ಸುಖಗಳನ್ನು ಹೆಕ್ಕಿತೆಗೆಯೋಣ

Team Udayavani, Sep 16, 2019, 5:52 AM IST

ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ ನಾಯಿಮರಿಗಳು ನಮ್ಮನ್ನು ಅರೆಗಳಿಗೆ ಬಾಲ್ಯದ ಲೋಕಕ್ಕೆ ಕೊಂಡುಹೋಗುತ್ತವೆ. ದೇವರ ಸೃಷ್ಟಿಯಲ್ಲಿ ಸರ್ವವೂ ಸುಖಮಯವಾಗಿದೆ. ಕಣ್ತೆರೆದು ನೋಡುವ ವ್ಯವಧಾನ, ಶುದ್ಧ ಮನೋಭಾವ ಮಾತ್ರ ಬೇಕಾಗಿದೆ.

ಹಾಲಿನಂತಹ ಬೆಳದಿಂಗಳು ಚೆಲ್ಲಿ ಹಿತ ನೀಡುವ ಚಂದಿರ ಕಾರ್ಮೋಡಗಳ ನಡುವೆ ಸಿಕ್ಕಿ ಮರೆಯಾಗುತ್ತಾನೆ. ಸ್ವಲ್ಪ ಸಮಯದ ಅನಂತರ ಬೆಳ್ಳಿ ಮೋಡಗಳ ನಡುವೆ ಮತ್ತೆ ಬೆಳ್ಳನೆಯ ನಗು ಬೀರುತ್ತಾನೆ. ಅಮಾವಾಸ್ಯೆ ದಿನ ಸಂಪೂರ್ಣ ಮಾಯವಾಗುವ ಚಂದಿರ ಹುಣ್ಣಿಮೆಯ ದಿನ ಬಾಗಿಲು ಮುಚ್ಚಿ ಮಲಗಿದರೂ ಕಿಂಡಿಯಿಂದ ನಾವಿದ್ದಲ್ಲಿಗೆ ಬಂದು “ತಂಪು’ ನೀಡುತ್ತಾನೆ. ಬದುಕಿನಲ್ಲೂ ಹಾಗೆಯೇ ಸುಖ ದುಃಖಗಳು ಒಂದರ ಹಿಂದೆ ಬಂದು ನಮ್ಮ ಜೀವನದಲ್ಲಿ ಕಣ್ಣುಮುಚ್ಚಾಲೆ ಆಡುತ್ತಾ ಇರುತ್ತವೆ.

ಬದುಕಿನಲ್ಲಿ ಗೊಂದಲ
ಬದುಕನ್ನು ನಾವೆಷ್ಟು ಪ್ರೀತಿಸುತ್ತೇವೆಯೋ ಅದೇ ರೀತಿ ಬದುಕು ನಮ್ಮನ್ನು ಪ್ರೀತಿಸುವುದಿಲ್ಲ. ಶಾಂತವಾಗಿ ಕುಳಿತು ಸದಾ ಒಂದಲ್ಲ ಒಂದು ವಿಷಯದತ್ತ ಅವಲೋಕಿಸುತ್ತಾ ಇದ್ದರೂ ಎಲ್ಲೋ ಏನೋ ತಪ್ಪಾಗಿದೆಯೋ ಅನಿಸುತ್ತದೆ. ಇದು ನನ್ನೊಬ್ಬನಲ್ಲಿ ಮಾತ್ರವೇ? ನಾನೊಬ್ಬನೇ ಹೀಗಾ? ಇರಲಿಕ್ಕಿಲ್ಲ ಎಂದು ನಾನೇ ಸಮಾಧಾನಪಟ್ಟುಕೊಳ್ಳುವುದಿದೆ. ಆದರೆ ಹತ್ತರಲ್ಲಿ ಹನ್ನೊಂದು ನಾನ್ಯಾಕೆ ಆಗಬೇಕು ಎಂದುಕೊಂಡಾಗ ಮತ್ತೆ ಅದೇ ವ್ಯಥೆ ತೀರಕ್ಕೆ ಬಡಿಯುವ ಅಲೆಗಳಂತೆ ನೊಂದ ಮನಕ್ಕೆ ಮತ್ತೆ ನೋವು ಉಂಟಾಗುತ್ತದೆ.

