ಅರಿತು ನಡೆದರೆ ಬದುಕು

Team Udayavani, Oct 14, 2019, 5:17 AM IST

ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ ಮೇಲೆ ಮಾತ್ರವಲ್ಲ, ಸಮಾಜದ ಮೇಲೆ ಆಗುತ್ತದೆ. ಹುಚ್ಚಾಟಗಳ ಮನಸ್ಸಿನ ಕೈಗೆ ಬುದ್ಧಿ ಕೊಟ್ಟ ಮನುಷ್ಯ ಯಾರ ಮಾತನ್ನೂ ಕೇಳಲಾರ. ಸುತ್ತಲಿನ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳಲಾರ.

ಮಗುವಿನ ಜನನವಾದಾಗಲೇ ಅದರ ಜವಾಬ್ದಾರಿಗಳು ಹುಟ್ಟಿಕೊಳ್ಳುತ್ತವೆ. ಬೆಳೆಯುತ್ತ ಹೋದ ಹಾಗೆ ಒಂದೊಂದೇ ವಿಷಯಗಳ ಬಗ್ಗೆ ತಿಳಿಯುತ್ತದೆ. ಹೆತ್ತವರನ್ನು ಗುರುತಿಸುವುದರಿಂದ ಪ್ರಾರಂಭಿಸಿ, ಅವರ ಭಾವನೆಗಳನ್ನು ಅರಿಯುವವರೆಗೂ ಎಲ್ಲವನ್ನು ಹಂತ ಹಂತವಾಗಿ ಜೀವನವೇ ಆ ಮಗುವಿಗೆ ಕಲಿಸುತ್ತ ಹೋಗುತ್ತದೆ. ಆದರೆ ಜೀವನ ಏನೇ ಕಲಿಸಿದರೂ ಅದನ್ನು ಬುದ್ಧಿ ಅರ್ಥೈಸಿಕೊಳ್ಳುತ್ತದೆ. ಮನಸ್ಸು ತನಗಿಷ್ಟ ಬಂದಂತೆ ಬದುಕಲು ಬಯಸುತ್ತದೆ.

ಮನದಾಳದ ಮಾತುಗಳನ್ನು ಬುದ್ಧಿ ಕೇಳಬೇಕು ನಿಜ. ಹಾಗೆಂದು ಬುದ್ಧಿಯನ್ನು ಮನಸಿನ ಕೈಗೆ ಒಪ್ಪಿಸಿದರೆ ಜೀವಿಸಲು ಸಾಧ್ಯವಿಲ್ಲ. ಕನಸು ಕಾಣುವ ಮನಸ್ಸು ತನ್ನ ಮನೆಯ ಪರಿಸ್ಥಿತಿಯನ್ನು ಮರೆಯುವುದು ಹೆಚ್ಚು. ಹೀಗೆ ಮರೆತು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ಕೇಳುತ್ತದೆ. ಅದು ಕೇಳುವುದು ಸಕಾರಾತ್ಮಕವಾಗಿದ್ದರೆ ಯಾವ ತೊಂದರೆಯೂ ಇಲ್ಲ. ಆದರೆ ಮನಸ್ಸು ಚಂಚಲ ಸ್ವಭಾವದ್ದಾಗಿರುವುದರಿಂದ ಅದು ಬೇಗನೆ ನಕಾರಾತ್ಮಕ ಅಂಶಗಳತ್ತ ವಾಲುತ್ತದೆ. ಬುದ್ಧಿಯು ಮನಸ್ಸಿನ ಹತೋಟಿಯಲ್ಲಿದ್ದರೆ ಅದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದರಿಂದ ಅದೆಷ್ಟೋ ಅನಾಹುತಗಳು ಸಂಭವಿಸುತ್ತವೆ. ನಮ್ಮನ್ನು ಹೆತ್ತವರಿಗೆ, ನಂಬಿದವರಿಗೆ ಮೋಸಮಾಡಲು ಪ್ರೇರೇಪಿಸುತ್ತದೆ. ಚಿಕ್ಕ ಚಿಕ್ಕ ಮೋಸಗಳಿಂದ ಪ್ರಾರಂಭವಾಗುವ ಇದರ ಆಟ ಮಿತಿ ಇಲ್ಲದಂತಾಗುತ್ತದೆ. ಸರಿಪಡಿಸಲು ಆಗದಂತಹ ತಪ್ಪುಗಳನ್ನು ಮಾಡಿಸಿ ಬಿಡುತ್ತದೆ. ಬುದ್ಧಿ ಎಂದೂ ತನ್ನ ಅನುಭವಗಳನ್ನು ನೆನಪಿನಲ್ಲಿಟ್ಟು ಕೊಂಡಿರುವುದರೊಂದಿಗೆ, ತಪ್ಪು-ಒಪ್ಪುಗಳ ತಾಳೆಯ ಮೂಲಕವೆ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಮನಸ್ಸಿನ ಮಾನವೀಯ ಮಾತುಗಳನ್ನು ಕೇಳಿಸಿಕೊಂಡು, ತನ್ನ ಜವಾಬ್ದಾರಿಗಳನ್ನು ಅರಿತು ಮುಂದಿನ ಹೆಜ್ಜೆಯನ್ನು ಇಡುತ್ತದೆ. ಎಷ್ಟೇ ಕಷ್ಟ ಬಂದರೂ, ಎಷ್ಟೇ ಸಂತಸವಾದರೂ ಜಗ್ಗದೆ ಸಮಚಿತ್ತದಿಂದ ಮುಂದುವರಿಯುತ್ತದೆ. ತನ್ನ ಬೇಕು ಬೇಡಗಳ ಬಗ್ಗೆ ಯೋಚಿಸುತ್ತದೆ. ತನ್ನವರ ಮನಃಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತದೆ.

