ತರಬೇತಿ ಇಲ್ಲದ ಹಾಡುಗಾರರಿಗೆ ಧ್ವನಿ ಕಾಳಜಿ ಅವಶ್ಯ

Team Udayavani, May 5, 2019, 6:00 AM IST

ಹಾಡಲು ಉಸಿರಾಟ ಮತ್ತು ಶ್ವಾಸಕೋಶೀಯ ವ್ಯವಸ್ಥೆಯ ನಡುವೆ ಉತ್ತಮ ಸಮನ್ವಯ ಮತ್ತು ಇವೆರಡರ ಮೇಲೆ ಹಾಡುಗಾರನಿಗಿರುವ ಪರಿಣಾಮಕಾರಿ ನಿಯಂತ್ರಣ ಪ್ರಮುಖವಾಗಿರುತ್ತದೆ. ಯಾಕೆಂದರೆ ಹಾಡುವ ವೇಳೆ ಶ್ವಾಸದ ಹರಿವು ಹಾಗೂ ಧ್ವನಿಪೆಟ್ಟಿಗೆಯ ಸ್ನಾಯುಗಳು ಪರಸ್ಪರ ಸಮತೋಲನವನ್ನು ಸಾಧಿಸಬೇಕಾಗುತ್ತದೆ.

ಸಾಮಾನ್ಯವಾಗಿ ಸಂಗೀತ ಶಿಕ್ಷಣ ಪಡೆದ ಹಾಡುಗಾರರು ಧ್ವನಿಯ ಸ್ವಾಸ್ಥ್ಯದ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ತಿಳಿದುಕೊಂಡಿರುತ್ತಾರೆ. ಸಂಗೀತಾಭ್ಯಾಸದ ವೇಳೆ ಅವರಿಗೆ ಈ ತರಬೇತಿಯನ್ನೂ ನೀಡಲಾಗುತ್ತದೆ. ಆದರೆ ತರಬೇತಿ ಪಡೆಯದ ಹಾಡುಗಾರರು, ಹಾಡುವ ವೇಳೆ ಪರಿಣಾಮಕಾರಿ ಧ್ವನಿ ಹೊರಡಿಸಲು ಒತ್ತಡ ತಂತ್ರ ಬಳಸುತ್ತಾರೆ. ಇದರಿಂದ ಅವರ ಧ್ವನಿ ಸ್ವಾಸ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ಕೆಲವೊಂದು ಆರ್ಕೆಸ್ಟ್ರಾ ಹಾಡುಗಾರರು, ಭಜನೆ ಹಾಡುಗಾರರು ಅಥವಾ ಚರ್ಚ್‌ಗಳ ಕೊçರ್‌ನಲ್ಲಿ ಹಾಡುವವರು ಧ್ವನಿ ಕಾಳಜಿ ಬಗ್ಗೆ ತರಬೇತಿ ಹೊಂದಿರುವುದಿಲ್ಲ. ಇವರು ತಮ್ಮ ಅಭಿರುಚಿಯಿಂದ ಹಾಡುವುದರಿಂದ, ಹಾಡುವ ವೇಳೆ ಕೆಲವೊಂದು ತಪ್ಪು ಅಭ್ಯಾಸಗಳಿಂದಾಗಿ ಧ್ವನಿ ಸಂಬಂಧಿ ಸಮಸ್ಯೆಗಳು ಉಂಟಾಗುವ ಅಪಾಯವಿದೆ.

