ಹೆಸರಲ್ಲಿ ಏನೂ ಇಲ್ಲ

Team Udayavani, May 16, 2019, 6:00 AM IST

ದಟ್ಟಾರಣ್ಯದಲ್ಲಿ ಒಂದು ಗುರುಕುಲವಿತ್ತು. ಅಲ್ಲಿ ಏಳು ಮಂದಿ ವಿದ್ಯಾರ್ಥಿಗಳಿದ್ದರು. ಅದರಲ್ಲಿ ಒಬ್ಬನ ಹೆಸರು ದುಷ್ಟ. ಎಂದು. ಅವನಿಗೆ ತನ್ನೆ ಹೆಸರಿನ ಬಗ್ಗೆ ಅತೀವ ಬೇಸರವಿತ್ತು. ತಾನು ಒಂದೂ ಕೆಟ್ಟ ಕೆಲಸ ಮಾಡದಿದ್ದರೂ ಎಲ್ಲರ ಬಾಯಲ್ಲಿ ದುಷ್ಟನಾಗುತ್ತಿದ್ದೇನಲ್ಲ ಎಂದು ದುಃಖ ಪಡುತ್ತಿದ್ದ. ಹೆಸರನ್ನು ಬದಲಾಯಿಸಿಕೊಳ್ಳಬೇಕೆಂದು ಹವಣಿಸುತ್ತಿದ್ದ. ಕಡೆಗೆ ಗುರುವಿನ ಬಳಿ ತನ್ನ ನೋವನ್ನು ತೋಡಿಕೊಂಡಾಗ ಗುರುಗಳು ನಕ್ಕು “ಶಿಷ್ಯ ದುಷ್ಟ, ಹೆಸರು ಬದಲಾಯಿಸಿಕೊಳ್ಳುವ ಮುನ್ನ ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ. ನಿನ್ನ ನೋವಿಗೆ ಪರಿಹಾರ ಸಿಗುತ್ತದೆ’ ಎಂದರು.

ಗುರುಗಳ ಆಜ್ಞೆಯಂತೆ ಶಿಷ್ಯನು ಲೋಕಸಂಚಾರಕ್ಕೆ ಹೊರಟ. ಮಾರ್ಗಮಧ್ಯೆ ಬಿಕ್ಷುಕನೊಬ್ಬ ಎದುರಾದ. ಹರಕಲು ಬಟ್ಟೆ ತೊಟ್ಟಿದ್ದ ಅವನ ಹೆಸರು ಶ್ರೀಮಂತ ಎಂಬುದಾಗಿತ್ತು. ದುಷ್ಟ ಪ್ರಯಾಣ ಮುಂದುವರಿಸಿದ. ದಾರಿಯಲ್ಲಿ ಅಳುತ್ತಿದ್ದ ಯುವಕನೊಬ್ಬ ಎದುರಾದ. “ಯಾಕಯ್ನಾ ಅಳುತ್ತಿದೀಯಾ?’ ಎಂದು ಪ್ರಶ್ನಿಸಿದಾಗ ಅವನು “ನನಗೆ ವ್ಯಾಪಾರದಲ್ಲಿ ನಷ್ಟವಾಯಿತು. ಮನೆಯಲ್ಲಿ ಪತ್ನಿ ಕಾಯಿಲೆಯಿಂದ ನರಳುತ್ತಿದ್ದಾಳೆ. ಒಟ್ಟಿನಲ್ಲಿ ಜೀವನದಲ್ಲಿ ಮನಸ್ಸಿಗೆ ಸಂತೋಷವೇ ಇಲ್ಲ. ನೆಮ್ಮದಿಯಿಲ್ಲ’ ಎಂದನು. ದುಷ್ಟ “ನಿಮ್ಮ ಹೆಸರೇನು?’ ಎಂದು ಕೇಳಿದ. ಆ ಯುವಕ “ಆನಂದ’ ಎಂದ. ದುಷ್ಟ ಆಶ್ಚರ್ಯದಿಂದ ಮುಂದೆ ನಡೆದ. ಮುಂದೊಂದು ಕಡೆ ಜನರೆಲ್ಲಾ ಕಿಕ್ಕಿರಿ¨ದು ನೆರೆದಿದ್ದರು. ಏಕೆ ಎಂದು ವಿಚಾರಿಸಿದಾಗ ರಾಜದ್ರೋಹದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ನೇಣು ಹಾಕುತ್ತಿದ್ದಾರೆ ಎಂದು ಗೊತ್ತಾಯಿತು. ಆತನ ಹೆಸರೇನೆಂದು ದುಷ್ಟ ವಿಚಾರಿಸಿದಾಗ, ನೇಣುಗಂಬ ಏರುತ್ತಿದ್ದ ವ್ಯಕ್ತಿಯ ಹೆಸರು ಚಿರಂಜೀವಿ ಎಂದು ಗೊತ್ತಾಯಿತು.

ಗುರುಗಳು ಹೇಳಿದಂತೆಯೇ ದುಷ್ಟನ ನೋವಿಗೆ ಪರಿಹಾರ ಸಿಕ್ಕಿಬಿಟ್ಟಿತ್ತು. ಅವನ ಪಯಣದುದ್ದಕ್ಕೂ ಹೆಸರಿಗೂ, ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲದ ವ್ಯಕ್ತಿಗಳೇ ಸಿಕ್ಕಿದ್ದರು. ದುಷ್ಟ ಗುರುಕುಲಕ್ಕೆ ವಾಪಸ್ಸಾದ. ಶಿಷ್ಯನನ್ನು ಕಂಡ ಗುರು “ಈಗ ಹೇಳು ನಿನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೀಯಾ?’ ಎಂದು ಕೇಳಿದರು. ದುಷ್ಟ “ಇಲ್ಲ ಗುರುಗಳೇ ನನಗೀಗ ವಾಸ್ತವ ಅರಿವಾಗಿದೆ. ಹೆಸರಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ’ ಎಂದು ಗುರುಗಳಿಗೆ ನಮಸ್ಕರಿಸುತ್ತಾನೆ.

– ಲಕ್ಷ್ಮೀಕಾಂತ್‌ಎಲ್‌.ವಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