ದೇವರ ಸೃಷ್ಟಿಯಲ್ಲಿ
ಸರ್ವವೂ ಸುಖಮಯ
ಯಾವುದೋ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ ನಾಯಿಮರಿಗಳು ನಮ್ಮನ್ನು ಅರೆಗಳಿಗೆ ಬಾಲ್ಯದ ಲೋಕಕ್ಕೆ ಕೊಂಡುಹೋಗುತ್ತವೆ. ಹಾಲುಗಲ್ಲದ ಕಂದ ನಮ್ಮನ್ನು ನೋಡಿ ಹಲ್ಲಿಲ್ಲದ ಬಾಯಿಯಿಂದ ಮುದ್ದಾಗಿ ನಕ್ಕಾಗ ತಲೆ ಮೇಲೆ ಆಕಾಶ ಬಿದ್ದರೂ ಏನೋ ಹಿತವಾದ ಭಾವ ಮೂಡುತ್ತದೆ. ಹೀಗೆ ದೇವರ ಸೃಷ್ಟಿಯಲ್ಲಿ ಸರ್ವವೂ ಸುಖಮಯವಾಗಿದೆ. ಕಣ್ತೆರೆದು ನೋಡುವ ವ್ಯವಧಾನ, ಶುದ್ಧ ಮನೋಭಾವ ಮಾತ್ರ ಬೇಕಾಗಿದೆ.

“ಅಹಂಕಾರ’ ದುಃಖಗಳಿಗೆ ಮೂಲ ಕಾರಣ
ಗಂಡ ಹೆಂಡತಿ , ಅಪ್ಪ ಮಕ್ಕಳು, ಗೆಳೆಯರ ನಡುವೆ ಮನಸ್ತಾಪ ಬರಲು ಮುಖ್ಯ ಕಾರಣ ನಾವೇ ಆಗಿದ್ದೇವೆ. ನಾನೇ ಸರಿ, ನಾವೆಂದೂ ತಪ್ಪು ಮಾಡುವುದಿಲ್ಲ ಎನ್ನುವ ಅಹಂಕಾರ ಇತರರು ನಮ್ಮಂತೆ ಎನ್ನುವ ಭಾವದ ಅಭಾವ ನಮ್ಮ ಬಹುತೇಕ ದುಃಖಗಳಿಗೆ ಮೂಲ ಕಾರಣ. ಹರೆಯದಲ್ಲಿ ಅರಿಯದೆ “ಪ್ರೀತಿ’ಯೆಂಬ ಜಾರುಬಂಡೆಯಲ್ಲಿ ಜಾರಿದಾಗ ದುಃಖ ಮೂಡಿ ಮನದ ಮನೆಯಲ್ಲಿ ಮನೆ ಮಾಡುತ್ತದೆ. ತಿಳಿಗೇಡಿ ವಯಸ್ಸಿನಲ್ಲಿ ತಿಳಿಯದ ಕೆಲಸಗಳಿಗೆ ತಿಳಿದವರಿಂದ ತಿಳಿಯದೇ ಕೈಹಾಕಿದರೆ ಕಷ್ಟ , ನಷ್ಟ ಕಟ್ಟಿಟ್ಟ ಬುತ್ತಿ. ಸುಖ ನೀಡುವ ವಿಪುಲ ಅವಕಾಶಗಳು ನಮ್ಮನ್ನು ಸುತ್ತುವರಿದಿರುತ್ತವೆ. ಆದರೆ ದುಃಖದ ಕಡಲಿನಲ್ಲಿ ಮುಳುಗಿರುವ ನಮಗೆ ಅವು ಕಾಣುವುದೇ ಇಲ್ಲ. ದುಃಖ ಅದೆಷ್ಟು ನೋವು, ಅವಮಾನ, ಹಿಂಸೆ, ಹತಾಶೆಗಳನ್ನು ನಮ್ಮ ಮುಂದೆ ರಾಶಿ ಹಾಕಿದ್ದರೂ ಅವುಗಳತ್ತ ಚಿತ್ತ ಹರಿಸದೇ ಭರ್ಜರಿ ಸುಖ ನೀಡುವ ದೃಶ್ಯಗಳತ್ತ, ಸುಮಧುರ ಸಂಬಂಧಗಳತ್ತ ಗಮನಹರಿಸಿದರೆ ಜಗತ್ತಿನಲ್ಲಿ ಸರ್ವವೂ ಸುಖಮಯ ಎಂದೆನಿಸದೇ ಇರದು. ದುಃಖಗಳನ್ನು ಮೀರಿ ನಿಂತರೆ ಸುಖದ ಸಾಲುಗಳೇ ನಮ್ಮನ್ನು ಅಪ್ಪಿಕೊಳ್ಳಲು ಕಾದು ನಿಲ್ಲುತ್ತವೆ ಎಂಬುದಂತೂ ಸತ್ಯ.