ಅಸಮರ್ಪಕ ಅಭ್ಯಾಸಗಳು
ಭಜನೆ ಹಾಡುವಾಗ ಅಥವಾ ಕೊçರ್‌ನಲ್ಲಿ ತರಬೇತಿ ಪಡೆಯದ ಹಾಡುಗಾರರು ಧ್ವನಿ ಸಂಬಂಧ ಕೆಲವು ಅಸಮರ್ಪಕ ಅಭ್ಯಾಸಗಳನ್ನು ಹೊಂದಿರುತ್ತಾರೆ. ಗುಂಪಾಗಿ ಹಾಡುವ ವೇಳೆ ತರಬೇತಿ ಪಡೆದ ಹಾಡುಗಾರರು ಹಾಡುವಾಗ ತಮ್ಮ ಪಿಚ್‌ ರೇಂಜ್‌ನ್ನು ತಿಳಿದುಕೊಂಡಿರುತ್ತಾರೆ. ಇದರೊಂದಿಗೆ ಅವರಿಗೆ ಧ್ವನಿ ಬಳಕೆಯ ತಂತ್ರಗಳೂ ತಿಳಿದಿರುತ್ತವೆ. ಆದರೆ ಕೋರಸ್‌ನಲ್ಲಿ ಹಾಡುವ ಇತರ ತರಬೇತಿ ಇಲ್ಲದ ಹಾಡುಗಾರರು ಯಾವುದೇ ಧ್ವನಿ ತಂತ್ರಗಳನ್ನು ತಿಳಿಯದೆ ಹಾಡುತ್ತಾರೆ. ಇದರಿಂದ ಹಾಡಿನ ಕೊನೆಗೆ ಧ್ವನಿ ಸಮಸ್ಯೆಗಳನ್ನು ಎದುರಿಸುತ್ತಾರೆ.

ನಾವು ಹಿಂದಿನಿಂದಲೂ ಹಾಡುತ್ತಿದ್ದೇವೆ..
ಈಗ ನಿಲ್ಲಿಸಬೇಕೇ?
ಹೌದು! ಒಂದು ವೇಳೆ ನಿಮ್ಮ ಧ್ವನಿಯ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದರೆ ನೀವು ಹಾಡುವುದನ್ನು ನಿಲ್ಲಿಸಲೇಬೇಕಾಗುತ್ತದೆ. ಒಂದೊಮ್ಮೆ ನಿಮ್ಮ ಹಾಡುಗಾರಿಕೆ ಧ್ವನಿಗೆ ಅಪಾಯಪೂರಕವಾಗಿದ್ದರೆ ಧ್ವನಿಯನ್ನು ನಿರ್ವಹಿಸುವ ಕೆಲವೊಂದು ತಂತ್ರಗಳನ್ನು ಕಲಿತುಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ. ಧ್ವನಿ ಹಾನಿ ಎರಡು ರೀತಿಯಲ್ಲಿ ಉಂಟಾಗಬಹುದು. ಒಂದನೆಯದ್ದು ವೋಕಲ್‌ ಫೋಲ್ಡ್‌ನ ಹೆಚ್ಚುವರಿ ಬೆಳವಣಿಗೆ. ಎರಡನೆಯದ್ದು ವೋಕಲ್‌ ಫೋಲ್ಡ್‌ನ ಕ್ಷಯಿಸುವಿಕೆ. ಈ ಎರಡೂ ಹಾನಿಪೂರಕವೇ ಆಗಿವೆ.

ಸಾಮಾನ್ಯ ವ್ಯತ್ಯಾಸಗಳು
1.ಅಪ್ಪರ್‌ ಚೆಸ್ಟ್‌ ರೇಂಜ್‌ (ಮೇಲು ಸ್ತರದ ಹಾಡುಗಾರಿಕೆ)ಯಲ್ಲಿ ತರಬೇತಿ ಇಲ್ಲದ ಹಾಡುಗಾರರು ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಅದೇ ತರಬೇತಿ ಪಡೆದ ಹಾಡುಗಾರರು ಇಂಥ ಹೈ ಪಿಚ್‌ ಹಾಡುಗಾರಿಕೆಯಲ್ಲಿ ಸ್ವರ ಮೇಲ್ಮುಖವಾಗಲು ಶಕ್ತಿಗಾಗಿ ವಪೆಯನ್ನು ಬಳಸಿಕೊಳ್ಳುವುದನ್ನು ತಿಳಿದಿರುತ್ತಾರೆ. ಇದರಿಂದ ಅವರಿಗೆ ಧ್ವನಿ ಒತ್ತಡ ಉಂಟಾಗುವುದಿಲ್ಲ.