ಒಂದು ಕೆಲಸ ಮಾಡಲು ನೂರು ಬಾರಿ ಆಲೋಚಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಮುನ್ನುಗ್ಗುವ ಧೈರ್ಯವನ್ನು ತೋರುತ್ತದೆ. ಹೀಗೆ ಮನಸ್ಸನ್ನು ಬುದ್ಧಿಯ ಕೈಯಲ್ಲಿ ಇಟ್ಟರೆ ಸರಿದಾರಿಯತ್ತ ಕರೆದುಕೊಡು ಹೋಗುವ ಪ್ರಯತ್ನ ಮಾಡುತ್ತದೆ.

ಮುಗ್ಧ ಮಗು ಬೆಳೆದು ದೊಡ್ಡ ಮನುಷ್ಯನಾಗುತ್ತದೆ. ಆದರೆ ಮನಸ್ಸು ಎಂದೂ ತನ್ನ ಮಂಗನಾಟ ಬಿಡುವುದಿಲ್ಲ. ಹಾಗಾಗಿಯೇ ಮಾನವ ಮಗುವಾಗಿದ್ದಾಗ ಮನಸ್ಸಿನ ಮಾತನ್ನು ಕೇಳಿದರೆ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ತನ್ನ ಜವಾಬ್ದಾರಿಗಳನ್ನು ಅರಿಯುತ್ತ ಬುದ್ಧಿಮಾತುಗಳ ಆಣತಿಗೆ ತಕ್ಕಂತೆ ಹೆಜ್ಜೆ ಹಾಕಬೇಕು. ಆಗ ಮಾತ್ರ ಸರಿಯಾಗಿ ಜೀವಿಸಲು ಸಾಧ್ಯ. ಆತ ತನ್ನ ಬಾಲ್ಯವನ್ನು ಆಡುತ್ತಾ ಕಳೆದರೂ, ಪ್ರೌಢಾವಸ್ಥೆಗೆ ಬಂದಾಗ ಪ್ರಪಂಚದತ್ತ ಕಣ್ತೆರೆದು ನೋಡಬೇಕು. ಸುತ್ತಲಿನ ಅನುಭವಗಳ ರಾಶಿಯನ್ನು ಬಾಚಿಕೊಳ್ಳಬೇಕು.