ಸುಖದ ಸಾವಿರ ರೂಪದಿಂದ ಸಂಬಂಧ ಗಟ್ಟಿ
ಮಾಡಿದ ತಪ್ಪನ್ನು ಮನ್ನಿಸಿ ತಿದ್ದಿ ತೀಡಿ ಮುದ್ದಿಸುವ ಗುರುಗಳು, ಸಮಸ್ಯೆ ಹೆಗಲಿಗೇರಿದಾಗ ಪರಿಹಾರ ಹುಡುಕೋಣ ಎನ್ನುವ ಜೀವದ ಗೆಳೆಯರು, ನಾವು ನಿಮ್ಮ ಬೆನ್ನಿಗಿದ್ದೇವೆ ಎನ್ನುವ ಅಣ್ಣತಮ್ಮಂದಿರು, ನಾಡಿಮಿಡಿತ ಅರಿತು ಪ್ರೀತಿಯ ಧಾರೆ ಹರಿಸುವ ಸಂಗಾತಿ , ಖುಷಿಯ ಕಾರಂಜಿ ಹರಿಸುವ ಮಕ್ಕಳು ಹೀಗೆ ಸುಖದ ಸಾವಿರ ರೂಪಗಳನ್ನು ಎದುರಿಗಿಟ್ಟುಕೊಂಡು ಮುಂದುವರಿದರೆ ಸಂಬಂಧ ಗಟ್ಟಿಯಾಗುತ್ತದೆ.

ಚಿಕ್ಕ ಸುಖಗಳನ್ನು
ಅಲ್ಲಲ್ಲಿ ಹೆಕ್ಕಿ ತೆಗೆಯೋಣ
ಕಷ್ಟ ನಷ್ಟಗಳು ಬದುಕಿನ ಬಾಗಿಲಿಗೆ ಬಂದು ನಿಂತಾಗ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣೀರು ಕೆನ್ನೆಯನ್ನು ತೋಯಿಸುತ್ತದೆ. ಮೊದಲ ಸಲದ ಅವಮಾನ, ಹತಾಶೆ, ಬೇಸರ ಕಂಡು ಬದುಕು ಇಂದಿಗೇ ಕೊನೆಗೊಳ್ಳುವುದೇ ಎಂದೆನಿಸುತ್ತದೆ. ಜೀವಿಸುವವನು ಸತ್ತವನಿಗಿಂತ ಎಷ್ಟೋ ಮೇಲು, ಸುಖವಂತನು ದುಃಖೀತನಿಗಿಂತ ಅಷ್ಟೇ ಮೇಲು. ಸಿಕ್ಕಿದ ಚಿಕ್ಕ ಚಿಕ್ಕ ಸುಖಗಳನ್ನು ಹೆಕ್ಕಿ ಪಡೆಯಬೇಕು. ಅದೇ ಸುಖೀ ಜೀವನ.

-  ಜಯಾನಂದ ಅಮೀನ್‌ ಬನ್ನಂಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ...

  • ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು,...

  • ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ...

  • ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

ಹೊಸ ಸೇರ್ಪಡೆ