ನುಗ್ಗೆ ಬೆಳೆದು ಹಿಗ್ಗಿರಿ…

Team Udayavani, May 13, 2019, 6:25 AM IST

ಆರು ಎಕರೆ ಜಮೀನಿನಲ್ಲಿ ಎಂಟು ಸಾವಿರ ನುಗ್ಗೆ ಸಸಿ ಹಾಕಿರುವ ಗವಿಸಿದ್ದಪ್ಪ ಹಾಗೂ ಶಂಕ್ರಪ್ಪ ಸಹೋದರರು ಅದರಿಂದ ಎಲ್ಲರ ನಿರೀಕ್ಷೆ ಮೀರಿ ಲಾಭ ಪಡೆಯುತ್ತಿದ್ದಾರೆ.

ತಾವರಗೇರಾದ ಗವಿಸಿದ್ದಪ್ಪ ಹಾಗೂ ಶಂಕ್ರಪ್ಪ ಕುಂಬಾರ ಸಹೋದರರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಆನಂತರ ಕೃಷಿ ಕಡೆ ತಿರುಗಿದಾಗ ಎಲ್ಲರೂ ಇವರತ್ತ ಕುತೂಹಲದಿಂದ ನೋಡುತ್ತಿದ್ದರು. ಈಗ ಆ ಸೋದರರು, ನುಗ್ಗೆ ಬೆಳೆದು ಹಿಗ್ಗುತ್ತಿದ್ದಾರೆ. ಕುಷ್ಟಗಿ ರಸ್ತೆಯಲ್ಲಿ ಇವರದು ಒಟ್ಟು 6 ಎಕರೆ ಜಮೀನು ಇದೆ. ಕಳೆದ ವರ್ಷ ಇದರಲ್ಲಿ ಎಂಟು ಸಾವಿರ ನುಗ್ಗೆ ಸಸಿ ನೆಟ್ಟಿದ್ದರು. ಈಗ ಸಮೃದ್ಧ ಫ‌ಸಲು ಬಂದಿದೆ.

ಕಳೆದ ಒಂದು ತಿಂಗಳಿಂದ ಹೆಚ್ಚು ಕಮ್ಮಿ 20 ಟನ್‌ ಫಸಲು ಬಂದಿದ್ದು, ಸುತ್ತಲಿನ ಕುಷ್ಟಗಿ, ಸಿಂಧನೂರು, ಗಂಗಾವತಿ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಮೊದಲ ಫಸಲಲ್ಲಿ ಕಾಯಿಗಳು ಚೆನ್ನಾಗಿವೆ. ಉದ್ದ ಮತ್ತು ದಪ್ಪದಾಗಿದ್ದು, ಗ್ರಾಹಕರ ಮೆಚ್ಚುಗೆ ಗಳಿಸಿವೆ. ಪ್ರತಿ ಕೆ.ಜಿ ನುಗ್ಗೆಕಾಯಿ 20 ರೂ. ದರದಲ್ಲಿ ಮಾರಾಟವಾಗುತ್ತಿದ್ದು ಸುಮಾರು 1 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಈ ಹಿಂದೆ ಗವಿಸಿದ್ದಪ್ಪ ಮಳೆಯಾಶ್ರಿತ ಕೃಷಿ ಕೈಗೊಂಡಿದ್ದರು. ಮಳೆ ಅಭಾವ, ಕೂಲಿಕಾರರ ಸಮಸ್ಯೆಯಿಂದ ಬೇಸತ್ತು, ಕೃಷಿಯಿಂದ ದೂರ ಉಳಿದರು. ಮತ್ತೆ ಕೃಷಿ ಬದುಕಿಗೆ ಹೆಜ್ಜೆ ಹಾಕುವ ಬಗ್ಗೆ ಮನಸ್ಸು ಮಾಡಿ ಸುತ್ತಮುತ್ತಲಿನ ಸಾವಯವ ರೈತರು, ಪ್ರಗತಿಪರ ಚಿಂತಕರನ್ನು ಭೇಟಿ ಮಾಡಿದರು. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಗೆಳೆಯ ಕಿರಣ ರಾಯ್ಕರ್‌ ಜೊತೆಯಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳನ್ನು ಸಂಪರ್ಕಿಸಿದರು.

ದೂರದ ಬೆಳಗಾವಿ, ಹುಬ್ಬಳ್ಳಿ ಭಾಗದ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕಳೆದ ಒಂದು ವರ್ಷದ ಹಿಂದೆ ಒಣ ಭೂಮಿಯನ್ನು ಸ್ವತ್ಛಗೊಳಿಸಿ, ಎರಡು ಬೋರ್‌ವೆಲ್‌ ಕೊರೆಸಿ ಸಮಗ್ರ ಕೃಷಿ ಕಡೆ ಹೆಜ್ಜೆ ಇಟ್ಟರು. ಹನಿ ನೀರಾವರಿ ಮೂಲಕ ವಿವಿಧ ತಳಿಯ ಸಸಿ, ಸೊಪ್ಪು, ಅರಣ್ಯ ಗಿಡಗಳನ್ನು ಬೆಳೆದಿದ್ದಾರೆ. ಎಲ್ಲದರ ಫ‌ಲಶೃತಿ ಎಂಬಂತೆ ಜೇಬಿನ ತುಂಬ ಲಾಭ ತುಂಬಿದೆ. ನುಗ್ಗೆಕಾಯಿ ಇನ್ನೂ ಕಟಾವು ಮಾಡುವುದಿದೆ.