ಅಂತೆಯೇ ವಯಸ್ಸಿಗೆ ತಕ್ಕಂತೆ ತನ್ನ ಜವಾಬ್ದಾರಿಗಳ ಮೂಟೆಯನ್ನು ಹೆಗಲಿಗೇರಿಸಿಕೊಳ್ಳಬೇಕು. ತಾನು ನಡೆಯಬಯಸಿದ ಹಾದಿಯಲ್ಲಿ ಸಾಗಲೇ ಬೇಕು. ಇದು ಪ್ರತಿಯೊಬ್ಬ ಮನುಷ್ಯನ ಜೀವನ ಚಕ್ರ. ಮನುಜನ ಬದುಕು ಬವಣೆಗಳು ನೂರಿರಬಹುದು, ಆದರೆ ಅನುಭವಗಳ ರಾಶಿ. ಆರಿಸುವ ದಾರಿ ಬದಲಿರಬಹುದು. ಆದರೆ ಕಾಲಚಕ್ರದಡಿಯಲ್ಲಿನ ಜೀವನ ವೃತ್ತ ಮಾತ್ರ ಒಂದೆ. ಹಾರಲು ಬಯಸುವ ಮನಸೆಂಬ ಪಟವ ಗಾಳಿಯಲಿ ತೇಲಬಿಡಬೇಕು. ಆದರೆ ಅದಕ್ಕೊಂದು ಬಿಗಿಯಾದ ಸೂತ್ರದ ದಾರವಿರಬೇಕು. ಅದು ಬುದ್ಧಿಯ ಕೈಯಲ್ಲಿ ಇರಲೇಬೇಕು. ಪ್ರತಿಯೊಂದರ ಬಗೆಗಿನ ಅರಿವು ಬುದ್ಧಿಗಿರಬೇಕು. ಆದರೆ ಅದನ್ನು ವಿನಿಮಯಗೊಳಿಸುವ ಮಾರ್ಗ ಮಾನವೀಯತೆಯನ್ನು ಮೆರೆಸುವಂತದ್ದಾಗಿರಬೇಕು. ಆಗ ಮಾತ್ರ ಉಸಿರಾಡಲು ಸಾಧ್ಯ, ಉಸಿರುಗಳನ್ನು ಉಳಿಸಲೂ ಸಾಧ್ಯ.

– ಮೇಘಾ ಆರ್‌. ಸನಾಡಿ, ಪುತ್ತೂರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಲ್ಲವೂ ರೆಡಿಮೆಡ್‌ ಆಗಿ ದೊರೆಯುವ ಈಗ ಸಂತೋಷವನ್ನೂ, ನೆಮ್ಮದಿಯನ್ನೂ ಆರ್ಡರ್‌ ಮಾಡಿಕೊಳ್ಳುವ ತವಕದಲ್ಲಿದ್ದೇವೆ. ನಮ್ಮೊಳಗೇ ಇರುವ ಖುಷಿಯನ್ನು ಇನ್ನೆಲ್ಲೋ...

  • ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ...

  • "ಯದ್ಭಾವಂ ತದ್ಭವತಿ' ಎನ್ನುವಂತೆ ನಾವು ಯಾವಾಗಲೂ ಏನನ್ನು ಆಲೋಚಿಸುತ್ತಿರುತ್ತೇವೆಯೋ, ಹಾಗೆ ನಮ್ಮ ವ್ಯಕ್ತಿತ್ವವು ಕೂಡ ರೂಪುಗೊಳ್ಳುತ್ತದೆ. "ಈ ಪ್ರಪಂಚದಲ್ಲಿ...

  • ನ್ಯಾಯಾಲಯದಲ್ಲಿ ಕೇಸ್‌ವೊಂದರ ಕುರಿತು ಗಂಭೀರ ವಾದ-ವಿವಾದ ನಡೆಯುತ್ತಿತ್ತು. ಮಾನ್ಯ ಗೌರವಾನ್ವಿತ ಮ್ಯಾಜಿಸ್ಟ್ರೇಟ್‌ ಆದ ಮುಲ್ಲಾ ನಸ್ರುದ್ದೀನ್‌ ಅವರು ಅಷ್ಟೇ...

  • ವ್ಯಕ್ತಿಗಳ ಮಧ್ಯೆ ಇರುವಂತ ಸ್ನೇಹ- ಸಂಬಂಧಗಳಿಗೆ ನಂಬಿಕೆ ಎನ್ನುವುದು ಸೇತುವೆ ಇದ್ದಂತೆ. ಅದನ್ನು ಬಿರುಕು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸ್ನೇಹದಲ್ಲಿ...

ಹೊಸ ಸೇರ್ಪಡೆ