್ಯಯ ಮಾಡುತ್ತಾನೆ. ಆಸೆಯಿಂದ ಕೂಡಿಟ್ಟ ಜಮೀನು, ಕಷ್ಟಪಟ್ಟು ಕಟ್ಟಿದ ಕೋಟಿ ಬಂಗಲೆ ಎಲ್ಲವೂ ಇನ್ನೊಬ್ಬರ ಪಾಲಿಗೆ. ನಾವು ನಮ್ಮ ಪಾಲಿನದು ತೆಗೆದುಕೊಂಡು ಹೋಗುವುದು ಮಾನ ಮುಚ್ಚುವ ಎರಡು ತುಂಡು ಬಿಳಿ ಬಟ್ಟೆ ಅಷ್ಟೇ. ಆಸೆಗಳಿರಬೇಕು ಅದು ಕನಸಿನ ಆಸೆಯಾಗಿರ ಬೇಕು ವಿನಃ ಕಲ್ಪನೆಯ ಆಸೆಗಳಲ್ಲ. ಆಸೆ ಹೆಚ್ಚು ಆದರೆ ಅದು ದುರಾಸೆ ಆಗಿ ನಿರಾಶರಾಗುವ ಮುನ್ನ ನಮ್ಮ ಆಸೆಗಳಿಗೂ ಮಿತಿಯಿರಲಿ.

ತಾಳಿದವನು ಸಾಧಿಸಿಯಾನು
ಬಾಲ್ಯದಲ್ಲಿ ಸೈಕಲ್‌ ಕಲಿಯುತ್ತಾ ಎಷ್ಟೋ ಸಾರಿ ಬಿದ್ದು ಗಾಯ ಮಾಡಿಕೊಂಡ ನೆನಪು ನಮ್ಮ ದೇಹದ ಭಾಗದಲ್ಲಿ ಇನ್ನೂ ಕಪ್ಪುಗಟ್ಟಿ ಬಾಲ್ಯವನ್ನು ನೆನಪಿಸುತ್ತದೆ. ಒಂದು ಬಾರಿ ಬಿದ್ದಾಗ ಮತ್ತೆ ಸ್ವಲ್ಪ ಹೆದರಿಕೊಂಡು ಸೈಕಲ್‌ ಏರಿ ಕೂತು, ಅಂತೂ ಹತ್ತು ಬಾರಿ ಬಿದ್ದು- ಎದ್ದು ಸೈಕಲ್‌ ಪೆಡಲ್‌ ತುಳಿದು ಸೈಕಲ್‌ ಅನ್ನು ಸರಾಗವಾಗಿ ತುಳಿಯಲು ಕಲಿತ್ತಿದ್ದೇವೆ ಅಲ್ವಾ? ಹೀಗೆಯೇ ನಮ್ಮ ನಾಲ್ಕು ದಿನದ ಜೀವನದಲ್ಲಿ ನೂರಾರು ಅನಿರೀಕ್ಷಿತ ಆನಂದ, ಆಘಾತ ಎಲ್ಲವೂ ಆಗಾಗ ಅಪ್ಪಳಿಸುತ್ತಲೇ ಇರುತ್ತವೆ. ಆಗ ನಾವು ಎಲ್ಲವನ್ನೂ ಎದುರಿಸಲು ಅಸಾಧ್ಯವಾದಾಗ ಸೋತು ಕೂರುತ್ತೇವೆ, ಕುಗ್ಗುತ್ತೇವೆ. ಇವತ್ತಲ್ಲ ನಾಳೆ, ಅಲ್ಲದಿದ್ರೂ ನಾಡಿದ್ದು ಒಂದು ದಿನ ಗೆಲುತ್ತೇವೆ. ತಾಳಿದವನು ಬಾಳಿಯಾನು ಏನಾದರೂ ಸಾಧಿಸಿಯಾನು.

-  ಸುಹಾನ್‌ ಶೇಕ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ...

  • ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು,...

  • ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ...

  • ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

ಹೊಸ ಸೇರ್ಪಡೆ