ಬೆಲೆ ಹೆಚ್ಚಾದರೆ ಲಾಭ ಆಗಬಹುದು. ಸಮಗ್ರ ಕೃಷಿ ಪದ್ಧತಿಯಲ್ಲಿ ದೀಪಾವಳಿ ಸಮಯದಲ್ಲಿ ಚೆಂಡು ಹೂ ಮಾರಾಟದಿಂದ ಕೇವಲ ಎರಡು ತಿಂಗಳಲ್ಲಿ 2 ಲಕ್ಷ ರೂ. ಲಾಭ ಬಂತು. ಆದ್ದರಿಂದ ಸಮಗ್ರ ಕೃಷಿ ನಮಗೆ ಲಾಭ ತಂದಿದೆ ಎನ್ನುತ್ತಾರೆ ರೈತ ಗವಿಸಿದ್ದಪ್ಪ. ನುಗ್ಗೆಯೊಂದಿಗೆ ಪ್ರತಿ ಸಾಲಿನಲ್ಲಿ ಹೆಬ್ಬೇವು, ಶ್ರೀಗಂಧ, ಕೊತ್ತಂಬರಿ, ಬದನೆ ಹೀಗೆ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ನುಗ್ಗೆ ಗಿಡಕ್ಕೆ ಕೀಟಬಾಧೆ ಬರದಂತೆ ಕಾಪಾಡಲು ಜೀವಾಮೃತ ಸಿಂಪರಣೆ ಮಾಡಿದ್ದಾರೆ. ಕಳೆ ಕೀಳುವ ಮೂಲಕ ಬೆಳೆ ಪೋಷಣೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಎರಡು ಬೋರವೆಲ್‌ ಇದ್ದು, ಅಂತರ್ಜಲ ಕಡಿಮೆ ಇರುವ ಕಾರಣ ಹನಿ ನೀರಾವರಿ ಮತ್ತು ತೊಟ್ಟಿಯಲ್ಲಿ ನೀರು ಸಂಗ್ರಹಿಸಿ ಕೃಷಿ ಚಟುವಟಿಕೆ ಬಳಸುತ್ತಿದ್ದಾರೆ.

— ಎನ್‌. ಶಾಮೀದ್‌ ತಾವರಗೇರಾ


ಈ ವಿಭಾಗದಿಂದ ಇನ್ನಷ್ಟು

  • ಮೊದಲ ಅವಧಿಯಲ್ಲಿ ಚಿನ್ನದ ವಹಿವಾಟಲ್ಲಿ ಚೇತರಿಕೆ ಕಂಡಿರುವುದರಿಂದ ಮುಂಬರುವ ಹಬ್ಬ ಹರಿದಿನ, ಮದುವೆ- ಮುಂಜಿಗಳು ಚಿನ್ನದ ಮಾರುಕಟ್ಟೆಯಲ್ಲಿ ಮನ್ವಂತರ ಸೃಷ್ಟಿಸಬಹುದು...

  • ಈ ಡಾಬಾದಲ್ಲಿ ಸಿಗುವ ಶಾವಿಗೆ ಖೀರು ತಿನ್ನುವುದಕ್ಕೆ ಲಾರಿ ಡ್ರೈವರ್‌ಗಳು ಮಾತ್ರವಲ್ಲ, ಲಾರಿಯ ಮಾಲೀಕರು ಕೂಡ ಬರುವುದುಂಟು. ಇನ್ನು, ಇಲ್ಲಿ ಸಿಗುವ ಚಿಕನ್‌, ಮಟನ್‌,...

  • ಜಿಯೋ ನೆಟ್‌ವರ್ಕ್‌ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಕಂಪನಿ ಮಾಡಿದ ಸಾಧನೆ ಎಲ್ಲರಿಗೂ ಗೊತ್ತು. ಇದೀಗ, ಕಿರಾಣಿ ಅಂಗಡಿಯ ವ್ಯವಹಾರದಲ್ಲೂ ಅಧಿಪತ್ಯ...

  • ಇಪ್ಪತ್ತು ವರ್ಷ ಅವಧಿಯ ಜೀವ ವಿಮಾ ಪಾಲಿಸಿಯೊಂದಕ್ಕೆ ಕಂತು ಕಟ್ಟಲು ಆರಂಭಿಸುತ್ತೀರಿ. ಆದರೆ, ನಾಲ್ಕು ವರ್ಷ ಮುಗಿಯುವುದರೊಳಗೆ, ಹಣ ಕಟ್ಟಲು ಸಾಧ್ಯವಿಲ್ಲ ಅನಿಸುತ್ತದೆ....

  • ಒನ್‌ ಪ್ಲಸ್‌ ಕಂಪೆನಿಯ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಒನ್‌ ಪ್ಲಸ್‌ 7 ಮತ್ತು 7 ಪ್ರೊ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು....

ಹೊಸ ಸೇರ್ಪಡೆ