2.ತರಬೇತಿ ಇಲ್ಲದ ಹಾಡುಗಾರರು ಹೈ ಪಿಚ್‌ ಹಾಡುಗಾರಿಕೆ ವೇಳೆ ತಲೆಯನ್ನು ಮೇಲಕ್ಕೂ, ಲೋವರ್‌ ಪಿಚ್‌ ಹಾಡುಗಾರಿಕೆ ವೇಳೆ ತಲೆಯನ್ನು ಕೆಳಕ್ಕೂ ಕೊಂಡೊಯ್ಯುತ್ತಾರೆ. ಪಿಚ್‌ ಹೊಂದಾಣಿಕೆಗಾಗಿ ಶಾರೀರಿಕವಾಗಿ ಬದಲಾವಣೆಗಳನ್ನು ಮಾಡುವುದನ್ನು ಇವರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ಸರಿಯಾದ ಕ್ರಮವಾಗಿರುವುದಿಲ್ಲ. ತರಬೇತಿ ಪಡೆದ ಹಾಡುಗಾರರು ಪರಿಣಾಮಕಾರಿ ಧ್ವನಿ ಹೊರಡಿಸಲು ವಪೆಯ ಬಳಕೆ ಮಾಡುವುದನ್ನು ತಿಳಿದುಕೊಂಡಿರುತ್ತಾರೆ. ಇದರಿಂದ ಅವರ ತಲೆ ಸಹಜ ಭಂಗಿಯಲ್ಲೇ ಇರುತ್ತದೆ.

ಅಂದರೆ ತಲೆಯು ಬೆನ್ನುಮೂಳೆಯನ್ನು ಆಧಾರವಾಗಿರಿಸಿಕೊಂಡು ಭುಜಗಳ ಮೇಲ್ಗಡೆ ಸಹಜ ಇರುವಿಕೆಯಲ್ಲಿ ಕಂಡುಬರುತ್ತದೆ.

ಹೀಗೆ ಮಾಡಬಹುದು
1.ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಧ್ವನಿ ಹಾನಿಯನ್ನು ಕಡಿಮೆ ಮಾಡಬಹುದು.
2.ಹವ್ಯಾಸ ನೆಲೆಯಲ್ಲಿ ಭಜನೆ. ಕೊçರ್‌ಗಳಲ್ಲಿ ಹಾಡುವವರು ವಾರ್ಮ್ ಅಪ್‌-ವಾರ್ಮ್ ಡೌನ್‌ ಮಾಡಿಕೊಂಡು ಹಾಡಿದರೆ ಉತ್ತಮ. ಏಕಾಏಕಿ ಹಾಡುವುದು ಮತ್ತು ನಿಲ್ಲಿಸುವುದು ಹಾನಿಪೂರಕ. ವಾರ್ಮ್ ಅಪ್‌-ಡೌನ್‌ನಿಂದ ವೋಕಲ್‌ ಫೋಲ್ಡ್‌ಗಳು ಸರಿಯಾಗಿ ವಿಸ್ತೃತಗೊಳ್ಳುತ್ತವೆ. ಇದರಿಂದ ಸಂಭಾವ್ಯ ಹಾನಿ ತಪ್ಪುತ್ತದೆ.
3.ಜಾಸ್ತಿ ಹೊತ್ತು ನಿಮಗೊಪ್ಪದ ಸ್ತರದಲ್ಲಿ (ರೇಂಜ್‌) ಹಾಡಬಾರದು.
4.ಶೀತ, ಕಫ‌ ಆದಾಗ ಹಾಡಬೇಡಿ.
5.ನಿಮ್ಮ ಧ್ವನಿಗೆ ವಿರಾಮ ನೀಡುವುದನ್ನು ಮರೆಯದಿರಿ.
6.ಆರು ತಿಂಗಳು-ವರ್ಷಕ್ಕೊಮ್ಮೆ ನಿಮ್ಮ ಧ್ವನಿಯ ಮೌಲ್ಯಮಾಪನ ಮಾಡಿಕೊಳ್ಳಿ.

-ಡಾ| ದೀಪಾ ಎನ್‌. ದೇವಾಡಿಗ,
ಅಸೋಸಿಯೇಟ್‌ ಪ್ರೊಫೆಸರ್‌,
ಎಸ್‌ಒಎಎಚ್‌ಎಸ್‌,
ಟಿಎಂಎ ಪೈ ಆಸ್ಪತ್ರೆ, ಉಡುಪಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